ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರಿಯನ್ ಯುದ್ಧ ವರ್ಷಾಚರಣೆ: ಉತ್ತರ ಕೊರಿಯಾದಲ್ಲಿ ಯುಎಸ್‌ ವಿರುದ್ಧ ರ‍್ಯಾಲಿ

Published 26 ಜೂನ್ 2023, 2:48 IST
Last Updated 26 ಜೂನ್ 2023, 2:48 IST
ಅಕ್ಷರ ಗಾತ್ರ

ಸಿಯೊಲ್‌: ಕೊರಿಯನ್‌ ಯುದ್ಧದ 73ನೇ ವರ್ಷಾಚರಣೆ ದಿನದಂದು (ಭಾನುವಾರ) ಉತ್ತರ ಕೊರಿಯಾದ ಪ್ಯಾಂಗಾಂಗ್‌ ನಗರದಲ್ಲಿ ಸಾಮೂಹಿಕ ರ‍್ಯಾಲಿಗಳು ನಡೆದಿವೆ. ಜನರು ಯುಎಸ್‌ ವಿನಾಶಕ್ಕಾಗಿ 'ಸೇಡಿನ ಕದನ' ಎಂಬ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿರುವುದಾಗಿ ಸರ್ಕಾರಿ ಸುದ್ದಿ ಸಂಸ್ಥೆ 'ಕೆಸಿಎನ್‌ಎ' ಸೋಮವಾರ ವರದಿ ಮಾಡಿದೆ.

ರಾಜಧಾನಿಯಲ್ಲಿ ನಡೆದ ರ‍್ಯಾಲಿಗಳಲ್ಲಿ ಸುಮಾರು 1.20 ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು ಎನ್ನಲಾಗಿದೆ.

'ಯುಎಸ್‌ಗೆ ಗುರಿ ಇಟ್ಟಿದ್ದೇವೆ', 'ಸಾಮ್ರಾಜ್ಯಶಾಹಿ ಯುಎಸ್‌ ಶಾಂತಿಯ ವಿಧ್ವಂಸಕ' ಎಂಬ ಫಲಕಗಳನ್ನು ಹಿಡಿದ ಜನರು ಮೈದಾನಗಳಲ್ಲಿ ತುಂಬಿರುವ ಚಿತ್ರಗಳನ್ನು ಸುದ್ದಿ ಸಂಸ್ಥೆ ಪ್ರಕಟಿಸಿದೆ.

ಯುಎಸ್‌ ಮಿಲಿಟರಿ ಚಟುವಟಿಕೆಗಳ ಮೇಲೆ ಕಣ್ಣಿಡುವ ಬೇಹುಗಾರಿಕೆ ಉಪಗ್ರಹ ಉಡಾವಣೆ ಮಾಡುವ ಮತ್ತೊಂದು ಪ್ರಯತ್ನವನ್ನು ಕೊರಿಯಾ ನಡೆಸುತ್ತಿದೆ. ಇದರ ಬೆನ್ನಲ್ಲೇ ಯುದ್ಧದ ವರ್ಷಾಚರಣೆ ನಡೆದಿದೆ. ಮೇ 31ರಂದು ನಡೆಸಿದ್ದ ಉಪಗ್ರಹ ಉಡಾವಣೆಯ ಮೊದಲ ಪ್ರಯತ್ನ ವಿಫಲವಾಗಿತ್ತು.

'ಯುಎಸ್‌ ಸಾಮ್ರಾಜ್ಯಶಾಹಿಗಳನ್ನು ಶಿಕ್ಷಿಸಲು ಅತ್ಯಂತ ಬಲಿಷ್ಠ ಶಸ್ತ್ರಾಸ್ತ್ರಗಳನ್ನು ಉತ್ತರ ಕೊರಿಯಾ ಹೊಂದಿದೆ. ಈ ನೆಲದ (ಉತ್ತರ ಕೊರಿಯಾ) ಯೋಧರು ಶತ್ರುಗಳ ವಿರುದ್ಧ ಸೇಡು ತೀರಿಸಿಕೊಳ್ಳಲು ಹಪಹಪಿಸುತ್ತಿದ್ದಾರೆ' ಎಂದು 'ಕೆಸಿಎನ್‌ಎ' ಉಲ್ಲೇಖಿಸಿದೆ.

ಅಣ್ವಸ್ತ್ರ ಸಜ್ಜಿತ ಉತ್ತರ ಕೊರಿಯಾ ಖಂಡಾಂತರ ಕ್ಷಿಪಣಿಗಳೂ ಸೇರಿದಂತೆ ವಿವಿಧ ಅಸ್ತ್ರಗಳ ಪರೀಕ್ಷೆ ನಡೆಸುತ್ತಿದೆ. ಇದು ದಕ್ಷಿಣ ಕೊರಿಯಾ ಮತ್ತು ಅದರ ಪ್ರಮುಖ ಮಿತ್ರರಾಷ್ಟ್ರವಾದ ಯುಎಸ್‌ ಆತಂಕಕ್ಕೆ ಪ್ರಮುಖ ಕಾರಣವಾಗಿದೆ.

ಪ್ರತ್ಯೇಕ ಹೇಳಿಕೆ ಬಿಡುಗಡೆ ಮಾಡಿರುವ ಉತ್ತರ ಕೊರಿಯಾದ ವಿದೇಶಾಂಗ ಇಲಾಖೆ, ಈ ಪ್ರದೇಶಕ್ಕೆ ತನ್ನ ಕಾರ್ಯತಂತ್ರದ ಸಂಪನ್ಮೂಲಗಳನ್ನು ರವಾನಿಸುವ ಮೂಲಕ ಯುಎಸ್‌ 'ಅಣ್ವಸ್ತ್ರ ಯುದ್ಧವನ್ನು ಪ್ರಚೋಧಿಸುವ ಹತಾಶೆಯ ಪ್ರಯತ್ನ ನಡೆಸುತ್ತಿದೆ ಎಂದು ಆರೋಪಿಸಿದೆ.

ಉತ್ತರ ಹಾಗೂ ದಕ್ಷಿಣ ಕೊರಿಯಾ ನಡುವೆ 1950-53 ನಡೆದಿದ್ದ ಯುದ್ಧವು ಕದನ ವಿರಾಮ ಒಪ್ಪಂದದ ಮೂಲಕ ಕೊನೆಗೊಂಡಿತ್ತು. ಉಭಯ ರಾಷ್ಟ್ರಗಳು ಯಾವುದೇ ಒಡಂಬಡಿಕೆ ಮಾಡಿಕೊಳ್ಳದ ಕಾರಣ, ಯುದ್ಧದ ಸನ್ನಿವೇಶಗಳು ಹಾಗೆಯೇ ಉಳಿದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT