ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟರ್ಬುಲೆನ್ಸ್‌: ಮೂರೇ ನಿಮಿಷದಲ್ಲಿ 6000 ಅಡಿ ಕೆಳಕ್ಕೆ ಕುಸಿದ ವಿಮಾನ; ಓರ್ವ ಸಾವು

Published 21 ಮೇ 2024, 11:20 IST
Last Updated 21 ಮೇ 2024, 11:20 IST
ಅಕ್ಷರ ಗಾತ್ರ

ಬ್ಯಾಂಕಾಕ್ : ಸಿಂಗಪುರ ಏರ್‌ಲೈನ್ಸ್ ಕಂಪನಿಯ ವಿಮಾನವೊಂದು ಹಿಂದೂ ಮಹಾಸಾಗರದ ಮೇಲೆ ಸಾಗುತ್ತಿದ್ದಾಗ ತೀವ್ರ ಟರ್ಬುಲೆನ್ಸ್‌ಗೆ (ಗಾಳಿಯ ಕ್ಷೋಭೆ) ಸಿಲುಕಿ, ಮೂರೇ ನಿಮಿಷಗಳ ಅವಧಿಯಲ್ಲಿ ಆರು ಸಾವಿರ ಅಡಿಗಳಷ್ಟು ಕೆಳಕ್ಕೆ ಕುಸಿಯಿತು. ಇದರ ಪರಿಣಾಮವಾಗಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಬ್ರಿಟಿಷ್ ಪ್ರಜೆಯೊಬ್ಬರು ಮೃತಪಟ್ಟಿದ್ದಾರೆ, ಎರಡು ಡಜನ್ನಿಗೂ ಹೆಚ್ಚಿನ ಪ್ರಯಾಣಿಕರಿಗೆ ಗಾಯಗಳಾಗಿವೆ. ಈ ವಿಮಾನದಲ್ಲಿ ಭಾರತದ ಮೂವರು ಪ್ರಯಾಣಿಕರು ಕೂಡ ಇದ್ದರು.

ಈ ವಿಮಾನವನ್ನು ಬ್ಯಾಂಕಾಕ್ ಕಡೆ ಒಯ್ದು, ಅಲ್ಲಿನ ಸುವರ್ಣಭೂಮಿ ವಿಮಾನ ನಿಲ್ದಾಣದಲ್ಲಿ ಇಳಿಸಲಾಯಿತು ಎಂದು ಕಂಪನಿಯು ಮಂಗಳವಾರ ತಿಳಿಸಿದೆ. ಬ್ರಿಟಿಷ್ ಪ್ರಜೆಗೆ 73 ವರ್ಷ ವಯಸ್ಸಾಗಿತ್ತು, ಅವರು ಹೃದಯಾಘಾತದಿಂದ ಮೃತಪಟ್ಟಿರಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ ಸಾವಿಗೆ ಕಾರಣ ಖಚಿತವಾಗಿಲ್ಲ. ಮೃತರ ಹೆಸರನ್ನು ತಕ್ಷಣಕ್ಕೆ ಬಹಿರಂಗಪಡಿಸಿಲ್ಲ.

ವಿಮಾನವು (ಬೋಯಿಂಗ್ 777 ಮಾದರಿ) ಲಂಡನ್ನಿನ ಹೀಥ್ರೂ ನಿಲ್ದಾಣದಿಂದ ಸಿಂಗಪುರಕ್ಕೆ ಪ್ರಯಾಣಿಸುತ್ತಿತ್ತು. ಇದರಲ್ಲಿ 211 ಮಂದಿ ಪ್ರಯಾಣಿಕರು ಹಾಗೂ 18 ಮಂದಿ ಸಿಬ್ಬಂದಿ ಇದ್ದರು.

ವಿಮಾನವು ಬ್ಯಾಂಕಾಕ್‌ನಲ್ಲಿ ಇಳಿಯುತ್ತಿದ್ದಂತೆಯೇ ವೈದ್ಯಕೀಯ ಸಿಬ್ಬಂದಿ ಪ್ರಯಾಣಿಕರ ನೆರವಿಗೆ ಧಾವಿಸಿದರು. 18 ಮಂದಿ ಪ್ರಯಾಣಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ, 12 ಮಂದಿ ಹೊರರೋಗಿಗಳಾಗಿ ಚಿಕಿತ್ಸೆ ಪಡೆದಿದ್ದಾರೆ. ಗಾಯಗೊಂಡಿರುವ ಹಾಗೂ ಗಾಯಗಳು ಇಲ್ಲದ ಪ್ರಯಾಣಿಕರನ್ನು ಸುವರ್ಣಭೂಮಿ ವಿಮಾನ ನಿಲ್ದಾಣದಲ್ಲಿ ಆರೈಕೆ ಮಾಡಲಾಗುತ್ತಿದೆ.

ಸುದ್ದಿಸಂಸ್ಥೆಯ ವಿಶ್ಲೇಷಣೆ ಪ್ರಕಾರ ಈ ವಿಮಾನವು 37 ಸಾವಿರ ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿತ್ತು. ಒಂದು ಹಂತದಲ್ಲಿ ಇದು 31 ಸಾವಿರ ಅಡಿಗಳಿಗೆ ಕುಸಿಯಿತು. ಆ ಎತ್ತರದಲ್ಲಿ 10 ನಿಮಿಷಗಳಿಗೂ ಕಡಿಮೆ ಅವಧಿಗೆ ಹಾರಾಟ ನಡೆಸಿದ ವಿಮಾನವು ನಂತರ ಪಥ ಬದಲಿಸಿತು. ಕುಸಿತ ಕಂಡ ಸಂದರ್ಭದಲ್ಲಿ ವಿಮಾನವು ಮ್ಯಾನ್‌ಮಾರ್ ಸಮೀಪ ಅಂಡಮಾನ್ ಸಮುದ್ರದ ಮೇಲೆ ಹಾರುತ್ತಿತ್ತು.

ಸೀಟ್‌ಬೆಲ್ಟ್ ಧರಿಸಿದ್ದ ಯಾವ ಪ್ರಯಾಣಿಕರಿಗೂ ಗಾಯಗಳಾಗಿಲ್ಲ ಎಂದು ವಿಮಾನದಲ್ಲಿ ಇದ್ದ ಪ್ರಯಾಣಿಕ ಆ್ಯಂಡ್ರೂ ಡೇವಿಸ್ ಸುದ್ದಿತಾಣವೊಂದಕ್ಕೆ ತಿಳಿಸಿದ್ದಾರೆ.

ಪ್ರಯಾಣಿಕರಿಗೆ ಆಹಾರ ನೀಡುತ್ತಿದ್ದ ಹೊತ್ತಿನಲ್ಲಿ ವಿಮಾನವು ಇದ್ದಕ್ಕಿದ್ದಂತೆ ಕೆಳಕ್ಕೆ ಇಳಿಯಲಾರಂಭಿಸಿತು ಎಂದು ಸುವರ್ಣಭೂಮಿ ವಿಮಾನ ನಿಲ್ದಾಣದ ಪ್ರಧಾನ ವ್ಯವಸ್ಥಾಪಕ ಕಿಟ್ಟಿಪಾಂಗ್ ಕಿಟ್ಟಿಕಚೊರ್ನ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT