ಟೋಕಿಯೊ: ನೈಋತ್ಯ ಜಪಾನ್‌ನ ಕಾಗೋಶಿಮಾ ಪ್ರಾಂತ್ಯಕ್ಕೆ 'ಶಾನ್‌ಶಾನ್' (Shanshan) ಚಂಡಮಾರುತ ಅಪ್ಪಳಿಸಿದ್ದು, ಕನಿಷ್ಠ ಮೂರು ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಚಂಡುಮಾರುತದಲ್ಲಿ ಒಬ್ಬರು ನಾಪತ್ತೆಯಾಗಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರಿ ಮಳೆ ಹಾಗೂ ಬಿರುಸಿನ ಗಾಳಿಯಿಂದಾಗಿ ಅನೇಕ ಮನೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಚಂಡಮಾರುತದ ಹಿನ್ನೆಲೆಯಲ್ಲಿ ವಾಹನ ತಯಾರಿಕಾ ದೈತ್ಯ ಸಂಸ್ಥೆಗಳಾದ ಟೊಯೊಟಾ ಹಾಗೂ ನಿಸ್ಸಾನ್, ತನ್ನ ಘಟಕಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ.
ನೈಋತ್ಯ ಕ್ಯುಶು ದ್ವೀಪ ಪ್ರದೇಶದಲ್ಲಿ ಗಂಟೆಗೆ 198 ಕಿ.ಮೀ. ವೇಗದಲ್ಲಿ ಚಂಡಮಾರುತ ಅಪ್ಪಳಿಸಿದೆ ಎಂದು ಹವಾಮಾನ ಇಲಾಖೆಯ ವರದಿ ತಿಳಿಸಿದೆ.
ಅತ್ಯಂತ ಪ್ರಬಲ ಚಂಡಮಾರುತದ ಎಚ್ಚರ ನೀಡಿರುವ ಅಧಿಕಾರಿಗಳು, ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಲಕ್ಷಾಂತರ ಮಂದಿಗೆ ಸೂಚನೆ ನೀಡಿದ್ದಾರೆ.
2.5 ಲಕ್ಷ ಮನೆಗಳಿಗೆ ವಿದ್ಯುತ್ ಕಡಿತ ಉಂಟಾಗಿದೆ. ಚಂಡಮಾರುತವು ವಾರಾಂತ್ಯದಲ್ಲಿ ರಾಜಧಾನಿ ಟೋಕಿಯೊ ಸೇರಿದಂತೆ ಮಧ್ಯ ಮತ್ತು ಪೂರ್ವ ಪ್ರದೇಶಗಳಿಗೆ ವ್ಯಾಪಿಸುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಈಗಾಗಲೇ ಜಪಾನ್ ಏರ್‌ಲೈನ್ಸ್, ಎಎನ್‌ಎ ಹೋಲ್ಡಿಂಗ್ಸ್ ಸೇರಿದಂತೆ ವಿಮಾನಯಾನ ಸಂಸ್ಥೆಗಳು 600ಕ್ಕೂ ಹೆಚ್ಚು ದೇಶೀಯ ವಿಮಾನಗಳನ್ನು ರದ್ದುಗೊಳಿಸುವುದಾಗಿ ಪ್ರಕಟಿಸಿದೆ. ಕ್ಯುಶು ದ್ವೀಪದ ಹಲವೆಡೆ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.