ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಾರುಕ್ ಚಿತ್ರ 'ಡಂಕಿ' ಶೈಲಿಯ ಮಾನವ ಕಳ್ಳಸಾಗಣೆ: ನೇಪಾಳದಲ್ಲಿ 11 ಭಾರತೀಯರ ರಕ್ಷಣೆ

Published : 16 ಫೆಬ್ರುವರಿ 2024, 3:12 IST
Last Updated : 16 ಫೆಬ್ರುವರಿ 2024, 3:12 IST
ಫಾಲೋ ಮಾಡಿ
Comments

ಕಠ್ಮಂಡು: ಅಮೆರಿಕಕ್ಕೆ ತೆರಳಲು ನೆರವು ನೀಡುವುದಾಗಿ ಭರವಸೆ ನೀಡಿ ಕಳೆದ ಎರಡು ವಾರಗಳಿಂದ ಗೃಹಬಂಧನದಲ್ಲಿ ಇರಿಸಲಾಗಿದ್ದ ಭಾರತದ 11 ಮಂದಿಯನ್ನು ನೇಪಾಳದಲ್ಲಿ ರಕ್ಷಿಸಲಾಗಿದೆ. ಮಾನವ ಕಳ್ಳಸಾಗಣೆ ಜಾಲವನ್ನು ಭೇದಿಸಿರುವ ನೇಪಾಳ ಪೊಲೀಸರು, ಈ ಜಾಲದಲ್ಲಿ ಶಾಮೀಲಾಗಿದ್ದ ಒಬ್ಬ ನೇಪಾಳಿ ಹಾಗೂ ಎಂಟು ಮಂದಿ ಭಾರತೀಯರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಪ್ರಕರಣವು ಬಾಲಿವುಡ್‌ ನಟ ಶಾರುಕ್ ಖಾನ್‌ ನಟನೆಯ 'ಡಂಕಿ' ಸಿನಿಮಾ ಕಥೆಗೆ ಹೋಲಿಕೆಯಾಗುತ್ತಿದ್ದ ಕಾರಣ, ನೇಪಾಳ ಪೊಲೀಸರು ಕಾರ್ಯಾಚರಣೆಯನ್ನು 'ಆಪರೇಷನ್ ಡಂಕಿ' ಎಂದು ಹೆಸರಿಸಿದ್ದಾರೆ.

ಸಂತ್ರಸ್ತರು ಮತ್ತು ಮಾಫಿಯಾದಲ್ಲಿ ಸಕ್ರಿಯವಾಗಿದ್ದ ಆರೋಪಿಗಳು ಭಾರತದ ಪಂಜಾಬ್‌ ಮತ್ತು ಹರಿಯಾಣ ರಾಜ್ಯದವರಾಗಿರಬಹುದು ಎನ್ನಲಾಗಿದೆ. ಸಂತ್ರಸ್ತರು ವಿದ್ಯಾರ್ಥಿಗಳು ಎನ್ನಲಾಗಿದೆ.

ಮೆಕ್ಸಿಕೊ ಮಾರ್ಗವಾಗಿ ಅಮೆರಿಕಕ್ಕೆ ಕಳುಹಿಸಿಕೊಡುವುದಾಗಿ ಆಮಿಷವೊಡ್ಡಿ ಸಂತ್ರಸ್ತರನ್ನು ಕಠ್ಮಂಡು ಹೊರವಲಯದ ಬಾಡಿಗೆ ಮನೆಯೊಂದರಲ್ಲಿ ಎರಡು ವಾರಗಳಿಗೂ ಹೆಚ್ಚು ಸಮಯದಿಂದ ಬಂಧಿಸಲಾಗಿತ್ತು ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಕಠ್ಮಂಡು ಜಿಲ್ಲಾ ಪೊಲೀಸ್‌ ತಂಡ, ಧೋಬಿಖೊಲಾ ಕಾರಿಡಾರ್‌ನಲ್ಲಿರುವ ರಾತೊಪುಲ್‌ನಲ್ಲಿ ಬುಧವಾರ ರಾತ್ರಿ ಆರಂಭಿಸಿದ ಈ ಕಾರ್ಯಾಚರಣೆಯು ಗುರುವಾರ ನಸುಕಿನವರೆಗೂ ನಡೆಯಿತು.

‌ಅಮೆರಿಕಕ್ಕೆ ಕಳುಹಿಸುವುದಾಗಿ ಸುಳ್ಳು ಭರವಸೆ ನೀಡಿ ಪ್ರತಿ ಸಂತ್ರಸ್ತನಿಂದ ₹ 45 ಲಕ್ಷ ಹಾಗೂ ಕಠ್ಮಂಡುವಿಗೆ ಬಂದ ಬಳಿಕ ವೀಸಾ ಶುಲ್ಕವಾಗಿ ಹೆಚ್ಚುವರಿ ₹ 2.5 ಲಕ್ಷ ನಗದನ್ನು ಏಜೆಂಟ್‌ಗಳು ವಸೂಲಿ ಮಾಡಿದ್ದಾರೆ ಎಂದು ಕಠ್ಮಂಡು ಎಸ್‌ಎಸ್‌ಪಿ ಭೂಪೇಂದ್ರ ಬಹದೂರ್‌ ಖತ್ರಿ ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ಆರೋಪಿಗಳಿಗೆ ನೆರವು ನೀಡಿದ ನೇಪಾಳ ಪ್ರಜೆಯನ್ನೂ ಬಂಧಿಸಲಾಗಿದೆ. ಆರೋಪಿಗಳ ವಿರುದ್ಧ ಅಪಹರಣ, ಮಾನವ ಕಳ್ಳಸಾಗಣೆ ಹಾಗೂ ಇತರ ಆರೋಪಗಳ ಮೇಲೆ ದೇಶದ ಕಾನೂನಿನ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುವುದು. ರಕ್ಷಿಸಲಾಗಿರುವ ಪ್ರಜೆಗಳು ಉಳಿದುಕೊಳ್ಳಲು ನಗರದ ಹೋಟೆಲ್‌ನಲ್ಲಿ ವ್ಯವಸ್ಥೆ ಮಾಡಲಾಗಿದೆ. ಅವರನ್ನೆಲ್ಲ ಭಾರತೀಯ ರಾಯಭಾರ ಕಚೇರಿ, ವಿದೇಶಾಂಗ ಸಚಿವಾಲಯ ಮತ್ತು ಸಂಬಂಧಿತ ಇತರ ಅಧಿಕಾರಿಗಳ ಮೂಲಕ ಭಾರತಕ್ಕೆ ಕಳುಹಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಬಾಡಿಗೆ ಮನೆಯಲ್ಲಿದ್ದ ಸಂದರ್ಭದಲ್ಲಿ ತಮಗೆ ಮಾನಸಿಕ ಮತ್ತು ದೈಹಿಕವಾಗಿ ಕಿರುಕುಳ ನೀಡಿ, ಬೆದರಿಕೆ ಒಡ್ಡಲಾಗಿತ್ತು ಎಂದು ಸಂತ್ರಸ್ತರು ತಿಳಿಸಿದ್ದಾರೆ. 'ನಾವು ಇಲ್ಲಿ ಸುರಕ್ಷಿತವಾಗಿ ಇದ್ದೇವೆ. ಅಮೆರಿಕಕ್ಕೆ ತೆರಳುತ್ತಿದ್ದೇವೆ ಎಂದು ನಮ್ಮ ಕುಟುಂಬದವರಿಗೆ ಹೇಳುವಂತೆ ನಮಗೆಲ್ಲ ಚಾಕು ತೋರಿಸಿ ಬೆದರಿಸಲಾಗಿತ್ತು' ಎಂದು ಹೇಳಿಕೊಂಡಿದ್ದಾರೆ.

ಖೋಟಾ ಸ್ಟಾಂಪ್‌ ಹಾಕಲಾಗಿದ್ದ ಪಾಸ್‌ಪೋರ್ಟ್‌ಗಳು, ವೀಸಾ, ಬೋರ್ಡಿಂಗ್‌ ಪಾಸ್‌ ಸೇರಿದಂತೆ ಎಲ್ಲ ನಕಲಿ ದಾಖಲೆಗಳನ್ನು ಘಟನಾ ಸ್ಥಳದಲ್ಲಿ ವಶಕ್ಕೆ ಪಡೆದಿದ್ದೇವೆ ಎಂದು ಖತ್ರಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT