ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗ ನಷ್ಟ: ವಲಸಿಗರ ಹಿತರಕ್ಷಣೆಗೆ ಅಮೆರಿಕ ಸಂಸದರ ಮನವಿ

Last Updated 13 ಏಪ್ರಿಲ್ 2023, 12:50 IST
ಅಕ್ಷರ ಗಾತ್ರ

ವಾಷಿಂಗ್ಟನ್: ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಅನೇಕ ಕಂಪನಿಗಳು ಉದ್ಯೋಗ ಕಡಿತ ಮಾಡಿದ್ದರಿಂದಾಗಿ ಎಚ್‌–1ಬಿ ವೀಸಾ ಹೊಂದಿರುವ ವಲಸಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಉದ್ಯೋಗ ನಷ್ಟದ ನಂತರವೂ ಈ ವೃತ್ತಿಪರರು ದೇಶದಲ್ಲಿಯೇ ಉಳಿದುಕೊಳ್ಳಲು ಕ್ರಮ ಕೈಗೊಳ್ಳಬೇಕು ಎಂದು ಅಮೆರಿಕದ ಸಂಸದರ ಗುಂಪು ಒತ್ತಾಯಿಸಿದೆ.

ಈ ಕುರಿತು, ಸಂಸದರಾದ ಝೋ ಲಾಫ್‌ಗ್ರೆನ್, ರೋ ಖನ್ನಾ, ಜಿಮ್ಮಿ ಪನೆಟಾ ಹಾಗೂ ಕೆವಿನ್‌ ಮಲ್ಲಿನ್‌ ಅವರು ಅಮೆರಿಕ ಪೌರತ್ವ ಮತ್ತು ವಲಸೆ ಸೇವೆಗಳ (ಯುಎಸ್‌ಸಿಐಎಸ್‌) ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.

‘ಜ್ಞಾನ ಆಧಾರಿತವಾದ ಇಂದಿನ ಆರ್ಥಿಕತೆಗೆ ಅಗತ್ಯವಿರುವ ವಿಶೇಷ ಕೌಶಲಗಳನ್ನು ಈ ವಲಸಿಗರ ವೃತ್ತಿಪರರು ಹೊಂದಿದ್ದಾರೆ. ಅವರು ದೇಶ ತೊರೆಯುವಂತೆ ಮಾಡುವುದರಿಂದ ದೇಶಕ್ಕೆ ಹಾನಿಯಾಗುತ್ತದೆ. ಅದರಲ್ಲೂ, ಸ್ಪರ್ಧಾತ್ಮಕವಾಗಿರುವ ಆರ್ಥಿಕತೆ ಮೇಲೆ ದೂರಗಾಮಿ ಪರಿಣಾಮ ಉಂಟಾಗುವುದು’ ಎಂದು ಸಂಸದರು ಪತ್ರದಲ್ಲಿ ವಿವರಿಸಿದ್ದಾರೆ.

‘ತಂತ್ರಜ್ಞಾನ ಕ್ಷೇತ್ರದ ಕಂಪನಿಗಳಿಂದ ಉದ್ಯೋಗ ಕಡಿತ ಹೆಚ್ಚುತ್ತಿದೆ. 2022ಕ್ಕೆ ಹೋಲಿಸಿದರೆ, ಈ ವರ್ಷದ ಆರಂಭದಿಂದ ಈ ವರೆಗೆ ಉದ್ಯೋಗ ಕಳೆದುಕೊಂಡವರ ಸಂಖ್ಯೆಯೇ ಹೆಚ್ಚು’ ಎಂದು ವಿವರಿಸಿದ್ದಾರೆ.

‘ಉದ್ಯೋಗ ಕಡಿತದಿಂದ ವಲಸಿಗರ ಮೇಲೆ ಆಗಿರುವ ಪರಿಣಾಮಗಳು, ಕಂಪನಿಗಳ ಮುಖ್ಯಸ್ಥರಿಗೆ ನೀಡಲಾಗಿರುವ ಮಾರ್ಗಸೂಚಿಗಳು ಹಾಗೂ ಎಚ್‌–1ಬಿ ವೀಸಾ ಹೊಂದಿರುವವರು ಉದ್ಯೋಗ ಕಳೆದುಕೊಂಡ ನಂತರ ಅಮೆರಿಕದಲ್ಲಿ ಉಳಿದುಕೊಳ್ಳಲು ಇರುವ ಅವಧಿಯನ್ನು ವಿಸ್ತರಿಸಿರುವ ಕುರಿತು ದತ್ತಾಂಶಗಳನ್ನು ಬಿಡುಗಡೆ ಮಾಡಬೇಕು’ ಎಂದೂ ಸಂಸದರು ಮನವಿ ಮಾಡಿದ್ದಾರೆ.

ಗೂಗಲ್‌, ಮೈಕ್ರೊಸಾಫ್ಟ್‌, ಅಮೆಜಾನ್‌ನಂತಹ ದೈತ್ಯ ಕಂಪನಿಗಳು ಉದ್ಯೋಗ ಕಡಿತ ಮಾಡಿವೆ. ಅಮೆರಿಕದ ಮಾಧ್ಯಮಗಳ ಪ್ರಕಾರ, ಕಳೆದ ವರ್ಷ ನವೆಂಬರ್‌ನಿಂದ ಈ ವರೆಗೆ ಐಟಿ ಕ್ಷೇತ್ರದ 2 ಲಕ್ಷಕ್ಕೂ ಅಧಿಕ ಉದ್ಯೋಗಿಗಳನ್ನು ವಜಾ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT