ಮಂಗಳವಾರ, 20 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನದ ಯಾವುದೇ ಸರ್ಕಾರದೊಂದಿಗೆ ಕೆಲಸ ಮಾಡಲು ನಾವು ಸಿದ್ಧ: ಅಮೆರಿಕ

Published 13 ಫೆಬ್ರುವರಿ 2024, 5:41 IST
Last Updated 13 ಫೆಬ್ರುವರಿ 2024, 5:41 IST
ಅಕ್ಷರ ಗಾತ್ರ

ವಾಷಿಂಗ್ಟನ್: ಪಾಕಿಸ್ತಾನದಲ್ಲಿ ಅಧಿಕಾರಕ್ಕೆ ಬರುವ ಯಾವುದೇ ಸರ್ಕಾರದೊಂದಿಗೆ ಕೆಲಸ ಮಾಡಲು ಅಮೆರಿಕ ಸಿದ್ಧವಾಗಿದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರ ಮ್ಯಾಥ್ಯೂ ಮಿಲ್ಲರ್ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪಾಕಿಸ್ತಾನದಲ್ಲಿ ಹೊಸ ಸರ್ಕಾರ ರಚನೆಯಾಗಿದೆ ಎಂದು ನಾನು ಭಾವಿಸುವುದಿಲ್ಲ. ಸರ್ಕಾರ ರಚನೆಯ ಬಗ್ಗೆ ಚರ್ಚೆಗಳು ನಡೆಯುತ್ತಿವೆಯಷ್ಟೇ’ ಎಂದು ಹೇಳಿದರು.

ನಾವು ಚುನಾವಣೆಗೂ ಮುನ್ನ ಹೇಳಿದಂತೆಯೇ ಪಾಕಿಸ್ತಾನದ ಜನರು ಯಾರನ್ನು ಪ್ರತಿನಿಧಿಗಳನ್ನಾಗಿ ಯಾರನ್ನು ಆಯ್ಕೆ ಮಾಡುತ್ತಾರೋ ನಾವು ಅವರೊಂದಿಗೆ (ಹೊಸ ಸರ್ಕಾರ) ಕೆಲಸ ಮಾಡುತ್ತೇವೆ ಎಂದು ಸ್ಪಷ್ಟಪಡಿಸಲು ಬಯಸುತ್ತೇನೆ ಎಂದು ತಿಳಿಸಿದ್ದಾರೆ.

ಪಾಕಿಸ್ತಾನ ಚುನಾವಣೆ ಆಯೋಗ ಸಾರ್ವತ್ರಿಕ ಚುನಾವಣೆ ಪೂರ್ಣ ಫಲಿತಾಂಶವನ್ನು ಮತದಾನ ನಡೆದ ಮೂರು ದಿನದ ಬಳಿಕ ಪ್ರಕಟಿಸಿದೆ. ಆ ಪ್ರಕಾರ, ಯಾವ ಪಕ್ಷಕ್ಕೂ ಸರಳ ಬಹುಮತ ಲಭಿಸಿಲ್ಲ.

ಅತಂತ್ರ ಸಂಸತ್ತು ರಚನೆಯಾಗಿದೆ. ಮೈತ್ರಿ ಸರ್ಕಾರ ರಚನೆ ಅನಿವಾರ್ಯ ಎಂಬ ಚಿತ್ರಣ ಸ್ಪಷ್ಟವಾಗಿದೆ. ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಪಾಕಿಸ್ತಾನ ಮುಸ್ಲಿಂ ಲೀಗ್ ನವಾಜ್‌ (ಪಿಎಂಎಲ್‌–ಎನ್‌) ರಾಷ್ಟ್ರೀಯ ಸಂಸತ್ತಿನಲ್ಲಿ 75 ಸ್ಥಾನಗಳನ್ನು ಗೆದ್ದಿದ್ದು, ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

ವಿವಾದಗಳೇ ಚುನಾವಣೆಯನ್ನು ಆವರಿಸಿದ್ದವು. ಆರಂಭಿಕ ಫಲಿತಾಂಶದ ಹಿಂದೆಯೇ ಮಾಜಿ ಪ್ರಧಾನಿಗಳಾದ ಇಮ್ರಾನ್‌ ಖಾನ್‌ ನೇತೃತ್ವದ ಪಾಕಿಸ್ತಾನ್‌ ತೆಹ್ರೀಕ್‌–ಇ–ಇನ್ಸಾಫ್‌ (ಪಿಟಿಐ) ಮತ್ತು ನವಾಜ್ ಷರೀಫ್‌ ಅವರ ಪಾಕಿಸ್ತಾನ್ ಮುಸ್ಲಿಂ ಲೀಗ್ –ನವಾಜ್‌ (ಪಿಎಂಎಲ್–ಎನ್), ಚುನಾವಣೆಯಲ್ಲಿ ಗೆದ್ದಿರುವುದಾಗಿ ಪ್ರತಿಪಾದಿಸಿದ್ದವು.

ರಾಷ್ಟ್ರೀಯ ಮತ್ತು ಪ್ರಾಂತ್ಯವಾರು ವಿಧಾನಸಭಾ ಕ್ಷೇತ್ರಗಳು ಸೇರಿ 854 ಕ್ಷೇತ್ರಗಳಲ್ಲಿ ಮತದಾನ ನಡೆದಿತ್ತು. ಫಲಿತಾಂಶದ ಪ್ರಕಾರ, 348 ಕ್ಷೇತ್ರಗಳಲ್ಲಿ ಪಕ್ಷೇತರರು ಜಯಗಳಿಸಿದ್ದಾರೆ.

ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) 160 ಸ್ಥಾನ ಗೆದ್ದುಕೊಂಡು ಎರಡನೇ ಸ್ಥಾನದಲ್ಲಿದ್ದರೆ, ಮುಟ್ಟಾಹಿದಾ ಖೌಮಿ ಮೂವ್‌ಮೆಂಟ್ ಪಾಕಿಸ್ತಾನ್ (ಎಂಕ್ಯೂಎಂ–ಪಿ) 45 ಸ್ಥಾನ ಗೆದ್ದಿದ್ದು, ಮೂರನೇ ಸ್ಥಾನದಲ್ಲಿದೆ.

ರಾಷ್ಟ್ರೀಯ ಸಂಸತ್ತಿಗೆ 101 ಪಕ್ಷೇತರರು ಆಯ್ಕೆಯಾಗಿದ್ದಾರೆ. ಪಿಎಂಎಲ್–ಎನ್‌ –75, ಪಿಪಿಪಿ –54, ಎಂಕ್ಯುಎಂ–ಪಿ–17, ಜಮಿಯಾತ್ ಉಲೆಮಾ-ಇ-ಇಸ್ಲಾಂ (ಜೆಯುಐ) –4, ಪಿಎಂಎಲ್–ಕ್ವಾಯಿದ್ –3, ಇಷ್ತೆಹ್ಖಾಂ–ಇ–ಪಾಕಿಸ್ತಾನ್ ಪಾರ್ಟಿ (ಐಪಿಪಿ) –2, ಬಲೂಚಿಸ್ತಾನ ನ್ಯಾಷನಲ್‌ ಪಾರ್ಟಿ (ಬಿಎನ್‌ಪಿ) –2 ಕಡೆ ಗೆದ್ದಿವೆ.

ಸ್ಥಳೀಯ ಮಾಧ್ಯಮ ವರದಿ ಮಾಡಿರುವಂತೆ, ಸಂವಿಧಾನದ ಪ್ರಕಾರ ಅಧ್ಯಕ್ಷ ಆರಿಫ್‌ ಅಲ್ವಿ ಅವರು, ಫೆಬ್ರುವರಿ 29ರ ಒಳಗೆ ರಾಷ್ಟ್ರೀಯ ಸಂಸತ್ತಿನ ಅಧಿವೇಶನ ಕರೆಯಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT