ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೌತಿ ನೆಲೆಗಳ ಮೇಲೆ ಅಮೆರಿಕ ಮತ್ತೊಮ್ಮೆ ಕ್ಷಿಪಣಿ ದಾಳಿ

Published 18 ಜನವರಿ 2024, 16:32 IST
Last Updated 18 ಜನವರಿ 2024, 16:32 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಯೆಮೆನ್‌ನಲ್ಲಿ ಹೌತಿ ಬಂಡುಕೋರರ ನಿಯಂತ್ರಿತ ನೆಲೆಗಳ ಮೇಲೆ ಬುಧವಾರ ಯುದ್ಧನೌಕೆ ಮತ್ತು ಜಲಾಂತರ್ಗಾಮಿ ನೌಕೆಯಿಂದ ಮತ್ತೊಮ್ಮೆ ಕ್ಷಿಪಣಿಗಳ ದಾಳಿ ನಡೆಸಲಾಗಿದೆ ಎಂದು ಅಮೆರಿಕ ಸೇನೆಯ ಕೇಂದ್ರ ಕಮಾಂಡ್‌ ಹೇಳಿದೆ.

ಇತ್ತೀಚಿನ ದಿನಗಳಲ್ಲಿ ಯೆಮೆನ್‌ನಲ್ಲಿ ಹೌತಿ ಬಂಡುಕೋರರ ಮೇಲೆ ಅಮೆರಿಕ ಸೇನೆ ನಾಲ್ಕನೇ ಬಾರಿಗೆ ನೇರ ದಾಳಿ ನಡೆಸಿದೆ. ಇಸ್ರೇಲ್‌–ಹಮಾಸ್‌ ನಡುವಿನ ಯುದ್ಧದಿಂದ ಹುಟ್ಟಿಕೊಂಡ ಈ ಸಂಘರ್ಷವು ಮಧ್ಯಪ್ರಾಚ್ಯಕ್ಕೆ ಹರಡುತ್ತಲೇ ಇದೆ.  

ಇರಾನ್‌ ಬೆಂಬಲಿತ ಹೌತಿ ಬಂಡುಕೋರರು, ಪ್ಯಾಲೆಸ್ಟೀನ್‌ನ ಹಮಾಸ್‌ ಬಂಡುಕೋರರನ್ನು ಬೆಂಬಲಿಸಿ ಕೆಂಪು ಸಮುದ್ರದಲ್ಲಿ ಸರಕು ಸಾಗಣೆ ಮಾಡುವ ವಿದೇಶಿ ಹಡಗುಗಳ ಮೇಲೆ ದಾಳಿ ನಡೆಸುವ ಮೂಲಕ ಬೆದರಿಕೆಯೊಡ್ಡಿದ್ದಾರೆ.

‘ಯೆಮೆನ್‌ನಲ್ಲಿ ಹೌತಿ ಬಂಡುಕೋರರ ನಿಯಂತ್ರಣದ ಪ್ರದೇಶಗಳ ಮೇಲೆ ದಾಳಿ ನಡೆಸಿ, ಹೌತಿ ಬಂಡುಕೋರರು ಉಡಾವಣೆಗೆ ಸಜ್ಜುಗೊಳಿಸಿದ್ದ ಇರಾನ್‌ ನಿರ್ಮಿತ 14 ಕ್ಷಿಪಣಿಗಳನ್ನು ಧ್ವಂಸಗೊಳಿಸಲಾಗಿದೆ’ ಎಂದು ಕೇಂದ್ರ ಕಮಾಂಡ್‌ ಬುಧವಾರ ‘ಎಕ್ಸ್‌’ನಲ್ಲಿ ಹೇಳಿಕೆ ಬಿಡುಗಡೆ ಮಾಡಿದೆ.

‘ಈ ಕ್ಷಿಪಣಿಗಳನ್ನು ಯಾವುದೇ ಕ್ಷಣದಲ್ಲಾದರೂ ಉಡಾವಣೆಗೆ ಸಜ್ಜಾಗಿರಿಸಲಾಗಿತ್ತು. ಈ ಭಾಗದಲ್ಲಿ ವ್ಯಾಪಾರಿ ಹಡಗುಗಳು ಮತ್ತು ಅಮೆರಿಕದ ನೌಕಾಪಡೆಯ ಹಡಗುಗಳಿಗೆ ದೊಡ್ಡ ಬೆದರಿಕೆಯಾಗಿದ್ದವು. ಅಮೆರಿಕ ಪಡೆಗಳು ಸ್ವರಕ್ಷಣೆಗಾಗಿ ಈ ಕ್ಷಿಪಣಿಗಳನ್ನು ಧ್ವಂಸ ಮಾಡಿವೆ’ ಎಂದು ಅದು ಹೇಳಿದೆ.

ಯೆಮೆನ್‌ನಾದ್ಯಂತ ಹೌತಿ ಬಂಡುಕೋರರ 60ಕ್ಕೂ ಹೆಚ್ಚು ನೆಲೆಗಳ ಮೇಲೆ ಅಮೆರಿಕ ಮತ್ತು ಬ್ರಿಟನ್‌ ಯುದ್ಧನೌಕೆಗಳು ಮತ್ತು ಯುದ್ಧವಿಮಾನಗಳು ಕಳೆದ ಶುಕ್ರವಾರ ನಡೆಸಿದ ದೊಡ್ಡ ಪ್ರಮಾಣದ ಕಾರ್ಯಾಚರಣೆ ಸೇರಿ, ಕೆಲ ನಿರ್ಬಂಧಗಳನ್ನು ಹೇರಿದ  ಹೊರತಾಗಿಯೂ ಹೌತಿ ಬಂಡುಕೋರರು ವಾಣಿಜ್ಯ ಮತ್ತು ಸೇನಾ ಪಡೆಗಳ ಹಡಗುಗಳನ್ನು ಗುರಿಯಾಗಿಸಿ ಕ್ಷಿಪಣಿ, ಡ್ರೋನ್‌ ದಾಳಿ ಮುಂದುವರಿಸಿದ್ದಾರೆ.

ಎಚ್ಚರಿಕೆ: 

ಹೌತಿ ಬಂಡುಕೋರರಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸದಂತೆ ಇರಾನ್‌ಗೆ ಅಮೆರಿಕ ಗುರುವಾರ ಕಠಿಣ ಎಚ್ಚರಿಕೆ ನೀಡಿದೆ.

ಸರಕು ಸಾಗಣೆ ಹಡಗಿನಲ್ಲಿ ಬ್ಯಾಲೆಸ್ಟಿಕ್‌ ಕ್ಷಿಪಣಿಗಳ ಭಾಗಗಳನ್ನು ಸಾಗಿಸುತ್ತಿರುವುದು ಗುರುವಾರ ಪತ್ತೆಯಾಗಿದೆ. ಇವುಗಳನ್ನು ಇರಾನ್‌ ಯೆಮೆನ್‌ಗೆ ಸಾಗಿಸುತ್ತಿತ್ತು ಎಂದು ಅಮೆರಿಕ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT