ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾರ್ಕಿವ್‌ ತೊರೆಯಲು ವಿದ್ಯಾರ್ಥಿಗಳಿಗೆ ಸೂಚನೆ

ರಷ್ಯಾ ಮಾಹಿತಿಯ ಮೇರೆಗೆ ತೆರವು ಕಾರ್ಯಾಚರಣೆಗೆ ಸಿದ್ಧತೆ: ಭಾರತ
Last Updated 2 ಮಾರ್ಚ್ 2022, 23:00 IST
ಅಕ್ಷರ ಗಾತ್ರ

ನವದೆಹಲಿ (ರಾಯಿಟರ್ಸ್‌/ಎಎಫ್‌ಪಿ/ಪಿಟಿಐ): ಯುದ್ಧಪೀಡಿತ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ತೆರವು ಗೊಳಿಸಲು ವ್ಯವಸ್ಥೆ ಮಾಡುವಂತೆ ವಿದೇಶಾಂಗ ಸಚಿವಾಲಯವು ಉಕ್ರೇನ್ ಮತ್ತು ರಷ್ಯಾ ಸರ್ಕಾರವನ್ನು ಕೇಳಿದೆ. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ರಷ್ಯಾ, ಭಾರತೀಯ ವಿದ್ಯಾರ್ಥಿಗಳು ಮತ್ತು ನಾಗರಿಕರಿಗಾಗಿ ಸುರಕ್ಷಿತ ಕಾರಿಡಾರ್ ವ್ಯವಸ್ಥೆ ಮಾಡುವುದಾಗಿ ಘೋಷಿಸಿದೆ.

ಕರ್ನಾಟಕದ ಹಾವೇರಿ ನವೀನ್‌ ಶೇಖರಪ್ಪ ಗ್ಯಾನಗೌಡರ್ (21) ಅವರುಉಕ್ರೇನ್‌ನ ಹಾರ್ಕಿವ್‌ನಲ್ಲಿ ಮಂಗಳವಾರ ನಡೆದಿದ್ದ ಶೆಲ್‌ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಆನಂತರ, ವಿದ್ಯಾರ್ಥಿಗಳ ತೆರವಿಗೆ ತ್ವರಿತ ಕ್ರಮ ತೆಗೆದುಕೊಳ್ಳಿ ಎಂದು ಪೋಷಕರು ಮತ್ತು ವಿರೋಧ ಪಕ್ಷಗಳು ಆಗ್ರಹಿಸಿದ್ದವು. ‘ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ತೆರವು ಮಾಡಲು ಅನುವು ಮಾಡಿ ಕೊಡಿ ಎಂದು ಉಕ್ರೇನ್‌ ಮತ್ತು ರಷ್ಯಾವನ್ನು ಮಂಗಳವಾರ ತಡರಾತ್ರಿ ಕೋರಲಾಗಿತ್ತು’ ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶೃಂಗ್ಲಾ ಅವರು ಹೇಳಿದ್ದಾರೆ.

ಈ ಬೆಳವಣಿಗೆಯ ಬೆನ್ನಲ್ಲೇ ಉಕ್ರೇನ್‌ನಲ್ಲಿರುವ ಭಾರತದ ರಾಯ ಭಾರ ಕಚೇರಿಯು ಬುಧವಾರ ಬೆಳಿಗ್ಗೆ ‘ವಿದ್ಯಾರ್ಥಿಗಳೂ ಸೇರಿ ಎಲ್ಲಾ ಭಾರತೀಯ ಪ್ರಜೆಗಳೂ ಉಕ್ರೇನ್‌ ಅನ್ನು ಶೀಘ್ರವೇ ತೊರೆಯಿರಿ’ ಎಂದು ಸೂಚನೆ ನೀಡಿತ್ತು. ಇದರ ಬೆನ್ನಲ್ಲೇ, ದೆಹಲಿಯಲ್ಲಿರುವ ರಷ್ಯಾದ ರಾಯಭಾರ ಕಚೇರಿಯು ಪ್ರಕಟಣೆ ಹೊರಡಿಸಿತು. ‘ಭಾರತದ ಮನವಿಯಂತೆ, ಭಾರತೀಯ ವಿದ್ಯಾರ್ಥಿ ಗಳನ್ನು ತೆರವು ಮಾಡಲು ಸುರಕ್ಷಿತ ಕಾರಿಡಾರ್ ವ್ಯವಸ್ಥೆ ಮಾಡುತ್ತೇವೆ’ ಎಂದು ಘೋಷಿಸಿತು.

ರಷ್ಯಾದ ಘೋಷಣೆಯ ನಂತರ ಸಂಜೆ ಆರು ಗಂಟೆಯಲ್ಲಿ, ಉಕ್ರೇನ್‌ ನಲ್ಲಿನ ಭಾರತದ ರಾಯಭಾರ ಕಚೇರಿಯು ಮತ್ತೊಂದು ಸಲಹೆ ನೀಡಿ, ‘ಹಾರ್ಕಿವ್‌ನಲ್ಲಿರುವ ಭಾರತದ ಎಲ್ಲಾ ಪ್ರಜೆಗಳು ತಕ್ಷಣವೇ ನಗರವನ್ನು ತೊರೆಯಬೇಕು.ಹಾರ್ಕಿವ್‌ ಸಮೀಪವಿರುವ ಪೀಶನ್ (11 ಕಿ.ಮೀ.), ಬಬಾಯಿ (12 ಕಿ.ಮೀ.) ಮತ್ತು ಬೆಸ್ಲಿಯುಡೀವ್ಕಾ (16 ಕಿ.ಮೀ) ನಗರಗಳಿಗೆ ತೆರಳಿ. ರೈಲು, ಬಸ್ ಅಥವಾ ಖಾಸಗಿ ವಾಹನ ಬಳಸಿ ಹೊರಡಿ. ವಾಹನದ ವ್ಯವಸ್ಥೆ ಆಗದಿದ್ದರೆ, ಕಾಲ್ನಡಿಗೆಯಲ್ಲಿಯೇ ಹೊರಡಿ. ಸಂಜೆ 6 ಗಂಟೆಯ (ಭಾರತೀಯ ಕಾಲಮಾನ ರಾತ್ರಿ 9.30) ಒಳಗೆ ಈ ನಗರಗಳನ್ನು ತಲುಪಿ’ ಎಂದು ಸೂಚಿಸಿತು.

‘ರಷ್ಯಾ ನೀಡಿರುವ ಮಾಹಿತಿ ಅನ್ವಯ, ಈ ನಗರಗಳಿಗೆ ತೆರಳಲು ವಿದ್ಯಾರ್ಥಿಗಳಿಗೆ ಮತ್ತು ನಾಗರಿಕರಿಗೆ ಸೂಚಿಸಲಾಗಿದೆ’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಮಾಹಿತಿ ನೀಡಿದ್ದಾರೆ. ರಷ್ಯಾ ತನ್ನ ದಾಳಿಯನ್ನು ತೀವ್ರಗೊಳಿಸುವುದಾಗಿ ತಿಳಿಸಿದೆ ಎಂದು ಮೂಲಗಳು ಹೇಳಿವೆ.

‘ಕೀವ್‌ನಿಂದ ಎಲ್ಲರ ತೆರವು’: ‘ಉಕ್ರೇನ್‌ ರಾಜಧಾನಿ ಕೀವ್‌ನಲ್ಲಿ ಸಿಲುಕಿದ್ದ ಎಲ್ಲಾ ಭಾರತೀಯ ವಿದ್ಯಾರ್ಥಿಗಳು ಮತ್ತು ನಾಗರಿಕರನ್ನು ಆ ನಗರದಿಂದ ತೆರವು ಮಾಡಲಾಗಿದೆ. ಅಲ್ಲಿ ಈಗ ಒಬ್ಬ ಭಾರತೀಯರೂ ಇಲ್ಲ’ ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶೃಂಗ್ಲಾ ಹೇಳಿದ್ದಾರೆ.

‘ಹಲವು ಗಂಟೆಗಳಿಂದ್ ಕೀವ್‌ ನಗರದಿಂದ ನಮಗೆ ಯಾವ ಕರೆಯೂ ಬಂದಿಲ್ಲ. ಅಲ್ಲಿದ್ದ ಎಲ್ಲಾ ಭಾರತೀಯರು ನಗರ ತೊರೆದಿದ್ದಾರೆ ಎಂದು ಪರಿಗಣಿಸಲಾಗಿದೆ. ಎಲ್ಲರೂ ಉಕ್ರೇನ್‌ನ ಪಶ್ಚಿಮ ಗಡಿಗಳತ್ತ ತೆರಳುತ್ತಿದ್ದಾರೆ. ಉಕ್ರೇನ್‌ನಲ್ಲಿ ಸಿಲುಕಿದ್ದ 20 ಸಾವಿರ ಭಾರತೀಯರಲ್ಲಿ 12 ಸಾವಿರ ಜನರನ್ನು ತೆರವು ಮಾಡಲಾಗಿದೆ. ಎರಡು ಸಾವಿರ ಜನರು ಭಾರತಕ್ಕೆ ಮರಳಿದ್ದಾರೆ. ಉಳಿದವರು ಗಡಿಗಳಲ್ಲಿ, ನೆರೆ ದೇಶಗಳ ಶಿಬಿರಗಳಲ್ಲಿ ಸುರಕ್ಷಿತವಾಗಿದ್ದಾರೆ’ ಎಂದು ತಿಳಿಸಿದರು.

‘ವಿದ್ಯಾರ್ಥಿಗಳ ಕರೆತರಲು ಸರ್ವ ಯತ್ನ’

ಚಳಗೇರಿ (ಹಾವೇರಿ): ‘ಕಠಿಣ ಪರಿಸ್ಥಿತಿಯಲ್ಲಿಯೂ ಉಕ್ರೇನ್‌ನಿಂದ ಈವರೆಗೆ 12 ಸಾವಿರ ವಿದ್ಯಾರ್ಥಿಗಳನ್ನು ದೇಶಕ್ಕೆ ಸುರಕ್ಷಿತವಾಗಿ ಕರೆತರಲಾಗಿದೆ. ಅಲ್ಲಿ ಇನ್ನೂ ಸಿಲುಕಿರುವ 8 ಸಾವಿರ ಭಾರತೀಯ ವಿದ್ಯಾರ್ಥಿಗಳನ್ನು ತಾಯ್ನಾಡಿಗೆ ಕರೆತರಲು ಕೇಂದ್ರ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ’ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು.

ರಾಣೆಬೆನ್ನೂರು ತಾಲ್ಲೂಕು ಚಳಗೇರಿ ಗ್ರಾಮಕ್ಕೆ ಬುಧವಾರ ಭೇಟಿ ನೀಡಿದ ಸಂದರ್ಭ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

‘ನವೀನ್ ಅವರ ಪಾರ್ಥಿವ ಶರೀರವನ್ನು ಭಾರತಕ್ಕೆ ತರಲು ನಿರಂತರವಾಗಿ ಪ್ರಯತ್ನ ಮಾಡಲಾಗುತ್ತಿದೆ’ ಎಂದರು.

‘ಡೊನೇಶನ್‌ ಹಾವಳಿ ನಿಯಂತ್ರಿಸಿ’

‘ನಮ್ಮ ದೇಶದ ಪ್ರತಿಭಾವಂತ ವಿದ್ಯಾರ್ಥಿಗಳು ಮೆಡಿಕಲ್‌ ಸೀಟಿಗೆ ಕೋಟಿಗಟ್ಟಲೆ ಡೊನೇಶನ್‌ ಕಟ್ಟಲು ಸಾಧ್ಯವಾಗದೆ ವಿದೇಶಗಳಿಗೆ ಹೋಗುತ್ತಿದ್ದಾರೆ. ಡೊನೇಶನ್ ಹಾವಳಿಗೆ ಕಡಿವಾಣ ಹಾಕಿ, ಬಡಮಕ್ಕಳಿಗೆ ಉನ್ನತ ಶಿಕ್ಷಣ ದೊರಕಿಸಲು ಸರ್ಕಾರ ಮುಂದಾಗಬೇಕು’ ಎಂದು ಮೃತ ನವೀನ್‌ ಅವರ ತಂದೆ ಶೇಖರಪ್ಪ ಗ್ಯಾನಗೌಡರ್‌ ಹೇಳಿದರು.

‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘ಕರ್ನಾಟಕಕ್ಕೆ ಹೋಲಿಸಿದರೆ ಉಕ್ರೇನ್‌ನಲ್ಲಿ ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತಿದೆ. ನನ್ನ ಮಗ ಶೇ 97ರಷ್ಟು ಅಂಕ ಪಡೆದಿದ್ದರೂ ಇಲ್ಲಿ ಎಂಬಿಬಿಎಸ್‌ ಸೀಟು ಸಿಗಲಿಲ್ಲ’ ಎಂದು ದುಃಖ ತೋಡಿಕೊಂಡರು.

ಭಾರತದ ಶಕ್ತಿ ಹೆಚ್ಚಳ: ಮೋದಿ

‘ಉಕ್ರೇನ್‌ನಿಂದ ಭಾರತೀಯ ವಿದ್ಯಾರ್ಥಿಗಳ ತೆರವು ಕಾರ್ಯಾಚರಣೆಯು ಜಾಗತಿಕ ಮಟ್ಟದಲ್ಲಿ ಭಾರತದ ಶಕ್ತಿ ಹೆಚ್ಚುತ್ತಿರುವುದನ್ನು ತೋರಿಸುತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ಉತ್ತರ ಪ್ರದೇಶದ ಸೋನಭದ್ರದಲ್ಲಿ ಬುಧವಾರ ಬಿಜೆಪಿ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಮೋದಿ ಅವರು ಉಕ್ರೇನ್‌ ಸಂಘರ್ಷ ಮತ್ತು ವಿದ್ಯಾರ್ಥಿಗಳ ತೆರವು ಕಾರ್ಯಾಚರಣೆಯನ್ನು ಪ್ರಸ್ತಾಪಿಸಿದ್ದಾರೆ.

ನವೀನ್ ಸಾವಿನ ತನಿಖೆ: ರಷ್ಯಾ

ಹಾರ್ಕಿವ್‌ನಲ್ಲಿ ರಷ್ಯಾ ದಾಳಿಯಲ್ಲಿ ಭಾರತೀಯ ವಿದ್ಯಾರ್ಥಿ ಮೃತಪಟ್ಟ ಘಟನೆಯನ್ನು ತನಿಖೆಗೆ ಒಳಪಡಿಸುತ್ತೇವೆ ಎಂದು ದೆಹಲಿಯಲ್ಲಿನ ರಷ್ಯಾ ರಾಯಭಾರ ಕಚೇರಿ ಹೇಳಿದೆ. ‘ಮೃತ ನವೀನ್ ಶೇಖರಪ್ಪ ಗ್ಯಾನಗೌಡರ್ ಅವರ ಕುಟುಂಬದವರಿಗೆ ಮತ್ತು ಈ ದುರಂತದಿಂದ ದುಃಖಿತವಾಗಿರುವ ಇಡೀ ಭಾರತಕ್ಕೆ ನಮ್ಮ ಸಾಂತ್ವನಗಳು. ಸಂಘರ್ಷಪೀಡಿತ ಪ್ರದೇಶದಲ್ಲಿ ಸಿಲುಕಿರುವ ಭಾರತೀಯ ನಾಗರಿಕರು ಸುರಕ್ಷಿತವಾಗಿ ವಾಪಸಾಗಲು ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ರಷ್ಯಾ ತೆಗೆದುಕೊಳ್ಳಲಿದೆ’ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT