ಬಂದಾರ್ ಸೆರಿ ಬೆಗಾವನ್: ಬ್ರೂನೈ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಬ್ರೂನೈ ದೊರೆ ಮತ್ತು ಪ್ರಧಾನಿ ಹಸನಲ್ ಬೊಲ್ಕಿಯಾ ಅವರು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಫೋಟೊಗಳನ್ನು ಹಂಚಿಕೊಂಡಿರುವ ಮೋದಿ, ‘ಸುಲ್ತಾನ್ ಹಸನಲ್ ಬೊಲ್ಕಿಯಾ ಅವರನ್ನು ಭೇಟಿಯಾಗಿ ಸಂತೋಷವಾಗಿದೆ. ನಮ್ಮ ಮಾತುಕತೆಗಳು ಉಭಯ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಭದ್ರಪಡಿಸುವ ಮಾರ್ಗಗಳನ್ನು ಒಳಗೊಂಡಿತ್ತು. ವ್ಯಾಪಾರ ಸಂಬಂಧ, ವಾಣಿಜ್ಯ ಸಂಪರ್ಕ ಹಾಗೂ ಕೌಶಲ ವಿನಿಮಯವನ್ನು ಇನ್ನಷ್ಟು ವಿಸ್ತರಿಸಲಿದ್ದೇವೆ’ ಎಂದು ಬರೆದುಕೊಂಡಿದ್ದಾರೆ.
ಭಾರತದ ಪ್ರಧಾನಿಯೊಬ್ಬರು ದ್ವಿಪಕ್ಷೀಯ ಮಾತುಕತೆಗಾಗಿ ಬ್ರೂನೈಗೆ ಭೇಟಿ ನೀಡಿದ್ದು ಇದೇ ಮೊದಲು. ಉಭಯ ದೇಶಗಳ ನಡುವಣ ರಾಜತಾಂತ್ರಿಕ ಸಂಬಂಧ ಸ್ಥಾಪನೆಯ 40ನೇ ವರ್ಷಾಚರಣೆಯ ಸಮಯದಲ್ಲೇ ಈ ಭೇಟಿ ನಡೆದಿದೆ.
‘ಆಕ್ಟ್ ಈಸ್ಟ್’ ನೀತಿ ಮತ್ತು ಇಂಡೋ-ಪೆಸಿಫಿಕ್ ವಿಷನ್‌ನಲ್ಲಿ ಭಾರತಕ್ಕೆ ಬ್ರೂನೈ ಪ್ರಮುಖ ಪಾಲುದಾರ ಆಗಿದೆ.