ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಬುಧಾಬಿಯಲ್ಲಿ ಪಶ್ಚಿಮ ಏಷ್ಯಾದ ಮೊದಲ ಹಿಂದೂ ದೇವಾಲಯ ಉದ್ಘಾಟಿಸಿದ ಪ್ರಧಾನಿ ಮೋದಿ

ಪಶ್ಚಿಮ ಏಷ್ಯಾದಲ್ಲಿಯೇ ಯುಎಇಯಲ್ಲಿ ಕಲ್ಲಿನಿಂದ ನಿರ್ಮಿಸಲಾಗಿರುವ ಮೊದಲ ಹಿಂದೂ ದೇವಾಲಯವಿದು
Published 14 ಫೆಬ್ರುವರಿ 2024, 13:58 IST
Last Updated 14 ಫೆಬ್ರುವರಿ 2024, 13:58 IST
ಅಕ್ಷರ ಗಾತ್ರ

ಅಬುಧಾಬಿ (ಪಿಟಿಐ): ಪ್ರಧಾನಿ ನರೇಂದ್ರ ಮೋದಿ ಅವರು ಅಬುಧಾಬಿಯಲ್ಲಿ ಬೋಚಾಸನವಾಸಿ ಶ್ರೀ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥೆಯ (ಬಿಎಪಿಎಸ್‌) ಹಿಂದೂ ದೇವಾಲಯವನ್ನು ಸ್ವಾಮಿನಾರಾಯಣ ಪಂಥದ ಆಧ್ಯಾತ್ಮಿಕ ನಾಯಕರ ಸಮ್ಮುಖ ದಲ್ಲಿ ಬುಧವಾರ ಉದ್ಘಾಟಿಸಿದರು. ಇದು ಇಲ್ಲಿನ ಮೊದಲ ಕಲ್ಲಿನ ದೇವಾಲಯ ಹಾಗೂ ಮಧ್ಯಪ್ರಾಚ್ಯ ದೇಶಗಳಲ್ಲಿಯೇ ದೊಡ್ಡದಾದ ಮಂದಿರವಾಗಿದೆ.

ತಿಳಿ ಗುಲಾಬಿ ಬಣ್ಣದ ರೇಷ್ಮೆ ಧೋತಿ ಮತ್ತು ಕುರ್ತಾ ಧರಿಸಿದ್ದ ಪ್ರಧಾನಿ, ದೇವಾಲಯ ಉದ್ಘಾಟನಾ ಸಮಾರಂಭದ ಆಚರಣೆ
ಗಳಲ್ಲಿ ಭಾಗಿಯಾದರು. ಅವರು ದೇವಾಲಯದಲ್ಲಿ ನಡೆದ ‘ಗ್ಲೋಬಲ್‌ ಆರತಿ’ಯಲ್ಲಿ ಭಾಗವಹಿಸಿದರು. ಇದೇ ವೇಳೆ ವಿಶ್ವದಾದ್ಯಂತ ಬಿಎಪಿಎಸ್‌ನ 1,200ಕ್ಕೂ ಹೆಚ್ಚು ದೇವಾಲಯಗಳಲ್ಲಿ ಏಕಕಾಲದಲ್ಲಿ ಈ ಆರತಿ ನಡೆಯಿತು.

ಇದಕ್ಕೂ ಮುನ್ನ ಮೋದಿ ಅವರು ದೇವಾಲಯಕ್ಕೆ ಗಂಗಾ ಮತ್ತು ಯಮುನಾ ನದಿಯ ನೀರನ್ನು ಅರ್ಪಿಸಿದರು. ನಂತರ ಬಿಎಪಿಎಸ್‌ ಆಧ್ಯಾತ್ಮಿಕ ನಾಯಕ ಮಹಂತ್‌ ಸ್ವಾಮಿಮಹಾರಾಜ್‌ ಅವರ ಪಾದಗಳನ್ನು ಸ್ಪರ್ಶಿಸಿ ನಮಿಸಿದರು.

ದೇವಾಲಯದ ನಿರ್ಮಾಣ ಕಾರ್ಯಕ್ಕೆ ವಿವಿಧ ರೀತಿಯಲ್ಲಿ ಕೊಡುಗೆ ನೀಡಿದ ವಿವಿಧ ಧರ್ಮಗಳ ಜನರನ್ನು ಪ್ರಧಾನಿ ಭೇಟಿ ಮಾಡಿದರು.

ಹಲವು ವೈಶಿಷ್ಟ್ಯಗಳು:

ವೈಜ್ಞಾನಿಕ ತಂತ್ರಗಳೊಂದಿಗೆ, ಪ್ರಾಚೀನ ವಾಸ್ತು ಶಿಲ್ಪದ ಶೈಲಿಗಳನ್ನು ಅಳವಡಿಸಿಕೊಂಡು ಇದನ್ನು ನಿರ್ಮಿಸಲಾಗಿದೆ. ದುಬೈ– ಅಬುಧಾಬಿ ಶೇಖ್‌ ಜಾಯೆದ್‌ ಹೆದ್ದಾರಿಯ ಅಬು ಮುರೇಖಾದಲ್ಲಿ 27 ಎಕರೆ ಪ್ರದೇಶದಲ್ಲಿ ಸುಮಾರು ₹ 700 ಕೋಟಿ ವೆಚ್ಚದಲ್ಲಿ ಭವ್ಯವಾದ ದೇವಾಲಯವನ್ನು ನಿರ್ಮಾಣ ಮಾಡಲಾಗಿದೆ.

ಈ ಮಂದಿರವನ್ನು 300ಕ್ಕೂ ಹೆಚ್ಚು ಹೈಟೆಕ್‌ ಸೆನ್ಸಾರ್‌ಗಳೊಂದಿಗೆ ನಿರ್ಮಿಸಲಾಗಿದೆ. ಇವು ಮಂದಿರದ ತಾಪಮಾನ ಅಳೆಯಲು ಮತ್ತು ಭೂಕಂಪನಗಳ ಮೇಲೆ ನಿಗಾವಹಿಸಲು ನೆರವಾಗುತ್ತವೆ. ದೇವಾಲಯದ ನಿರ್ಮಾಣಕ್ಕೆ ಯಾವುದೇ ಲೋಹವನ್ನು ಬಳಸಿಲ್ಲ.

ಹಿಂದೂ ಧರ್ಮ ಗ್ರಂಥಗಳು, ಶಿಲ್ಪ, ಮತ್ತು ಸ್ಥಾಪತ್ಯ ಶಾಸ್ತ್ರಗಳಲ್ಲಿ ಉಲ್ಲೇಖಿಸಿರುವಂತೆ ಪ್ರಾಚೀನ ಶೈಲಿಯಲ್ಲಿ ಮಂದಿರದ ವಿನ್ಯಾಸ ಮಾಡಲಾಗಿದೆ. ವಾಸ್ತುಶಾಸ್ತ್ರದ ವಿಧಾನಗಳನ್ನು ಇಲ್ಲಿ ವೈಜ್ಞಾನಿಕ ತಂತ್ರಗಳೊಂದಿಗೆ ಸಂಯೋಜಿಸಲಾಗಿದೆ ಎಂದು ಬಿಎಪಿಎಸ್‌ನ ಅಂತರರಾಷ್ಟ್ರೀಯ ಸಂಬಂಧಗಳ ಮುಖ್ಯಸ್ಥ ಸ್ವಾಮಿ
ಬ್ರಹ್ಮವಿಹಾರಿದಾಸ್‌ ಹೇಳಿದರು.

‘ದೇವಾಲಯದಲ್ಲಿ ಶಾಖ ನಿರೋಧಕ ನ್ಯಾನೊ ಟೈಲ್ಸ್‌ ಮತ್ತು ಭಾರಿ ಗಾಜಿನ ಫಲಕಗಳನ್ನು ಬಳಸಲಾಗಿದೆ’ ಎಂದು ದೇವಾಲಯದ ನಿರ್ಮಾಣ ವ್ಯವಸ್ಥಾಪಕ ಮಧುಸೂದನ್‌ ಪಟೇಲ್‌ ತಿಳಿಸಿದರು. 

ಅಯೋಧ್ಯೆಯಲ್ಲಿ ಇತ್ತೀಚೆಗೆ ಉದ್ಘಾಟನೆಯಾದ ರಾಮಮಂದಿರದಂತೆಯೇ ನಾಗರ ಶೈಲಿಯ ವಾಸ್ತುಶಿಲ್ಪದಲ್ಲಿ ಈ ದೇವಾಲಯವನ್ನು ನಿರ್ಮಿಸಲಾಗಿದೆ. ಮಂದಿರ ನಿರ್ಮಾಣಕ್ಕಾಗಿ ಯುಎಇ ಸರ್ಕಾರವು ಭೂಮಿಯನ್ನು ದಾನವಾಗಿ ನಿಡಿದೆ. ಇದು ದುಬೈನಲ್ಲಿ ನಿರ್ಮಿಸಲಾಗಿರುವ ಮೂರನೇ ಹಿಂದೂ ದೇವಾಲಯ. ಕಲ್ಲಿನ ವಾಸ್ತುಶಿಲ್ಪ ಹೊಂದಿರುವ ಈ ದೇವಾಲಯವು ವಿಸ್ತೀರ್ಣದಲ್ಲಿ ಇತರ ದೇವಾಲಯಗಳಿಗಿಂತ ದೊಡ್ಡದು.

ಭ್ರಷ್ಟ ಮುಕ್ತ ಸರ್ಕಾರಗಳು ಅಗತ್ಯ

ದುಬೈ (ಪಿಟಿಐ): ಜಗತ್ತಿಗೆ ಎಲ್ಲರನ್ನೂ ಒಳಗೊಳ್ಳುವ, ಸ್ವಚ್ಛ ಮತ್ತು ಭ್ರಷ್ಟಾಚಾರ ಮುಕ್ತ ಸರ್ಕಾರಗಳ ಅಗತ್ಯವಿದೆ ಎಂದು ಬುಧವಾರ ಪ್ರತಿಪಾದಿಸಿದ ಪ್ರಧಾನಿ ನರೇಂದ್ರ ಮೋದಿ, ಈ ನಿಟ್ಟಿನಲ್ಲಿ ‘ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ’ ತಮ್ಮ ಮಂತ್ರವಾಗಿದೆ ಎಂದು ಹೇಳಿದರು.

ವಿಶ್ವ ಸರ್ಕಾರಗಳ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಭಾರತದಲ್ಲಿ ಕೆಲ ವರ್ಷಗಳಲ್ಲಿ ಸರ್ಕಾರದ ಮೇಲೆ ಜನರ ನಂಬಿಕೆ ಹೆಚ್ಚಾಗಿದೆ. ಸಾರ್ವಜನಿಕ ಭಾವನೆಗಳಿಗೆ ಆದ್ಯತೆ ನೀಡಿದ್ದರ ಪರಿಣಾಮವಿದು’ ಎಂದರು.

‘ದುಬೈ ಜಾಗತಿಕ, ಆರ್ಥಿಕ, ವಾಣಿಜ್ಯ ಮತ್ತು ತಂತ್ರಜ್ಞಾನ ಕೇಂದ್ರ ಬಿಂದುವಾಗಿ ಬೆಳೆದಿದೆ’ ಎಂದ ಪ್ರಧಾನಿ, ಯುಎಇ ಅಧ್ಯಕ್ಷ ಶೇಖ್‌ ಮೊಹಮ್ಮದ್‌ ಬಿನ್‌ ಜಾಯೆದ್‌ ದೂರದೃಷ್ಟಿ ಹೊಂದಿರುವ ನಾಯಕ ಎಂದು ಬಣ್ಣಿಸಿದರು.

ಯುಎಇ, ಮಡಗಾಸ್ಕರ್‌ ನಾಯಕರ ಜತೆ ಮಾತುಕತೆ

ದುಬೈ (ಪಿಟಿಐ): ಪ್ರಧಾನಿ ನರೇಂದ್ರ ಮೋದಿ ಅವರು ಯುಎಇ ಪ್ರಧಾನಿ ಶೇಖ್‌ ಮೊಹಮ್ಮದ್ ಬಿನ್‌ ರಶೀದ್‌ ಅಲ್‌ ಮುಕ್ತೌಮ್‌ ಹಾಗೂ ಮಡಗಾಸ್ಕರ್‌ ಅಧ್ಯಕ್ಷ ಆಂಡ್ರಿ ರಾಜೋಲಿನಾ ಅವರೊಂದಿಗೆ ದ್ವಿಪಕ್ಷೀಯ ಸಂಬಂಧ ವೃದ್ಧಿ ಕುರಿತು ಮಾತುಕತೆ ನಡೆಸಿದರು.

‘ಭಾರತ– ಯುಎಇ ಸಮಗ್ರ ಕಾರ್ಯತಂತ್ರದ
ಪಾಲುದಾರಿಕೆಯನ್ನು ಬಲಪಡಿಸಲು ಪ್ರಧಾನಿ ಮೋದಿ ಅವರು ಯುಎಇ ಪ್ರಧಾನಿ ಅವರನ್ನು ಭೇಟಿಯಾದರು. ವ್ಯಾಪಾರ, ಹೂಡಿಕೆ, ತಂತ್ರಜ್ಞಾನ, ಶಿಕ್ಷಣ ಸೇರಿದಂತೆ ದ್ವಿಪಕ್ಷೀಯ ಸಹಕಾರ ವೃದ್ಧಿಗೆ ಸಂಬಂಧಿಸಿದಂತೆ ಚರ್ಚೆಗಳು ನಡೆದವು’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದೆ.

ಮತ್ತೊಂದು ಸಭೆಯಲ್ಲಿ ಮೋದಿ ಅವರು ಮಡಗಾಸ್ಕರ್‌ ಅಧ್ಯಕ್ಷ ಆಂಡ್ರಿ ರಾಜೋಲಿನಾ ಅವರೊಂದಿಗೆ ಮಾತುಕತೆ ನಡೆಸಿದರು. ಈ ವೇಳೆ ಭಾರತ– ಮಡಗಾಸ್ಕರ್‌ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ಮತ್ತು ದ್ವೀಪ ರಾಷ್ಟ್ರದ ಅಭಿವೃದ್ಧಿ ನೆರವು ನೀಡಲು ಭಾರತದ ಬದ್ಧತೆಯನ್ನು ಪ್ರಧಾನಿ ಪುನರುಚ್ಚರಿಸಿದರು ಎಂದು ಎಂಇಎ ತಿಳಿಸಿದೆ.

ಭಾರತೀಯರ ಸುರಕ್ಷತೆಗೆ ಮೋದಿ ಒತ್ತು

ವಿದೇಶಗಳಲ್ಲಿರುವ ಭಾರತೀಯರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಯಾವಾಗಲೂ ತಾವೇ ನೇತೃತ್ವ ವಹಿಸಿಕೊಂಡು, ಇತರ ದೇಶಗಳ ನಾಯಕರೊಂದಿಗೆ ಮಾತುಕತೆ ನಡೆಸುತ್ತಾರೆ ಎಂದು ವಿದೇಶಾಂಗ ಕಾರ್ಯದರ್ಶಿ ವಿನಯ್‌ ಕ್ವಾತ್ರಾ ಬುಧವಾರ ಶ್ಲಾಘಿಸಿದರು.

ಕತಾರ್‌ನಲ್ಲಿ ಮರಣದಂಡನೆ ಶಿಕ್ಷೆ ಎದುರಿಸುತ್ತಿದ್ದ ಭಾರತೀಯ ನೌಕಾಪಡೆಯ ಎಂಟು ಮಾಜಿ ಅಧಿಕಾರಿಗಳ ಬಿಡುಗಡೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿಸುತ್ತಾ ಅವರು ಹೀಗೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT