ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತೈವಾನ್ ಸುತ್ತ ಚೀನಾದ 62 ಸೇನಾ ವಿಮಾನಗಳು, 27 ಯುದ್ಧನೌಕೆಗಳು ತಾಲೀಮು

Published 25 ಮೇ 2024, 4:43 IST
Last Updated 25 ಮೇ 2024, 4:43 IST
ಅಕ್ಷರ ಗಾತ್ರ

ತೈಪೆ (ತೈವಾನ್): ಚೀನಾದ 62 ಸೇನಾ ವಿಮಾನಗಳು ಮತ್ತು 27 ಯುದ್ಧನೌಕೆಗಳು ತನ್ನ ವಾಯುಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿರುವುದನ್ನು ತೈವಾನ್‌ನ ರಕ್ಷಣಾ ಸಚಿವಾಲಯ ಪತ್ತೆ ಮಾಡಿದೆ.

ವಾಯು ರಕ್ಷಣಾ ಗಡಿಯ ವಲಯದಲ್ಲಿ (ಎಡಿಐಜೆಡ್) ಚೀನಿ ವಿಮಾನಗಳು ಹಾರಾಟ ನಡೆಸಿವೆ ಎಂದೂ ತೈವಾನ್‌ನ ರಕ್ಷಣಾ ಸಚಿವಾಲಯ ತಿಳಿಸಿದೆ.

ತೈವಾನ್‌ನ ರಕ್ಷಣಾ ಸಚಿವಾಲಯದ ಪ್ರಕಾರ, ಶನಿವಾರ ಬೆಳಿಗ್ಗೆ 6 ಗಂಟೆ ಸುಮಾರಿಗೆ ಚೀನಾದ ಪೀಪಲ್ಸ್‌ ಲಿಬರೇಷನ್‌ ಆರ್ಮಿಯ (ಪಿಎಲ್‌ಎ) 62 ವಿಮಾನಗಳು ಮತ್ತು 27 ಯುದ್ಧನೌಕೆಗಳು ಕಾರ್ಯಾಚರಣೆ ನಡೆಸಿವೆ. ಈ ಪೈಕಿ 47 ವಿಮಾನಗಳು ತೈವಾನ್‌ನ ನೈಋತ್ಯ, ಆಗ್ನೇಯ ಹಾಗೂ ಪೂರ್ವ ವಾಯು ರಕ್ಷಣಾ ವಲಯವನ್ನು ಪ್ರವೇಶಿಸಿವೆ ಎಂದು ಹೇಳಲಾಗಿದೆ.

ತೈವಾನ್‌ ದ್ವೀಪದ ಸುತ್ತಲೂ ಸೇನಾ ತಾಲೀಮು ನಡೆಸುತ್ತಿರುವ ಚೀನಾ, ಸ್ವಯಂ ಆಡಳಿತವಿರುವ ಈ ದ್ವೀಪ ರಾಷ್ಟ್ರದ ಮೇಲೆ ಯುದ್ಧ ನಡೆಸುವುದಾಗಿ ಶುಕ್ರವಾರ ಎಚ್ಚರಿಕೆ ನೀಡಿತ್ತು.

ತೈವಾನ್‌ ಅನ್ನು ಸಂಪೂರ್ಣವಾಗಿ ತನ್ನ ತೆಕ್ಕೆಗೆ ಸೇರಿಸಿಕೊಂಡು ಪುನರ್‌ ಏಕೀಕರಣಗೊಳಿಸುವ ಕಾರ್ಯವನ್ನು ಸಾಧಿಸುವವರೆಗೂ ಪ್ರತಿರೋಧದ ಕ್ರಮಗಳನ್ನು ತೀವ್ರಗೊಳಿಸುವುದಾಗಿ ಚೀನಿ ಪಡೆಗಳು ಎಚ್ಚರಿಕೆ ನೀಡಿದ್ದವು.

ಲಾಯ್ ಚಿಂಗ್-ಟೆ ಅವರು ತೈವಾನ್‌ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಮೂರು ದಿನಗಳ ನಂತರ ಚೀನಾ ಸೇನೆ ಯುದ್ಧ ತಾಲೀಮು ಪ್ರಾರಂಭಿಸಿತ್ತು. ತೈವಾನ್‌ ಅಧ್ಯಕ್ಷರ ಭಾಷಣವನ್ನು ‘ಇದು ಸ್ವಾತಂತ್ರ್ಯದ ತಪ್ಪೊಪ್ಪಿಗೆ’ ಎಂದು ಚೀನಾ ಖಂಡಿಸಿತ್ತು.

ಚೀನಾ ಸೇನೆ ಎರಡು ದಿನಗಳ ಯುದ್ಧ ತಾಲೀಮನ್ನು ಗುರುವಾರ ಬೆಳಿಗ್ಗೆಯೇ ಪ್ರಾರಂಭಿಸಿತ್ತು. ಚೀನಾದ ಯುದ್ಧ ನೌಕೆಗಳು ಮತ್ತು ಸೇನಾ ವಿಮಾನಗಳು ಪ್ರಜಾಪ್ರಭುತ್ವ ರಾಷ್ಟ್ರ ತೈವಾನ್ ಅನ್ನು ಸುತ್ತುವರಿದಿದ್ದು, ದ್ವೀಪರಾಷ್ಟ್ರದ ‘ಸ್ವತಂತ್ರ ಪಡೆಗಳ’ ರಕ್ತ ಹರಿಸುವ ಪ್ರತಿಜ್ಞೆಯನ್ನು ಮಾಡಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT