ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೈಟಾನಿಕ್ ಅವಶೇಷ ನೋಡಲು ಹೋದ ಪ್ರವಾಸಿಗರ ದಾರುಣ ಅಂತ್ಯ: ಅಮೆರಿಕ ಕೋಸ್ಟ್ ಗಾರ್ಡ್

Published 23 ಜೂನ್ 2023, 2:55 IST
Last Updated 23 ಜೂನ್ 2023, 2:55 IST
ಅಕ್ಷರ ಗಾತ್ರ

ಬೋಸ್ಟನ್‌ : ಅಟ್ಲಾಂಟಿಕ್ ಸಾಗರದಲ್ಲಿ ಶತಮಾನದ ಹಿಂದೆ ಮುಳುಗಿರುವ ಟೈಟಾನಿಕ್ ಹಡಗಿನ ಅವಶೇಷಗಳ ವೀಕ್ಷಣೆಗಾಗಿ ಐದು ದಿನಗಳ ಹಿಂದೆ ತೆರಳಿದಾಗ ಕಣ್ಮರೆಯಾಗಿದ್ದ ಟೈಟನ್‌ ಹೆಸರಿನ ಸಬ್‌ಮರ್ಸಿಬಲ್‌ ಪುಟ್ಟ ನೌಕೆ ಸ್ಫೋಟಗೊಂಡಿದ್ದು, ನೌಕೆಯಲ್ಲಿದ್ದ ಎಲ್ಲ ಐವರು ಸಾಹಸಯಾತ್ರಿಗಳು ಮೃತಪಟ್ಟಿದ್ದಾರೆ ಎಂದು ಅಮೆರಿಕದ ಕರಾವಳಿ ಕಾವಲು ಪಡೆ ಖಚಿತಪಡಿಸಿದೆ.

ಟೈಟಾನಿಕ್ ಹಡಗಿನ ಅವಶೇಷಗಳ ವೀಕ್ಷಣೆಗೆ ಓಷನ್‌ಗೇಟ್ ಎಕ್ಸ್‌ಪೆಡಿಷನ್ ಕಂಪನಿಯ ಸಿಇಒ ಸ್ಟೋಕ್ಟನ್ ರಶ್, ಭಾರತದಲ್ಲಿ ಚೀತಾ ಮರುಪರಿಚಯಿಸುವ ಯೋಜನೆಗೆ ಕೈಜೋಡಿಸಿದ್ದ ಬ್ರಿಟಿಷ್ ಉದ್ಯಮಿ ಹಮಿಷ್‌ ಹಾರ್ಡಿಂಗ್, ಪಾಲ್ ಹೆನ್ರಿ, ಪಾಕಿಸ್ತಾನಿ ಉದ್ಯಮಿ ಶಹಝಾದಾ ದಾವೂದ್ ಮತ್ತು ಅವರ ಮಗ ಸುಲೇಮಾನ್ ದಾವೂದ್ ಅವರು ಈ ಸಬ್‌ಮರ್ಸಿಬಲ್ ಟೈಟನ್‌ ನೌಕೆಯಲ್ಲಿ, 1912ರಲ್ಲಿ ದುರಂತಕ್ಕೀಡಾದ ಟೈಟಾನಿಕ್‌ ಹಡಗಿನ ಅವಶೇಷಗಳನ್ನು ನೋಡಲು ಭಾನುವಾರ ಅಂಟ್ಲಾಂಟಿಕ್ ಆಳ ಸಮುದ್ರದತ್ತ ಪ್ರಯಾಣಿಸಿದ್ದರು. ಓಷನ್‌ಗೇಟ್ ಎಕ್ಸ್‌ಪೆಡಿಷನ್ ಕಂಪನಿಯೇ ತನ್ನ ಟೈಟನ್‌ ನೌಕೆಯ ಮೂಲಕ ಈ ದುಬಾರಿ ಪ್ರವಾಸವನ್ನು ಮೂರನೇ ಬಾರಿಗೆ ಆಯೋಜಿಸಿತ್ತು.

ನಿರಂತರ ಶೋಧದ ನಂತರ, ಟೈಟನ್‌ ನೌಕೆಯ ಅವಶೇಷಗಳು ಪತ್ತೆಯಾಗಿವೆ. ಸಾಗರದ ಒಳಗಡೆ ಟೈಟಾನಿಕ್ ಹಡಗಿನ ಅವಶೇಷಗಳ ಬಳಿಯೇ ಟೈಟನ್‌ ನೌಕೆಯು ಸ್ಫೋಟಗೊಂಡಿದೆ ಎಂದು ಅಮೆರಿಕ ಕರಾವಳಿ ಕಾವಲು ಪಡೆಯ ರಿಯರ್ ಅಡ್ಮಿರಲ್ ಜಾನ್ ಮೌಗರ್ ತಿಳಿಸಿದ್ದಾರೆ.

ಟೈಟನ್‌ ನೌಕೆಯ ಅವಶೇಷಗಳನ್ನು ಆಳ ಸಮುದ್ರದಲ್ಲಿ ಕಾರ್ಯಾಚರಣೆ ನಡೆಸುವ ರೋಬೊಟ್ ಮೂಲಕ‌‌ ಪತ್ತೆಹಚ್ಚಲಾಗಿದೆ. ಈ ನೌಕೆಗೆ ನೀರಿನಾಳದಲ್ಲಿ ಏನಾಯಿತು ಎನ್ನುವುದನ್ನು ತಿಳಿಯುವ ಪ್ರಯತ್ನಗಳು ಪ್ರಗತಿಯಲ್ಲಿವೆ ಎಂದು ಅವರು ಹೇಳಿದ್ದಾರೆ. 

ಟೈಟನ್‌ ನೌಕೆ ಆಳ ಸಮುದ್ರಕ್ಕೆ ಧುಮುಕಿದ ಕೇವಲ ಒಂದುಮುಕ್ಕಾಲು ತಾಸಿನಲ್ಲಿ ಮಾತೃ ನೌಕೆಯ ನಿಯಂತ್ರಣ ಸಂಪರ್ಕ ಕಳೆದುಕೊಂಡಿತ್ತು. ಕೇವಲ 96 ತಾಸು ಉಸಿರಾಡಲು ಆಗುವಷ್ಟು ಆಮ್ಲಜನಕವನ್ನಷ್ಟೇ ಹೊಂದಿದ್ದ ಈ ಪುಟ್ಟ ನೌಕೆಯಲ್ಲಿರುವವರನ್ನು ಸುರಕ್ಷಿತವಾಗಿ ಪಾರುಮಾಡಲು ಅಮೆರಿಕ, ಕೆನಡಾ, ಫ್ರಾನ್ಸ್‌, ಬ್ರಿಟನ್‌ನ ರಕ್ಷಣಾ ತಂಡಗಳು ತೀವ್ರ ಶೋಧ ಕಾರ್ಯ ನಡೆಸಿದ್ದವು.

ಇದನ್ನೂ ಓದಿ | ಆಳ-ಅಗಲ: ಸಮುದ್ರಾಳಕ್ಕೆ ಇಳಿದ 'ಟೈಟನ್' ಇರುವುದೆಲ್ಲಿ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT