ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಭಾರತದ ಬೆಳವಣಿಗೆಯ ಹಾದಿಯಲ್ಲಿ ಭಾಗಿಯಾಗಿ: ಕಂಪನಿಗಳಿಗೆ ಪ್ರಧಾನಿ ಮೋದಿ ಒತ್ತಾಯ

Published : 23 ಸೆಪ್ಟೆಂಬರ್ 2024, 13:53 IST
Last Updated : 23 ಸೆಪ್ಟೆಂಬರ್ 2024, 13:53 IST
ಫಾಲೋ ಮಾಡಿ
Comments

ನ್ಯೂಯಾರ್ಕ್: ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಬೆಳೆಯಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದು, ಈ ಬೆಳವಣಿಗೆಯ ಹಾದಿಯಲ್ಲಿ ನೀವೂ ಭಾಗಿಯಾಗಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದ ತಂತ್ರಜ್ಞಾನ ಕ್ಷೇತ್ರದ ಪ್ರಮುಖ ಕಂಪನಿಗಳನ್ನು ಒತ್ತಾಯಿಸಿದರು. 

ಅಮೆರಿಕದ ಕಂಪನಿಗಳ ಸಿಇಒಗಳ ಜೊತೆ ನಡೆದ ದುಂಡುಮೇಜಿನ ಸಭೆಯಲ್ಲಿ ಪಾಲ್ಗೊಂಡ ಅವರು, ಭಾರತದ ಆರ್ಥಿಕ ಬೆಳವಣಿಗೆಯು ಮೂಡಿಸಿರುವ ನಿರೀಕ್ಷೆಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿನ ಸಹಭಾಗಿತ್ವವನ್ನು ಉತ್ತೇಜಿಸುವ ಉಪಕ್ರಮಗಳ ಬಗ್ಗೆ ಚರ್ಚಿಸಿದರು.

ಭಾರತವು ಈಗ ಅಮೆರಿಕ, ಚೀನಾ, ಜರ್ಮನಿ ಮತ್ತು ಜಪಾನ್‌ ದೇಶಗಳ ಬಳಿಕ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆ ಎನಿಸಿಕೊಂಡಿದೆ. ‘ನನ್ನ ಮೂರನೇ ಅವಧಿಯಲ್ಲಿ (2024–29) ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲು ಭಾರತವು ಎಲ್ಲ ಪ್ರಯತ್ನಗಳನ್ನು ಮಾಡಲಿದೆ’ ಎಂದು ಹೇಳಿದರು.

‘ಆರ್ಥಿಕ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಬೆಳವಣಿಯು ನಿಮಗೆ ಹಲವು ಅವಕಾಶಗಳನ್ನು ಕಲ್ಪಿಸಲಿದೆ. ಅಭಿವೃದ್ದಿ ಹಾಗೂ ಉತ್ಪಾದನೆಯಲ್ಲಿ ಜಂಟಿಯಾಗಿ ಹೊಸ ಆವಿಷ್ಕಾರಗಳನ್ನು ಕೈಗೊಳ್ಳುವ ಮೂಲಕ ಭಾರತದ ಬೆಳವಣಿಗೆಯ ಲಾಭವನ್ನು ನೀವು ಪಡೆದುಕೊಳ್ಳಬೇಕು’ ಎಂದರು. 

ಬೌದ್ಧಿಕ ಆಸ್ತಿಯ ರಕ್ಷಣೆ ಮತ್ತು ತಂತ್ರಜ್ಞಾನದ ಆವಿಷ್ಕಾರವನ್ನು ಉತ್ತೇಜಿಸಲು ಭಾರತದ ಬದ್ಧತೆಯ ಬಗ್ಗೆ ವಿವಿಧ ಕಂಪನಿಗಳ ಸಿಇಒಗಳಿಗೆ ಭರವಸೆ ನೀಡಿದ ಮೋದಿ, ಭಾರತದಲ್ಲಿ ಸೆಮಿಕಂಡಕ್ಟರ್‌ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ವಿವರಿಸಿದರು.

ಭಾರತವನ್ನು ‘ಸೆಮಿಕಂಡಕ್ಟರ್ ತಯಾರಿಕೆಯ ಜಾಗತಿಕ ಹಬ್’ ಮಾಡಲು ತಮ್ಮ ಸರ್ಕಾರ ಬದ್ಧವಾಗಿದೆ ಎಂದು ಪ್ರತಿಪಾದಿಸಿದರು.

ಯಾರೆಲ್ಲಾ ಭಾಗಿ?: 

ಮೆಸಾಚುಸೆಟ್ಸ್ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಸ್ಕೂಲ್‌ ಆಫ್‌ ಎಂಜಿನಿಯರಿಂಗ್ ಆಯೋಜಿಸಿದ್ದ ದುಂಡುಮೇಜಿನ ಸಭೆಯಲ್ಲಿ ಗೂಗಲ್‌ ಸಿಇಒ ಸುಂದರ್‌ ಪಿಚೈ, ಅಡೋಬಿ ಸಿಇಒ ಶಂತನು ನಾರಾಯಣ್, ಅಕ್ಸೆಂಚರ್‌ ಸಿಇಒ ಜೂಲೀ ಸ್ವೀಟ್, ಐಬಿಎಂ ಸಿಇಒ ಅರವಿಂದ ಕೃಷ್ಣ ಮತ್ತು ಎನ್‌ವೀಡಿಯಾ ಸಿಇಒ ಜೆನ್ಸನ್ ಹುವಾಂಗ್‌ ಒಳಗೊಂಡಂತೆ ಪ್ರಮುಖ 15 ಕಂಪನಿಗಳ ಸಿಇಒಗಳು ಪಾಲ್ಗೊಂಡರು.

‘ಗಾಜಾ ಪರಿಸ್ಥಿತಿ: ಕಳವಳ’

ನ್ಯೂಯಾರ್ಕ್‌: ಪ್ರಧಾನಿ ಮೋದಿ ಅವರು ಪ್ಯಾಲೆಸ್ಟೀನ್‌ ಅಧ್ಯಕ್ಷ ಮಹಮೂದ್ ಅಬ್ಬಾಸ್ ಅವರನ್ನು ಇಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು. ಗಾಜಾದಲ್ಲಿ ಎದುರಾಗಿರುವ ಬಿಕ್ಕಟ್ಟಿನ ಪರಿಸ್ಥಿತಿ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದರು.

ಯುದ್ಧಪೀಡಿತ ಪ್ರದೇಶದಲ್ಲಿ ಶೀಘ್ರದಲ್ಲೇ ಶಾಂತಿ ಮರುಸ್ಥಾಪಿಸಲು ಭಾರತದ ಬೆಂಬಲವನ್ನು ಪುನರುಚ್ಚರಿಸಿದರು.

‘ಪ್ಯಾಲೆಸ್ಟೀನ್‌ ಜನರೊಂದಿಗಿನ ದೀರ್ಘಕಾಲದ ಗೆಳೆತನವನ್ನು ಮತ್ತಷ್ಟು ಬಲಪಡಿಸುವ ಕುರಿತ ಅಭಿಪ್ರಾಯಗಳನ್ನು ಅಬ್ಬಾಸ್ ಅವರೊಂದಿಗೆ ಹಂಚಿಕೊಂಡೆ’ ಎಂದು ಮೋದಿ ಅವರು ‘ಎಕ್ಸ್‌’ನಲ್ಲಿ ಹೇಳಿದ್ದಾರೆ.

ಇಸ್ರೇಲ್-ಪ್ಯಾಲೆಸ್ಟೀನ್‌ ನಡುವಿನ ಸಮಸ್ಯೆಗೆ ಶಾಂತಿಯುತ ಮತ್ತು ಶಾಶ್ವತ ಪರಿಹಾರ ಕಂಡುಕೊಳ್ಳುವುದರೆಡೆಗಿನ ತನ್ನ ಬದ್ಧತೆಯನ್ನು ಭಾರತವು ಒತ್ತಿಹೇಳಿದೆ. ಎರಡೂ ಕಡೆಯವರು ನೇರ ಮತ್ತು ಅರ್ಥಪೂರ್ಣ ಮಾತುಕತೆಗಳ ಮೂಲಕ ಮಾತ್ರ ಶಾಶ್ವತ ಶಾಂತಿ ಸ್ಥಾಪಿಸಬಹುದು ಎಂಬ ತನ್ನ ನಿಲುವನ್ನು ಪುನರುಚ್ಚರಿಸಿದೆ. 

ನೇಪಾಳದ ಪ್ರಧಾನಿ ಕೆ.ಪಿ.ಶರ್ಮಾ ಒಲಿ ಹಾಗೂ ಕುವೈತ್‌ ಯುವರಾಜ ಶೈಖ್ ಸಬಾ ಖಾಲಿದ್‌ ಅಲ್‌ ಸಬಾ ಜತೆಯೂ ಅವರು ದ್ವಿಪಕ್ಷೀಯ ಮಾತುಕತೆ ನಡೆಸಿದರು. ನೇಪಾಳಕ್ಕೆ ಭೇಟಿ ನೀಡುವಂತೆ ಒಲಿ ಅವರು ಮಾಡಿರುವ ಆಹ್ವಾನವನ್ನು ಮೋದಿ ಸ್ವೀಕರಿಸಿದರು.

‘ಎರಡು ಕಾನ್ಸುಲೇಟ್ ಆರಂಭಿಸಲು ನಿರ್ಧಾರ’

ಅಮೆರಿಕದ ಬಾಸ್ಟನ್‌ ಮತ್ತು ಲಾಸ್‌ ಏಂಜಲೀಸ್‌ನಲ್ಲಿ ಭಾರತವು ಕಾನ್ಸುಲೇಟ್‌ಗಳನ್ನು ಆರಂಭಿಸಲಿದೆ ಎಂದು ಪ್ರಧಾನಿ ಮೋದಿ ಅವರು ಘೋಷಿಸಿದರು. ಈ ಎರಡು ನಗರಗಳಲ್ಲಿ ನೆಲೆಸಿರುವ ಭಾರತೀಯ ಸಮುದಾಯದವರ ದೀರ್ಘಕಾಲದ ಬೇಡಿಕೆ ಇದರೊಂದಿಗೆ ಈಡೇರಲಿದೆ.

‘ಸಿಯಾಟಲ್‌ ನಗರದಲ್ಲಿ ಹೊಸ ಕಾನ್ಸುಲೇಟ್‌ ತೆರೆಯುವ ಯೋಜನೆ ಇದೆ ಎಂದು ನಾನು ಕಳೆದ ವರ್ಷ ಘೋಷಿಸಿದ್ದೆ. ಅಲ್ಲಿ ಅದು ಈಗಾಗಲೇ ಕಾರ್ಯ ಆರಂಭಿಸಿದೆ. ಇನ್ನೂ ಎರಡು ಕಾನ್ಸುಲೇಟ್‌ಗಳನ್ನು ಆರಂಭಿಸುವ ನಿಟ್ಟಿನಲ್ಲಿ ಸಲಹೆ ಕೇಳಿದ್ದೆ. ನಿಮ್ಮ ಸಲಹೆಗಳನ್ನು ಪರಿಶೀಲಿಸಿದ ನಂತರ ಬಾಸ್ಟನ್‌ ಮತ್ತು ಲಾಸ್ ಏಂಜಲೀಸ್‌ನಲ್ಲಿ ಎರಡು ಹೊಸ ಕಾನ್ಸುಲೇಟ್‌ಗಳನ್ನು ತೆರೆಯಲು ನಿರ್ಧರಿಸಿದ್ದೇವೆ ಎಂಬುದನ್ನು ಘೋಷಿಸಲು ಸಂತಸವಾಗುತ್ತಿದೆ’ ಎಂದು ನ್ಯೂಯಾರ್ಕ್‌ನಲ್ಲಿ ಭಾರತೀಯ ಸಮುದಾಯದ ಸದಸ್ಯರನ್ನು ಉದ್ದೇಶಿಸಿ ಮಾತನಾಡುತ್ತಾ ಅವರು ತಿಳಿಸಿದರು.

ಸಿಯಾಟಲ್‌ ಅಲ್ಲದೆ ನ್ಯೂಯಾರ್ಕ್ ಅಟ್ಲಾಂಟಾ ಷಿಕಾಗೊ ಹ್ಯೂಸ್ಟನ್ ಮತ್ತು ಸ್ಯಾನ್‌ ಫ್ರಾನ್ಸಿಸ್ಕೊದಲ್ಲಿ ಭಾರತದ ಕಾನ್ಸುಲೇಟ್‌ಗಳು ಕಾರ್ಯಾಚರಿಸುತ್ತಿವೆ.

ಮನರಂಜಿಸಿದ ಸಾಂಸ್ಕೃತಿಕ ಕಾರ್ಯಕ್ರಮ:

ಪ್ರಧಾನಿ ಮೋದಿ ಅವರು ಭಾರತೀಯ ಸಮುದಾಯದ ಸದಸ್ಯರನ್ನು ಉದ್ದೇಶಿಸಿ ಮಾತನಾಡುವುದಕ್ಕೂ ಮುನ್ನ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮ ನೆರೆದವರ ಮನರಂಜಿಸಿತು. ಜನಪದ ಗಾಯಕ ಆದಿತ್ಯ ಗಢವಿ ರ್‍ಯಾಪರ್‌ ಹನುಮಾನ್‌ಕೈಂಡ್ (ಸೂರಜ್‌ ಚೆರುಕಾಟ್ಟ್) ಮತ್ತು ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ಅವರು ಪ್ರದರ್ಶನ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT