ವಿಲ್ಮಿಂಗ್ಟನ್ (ಅಮೆರಿಕ): 'ಕ್ವಾಡ್' ಶೃಂಗ ಸಭೆಯು ಯಾರ ವಿರುದ್ಧವೂ ಅಲ್ಲ. ಅಂತರರಾಷ್ಟ್ರೀಯ ನಿಯಮಾಧಾರಿತ ಆದೇಶಗಳು ಮತ್ತು ಸಾರ್ವಭೌಮತೆಯನ್ನು ಗೌರವಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಹೇಳಿದ್ದಾರೆ.
ಅಮೆರಿಕ ಅಧ್ಯಕ್ಷ ಜೋ ಬೈಡನ್ ಆಯೋಜಿಸಿರುವ ಶೃಂಗ ಸಭೆಯಲ್ಲಿ ಮಾತನಾಡಿದ ಮೋದಿ, 'ನಮ್ಮ ಸಂದೇಶವು ಸ್ಪಷ್ಟವಾಗಿದೆ. ಕ್ವಾಡ್ ತನ್ನ ಪಾಲುದಾರರಿಗೆ ನೆರವಾಗಲು ಮತ್ತು ಅವರಿಗೆ ಪೂರಕವಾಗಿ ಇರಲಿದೆ' ಎಂದಿದ್ದಾರೆ.
ಯಾವುದೇ ದೇಶದ ಹೆಸರನ್ನು ಉಲ್ಲೇಖಿಸದೆ, ಮುಕ್ತ, ಎಲ್ಲರನ್ನೂ ಒಳಗೊಂಡಂತೆ ಇಂಡೋ–ಪೆಸಿಫಿಕ್ ಸಮೃದ್ಧಿಗೆ ಕ್ವಾಡ್ ಆದ್ಯತೆ ನೀಡಲಿದೆ ಎಂದು ಪ್ರತಿಪಾದಿಸಿದ್ದಾರೆ.
ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಹಾಗೂ ಜಪಾನ್ ಪ್ರಧಾನಿ ಫುಮಿಯೊ ಕಿಶಿದಾ ಅವರೂ ಸಭೆಯಲ್ಲಿ ಪಾಲ್ಗೊಂಡಿದ್ದರು.
ದಕ್ಷಿಣ ಚೀನಾ ಸಮುದ್ರ ಮತ್ತು ಪೂರ್ವ ಚೀನಾ ಸಮುದ್ರ ಪ್ರದೇಶಗಳಲ್ಲಿ ಪ್ರಾದೇಶಿಕ ವಿವಾದಗಳನ್ನು ಚೀನಾ ಸೃಷ್ಟಿಸಿದೆ.
ದಕ್ಷಿಣ ಚೀನಾ ಸಮುದ್ರದ ಮೇಲೆ ಸಾರ್ವಭೌಮತ್ವ ಪ್ರತಿಪಾದಿಸುತ್ತಿರುವ ಚೀನಾ ನಡೆಯನ್ನು ವಿಯೆಟ್ನಾಂ, ಮಲೇಷ್ಯಾ, ಫಿಲಿಪ್ಪೀನ್ಸ್, ಬ್ರೂನೈ ಮತ್ತು ತೈವಾನ್ ತೀವ್ರವಾಗಿ ವಿರೋಧಿಸುತ್ತಿವೆ.