ಪ್ಯಾರಿಸ್: ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಬಳಕೆಯಲ್ಲಿರುವ ಜನಪ್ರಿಯ ಮೆಸೇಜಿಂಗ್ ಆ್ಯಪ್ ಟೆಲಿಗ್ರಾಂನಲ್ಲಿ, ನಿಯಂತ್ರಕರ ಕೊರತೆಯಿಂದಾಗಿ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಎನ್ನುವ ಆರೋಪದ ಮೇಲೆ ಟೆಲಿಗ್ರಾಂ ಸಿಇಒ ಪಾವೆಲ್ ಡುರೊವ್ ಅವರನ್ನು ಪ್ಯಾರಿಸ್‌ನಲ್ಲಿ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಪ್ಯಾರಿಸ್‌ನ ಹೊರವಲಯದಲ್ಲಿರುವ ಬೋರ್ಗೆಟ್ ವಿಮಾನ ನಿಲ್ದಾಣಕ್ಕೆ ಖಾಸಗಿ ಜೆಟ್‌ನಲ್ಲಿ ಬಂದಿಳಿದ ಪಾವೆಲ್ ಅವರನ್ನು ಶನಿವಾರ ಸಂಜೆ ಪೊಲೀಸರು ಬಂಧಿಸಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಪ್ರಾಥಮಿಕ ತನಿಖೆಗಾಗಿ ಫ್ರಾನ್ಸ್ ಪೊಲೀಸರು ಅರೆಸ್ಟ್ ವಾರೆಂಟ್ ಹೊರಡಿಸಿದ ಹಿನ್ನೆಲೆ ಅವರನ್ನು ಬಂಧಿಸಲಾಗಿದೆ.
ರಷ್ಯಾ, ಉಕ್ರೇನ್, ಸೋವಿಯತ್ ಯುನಿಯನ್ ದೇಶಗಳಲ್ಲಿ ಅತಿ ಹೆಚ್ಚು ಬಳಕೆಯಲ್ಲಿರುವ ಟೆಲಿಗ್ರಾಂ ಶತಕೋಟಿಗೂ ಹೆಚ್ಚು ಬಳಕೆದಾರರನ್ನು ಹೊಂದಿದೆ
ಪಾವೆಲ್ ಬಂಧನದ ಕುರಿತು ಇದುವರೆಗೆ ಟೆಲಿಗ್ರಾಂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಲ್ಲದೆ ಫ್ರೆಂಚ್ ಆಂತರಿಕ ಸಚಿವಾಲಯ ಮತ್ತು ಪೊಲೀಸರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ಎಂದು ರಾಯಿಟರ್ಸ್ ವರದಿ ತಿಳಿಸಿದೆ.