ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಯಾನಕ ಡೇರಿಯನ್ ಗ್ಯಾಪ್ ದಾಟುವ ವಲಸಿಗರ ಸಂಖ್ಯೆ ಭಾರಿ ಏರಿಕೆ: ವಿಶ್ವಸಂಸ್ಥೆ ಕಳವಳ

Last Updated 14 ಏಪ್ರಿಲ್ 2023, 7:00 IST
ಅಕ್ಷರ ಗಾತ್ರ

ಪನಾಮ ಸಿಟಿ: ಪನಾಮ ಹಾಗೂ ಕೊಲಂಬಿಯಾ ನಡುವಿನ ಅಪಾಯಕಾರಿ 'ಡೇರಿಯನ್‌ ಗ್ಯಾಪ್‌' ಮೂಲಕ ಸಾಗುವ ವಲಸಿಗರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಈ ವರ್ಷ ಈಗಾಗಲೇ ಒಂದು ಲಕ್ಷಕ್ಕೂ ಹೆಚ್ಚು ಜನರು ಸಂಚರಿಸಿದ್ದಾರೆ ಎಂದು ವಿಶ್ವಸಂಸ್ಥೆಯ ಏಜೆನ್ಸಿಗಳು ಗುರುವಾರ ಕಳವಳ ವ್ಯಕ್ತಪಡಿಸಿವೆ.

ನದಿ, ಕಾಡುಪ್ರಾಣಿಗಳು ಮತ್ತು ಕ್ರಿಮಿನಲ್‌ ಗ್ಯಾಂಗ್‌ಗಳಂತಹ ಅಪಾಯಗಳನ್ನು ಲೆಕ್ಕಿಸದೆ ಅಮೆರಿಕಕ್ಕೆ ತಲುಪಲು ಪ್ರಯತ್ನಿಸುತ್ತಿರುವ ವಲಸಿಗರಿಗೆ 'ಡೇರಿಯನ್‌ ಗ್ಯಾಪ್‌' ಕಾರಿಡಾರ್‌ ಆಗಿದೆ.

'ಡೇರಿಯನ್‌ ಗ್ಯಾಪ್‌' ಮೂಲಕ ಸಾಗುವ ವಲಸಿಗರ ಸಂಖ್ಯೆ ಕಳವಳಕಾರಿ ಮಟ್ಟದಲ್ಲಿ ಏರಿಕೆಯಾಗಿದೆ ಎಂದು ನಿರಾಶ್ರಿತರಿಗಾಗಿನ ವಿಶ್ವಸಂಸ್ಥೆಯ ಹೈ–ಕಮಿಷನ್‌ (ಯುಎನ್‌ಎಚ್‌ಸಿಆರ್‌) ಹಾಗೂ ವಲಸಿಗರಿಗಾಗಿನ ಅಂತರರಾಷ್ಟ್ರೀಯ ಸಂಸ್ಥೆ (ಐಒಎಂ) ಜಂಟಿ ಹೇಳಿಕೆ ಬಿಡುಗಡೆ ಮಾಡಿವೆ.

'ದಾಖಲೆಯ ಒಂದು ಲಕ್ಷಕ್ಕೂ ಹೆಚ್ಚು ಜನರು ಡೇರಿಯನ್‌ ಗ್ಯಾಪ್‌ ಅನ್ನು ಈಗಾಗಲೇ ದಾಟಿದ್ದಾರೆ. ಇದು 2022ರ ಇದೇ ಅವಧಿಯಲ್ಲಿ ವಲಸೆ ಹೋಗಿದ್ದವರ ಆರು ಪಟ್ಟು ಹೆಚ್ಚು' ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

2022ರಲ್ಲಿ 2.5 ಲಕ್ಷ ವಲಸಿಗರು ಡೇರಿಯನ್‌ ಗ್ಯಾಪ್‌ ಅನ್ನು ದಾಟಿದ್ದಾರೆ. ಹೆಚ್ಚಿನವರು ವೆನೆಜುವೆಲಾ, ಹೈಟಿ ಮತ್ತು ಈಕ್ವೆಡಾರ್‌ನವರು. ಚೀನಾ, ಭಾರತದ ಏಷ್ಯನ್ನರು ಹಾಗೂ ಕ್ಯಾಮರೂನ್‌, ಸೋಮಾಲಿಯಾದ ಆಫ್ರಿಕನ್ನರೂ ಈ ಮಾರ್ಗದಲ್ಲಿ ಪ್ರಯಾಣಿಸಿದ್ದಾರೆ. ಅಮೆರಿಕದಾದ್ಯಂತ ನಡೆಯುತ್ತಿರುವ ಸ್ಥಳಾಂತರ ಪ್ರಕ್ರಿಯೆಯ ಪರಿಣಾಮವಾಗಿ ದಶಕದಿಂದಲೂ ಪನಾಮದಲ್ಲಿ ಬಿಕ್ಕಟ್ಟು ಉಂಟಾಗಿದೆ ಎಂದೂ ಹೇಳಲಾಗಿದೆ.

ಡೇರಿಯನ್‌ ದಾಟುವಾಗ ಜನರು ಎದುರಿಸುತ್ತಿರುವ ಅಪಾಯ ಮತ್ತು ಹಿಂಸಾಚಾರ ಹೆಚ್ಚು ಕಳವಳಕಾರಿ ಎಂದು ಪನಾಮದಲ್ಲಿರುವ ಯುಎನ್‌ಎಚ್‌ಸಿಆರ್‌ ಪ್ರತಿನಿಧಿ ಫಿಲಿಪ್ಪಾ ಕ್ಯಾಂಡ್ಲೆರ್‌ ಪ್ರಕಟಣೆಯಲ್ಲಿ ಉಲ್ಲೇಖಿಸಿದ್ದಾರೆ.

ಯುಎಸ್‌ ಹೋಮ್‌ಲ್ಯಾಂಡ್‌ ಸೆಕ್ಯೂರಿಟಿ ಕಾರ್ಯದರ್ಶಿ ಅಲೆಜಾಂಡ್ರೊ ಮಯೋರ್ಕಾಸ್‌ ಅವರು ಪನಾಮ ಹಾಗೂ ಕೊಲಂಬಿಯಾದ ವಿದೇಶಾಂಗ ಸಚಿವರುಗಳನ್ನು ಪನಾಮದಲ್ಲಿ ಇತ್ತೀಚೆಗೆ ಭೇಟಿಯಾಗಿ, ವಲಸೆ ಬಿಕ್ಕಟ್ಟಿನ ಕುರಿತು ಚರ್ಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT