ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರ ವಹಿಸಿಕೊಂಡ ಒಂದೇ ದಿನದಲ್ಲಿ ಶ್ರೀಲಂಕಾ ಹಣಕಾಸು ಸಚಿವ ರಾಜೀನಾಮೆ

Last Updated 5 ಏಪ್ರಿಲ್ 2022, 9:29 IST
ಅಕ್ಷರ ಗಾತ್ರ

ಕೊಲಂಬೊ: ಶ್ರೀಲಂಕಾದ ಹೊಸ ಹಣಕಾಸು ಸಚಿವರಾಗಿ ಸೋಮವಾರವಷ್ಟೇ ಅಧಿಕಾರ ವಹಿಸಿಕೊಂಡಿದ್ದ ಅಲಿ ಸಬ್ರಿ ಮಂಗಳವಾರ ದಿಢೀರ್‌ ರಾಜೀನಾಮೆ ನೀಡಿದ್ದಾರೆ.

ದ್ವೀಪ ರಾಷ್ಟ್ರ ಶ್ರೀಲಂಕಾದ ಆರ್ಥಿಕ ಪರಿಸ್ಥಿತಿ ತೀವ್ರ ಹದಗೆಟ್ಟಿದ್ದು, ಅಧ್ಯಕ್ಷ ಗೋಟಬಯಾ ರಾಜಪಕ್ಸ ಅವರು ಈ ಹಿಂದಿನ ಹಣಕಾಸು ಸಚಿವ, ತಮ್ಮನೂ ಆದ ಬೇಸಿಲ್‌ ರಾಜಪಕ್ಸ ಅವರನ್ನು ಸೋಮವಾರ ವಜಾಗೊಳಿಸಿದ್ದರು. ಬೇಸಿಲ್‌ ಅವರಿಂದ ತೆರವಾಗಿದ್ದ ಹಣಕಾಸು ಮಂತ್ರಿ ಸ್ಥಾನವನ್ನು ವಹಿಸಿಕೊಂಡಿದ್ದ ಅಲಿ ಸಬ್ರಿ ಅವರೂ ಈಗ ರಾಜೀನಾಮೆ ನೀಡಿ ಹೊರ ನಡೆದಿದ್ದಾರೆ.

ತಾತ್ಕಾಲಿಕ ಕ್ರಮಗಳ ಭಾಗವಾಗಿ ಈ ಸ್ಥಾನವನ್ನು ತಾವು ವಹಿಸಿಕೊಂಡಿದ್ದಾಗಿ ಅಧ್ಯಕ್ಷರಿಗೆ ಬರೆದ ರಾಜೀನಾಮೆ ಪತ್ರದಲ್ಲಿ ಅಲಿ ಸಬ್ರಿ ತಿಳಿಸಿದ್ದಾರೆ.

ಭಾನುವಾರ ರಾತ್ರಿ ಶ್ರೀಲಂಕಾ ಸರ್ಕಾರದ 26 ಸಚಿವರು ರಾಜೀನಾಮೆ ನೀಡಿದ್ದರು. ಅದಾದ ನಂತರ ಅಧ್ಯಕ್ಷ ರಾಜಪಕ್ಸ ಅವರು ನಾಲ್ವರು ಹೊಸ ಸಚಿವರನ್ನು ನೇಮಕ ಮಾಡಿದ್ದರು. ಇದರಲ್ಲಿ ಅಲಿ ಸಬ್ರಿ ಅವರೂ ಒಬ್ಬರಾಗಿದ್ದರು.

ಇತಿಹಾಸದಲ್ಲೇ ಅತಿ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಶ್ರೀಲಂಕಾ ಸದ್ಯ ಅನುಭವಿಸುತ್ತಿದೆ. ಇಂಧನ, ಅಡುಗೆ ಅನಿಲ, ಅಗತ್ಯ ವಸ್ತುಗಳ ಕೊರತೆ ಹಾಗೂ ಹಲವು ಗಂಟೆಗಳ ಕಾಲ ವಿದ್ಯುತ್ ಕಡಿತದಿಂದ ಸಾರ್ವಜನಿಕರು ಹೈರಾಣಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT