ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುರ್ತು ಪರಿಸ್ಥಿತಿ ಜಾರಿ: ಟ್ರಂಪ್‌ ಬೆದರಿಕೆ

ಮೆಕ್ಸಿಕೊ ಗಡಿಯಲ್ಲಿ ಗೋಡೆ ನಿರ್ಮಾಣ ವಿವಾದ: ಡೆಮಾಕ್ರಟಿಕ್‌ ಪಕ್ಷದ ನಿಲುವಿಗೆ ಆಕ್ರೋಶ
Last Updated 10 ಜನವರಿ 2019, 20:15 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಅಕ್ರಮ ವಲಸೆ ತಡೆಯಲು ಮೆಕ್ಸಿಕೊ ಗಡಿಯಲ್ಲಿ ಗೋಡೆ ನಿರ್ಮಿಸಲು ಪಟ್ಟು ಹಿಡಿದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಈಗ ರಾಷ್ಟ್ರೀಯ ತುರ್ತು ಪರಿಸ್ಥಿತಿ ಜಾರಿ ಮಾಡುವ ಬೆದರಿಕೆ ಹಾಕಿದ್ದಾರೆ.

ತುರ್ತು ಪರಿಸ್ಥಿತಿ ಜಾರಿಯಾದರೆ, ಕಾಂಕ್ರೀಟ್‌ ಅಥವಾ ಉಕ್ಕಿನ ಗೋಡೆ ನಿರ್ಮಿಸುವ ಯೋಜನೆಗೆ ಚಾಲನೆ ನೀಡಲು ಟ್ರಂಪ್‌ ಅವರಿಗೆ ಪರಮಾಧಿಕಾರ ದೊರೆಯುತ್ತದೆ.

‘ತುರ್ತು ಪರಿಸ್ಥಿತಿ ಜಾರಿ ಕೊನೆಯ ಆಯ್ಕೆಯಾಗಿದೆ. ಆದರೆ, ಗೋಡೆ ನಿರ್ಮಿಸಲು 5.7 ಬಿಲಿಯನ್‌ ಡಾಲರ್‌ (₹40153.08 ಕೋಟಿ) ಅನುದಾನ ಮೀಸಲಿಡುವ ಮಸೂದೆಗೆ ಡೆಮಾಕ್ರಟಿಕ್‌ ಪಕ್ಷ ಒಪ್ಪಿಗೆ ನೀಡದಿದ್ದರೆ ಕಠಿಣ ನಿರ್ಧಾರ ಕೈಗೊಳ್ಳುವುದು ಅನಿವಾರ್ಯ’ ಎಂದು ಟ್ರಂಪ್‌ ಎಚ್ಚರಿಕೆ ನೀಡಿದ್ದಾರೆ.

‘ಹಲವು ಮಂದಿ ಅಕ್ರಮವಾಗಿ ಅಮೆರಿಕ ಪ್ರವೇಶಿಸುತ್ತಿದ್ದಾರೆ. ಜತೆಗೆ, ಮಾದಕ ದ್ರವ್ಯಗಳ ಸಾಗಾಣಿಕೆ ನಡೆಯುತ್ತಿದೆ. ಇದು ರಾಷ್ಟ್ರೀಯ ಭದ್ರತೆಗೆ ಬೆದರಿಕೆವೊಡ್ಡುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ಜಾರಿ ಮಾಡುವ ಅಧಿಕಾರ ನನಗಿದೆ’ ಎಂದು ಹೇಳಿದ್ದಾರೆ.

’ಕೇವಲ ರಾಜಕೀಯ ಕಾರಣಕ್ಕೆ ಡೆಮಾಕ್ರಟಿಕ್‌ ಪಕ್ಷ ಗೋಡೆ ನಿರ್ಮಾಣದ ಪ್ರಸ್ತಾವವನ್ನು ವಿರೋಧಿಸುತ್ತಿದೆ. ಜತೆಗೆ, 2020ರ ಅಧ್ಯಕ್ಷೀಯ ಚುನಾವಣೆಯ ಮೇಲೆ ಆ ಪಕ್ಷ ಕಣ್ಣಿಟ್ಟಿದೆ. ನಾನು ಅಧ್ಯಕ್ಷನಾಗಿರುವುದನ್ನು ಡೆಮಾಕ್ರಟಿಕ್‌ ಪಕ್ಷಕ್ಕೆ ಸಹಿಸಲು ಸಾಧ್ಯವಾಗುತ್ತಿಲ್ಲ’ ಎಂದು ಟ್ರಂಪ್‌ ಕಿಡಿಕಾರಿದ್ದಾರೆ.

ಗೋಡೆ ನಿರ್ಮಾಣ ದುಬಾರಿಯಾಗಿದೆ ಮತ್ತು ಇದರಿಂದ ಪ್ರಯೋಜನ ಇಲ್ಲ ಎಂದು ಪ್ರತಿಪಾದಿಸುತ್ತಿರುವ ಡೆಮಾಕ್ರಟಿಕ್‌ ಪಕ್ಷ, ಅನುದಾನ ಮೀಸಲಿಡುವ ಮಸೂದೆಗೆ ಒಪ್ಪಿಗೆ ನೀಡುತ್ತಿಲ್ಲ. ಮೆಕ್ಸಿಕೊ ಸಹ ಗೋಡೆ ನಿರ್ಮಾಣಕ್ಕೆ ಹಣ ನೀಡಬೇಕು ಎನ್ನುವ ಟ್ರಂಪ್‌ ಬೇಡಿಕೆಯನ್ನು ತಳ್ಳಿ ಹಾಕಿದೆ.

19 ದಿನಆಡಳಿತ ಸ್ಥಗಿತ
ಗೋಡೆ ವಿವಾದದಿಂದ ಅಮೆರಿಕದಲ್ಲಿ ಕಳೆದ 19 ದಿನಗಳಿಂದ ಆಡಳಿತ ಸ್ಥಗಿತಗೊಂಡಿದೆ. 1995–96ರ ಬಳಿಕ, ಅತಿ ಹೆಚ್ಚು ದಿನಗಳ ಕಾಲ ಆಡಳಿತಸ್ಥಗಿತಗೊಂಡಿದೆ. 1995–96ರಲ್ಲಿ 21 ದಿನಗಳ ಕಾಲ ಆಡಳಿತ ಸ್ಥಗಿತಗೊಂಡಿತ್ತು. ಆಡಳಿತ ಸ್ಥಗಿತದಿಂದ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ.

ಮಾತುಕತೆ ವಿಫಲ
ಗೋಡೆ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ ಡೆಮಾಕ್ರಟಿಕ್‌ ನಾಯಕರ ಜತೆ ಗುರುವಾರ ಆಯೋಜಿಸಲಾಗಿದ್ದ ಸಭೆಯಿಂದ ಡೊನಾಲ್ಡ್‌ ಟ್ರಂಪ್‌ಹೊರನಡೆದಿದ್ದಾರೆ.

ಸ್ಪೀಕರ್‌ ನ್ಯಾನ್ಸಿ ಪೆಲೋಸಿ, ಸೆನೆಟ್‌ ಸದಸ್ಯ ಚುಕ್‌ ಷೂಮರ್‌ ಜತೆ ಈ ಸಭೆ ಆಯೋಜಿಸಲಾಗಿತ್ತು. ’ಈ ಸಭೆಯಿಂದ ಸಮಯ ವ್ಯರ್ಥವಾಯಿತು’ ಎಂದು ಟ್ರಂಪ್‌ ಟ್ವೀಟ್‌ ಮಾಡಿದ್ದಾರೆ.

*

ಗೋಡೆ ನಿರ್ಮಾಣ ವಿಷಯದಲ್ಲಿ ರಿಪಬ್ಲಿಕನ್‌ ಪಕ್ಷ ಒಗ್ಗಟ್ಟಿನ ತೀರ್ಮಾನ ಕೈಗೊಂಡಿದೆ. ರಿಪಬ್ಲಿಕನ್‌ರಿಗೆ ಗಡಿಯಲ್ಲಿ ಭದ್ರತೆ ಬೇಕು. ಜತೆಗೆ, ರಾಷ್ಟ್ರೀಯ ಭದ್ರತೆಯೂ ಬೇಕು
-ಡೊನಾಲ್ಡ್‌ ಟ್ರಂಪ್‌, ಅಮೆರಿಕ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT