ವಾಷಿಂಗ್ಟನ್: ಅಮೆರಿಕದ ಮೇರಿಲ್ಯಾಂಡ್ ಉಪನಗರದಲ್ಲಿ ಭಾರತದ ಸಂವಿಧಾನ ಶಿಲ್ಪಿ, ಡಾ. ಬಿ.ಆರ್. ಅಂಬೇಡ್ಕರ್ ಅವರ 19 ಅಡಿ ಎತ್ತರದ ಪ್ರತಿಮೆಯನ್ನು ಇಂದು (ಭಾನುವಾರ) ಉದ್ಘಾಟಿಸಲಾಗಿದೆ.
ಈ ಪ್ರತಿಮೆ ವಿದೇಶದಲ್ಲಿ ಅನಾವರಣಗೊಳಿಸಲಾದ ಅಂಬೇಡ್ಕರ್ ಅವರ ಅತಿ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಇಂದು ನಡೆದ ಉದ್ಘಾಟನಾ ಸಮಾರಂಭದಲ್ಲಿ ಅಮೆರಿಕದ ವಿವಿಧ ಭಾಗಗಳಿಂದ ಬಂದಿದ್ದ 500ಕ್ಕೂ ಹೆಚ್ಚು ಅನಿವಾಸಿ ಭಾರತೀಯರು ಭಾಗವಹಿಸಿದ್ದರು. ‘ಜೈ ಭೀಮ್’ ಎಂದು ಘೋಷಣೆಗಳನ್ನು ಕೂಗಿ ಸಂಭ್ರಮಿಸಿದ್ದಾರೆ.
ಖ್ಯಾತ ಕಲಾವಿದ ಮತ್ತು ಶಿಲ್ಪಿ ರಾಮ್ ಸುತಾರ್ ಅವರು ಈ ಪ್ರತಿಮೆಯನ್ನು ನಿರ್ಮಿಸಿದ್ದಾರೆ. ಅವರು ಗುಜರಾತ್‌ನಲ್ಲಿ ಸರ್ದಾರ್ ಪಟೇಲ್ ಅವರ ಪ್ರತಿಮೆಯನ್ನು ನಿರ್ಮಿಸಿದ್ದಾರೆ. ಇದನ್ನು ‘ಏಕತೆಯ ಪ್ರತಿಮೆ’ ಎಂದು ಕರೆಯಲಾಗುತ್ತದೆ.
ಈಚೆಗೆ ಅಕೋಕೀಕ್ ನಗರದ 13 ಎಕರೆ ವಿಸ್ತೀರ್ಣ ಪ್ರದೇಶದಲ್ಲಿ ಪ್ರತಿಮೆಯನ್ನು ಸ್ಥಾಪಿಸಲಾಗಿದ್ದು, ಈ ಸ್ಥಳವು ಶ್ವೇತ ಭವನಕ್ಕೆ 21 ಕಿ.ಮೀ ದೂರದಲ್ಲಿದೆ.
ಇತ್ತೀಚೆಗೆ ಹೈದರಾಬಾದ್‌ನಲ್ಲಿ ಅನಾವರಣಗೊಂಡ 125 ಅಡಿ ಎತ್ತರದ ಅಂಬೇಡ್ಕರ್ ಪ್ರತಿಮೆಯು ವಿಶ್ವದಲ್ಲಿಯೇ ಅತಿ ಎತ್ತರದ್ದಾಗಿದೆ. ಸಂವಿಧಾನ ಕರ್ತೃ ಅಂಬೇಡ್ಕರ್ ಅವರ ಜೀವನ ಸಂದೇಶವನ್ನು ಸಾರಲು ಪ್ರತಿಮೆಯನ್ನು ನಿರ್ಮಾಣ ಮಾಡಲಾಗಿದೆ ಎಂದು ಸಂಘಟಕರು ಸುದ್ದಿಸಂಸ್ಥೆ ‘ಐಎಎನ್‌ಎಸ್’ಗೆ ತಿಳಿಸಿದ್ದಾರೆ.