ನ್ಯೂಯಾರ್ಕ್: ಭಾರತೀಯ ಸಮುದಾಯದ ಕಾರ್ಯಕ್ರಮ ಹಾಗೂ ವಿಶ್ವಸಂಸ್ಥೆಯ ಅಧಿವೇಶನದಲ್ಲಿ ಪಾಲ್ಗೊಳ್ಳುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ನ್ಯೂಯಾರ್ಕ್ ತಲುಪಿದ್ದಾರೆ.
ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ತಮ್ಮ ತವರು ಡೆಲವೇರ್ ರಾಜ್ಯದ ವಿಲ್ಮಿಂಗ್ಟನ್‌ನಲ್ಲಿ ಶನಿವಾರ ಆಯೋಜಿಸಿದ್ದ 'ಕ್ವಾಡ್' ಶೃಂಗ ಸಭೆ ಮುಕ್ತಾಯದ ಬಳಿಕ ಮೋದಿ, ನ್ಯೂಯಾರ್ಕ್‌ಗೆ ಬಂದಿದ್ದಾರೆ. ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಹಾಗೂ ಜಪಾನ್ ಪ್ರಧಾನಿ ಫುಮಿಯೊ ಕಿಶಿದಾ ಅವರೂ 'ಕ್ವಾಡ್' ಶೃಂಗ ಸಭೆಯಲ್ಲಿ ಹಾಜರಾಗಿದ್ದರು.
'ಡೆಲವೇರ್ ಕಾರ್ಯಕ್ರಮಗಳ ಬಳಿಕ ನ್ಯೂಯಾರ್ಕ್‌ಗೆ ಬಂದಿಳಿದಿದ್ದೇನೆ. ನಗರದಲ್ಲಿ ನಡೆಯುವ ಸಮುದಾಯದ ಕಾರ್ಯಕ್ರಮ ಹಾಗೂ ಇತರ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಕಾತರನಾಗಿದ್ದೇನೆ' ಎಂದು ಎಕ್ಸ್/ಟ್ವಿಟರ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಮೋದಿ ಅವರು ಅಮೆರಿಕಕ್ಕೆ ಮೂರು ದಿನಗಳ ಪ್ರವಾಸ ಕೈಗೊಂಡಿದ್ದಾರೆ.
ನ್ಯೂಯಾರ್ಕ್‌ನ ಲಾಂಗ್ ಐಲ್ಯಾಂಡ್‌ನಲ್ಲಿ ಇಂದು (ಸೆ.22) ನಡೆಯುವ ಭಾರತೀಯ ಸಮುದಾಯದವರ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಮೋದಿ, ನಾಳೆ ವಿಶ್ವಸಂಸ್ಥೆಯ ಮಹಾ ಅಧಿವೇಶನವನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಅಮೆರಿಕದ ಪ್ರಮುಖ ಉದ್ಯಮಗಳ ಸಿಇಒಗಳ ಜೊತೆಗೂ ಮಾತುಕತೆ ನಡೆಸಲಿದ್ದಾರೆ.