ಕೀವ್: ‘ಶಾಂತಿ ಸ್ಥಾಪನೆಯ ಯತ್ನವಾಗಿ ಉಕ್ರೇನ್ ಮತ್ತು ರಷ್ಯಾ ಅಧ್ಯಕ್ಷರು ಪರಸ್ಪರ ಕುಳಿತು ಚರ್ಚಿಸಬೇಕು. ‘ಸ್ನೇಹಿ ರಾಷ್ಟ್ರ’ವಾಗಿ ಈ ನಿಟ್ಟಿನಲ್ಲಿ ಎಲ್ಲ ಅಗತ್ಯ ಸಹಕಾರ ನೀಡಲಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಇಲ್ಲಿ ಶುಕ್ರವಾರ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರ ಜೊತೆಗೆ ಚರ್ಚಿಸಿದ ವೇಳೆ ಮೋದಿ ಈ ಮಾತು ಹೇಳಿದ್ದು, ಮಾತುಕತೆ ಮತ್ತು ರಾಜತಾಂತ್ರಿಕ ಮಾರ್ಗಗಳಿಂದಲೇ ಶಾಂತಿ ಸ್ಥಾಪನೆ ಅಗತ್ಯ ಎಂದು ಪುನರುಚ್ಚರಿಸಿದ್ದಾರೆ.
ಭೇಟಿಯ ಬಳಿಕ ಉಭಯ ಮುಖಂಡರು ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ‘ನಾನು ಶಾಂತಿ ಸಂದೇಶದೊಂದಿಗೆ ಕೀವ್‌ಗೆ ಬಂದಿದ್ದೇನೆ. ಗುರಿ ಸಾಧನೆಗಾಗಿ ಆದಷ್ಟು ಶೀಘ್ರ ಉಭಯ ದೇಶಗಳ ನಾಯಕರು ಮುಖಾಮುಖಿ ಕುಳಿತು ಚರ್ಚಿಸಬೇಕು’ ಎಂದು ಹೇಳಿದ್ದಾರೆ.
‘ಪರಿಹಾರವನ್ನು ಚರ್ಚೆ ಮತ್ತು ರಾಜತಾಂತ್ರಿಕ ಮಾರ್ಗಗಳಿಂದ ಮಾತ್ರ ಕಂಡುಕೊಳ್ಳಹುದು. ನಾವು ಸಮಯ ವ್ಯರ್ಥ ಮಾಡದೇ ಅದೇ ಮಾರ್ಗದಲ್ಲಿ ಸಾಗಬೇಕು. ಪರಸ್ಪರ ಚರ್ಚಿಸಿ ಬಿಕ್ಕಟ್ಟಿಗೆ ಪರಿಹಾರ ಹುಡುಕಿಕೊಳ್ಳಬೇಕು’ ಎಂದು ಪ್ರತಿಪಾದಿಸಿದರು.
‘ಶಾಂತಿ ಸ್ಥಾಪನೆಗೆ ಅಗತ್ಯವಿರುವ ಎಲ್ಲ ಸಹಕಾರವನ್ನು ಭಾರತ ನೀಡಲಿದೆ ಎಂದು ನಾನು ಭರವಸೆ ನೀಡುತ್ತೇನೆ. ವ್ಯಕ್ತಿಗತವಾಗಿ ಈ ಹೊಣೆ ನಿಭಾಯಿಸಲು ನಾನು ಸಿದ್ಧ’ ಎಂದರು.
‘ಮೋದಿ ಅವರ ಭೇಟಿಯು ಐತಿಹಾಸಿಕವಾದುದು’ ಉಭಯ ಮುಖಂಡರು ಬಣ್ಣಿಸಿದ್ದಾರೆ.
ಮಹತ್ವ ಪಡೆದ ಮೋದಿ ಭೇಟಿ: ರಷ್ಯಾಗೆ ಭೇಟಿ ನೀಡಿದ್ದ ಅರು ವಾರಗಳ ತರುವಾಯ ಪ್ರಧಾನಿ ಮೋದಿ ಉಕ್ರೇನ್‌ಗೆ ಭೇಟಿ ನೀಡಿದ್ದು, ಇದೇ ಕಾರಣದಿಂದ ಈ ಭೇಟಿಯು ಮಹತ್ವ ಪಡೆದುಕೊಂಡಿತ್ತು.
ಉಕ್ರೇನ್ 1991ರಲ್ಲಿ ಸ್ವತಂತ್ರ ರಾಷ್ಟ್ರವಾದ ಬಳಿಕ ಭಾರತದ ಪ್ರಧಾನಿಯ ಪ‍್ರಥಮ ಭೇಟಿ ಇದಾಗಿದೆ. ಪೋಲೆಂಡ್‌ನಿಂದ ರೈಲಿನಲ್ಲಿ ಸತತ 10 ಗಂಟೆ ಪ್ರಯಾಣಿಸಿ ಬಂದಿಳಿದ ಮೋದಿ ಅವರನ್ನು ಸ್ಥಳೀಯ ಹೋಟೆಲ್‌ನಲ್ಲಿ ಭಾರತೀಯ ಸಮುದಾಯದವರು ಬರಮಾಡಿಕೊಂಡರು.
ನಂತರ ಉಕ್ರೇನ್‌ನಲ್ಲಿನ ರಾಷ್ಟ್ರೀಯ ಸಂಗ್ರಹಾಲಯಕ್ಕೆ ಪ್ರಧಾನಿ ಮೋದಿ ತೆರಳಿದ್ದರು. ಅಲ್ಲಿ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರು ಹಸ್ತಲಾಘವ ನೀಡಿ, ಆಲಿಂಗಿಸಿ, ಬರಮಾಡಿಕೊಂಡರು.
ಝೆಲೆನ್‌ಸ್ಕಿ ಅವರ ಜೊತೆಗಿನ ಭೇಟಿಗೂ ಮುನ್ನ ಪ್ರಧಾನಿ, ಉಕ್ರೇನ್ ರಾಜಧಾನಿಯಲ್ಲಿರುವ ಮಹಾತ್ಮ ಗಾಂಧಿ ಅವರ ಪ್ರತಿಮೆಗೂ ಗೌರವ ವಂದನೆ ಸಲ್ಲಿಸಿದರು.
ಪ್ರಧಾನಿ ಇತ್ತೀಚೆಗೆ ಮಾಸ್ಕೊಗೆ ಭೇಟಿ ನೀಡಿದ್ದು ಹಲವು ಪಾಶ್ಚಿಮಾತ್ಯ ರಾಷ್ಟ್ರಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಹೀಗಾಗಿ ರಾಜತಾಂತ್ರಿಕ ಸಂಬಂಧಗಳಲ್ಲಿ ಸಮತೋಲನ ಸಾಧಿಸುವುದು ಈ ಭೇಟಿಯ ಉದ್ದೇಶ ಎಂದು ಹೇಳಲಾಗಿದೆ.
ಜೂನ್ ತಿಂಗಳಲ್ಲಿ ಇಟಲಿಯಲ್ಲಿ ಜಿ7 ಶೃಂಗಸಭೆ ಸಂದರ್ಭದಲ್ಲಿ ಝೆಲೆನ್‌ಸ್ಕಿ ಅವರೊಂದಿಗೆ ಮೋದಿ ಮಾತನಾಡಿದ್ದರು.
ಸಹಜ ಶಾಂತ ಸ್ಥಿತಿ ಮರುಸ್ಥಾಪನೆಗೆ ಭಾರತ ಸಹಕರಿಸಲಿದೆ ಎಂದು ಪ್ರಧಾನಿ ಪುನರುಚ್ಚರಿಸಿದ್ದಾರೆ. ವ್ಲಾದಿಮಿರ್ ಪುಟಿನ್ ಜೊತೆಗಿನ ಚರ್ಚೆಯ ವಿವರಗಳನ್ನು ಉಕ್ರೇನ್ ಅಧ್ಯಕ್ಷರ ಭೇಟಿ ವೇಳೆ ಹಂಚಿಕೊಂಡಿದ್ದಾರೆ.-ಎಸ್.ಜೈಶಂಕರ್ ವಿದೇಶಾಂಗ ವ್ಯವಹಾರಗಳ ಸಚಿವ
ಮೋದಿ ಅವರದ್ದು ಸ್ನೇಹಪರವಾದ ಭೇಟಿ. ಎಲ್ಲ ಉಕ್ರೇನಿಯನ್ನರ ದೃಷ್ಟಿಯಿಂದ ಮಹತ್ವವಾದುದು-ವೊಲೊಡಿಮಿರ್ ಝೆಲೆನ್‌ಸ್ಕಿ ಉಕ್ರೇನ್ ಅಧ್ಯಕ್ಷ
ಗಾಂಧೀಜಿ ಶಾಂತಿ ಸಂದೇಶದ ಮಹತ್ವ ಉಲ್ಲೇಖಿಸಿದ ಮೋದಿ
ಕೀವ್ (ಪಿಟಿಐ): ಉಕ್ರೇನ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರ ಜೊತೆಗಿನ ಮಾತುಕತೆಗೂ ಮುನ್ನ ಸೌಹಾರ್ದ ಸಮಾಜ ನಿರ್ಮಿಸಲು ಗಾಂಧೀಜಿ ಅವರ ಶಾಂತಿ ಸಂದೇಶದ ಪ್ರಸ್ತುತತೆಯನ್ನು ಉಲ್ಲೇಖಿಸಿದ್ದಾರೆ. ಉಕ್ರೇನ್ ಪ್ರವಾಸದ ಆರಂಭದಲ್ಲಿಯೇ ಕೀವ್‌ನ ‘ಓಯಸಿಸ್ ಆಫ್ ಪೀಸ್’ ಉದ್ಯಾನದಲ್ಲಿ ಇರುವ ಗಾಂಧೀಜಿ ಪ್ರತಿಮೆಗೆ ಪುಷ್ಪಗುಚ್ಛ ಸಲ್ಲಿಸಿ ಗೌರವ ಸಲ್ಲಿಸಿದರು. ‘ಕೀವ್‌ನಲ್ಲಿ ಗಾಂಧೀಜಿ ಪ್ರತಿಮೆಗೆ ನಮಿಸಿದೆ. ಗಾಂಧೀ ಅವರ ಚಿಂತನೆಗಳು ಜಾಗತಿಕವಾಗಿದ್ದು ಕೋಟ್ಯಂತರ ಜನರ ಭರವಸೆಯಾಗಿದೆ. ಅವರು ತೋರಿದ ಮಾನವೀಯತೆಯ ಹಾದಿಯಲ್ಲಿ ನಾವು ಹೆಜ್ಜೆ ಹಾಕಬೇಕಾಗಿದೆ’ ಎಂದು ‘ಎಕ್ಸ್’ನಲ್ಲಿ ಸಂದೇಶ ಹಂಚಿಕೊಂಡಿದ್ದಾರೆ. ‘ಸೌಹಾರ್ದ ಸಮಾಜ ನಿರ್ಮಾಣ ಮತ್ತು ಸದ್ಯದ ಜಾಗತಿಕ ಸವಾಲುಗಳನ್ನು ಎದುರಿಸಲು ಗಾಂಧೀಜಿಯವರ ಸಂದೇಶ ಚಿಂತನೆ ಎಷ್ಟು ಪ್ರಸ್ತುತ ಎಂದು ಪ್ರಧಾನಿ ಅವರು ಕೀವ್‌ನಲ್ಲಿ ಒತ್ತಿ ಹೇಳಿದ್ದಾರೆ’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ್ ರಣದೀರ್ ಜೈಸ್ವಾಲ್ ಹೇಳಿದ್ದಾರೆ. ರಷ್ಯಾ–ಉಕ್ರೇನ್ ಬಿಕ್ಕಟ್ಟು ಅಂತ್ಯಗೊಳಿಸಲು ಪರಿಹಾರ ಕ್ರಮಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಧಾನಿ ಅವರು ಉಕ್ರೇನ್ ಅಧ್ಯಕ್ಷರ ಜೊತೆಗೆ ಚರ್ಚಿಸುವರು ಎಂದು ಜೈಸ್ವಾಲ್ ‘ಎಕ್ಸ್’ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.