ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಆಂತರಿಕ ವ್ಯವಹಾರಗಳಲ್ಲಿ ಅಮೆರಿಕ ಹಸ್ತಕ್ಷೇಪ: ರಷ್ಯಾ ಆರೋಪ

Published 9 ಮೇ 2024, 15:39 IST
Last Updated 9 ಮೇ 2024, 15:39 IST
ಅಕ್ಷರ ಗಾತ್ರ

ಮಾಸ್ಕೊ‌: ಖಾಲಿಸ್ತಾನಿ ಪ್ರತ್ಯೇಕತಾವಾದಿ ಗುರುಪತ್ವಂತ್‌ ಸಿಂಗ್‌ ಪನ್ನೂ ಹತ್ಯೆ ಯತ್ನದ ಸಂಚಿನಲ್ಲಿ ಭಾರತೀಯ ನಾಗರಿಕರು ಭಾಗಿಯಾಗಿದ್ದಾರೆ ಎಂಬುದಕ್ಕೆ ಅಮೆರಿಕವು ಇಲ್ಲಿಯವರೆಗೂ ಯಾವುದೇ ವಿಶ್ವಾಸಾರ್ಹ ಪುರಾವೆಗಳನ್ನು ಒದಗಿಸಿಲ್ಲ ಎಂದು ರಷ್ಯಾ ಹೇಳಿದೆ.

ಅಲ್ಲದೆ, ಅಮೆರಿಕವು ಭಾರತದ ಆಂತರಿಕ ವ್ಯವಹಾರಗಳು ಮತ್ತು ಪ್ರಸ್ತುತ ನಡೆಯುತ್ತಿರುವ ಚುನಾವಣೆಗಳಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎಂದು ರಷ್ಯಾದ ವಿದೇಶಾಂಗ ಸಚಿವಾಲಯದ ವಕ್ತಾರರಾದ ಮರಿಯಾ ಜಖರೋವಾ ಆರೋಪಿಸಿದರು.

ಸೂಕ್ತ ಪುರಾವೆಗಳನ್ನು ಒದಗಿಸದೆ ಭಾರತೀಯ ನಾಗರಿಕರು ಕೊಲೆ ಸಂಚಿನಲ್ಲಿ ಪಾಲ್ಗೊಂಡಿದ್ದಾರೆ ಎಂಬುದು ಸ್ವೀಕಾರಾರ್ಹವಲ್ಲ ಎಂದು ಅವರು ಹೇಳಿದರು.

ಭಾರತವು ರಷ್ಯಾ ಮತ್ತು ಸೌದಿ ಅರೇಬಿಯಾದಂತೆ ನೀತಿಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ವಾಷಿಂಗ್ಟನ್‌ ಪೋಸ್ಟ್‌ ಮಾಡಿರುವ ವರದಿಗೆ ಪ್ರತಿಕ್ರಿಯಿಸಿದ ಅವರು, ‘ಅದಕ್ಕೆ ಭಾರತದ ರಾಷ್ಟ್ರೀಯ ಮನಃಸ್ಥಿತಿ ಮತ್ತು ಇತಿಹಾಸದ ಬಗ್ಗೆ ತಿಳಿವಳಿಕೆ ಇಲ್ಲ. ಹೀಗಾಗಿಯೇ ಅದು ಭಾರತದಲ್ಲಿನ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಆಧಾರರಹಿತ ಆರೋಪಗಳನ್ನು ಮಾಡುವುದನ್ನು ಮುಂದುವರಿಸಿದೆ’ ಎಂದರು.

ಶ್ವೇತಭವನವು ಭಾರತದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದು, ಚುನಾವಣೆಯನ್ನು ಸಂಕೀರ್ಣಗೊಳಿಸಲು ಯತ್ನಿಸುತ್ತಿದೆ. ಈ ಮೂಲಕ ಅದು ಭಾರತದ ಆಂತರಿಕ ರಾಜಕೀಯ ಪರಿಸ್ಥಿತಿಯನ್ನು ಅಸಮತೋಲನಗೊಳಿಸಲು ಪ್ರಯತ್ನಿಸುತ್ತಿದೆ. ಅದು ಭಾರತದ ಆಂತರಿಕ ವ್ಯವಹಾರಗಳಲ್ಲಿ ಮಧ್ಯಪ್ರವೇಶಿಸುವ ಭಾಗವಾಗಿದೆ ಎಂದು ಅವರು ಆರೋಪಿಸಿದರು.

‘ಪನ್ನೂ ಹತ್ಯೆಗೆ ನಿಖಿಲ್‌ ಗುಪ್ತಾ ಎಂಬ ಭಾರತೀಯ ನಡೆಸಿದ್ದ ಯತ್ನವನ್ನು ವಿಫಲಗೊಳಿಸಲಾಗಿತ್ತು. ಭಾರತೀಯ ಸರ್ಕಾರಿ ಉದ್ಯೋಗಿಯೊಬ್ಬರ ಬಳಿ ನಿಖಿಲ್‌ ಕೆಲಸ ಮಾಡುತ್ತಿದ್ದ’ ಎಂದು ಅಮೆರಿಕದ ಅಧಿಕಾರಿಗಳು ಕಳೆದ ವರ್ಷ ನವೆಂಬರ್‌ನಲ್ಲಿ ಆರೋಪಿಸಿದ್ದರು.

ಭಯೋತ್ಪಾದನೆಯ ಆರೋಪದ ಮೇಲೆ ಭಾರತಕ್ಕೆ ಬೇಕಾಗಿರುವ ಪನ್ನೂ, ಅಮೆರಿಕ ಮತ್ತು ಕೆನಡಾದ ದ್ವಿಪೌರತ್ವ ಹೊಂದಿದ್ದಾರೆ. ಭಯೋತ್ಪಾದನ ನಿಗ್ರಹ ಕಾಯ್ದೆ ಮತ್ತು ಕಾನೂನುಬಾಹಿರ ಚಟುವಟಿಕೆಗಳ ನಿಷೇಧ ಕಾಯ್ದೆಯಡಿಯಲ್ಲಿ ಕೇಂದ್ರ ಗೃಹ ಸಚಿವಾಲಯವು ಅವರನ್ನು ಭಯೋತ್ಪಾದಕ ಎಂದು ಹೆಸರಿಸಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT