ಲಂಡನ್: ಬ್ರಿಟನ್ ಪ್ರಧಾನಿಯ ಅಧಿಕೃತ ನಿವಾಸ ಮತ್ತು ಕಚೇರಿ 10 ಡೌನಿಂಗ್ ಸ್ಟ್ರೀಟ್‌ನಲ್ಲಿ ಪ್ರಧಾನಿ ರಿಷಿ ಸುನಕ್ ಮತ್ತು ಪತ್ನಿ ಅಕ್ಷತಾ ಮೂರ್ತಿ ದೀಪ ಬೆಳಗುವ ಮೂಲಕ ದೀಪಾವಳಿ ಆಚರಿಸಿದ್ದಾರೆ.
ಈ ವಿಶೇಷ ಕಾರ್ಯಕ್ರಮದಲ್ಲಿ ಭಾರತೀಯ ಸಮುದಾಯದ ಸದಸ್ಯರು, ಸಂಸದರು, ಉದ್ಯಮಿಗಳು ಹಾಗೂ ಬಾಲಿವುಡ್ ಸೆಲೆಬ್ರಿಟಿಗಳು ಭಾಗವಹಿಸಿದ್ದರು.
ಬ್ರಿಟನ್‌ನ ಮೊದಲ ಭಾರತೀಯ ಪರಂಪರೆಯ ಪ್ರಧಾನ ಮಂತ್ರಿಯಾಗಿ ಸುನಕ್ ಅಧಿಕಾರ ವಹಿಸಿಕೊಂಡು ವರ್ಷ ಕಳೆದಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನಿವಾಸವನ್ನು ರೋಮಾಂಚಕ ಮಾರಿಗೋಲ್ಡ್ ಮತ್ತು ಮೇಣದಬತ್ತಿಗಳ ಪರಿಕಲ್ಪನೆಯಲ್ಲಿ ಅಲಂಕರಿಸಲಾಗಿತ್ತು.
‘ನಮಗೆ ಮತ್ತು ನಮ್ಮ ಕುಟುಂಬಗಳಿಗೆ ದೀಪಾವಳಿಯು ವಿಶೇಷ ಸಮಯವಾಗಿದೆ. ಆದರೆ ನನಗೆ, ಈ ಸಮಯ ಕಳೆದ ವರ್ಷ ಇದೇವೇಳೆಗೆ ಬ್ರಿಟನ್ ಪ್ರಧಾನಿಯಾದ ಅದ್ಭುತ ನೆನಪುಗಳನ್ನು ತರುತ್ತಿದೆ’ಎಂದು ಸುನಕ್ ಹೇಳಿದ್ದಾರೆ.
‘ನಾನು ಪ್ರಧಾನಿಯಾಗಿ ವರ್ಷ ಕಳೆದಿದೆ. ಅದು ಕಠಿಣ ಪರಿಶ್ರಮದ ವರ್ಷವಾಗಿತ್ತು. ಕೆಲವು ನೈಜ ಪ್ರಗತಿ ಆಗಿದೆ. ಆ ನೆನಪು ನನ್ನ ಜೀವನದುದ್ದಕ್ಕೂ ನನ್ನೊಂದಿಗೆ ಉಳಿಯುತ್ತದೆ. ಮೊದಲ ಬ್ರಿಟಿಷ್ ಭಾರತೀಯ ಪ್ರಧಾನ ಮಂತ್ರಿಯಾಗಿ ಜಿ20 ಶೃಂಗಸಭೆಗೆ ಭಾರತಕ್ಕೆ ಹೋಗಿದ್ದು ಮತ್ತು ಮೋದಿಜೀಯೊಂದಿಗೆ ವಿಶ್ವ ವೇದಿಕೆಯಲ್ಲಿ ಗುರುತಿಸಿಕೊಂಡಿದ್ದು ಅವಿಸ್ಮರಣೀಯ ಕ್ಷಣವಾಗಿದೆ’ಎಂದು ಅವರು ಹೇಳಿದ್ದಾರೆ.
‘ಅದು ನಮಗೆಲ್ಲರಿಗೂ ಬಹಳ ವಿಶೇಷವಾದ ಕ್ಷಣವಾಗಿತ್ತು. ಕೆಲ ವರ್ಷಗಳಲ್ಲಿ ಭಾರತ ಹೇಗೆ ಅಭಿವೃದ್ಧಿ ಕಂಡಿದೆ ಎಂಬುದನ್ನು ನಾವು ನೋಡಿದ್ದೇವೆ ’ಎಂದು ಅವರು ಹೇಳಿದರು.
ಡೌನಿಂಗ್ ಸ್ಟ್ರೀಟ್ ಎಕ್ಸ್ ಖಾತೆಯಲ್ಲಿ ದೀಪಾವಳಿ ಸಂಭ್ರಮದ ಚಿತ್ರಗಳನ್ನು ಹಾಕಲಾಗಿದ್ದು, ಈ ವಾರಾಂತ್ಯಕ್ಕೆ ಬ್ರಿಟನ್ ಮತ್ತು ವಿಶ್ವದಾದ್ಯಂತ ದೀಪಾವಳಿ ಆಚರಿಸುತ್ತಿರುವವರಿಗೆ ಶುಭ ದೀಪಾವಳಿ ಎಂದು ಶುಭ ಕೋರಲಾಗಿದೆ.