ಕೊಲಂಬೊ: 2022ರಲ್ಲಿ ಆರ್ಥಿಕ ಬಿಕ್ಕಟ್ಟಿನ ಬಳಿಕ ಮೊದಲ ಬಾರಿಗೆ ಅಧ್ಯಕ್ಷೀಯ ಚುನಾವಣೆ ಎದುರಿಸುತ್ತಿರುವ ಶ್ರೀಲಂಕಾದಲ್ಲಿ ಶನಿವಾರ ಮತದಾನ ನಡೆಯಲಿದೆ.
ಹಾಲಿ ಅಧ್ಯಕ್ಷ ರಾನಿಲ್ ವಿಕ್ರಮ್‌ಸಿಂಘೆ ಅವರು ಚುನಾವಣಾ ಕಣದಲ್ಲಿದ್ದಾರೆ. ಇವರಿಗೆ ಎದುರಾಳಿಗಳಾಗಿ ನ್ಯಾಷನಲ್ ಪೀಪಲ್ಸ್ ಪವರ್ (ಎನ್‌ಪಿಪಿ) ಪಕ್ಷದ ಅಧ್ಯಕ್ಷ ಅನುರಕುಮಾರ ದಿಸನಾಯಕೆ ಮತ್ತು ವಿರೋಧ ಪಕ್ಷದ ಪ್ರಮುಖ ನಾಯಕ, ಸಮಾಗಿ ಜನ ಬಲವೆಗಯ ಪಕ್ಷದ ಸಜಿತ್ ಪ್ರೇಮದಾಸ ಅವರು ಸ್ಪರ್ಧಿಸಲಿದ್ದಾರೆ.
‘1982ರ ಬಳಿಕ ಶ್ರೀಲಂಕಾದಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಗಳಲ್ಲಿ ಮೂವರು ಅಭ್ಯರ್ಥಿಗಳು ಸ್ಪರ್ಧಿಸುತ್ತಿರುವುದು ಇದೇ ಮೊದಲು’ ಎಂದು ತಜ್ಞರು ತಿಳಿಸಿದ್ದಾರೆ.
‘ಕಣದಲ್ಲಿರುವ ಮೂರು ಅಭ್ಯರ್ಥಿಗಳು 2020ರ ಸಂಸದೀಯ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿದ್ದರು. ಹಾಗಾಗಿ ಈ ಹಿಂದಿನ ಎಲ್ಲ ಚುನಾವಣೆಗಳಿಗಿಂತಲೂ ಈ ಬಾರಿಯು ಚುನಾವಣೆ ಭಿನ್ನವಾಗಿರಲಿದೆ’ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
13,400 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದ್ದು, ಸುಮಾರು 1.70 ಲಕ್ಷ ಜನರು ಮತ ಚಲಾಯಿಸುವ ಹಕ್ಕನ್ನು ಹೊಂದಿದ್ದಾರೆ. ಶೇ 80ರಷ್ಟು ಮತದಾನವಾಗುವ ನಿರೀಕ್ಷೆಯಿದೆ. ಭಾನುವಾರ ಚುನಾವಣಾ ಫಲಿತಾಂಶ ಹೊರಬೀಳಲಿದೆ.