ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆ: ದಾಖಲೆಯ 39 ಅಭ್ಯರ್ಥಿಗಳು ಕಣದಲ್ಲಿ

Published : 15 ಆಗಸ್ಟ್ 2024, 10:04 IST
Last Updated : 15 ಆಗಸ್ಟ್ 2024, 10:04 IST
ಫಾಲೋ ಮಾಡಿ
Comments

ಕೊಲಂಬೊ: ಶ್ರೀಲಂಕಾದಲ್ಲಿ ಸೆಪ್ಟೆಂಬರ್ 21ರಂದು ನಡೆಯಲಿರುವ ಅಧ್ಯಕ್ಷೀಯ ಚುನಾವಣೆಗೆ ಮೂವರು ತಮಿಳರು ಮತ್ತು ಇಬ್ಬರು ಬೌದ್ಧ ಸನ್ಯಾಸಿಗಳು ಸೇರಿದಂತೆ ಒಟ್ಟು 39 ಅಭ್ಯರ್ಥಿಗಳು ಕಣದಲ್ಲಿದ್ದಾರೆ ಎಂದು ಚುನಾವಣಾ ಆಯೋಗ ಗುರುವಾರ ತಿಳಿಸಿದೆ.

39 ಮಂದಿ ಅಧ್ಯಕ್ಷೀಯ ಆಕಾಂಕ್ಷಿಗಳ ಪೈಕಿ ಒಬ್ಬರೂ ಮಹಿಳೆಯರಿಲ್ಲ’ ಎಂದು ಆಯೋಗ ಹೇಳಿದೆ. 2019ರ ಕೊನೆಯ ಅಧ್ಯಕ್ಷೀಯ ಚುನಾವಣೆಯಲ್ಲಿ 35 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. 1982ರ ಅಕ್ಟೋಬರ್‌ನಲ್ಲಿ ನಡೆದ ಮೊದಲ ಅಧ್ಯಕ್ಷೀಯ ಚುನಾವಣೆಯಲ್ಲಿ ಕೇವಲ 6 ಅಭ್ಯರ್ಥಿಗಳು ಕಣದಲಿದ್ದರು.

ನಾಮ ಪತ್ರ ಸಲ್ಲಿಸಲು ಬುಧವಾರ ಕೊನೆಯ ದಿನವಾಗಿತ್ತು. ಒಟ್ಟು 40 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಒಬ್ಬರು ತಮ್ಮ ನಾಮಪತ್ರವನ್ನು ವಾಪಸು ಪಡೆದರು. ಇನ್ನು ಮೂರು ನಾಮಪತ್ರಗಳ ಕುರಿತು ಆಕ್ಷೇಪಗಳಿದ್ದವು. ಆ ಎಲ್ಲ ನಾಮಪತ್ರಗಳನ್ನು ಅಸಿಂಧು ಮಾಡಲಾಯಿತು ಎಂದು ಚುನಾವಣಾ ಆಯೋಗದ ಮುಖ್ಯಸ್ಥ ಆರ್‌ಎಂಎಎಲ್ ರತ್ನಾಯಕ್ ತಿಳಿಸಿದ್ದಾರೆ.

ಹಾಲಿ ಅಧ್ಯಕ್ಷ ವಿಕ್ರಮಸಿಂಘೆ ಅಲ್ಲದೆ, ಇತರ ಪ್ರಮುಖ ಅಭ್ಯರ್ಥಿಗಳೆಂದರೆ ರಾಜಪಕ್ಸೆ ರಾಜವಂಶದ ಉತ್ತರಾಧಿಕಾರಿ ನಮಲ್ ರಾಜಪಕ್ಸೆ, ಪ್ರಮುಖ ವಿರೋಧ ಪಕ್ಷದ ನಾಯಕ ಸಜಿತ್ ಪ್ರೇಮದಾಸ ಮತ್ತು ಮಾರ್ಕ್ಸ್‌ವಾದಿ ಜೆವಿಪಿ ನಾಯಕ ಅನುರಾ ಕುಮಾರ ದಿಸಾನಾಯಕೆ ಕಣದಲ್ಲಿದ್ದಾರೆ.

ಆರ್ಥಿಕ ಬಿಕ್ಕಟ್ಟಿನ ಕಾರಣಕ್ಕೆ ಪ್ರಭುತ್ವದ ವಿರುದ್ಧ 2022ರಲ್ಲಿ ಸಾರ್ವಜನಿಕರೇ ಸೇರಿ ಚಳವಳಿಯನ್ನು ರೂಪಿಸಿದ್ದರು. ಇಂಥ ಒಂದು ಜನ ಸಂಘಟನೆಯ ನೇತೃತ್ವ ವಹಿಸಿದ್ದ ವ್ಯಕ್ತಿಯೂ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.

ಚಳವಳಿಯ ನಂತರ ಅಂದಿನ ಅಧ್ಯಕ್ಷ ಗೊಟಬಯಾ ರಾಜಪಕ್ಸೆ ಅವರು ಅಧಿಕಾರಿಂದ ಇಳಿಯಬೇಕಾಯಿತು. ಈ ಚಳವಳಿ ನಡೆದ ಬಳಿಕ ಇದೇ ಮೊದಲ ಬಾರಿಗೆ ದೇಶದಲ್ಲಿ ಚುನಾವಣೆ ನಡೆಯುತ್ತಿದೆ. ರಾಷ್ಟ್ರದಾದ್ಯಂತ 1.7 ಕೋಟಿಗೂ ಹೆಚ್ಚು ಅರ್ಹ ಮತದಾರರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT