ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ಮೋದಿ ಈಜಿಪ್ಟ್‌ ಭೇಟಿ: ದ್ವಿಪಕ್ಷೀಯ ಬಾಂಧವ್ಯ ವೃದ್ಧಿ ಚರ್ಚೆ

ಹೂಡಿಕೆ, ಇಂಧನ ಭದ್ರತೆ ಕ್ಷೇತ್ರದಲ್ಲಿನ ಅವಕಾಶಗಳ ಕುರಿತು ಮೋದಿ ಮಾತುಕತೆ
Published 25 ಜೂನ್ 2023, 15:54 IST
Last Updated 25 ಜೂನ್ 2023, 15:54 IST
ಅಕ್ಷರ ಗಾತ್ರ

ಕೈರೊ (ಈಜಿಪ್ಟ್‌): ಈಜಿಪ್ಟ್‌ಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ವ್ಯಾಪಾರ, ಹೂಡಿಕೆ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರೊಂದಿಗೆ ಭಾನುವಾರ ಮಾತುಕತೆ ನಡೆಸಿದರು.

ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಬಾಂಧವ್ಯ ವೃದ್ಧಿ, ಇಂಧನ ಭದ್ರತೆ, ಮೂಲಭೂತವಾದ ಸೇರಿದಂತೆ ಮಹತ್ವದ ವಿಷಯಗಳ ಕುರಿತು ಈಜಿಪ್ಟ್‌ನ ಮುಖಂಡರೊಂದಿಗೆ ಮೋದಿ ಚರ್ಚಿಸಿದರು.

‘ಈಜಿಪ್ಟ್‌ನ ಖ್ಯಾತ ಚಿಂತಕ ತರೆಕ್ ಹೆಗ್ಗಿ ಅವರೊಂದಿಗಿನ ಸಂವಾದ ಅದ್ಭುತವಾಗಿತ್ತು. ಜಾಗತಿಕ ವಿದ್ಯಮಾನಗಳ ಕುರಿತ ತಮ್ಮ ಒಳನೋಟಗಳನ್ನು ಹಂಚಿಕೊಂಡರು. ವಿಶ್ವದ ಭಿನ್ನ ಸಂಸ್ಕೃತಿಗಳ ಕುರಿತು ಅವರು ಆಳ ಜ್ಞಾನ ಹೊಂದಿದ್ದಾರೆ’ ಎಂದು ಮೋದಿ ಟ್ವೀಟ್‌ ಮಾಡಿದ್ದಾರೆ.

‘ಈಜಿಪ್ಟ್‌ನ ಪ್ರಸಿದ್ಧ ಹಸನ್ ಅಲ್ಲಮ್ ಹೋಲ್ಡಿಂಗ್‌ ಕಂಪನಿಯ ಸಿಇಒ ಹಸನ್‌ ಅಲ್ಲಮ್‌ ಅವರನ್ನು ಮೋದಿ ಭೇಟಿ ಮಾಡಿದರು. ಮಧ್ಯಪ್ರಾಚ್ಯ ಹಾಗೂ ಆಫ್ರಿಕಾದಲ್ಲಿ ಕಾರ್ಯನಿರ್ವಹಿಸುತ್ತಿರುವ ದೊಡ್ಡ ಕಂಪನಿಗಳಲ್ಲೊಂದು’ ಎಂದು ವಿದೇಶಾಂಗ ಸಚಿವಾಲಯ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

‘ಹಸನ್‌ ಅಲ್ಲಮ್‌ ಅವರೊಂದಿಗಿನ ಭೇಟಿ ಫಲಪ್ರದವಾಗಿತ್ತು. ಆರ್ಥಿಕತೆ ಮತ್ತು ಹೂಡಿಕೆ ಬಗ್ಗೆ ವಿಸ್ತೃತ ಚರ್ಚೆ ನಡೆಸಿದೆವು. ಈಜಿಪ್ಟ್‌ನ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವ ಕುರಿತು ಅವರಲ್ಲಿರುವ ತವಕ ನನಗೆ ಖುಷಿ ತಂದಿತು ಎಂದು ಮೋದಿ ಹೇಳಿದರು’ ಎಂದೂ ಪ್ರಕಟಣೆ ತಿಳಿಸಿದೆ.

ಮೋದಿ ಅವರನ್ನು ಭೇಟಿ ಮಾಡಿದ ನಂತರ ಮಾತನಾಡಿದ ಹಸನ್‌ ಅಲ್ಲಮ್, ‘ಇಂಡಿಯಾದ ಖಾಸಗಿ ವಲಯದಿಂದ ನಾವು ಕಲಿಯಬೇಕಾದದ್ದು ಸಾಕಷ್ಟಿದೆ. ಮೂಲಸೌಕರ್ಯ, ಎಂಜಿನಿಯರಿಂಗ್‌ ಸೇರಿದಂತೆ ಭಾರತದ ಖಾಸಗಿ ಕ್ಷೇತ್ರವು ಮೋದಿ ಅವರ ನಾಯಕತ್ವದಲ್ಲಿ ಅಗಾಧ ಪ್ರಗತಿ ಸಾಧಿಸಿದೆ’ ಎಂದು ಶ್ಲಾಘಿಸಿದ್ದಾರೆ.

ಯೋಗ ಶಿಕ್ಷಕಿಯರ ಜೊತೆ ಮಾತುಕತೆ: ಈಜಿಪ್ಟ್‌ನಲ್ಲಿ ಯೋಗ ತರಬೇತಿ ನೀಡುತ್ತಿರುವ ರೀಮಾ ಜಬಕ್ ಮತ್ತು ನದಾ ಅದೆಲ್‌ ಅವರೊಂದಿಗೆ ಪ್ರಧಾನಿ ಮೋದಿ ಮಾತುಕತೆ ನಡೆಸಿದರು.

‘ಯೋಗ ಕಲಿಸುವಲ್ಲಿ ಈ ಇಬ್ಬರು ತರಬೇತುದಾರರ ಬದ್ಧತೆಯನ್ನು ಮೋದಿ ಶ್ಲಾಘಿಸಿದರು. ಭಾರತಕ್ಕೆ ಭೇಟಿ ನೀಡುವಂತೆ ಇಬ್ಬರಿಗೂ ಆಹ್ವಾನ ನೀಡಿದರು’ ಎಂದು ಸಚಿವಾಲಯ ತಿಳಿಸಿದೆ.

ಭೇಟಿ: ಇದಕ್ಕೂ ಮುನ್ನ ಪ್ರಧಾನಿ ಮೋದಿ ಅವರಿಗೆ ಅಧ್ಯಕ್ಷ ಅಬ್ದೆಲ್‌ ಫತ್ತಾಹ್‌ ಎಲ್‌–ಸಿಸಿ ತಮ್ಮ ಸ್ವಾಗತ ಕೋರಿದರು.

ಅಧ್ಯಕ್ಷರ ಅರಮನೆಯಲ್ಲಿ ಮಾತುಕತೆ ನಡೆಸಿದ ಉಭಯ ನಾಯಕರು, ಎರಡೂ ದೇಶಗಳ ನಡುವಿನ ವ್ಯಾಪಾರ, ಹೂಡಿಕೆ, ಇಂಧನ ಪೂರೈಕೆ ಹಾಗೂ ಪ್ರಜೆಗಳ ನಡುವಿನ ಸಂಪರ್ಕವನ್ನು ಮತ್ತಷ್ಟು ಸುಧಾರಿಸುವ ನಿಟ್ಟಿನಲ್ಲಿ ಚರ್ಚೆ ನಡೆಸಿದರು.

ಈಜಿಪ್ಟ್‌ನ ಖ್ಯಾತ ಉದ್ಯಮಿ ಹಸನ್‌ ಅಲ್ಲಮ್‌ ಅವರ ಜೊತೆ ಪ್ರಧಾನಿ ನರೇಂದ್ರ ಮೋದಿ ಅವರು ಕೈರೊದಲ್ಲಿ ಭಾನುವಾರ ಮಾತುಕತೆ ನಡೆಸಿದರು – ಪಿಟಿಐ ಚಿತ್ರ 
ಈಜಿಪ್ಟ್‌ನ ಖ್ಯಾತ ಉದ್ಯಮಿ ಹಸನ್‌ ಅಲ್ಲಮ್‌ ಅವರ ಜೊತೆ ಪ್ರಧಾನಿ ನರೇಂದ್ರ ಮೋದಿ ಅವರು ಕೈರೊದಲ್ಲಿ ಭಾನುವಾರ ಮಾತುಕತೆ ನಡೆಸಿದರು – ಪಿಟಿಐ ಚಿತ್ರ 

‘ನೀವು ಭಾರತದ ಹೀರೊ....’

ಕೈರೊ (ಪಿಟಿಐ): ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಯಿಂದ ಪುಳಕಿತಗೊಂಡಿದ್ದ ಇಲ್ಲಿನ ಭಾರತೀಯರ ಸಂಭ್ರಮ ಮೇರೆ ಮೀರಿತ್ತು. ಇಲ್ಲಿನ ರಿಜ್‌ ಕಾರ್ಲ್‌ಟನ್ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಭಾರತೀಯರು ತ್ರಿವರ್ಣ ಧ್ವಜದೊಂದಿಗೆ ಮೋದಿ ಅವರನ್ನು ಸ್ವಾಗತಿಸಿದರು. ಹೋಟೆಲ್‌ಗೆ ಆಗಮಿಸುತ್ತಿದ್ದಂತೆಯೇ ‘ಮೋದಿ...ಮೋದಿ’ ಹಾಗೂ ‘ವಂದೇ ಮಾತರಂ’ ಘೋಷಣೆಗಳನ್ನು ಕೂಗಿದರು. ಮಾತುಕತೆ ವೇಳೆ ‘ನೀವು ಭಾರತದ ಹೀರೊ’ ಎಂದು ಭಾರತೀಯ ವ್ಯಕ್ತಿ ಮೋದಿ ಅವರನ್ನು ಹೊಗಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೋದಿ ‘ಇಡೀ ಭಾರತವೇ ಪ್ರತಿಯೊಬ್ಬರ ಪಾಲಿಗೆ ಹೀರೊ.  ಜನರು ಕಟ್ಟಪಟ್ಟು ದುಡಿದಾಗ ದೇಶ ಪ್ರಗತಿ ಸಾಧಿಸುತ್ತದೆ. ದೇಶದ ಪ್ರಗತಿಗೆ ವಿದೇಶದಲ್ಲಿರುವವರು ಸೇರಿದಂತೆ ಪ್ರತಿಯೊಬ್ಬ ಭಾರತೀಯನ ಕೊಡುಗೆ ಇದೆ’ ಎಂದು  ಹೇಳಿದರು. ಅಮೆರಿಕ ಸಂಸತ್‌ನಲ್ಲಿ ಮೋದಿ ಅವರು ಮಾಡಿದ ಭಾಷಣದ ಬಗ್ಗೆ ಇಲ್ಲಿನ ಭಾರತೀಯರು ಮೆಚ್ಚುಗೆ ವ್ಯಕ್ತಪಡಿಸಿದರು. ಸೀರೆ ಉಟ್ಟು ಬಂದಿದ್ದ ಈಜಿಪ್ಟ್‌ ಮಹಿಳೆ ಜೇನಾ ಎಂಬುವವರು ‘ಶೋಲೆ’ ಚಿತ್ರದ ‘ಯೇ ದೋಸ್ತಿ ಹಮ್‌ ನಹೀಂ ತೋಡೆಂಗೆ’ ಗೀತೆ ಹಾಡಿ ಮೋದಿ ಅವರನ್ನು ಸ್ವಾಗತಿಸಿ ಗಮನ ಸೆಳೆದರು.

ಪಿರಮಿಡ್‌ಗಳ ವೀಕ್ಷಣೆ ನಾಗರಿಕತೆಯ ಪ್ರಮುಖ ಗುರುತುಗಳಾಗಿರುವ ಕೈರೊ ಹೊರವಲಯದ ಗಿಜಾದಲ್ಲಿರುವ ಪಿರಮಿಡ್‌ಗಳಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಪ್ರಧಾನಿ ಮೊಸ್ತಫಾ ಮದ್ಬೌಲಿ ಇದ್ದರು.

ಪ್ರಧಾನಿ ಮೋದಿ ಅದ್ಭುತ ವ್ಯಕ್ತಿ. ದೂರದೃಷ್ಟಿವುಳ್ಳ ಬುದ್ಧಿವಂತ ಹಾಗೂ ನಮ್ರತೆ ಇರುವ ವ್ಯಕ್ತಿ. ಅವರೊಂದಿಗಿನ ಭೇಟಿ ಪ್ರೇರಣಾದಾಯಕವಾಗಿತ್ತು
-ಹಸನ್‌ ಅಲ್ಲಮ್ ಹಸನ್ ಅಲ್ಲಮ್ ಹೋಲ್ಡಿಂಗ್‌ ಕಂಪನಿ ಸಿಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT