ಹನೋಯಿ: ದಕ್ಷಿಣ ಏಷ್ಯಾ ಭಾಗದಲ್ಲಿ ಅಪ್ಪಳಿಸಿರುವ ‘ಟೈಫೂನ್ ಯಾಗಿ’ ಚಂಡಮಾರುತದಿಂದ ಉಂಟಾಗಿರುವ ದಿಢೀರ್ ಪ್ರವಾಹಕ್ಕೆ ವಿಯೆಟ್ನಾಂನಲ್ಲಿ 254 ಜನ, ಮ್ಯಾನ್ಮಾರ್‌ನಲ್ಲಿ 110 ಜನ ಮೃತಪಟ್ಟಿದ್ದಾರೆ. ಹಲವರು ನಾಪತ್ತೆಯಾಗಿದ್ದಾರೆ.
ದಕ್ಷಿಣ ಏಷ್ಯಾದ ರಾಷ್ಟ್ರಗಳ ಮೇಲೆ ಶನಿವಾರ ಅಪ್ಪಳಿಸಿದ ಪ್ರಬಲ ಚಂಡಮಾರುತದ ಪರಿಣಾಮ ವಿಯೆಟ್ನಾಂ, ಥಾಯ್ಲೆಂಡ್, ಮ್ಯಾನ್ಮಾರ್‌ನಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ.
ವಿಯೆಟ್ನಾಂನಲ್ಲಿ ಪ್ರವಾಹದಿಂದಾಗಿ 820 ಜನ ಗಾಯಗೊಂಡಿದ್ದಾರೆ ಎಂದು ಅಲ್ಲಿನ ವಿಪತ್ತು ನಿರ್ವಹಣಾ ಇಲಾಖೆ ಹೇಳಿದೆ.
ಪ್ರವಾಹ ಉಂಟಾದ ನಂತರ ಕಾಣೆಯಾದ 41 ಜನರು ಈವರೆಗೂ ಪತ್ತೆಯಾಗಿಲ್ಲ. ಈ ಮೊದಲು ನಾಪತ್ತೆಯಾಗಿದ್ದಾರೆ ಎನ್ನಲಾದ 115 ಜನರು ಪರ್ವತ ಪ್ರದೇಶದಲ್ಲಿ ಆಶ್ರಯ ಪಡೆದು, ಸುರಕ್ಷಿತವಾಗಿ ಮರಳಿದ್ದಾರೆ ಎಂದು ತಿಳಿಸಿದೆ.
ಚಂಡಮಾರುತ ಅಪ್ಪಳಿಸಿದ ಪರಿಣಾಮ ವಿಯೆಟ್ನಾಂನಲ್ಲಿ ವಿದ್ಯುತ್ ಹಾಗೂ ಶುದ್ಧ ನೀರಿಗೆ ತತ್ವಾರ ಎದುರಾಗಿದೆ. 20 ಲಕ್ಷ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಿದ್ದಾರೆ.
ಸದ್ಯದ ಪರಿಸ್ಥಿತಿಯಲ್ಲಿ ಸಮಸ್ಯೆಗೆ ಸಿಲುಕಿರುವ ಮಕ್ಕಳು ಹಾಗೂ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಲು 1.5 ಕೋಟಿ ಅಮೆರಿಕನ್ ಡಾಲರ್ ಅಗತ್ಯವಿದೆ ಎಂದು ಯುನಿಸೆಫ್ ಹೇಳಿದೆ.
ಈವರೆಗೂ ವಿಯೆಟ್ನಾಂನಲ್ಲಿ ₹ 2,393 ಕೋಟಿ ಮೌಲ್ಯದ ವಿಮೆಗೆ ಕ್ಲೇಮು ಸಲ್ಲಿಕೆಯಾಗಿದೆ ಎಂದು ದೇಶದ ಆರ್ಥಿಕ ಸಚಿವಾಲಯ ಹೇಳಿದೆ.