ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Israel Hamas War: ಗಾಜಾದಲ್ಲಿ ನಿಗಾದಲ್ಲಿದ್ದ 39 ಶಿಶುಗಳ ಜೀವಕ್ಕೆ ಅಪಾಯ

ಆಸ್ಪತ್ರೆಗೆ ವಿದ್ಯುತ್‌, ಆಮ್ಲಜನಕ ಪೂರೈಕೆ ಸ್ಥಗಿತ * ಶಿಶು ಸೇರಿ ನಾಲ್ವರು ರೋಗಿಗಳ ಸಾವು
Published 11 ನವೆಂಬರ್ 2023, 15:50 IST
Last Updated 11 ನವೆಂಬರ್ 2023, 15:50 IST
ಅಕ್ಷರ ಗಾತ್ರ

ದುಬೈ: ಇಸ್ರೇಲ್‌ ಸೇನೆಯ ದಾಳಿ ಬಳಿಕ ಗಾಜಾಪಟ್ಟಿಯ ಪ್ರಮುಖ ‘ಅಲ್‌ ಶಿಫಾ’ ಆಸ್ಪತ್ರೆಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಆಮ್ಲಜನಕ ಕೊರತೆಯೂ ಉಂಟಾಗಿದೆ. ‘ಪರಿಣಾಮ, ತೀವ್ರ ನಿಗಾ ಘಟಕದಲ್ಲಿದ್ದ 39 ಶಿಶುಗಳ ಜೀವಕ್ಕೆ ಅಪಾಯ ಎದುರಾಗಿದೆ’ ಎಂದು ಪ್ಯಾಲೆಸ್ಟೀನ್‌ನ ಆರೋಗ್ಯ ಸಚಿವಾಲಯ ತಿಳಿಸಿದೆ. 

‘ಆಸ್ಪತ್ರೆಯಲ್ಲಿದ್ದ 39 ಶಿಶುಗಳು ಅಸುನೀಗಿವೆ’ ಎಂದು ಈ ಮೊದಲು ಆರೋಗ್ಯ ಸಚಿವ ಮೈ ಅಲ್‌ ಕೈಲಾ ಹೇಳಿದ್ದರು. ಅದರ ಹಿಂದೆಯೇ ಖಚಿತ ಮಾಹಿತಿಯನ್ನು ನೀಡುವ ಕ್ರಮವಾಗಿ ಆರೋಗ್ಯ ಸಚಿವಾಲಯವು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, ಶಿಶುಗಳ ಜೀವಕ್ಕೆ ಅಪಾಯ ಎದುರಾಗಿದೆ ಎಂದು ತಿಳಿಸಿದೆ.  

ಚಿಕಿತ್ಸೆಗೆ ಸ್ಪಂದಿಸದೇ ಒಂದು ಶಿಶು ಅಸುನೀಗಿದೆ ಎಂದೂ ಹೇಳಿಕೆಯು ಸ್ಪಷ್ಟಪಡಿಸಿದೆ. ಹಮಾಸ್ ಪ್ರತ್ಯೇಕತಾವಾದಿಗಳು ಆಸ್ಪತ್ರೆಯನ್ನೇ ನೆಲೆಯಾಗಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದ ಇಸ್ರೇಲ್‌ನ ಸೇನೆ, ಪ್ರಮುಖ ಆಸ್ಪತ್ರೆಯನ್ನೇ ಗುರಿಯಾಗಿಸಿ ದಾಳಿ ನಡೆಸಿತ್ತು. 

ದಾಳಿ ಇನ್ನಷ್ಟು ಬಿರುಸು: ಇತ್ತ, ಇಸ್ರೇಲ್‌ ಸೇನೆಯು ಆಸ್ಪತ್ರೆಯನ್ನು ಸುತ್ತುವರಿದಿವೆ. ಅಗತ್ಯ ಸೌಲಭ್ಯಗಳ ಪೂರೈಕೆ ಕಡಿತವಾಗಿದೆ. ವಿದ್ಯುತ್ ಸಂಪರ್ಕ ಸ್ಥಗಿತವಾಗಿದೆ. ಜನರೇಟರ್‌ಗೆ ಇಂಧನ ಕೊರತೆಯಾಗಿದೆ.

‘ಅಲ್‌ ಶಿಫಾ ಆಸ್ಪತ್ರೆಯೇ ಹಮಾಸ್‌ನ ಪ್ರಮುಖ ಕಮಾಂಡರ್‌ಗಳ ನೆಲೆಯಾಗಿದೆ ಎಂದು ಇಸ್ರೇಲ್‌ ಸೇನೆ ಪ್ರತಿಪಾದಿಸಿದೆ. ಶಿಫಾ ಆಸ್ಪತ್ರೆಯಲ್ಲದೆ, ಆಸುಪಾಸಿನ ಆಸ್ಪತ್ರೆಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದೆ. ಆಸ್ಪತ್ರೆಗಳ ಹತ್ತಿರವೇ ಕದನದ ದೃಶ್ಯ ಸಾಮಾನ್ಯವಾಗಿದೆ. ಗಾಜಾದ ಉತ್ತರ ಭಾಗದಲ್ಲಿ ಜನಜೀವನ ನಿತ್ಯ ನರಕವಾಗುತ್ತಿದೆ.

‘ವಿದ್ಯುತ್ ಪೂರೈಕೆ ಇಲ್ಲ. ವೈದ್ಯಕೀಯ ಪರಿಕರಗಳು ಸ್ಥಗಿತವಾಗಿವೆ. ನಿಗಾ ಘಟಕದಲ್ಲಿರುವ ರೋಗಿಗಳು ಸಾಯುತ್ತಿದ್ದಾರೆ. ಆಸ್ಪತ್ರೆ ಒಳಗೆ, ಹೊರಗೆ ಯಾರೇ ನಿಂತಿದ್ದರೂ ಸೇನೆಯು ಗುಂಡಿನ ದಾಳಿ ನಡೆಸುತ್ತಿದೆ’ ಎಂದು ಆಸ್ಪತ್ರೆಯ ನಿರ್ದೇಶಕ ಮೊಹಮ್ಮದ್‌ ಅಬು ಸೆಲ್ಮಿಯಾ ಹೇಳಿದರು.

‘ಜನರೇಟರ್ ಸ್ಥಗಿತಗೊಂಡ ನಂತರದಲ್ಲಿ ಅವಧಿಪೂರ್ವದಲ್ಲಿ ಜನಿಸಿದ್ದ ಶಿಶು ಸೇರಿದಂತೆ ನಾಲ್ವರು ರೋಗಿಗಳು ಸತ್ತಿದ್ದಾರೆ’ ಎಂದು ಆರೋಗ್ಯ ಸಚಿವಾಲಯದ ವಕ್ತಾರ ಮೆದತ್‌ ಅಬ್ಬಾಸ್‌ ಹೇಳಿದರು. ಅವರ ಪ್ರಕಾರ, ಆಸ್ಪತ್ರೆಯಲ್ಲಿ ಅವಧಿಪೂರ್ವದಲ್ಲಿ ಜನಿಸಿದ್ದ ಒಟ್ಟು 38 ಶಿಶುಗಳಿವೆ.

ಜನರ ನಿರ್ಗಮನಕ್ಕೆ ಅವಕಾಶ: ಈ ಮಧ್ಯೆ, ಗಾಜಾ ಪಟ್ಟಿಯಿಂದ ನಾಗರಿಕರು ಸುರಕ್ಷಿತವಾಗಿ ನಗರದ ದಕ್ಷಿಣ ಭಾಗದತ್ತ ನಿರ್ಗಮಿಸಲು, ಆ ಭಾಗಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಸೇನೆಯು ನಿತ್ಯ ಕೆಲ ಗಂಟೆ ಕಾಲ ದಾಳಿಯಿಂದ ಮುಕ್ತವಾಗಿರಿಸುತ್ತಿದೆ.

‘ಗಾಜಾಪಟ್ಟಿಯಲ್ಲಿ ನಾಗರಿಕರಿಗೆ ಯಾವುದೇ ತೊಂದರೆ ಉಂಟಾದರೂ ಅದಕ್ಕೆ ಹಮಾಸ್‌ ನೇರ ಹೊಣೆ’ ಎಂದು ಇಸ್ರೇಲ್‌ ಪ್ರಧಾನಿ ಬೆಂಜಮಿನ್ ನೇತನ್ಯಾಹು ಹೇಳಿದ್ದಾರೆ.

ಹಮಾಸ್ ಪ್ರತ್ಯೇಕತಾವಾದಿಗಳು ಅಕ್ಟೋಬರ್ 7ರಂದು ಇಸ್ರೇಲ್‌ನ ವಿವಿಧ ನಗರಗಳ ಮೇಲೆ ದಾಳಿ ನಡೆಸಿದ್ದ ಹಿಂದೆಯೇ ಇಸ್ರೇಲ್‌ ಪ್ರತಿ ದಾಳಿ ನಡೆಸುತ್ತಿದೆ. ಈಗ ಗಾಜಾ ಪಟ್ಟಿಯನ್ನು ಸುತ್ತುವರಿದಿದ್ದು, ಆಕ್ರಮಣಕ್ಕೆ ಮುಂದಾಗಿದೆ. ಯುದ್ಧದಿಂದಾಗಿ ಇಸ್ರೇಲ್‌ನಲ್ಲಿ 1,200 ಜನರು, ಗಾಜಾಪಟ್ಟಿಯಲ್ಲಿ ಸುಮಾರು 11 ಸಾವಿರ ಜನರು ಸತ್ತಿದ್ದಾರೆ.

ಅಮೆರಿಕ ಸೇರಿದಂತೆ ಜಗತ್ತಿನ ವಿವಿಧ ರಾಷ್ಟ್ರಗಳ ನಾಗರಿಕರ ರಕ್ಷಣೆ ಕ್ರಮವಾಗಿ ಕದನವಿರಾಮ ಘೋಷಿಸಬೇಕು ಎಂದು ಒತ್ತಾಯಿಸಿದ್ದರೂ, ಅದಕ್ಕೆ ಇಸ್ರೇಲ್ ಸ್ಪಂದಿಸಿಲ್ಲ. ಹಮಾಸ್‌ ಒತ್ತೆ ಇರಿಸಿಕೊಂಡಿರುವ ಇಸ್ರೇಲಿಯನ್ನರ ಬಿಡುಗಡೆಯಾಗದೇ ಕದನವಿರಾಮ ಘೋಷಣೆ ಇಲ್ಲ ಎಂದು ಇಸ್ರೇಲ್‌ ಸ್ಪಷ್ಟಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT