ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಮಾನಿಕ ದಾಳಿ: 40 ಸಾವು

ಇರಾಕ್‌, ಸಿರಿಯಾದಲ್ಲಿ ಅಮೆರಿಕ ಕಾರ್ಯಾಚರಣೆ
Published 3 ಫೆಬ್ರುವರಿ 2024, 15:17 IST
Last Updated 3 ಫೆಬ್ರುವರಿ 2024, 15:17 IST
ಅಕ್ಷರ ಗಾತ್ರ

ವಾಷಿಂಗ್ಟನ್‌/ಬಾಗ್ದಾದ್‌ (ಪಿಟಿಐ/ರಾಯಿಟರ್ಸ್‌): ಇರಾನ್ ರೆವಲ್ಯೂಷನರಿ ಗಾರ್ಡ್ಸ್ (ಐಆರ್‌ಜಿಸಿ) ಮತ್ತು ಅದರ ಜತೆಗೆ ಸಂಪರ್ಕ ಹೊಂದಿರುವ ಸಶಸ್ತ್ರ ಗುಂಪುಗಳನ್ನು ಗುರಿಯಾಗಿಸಿಕೊಂಡು ಅಮೆರಿಕ ಸೇನೆಯು ಶುಕ್ರವಾರ ರಾತ್ರಿ ಇರಾಕ್ ಮತ್ತು ಸಿರಿಯಾದಲ್ಲಿ ಸುಮಾರು 85 ಕಡೆ ವೈಮಾನಿಕ ದಾಳಿ ನಡೆಸಿದೆ.

ಈ ದಾಳಿಯಿಂದ ಸಿರಿಯಾದಲ್ಲಿ 23 ಮತ್ತು ಇರಾಕ್‌ನಲ್ಲಿ 16 ಮಂದಿ ಸೇರಿ ಸುಮಾರು 40 ಜನರು ಸತ್ತಿದ್ದಾರೆ. ಮೃತಪಟ್ಟವರಲ್ಲಿ ನಾಗರಿಕರೂ ಇದ್ದಾರೆ. ಹಲವು ಮಂದಿ ಗಾಯಗೊಂಡಿದ್ದಾರೆ ಎಂದು ಸಿರಿಯಾದಲ್ಲಿ ಯುದ್ಧ ವರದಿ ಮಾಡುವ ಮಾನವ ಹಕ್ಕುಗಳ ಸಂಘಟನೆಯ ನಿರ್ದೇಶಕ ರಾಮಿ ಅಬ್ದುಲ್‌ರೆಹಮಾನ್‌ ಹೇಳಿದ್ದಾರೆ.

ಕಳೆದ ಭಾನುವಾರ ಜೋರ್ಡಾನ್‌ನಲ್ಲಿ ಅಮೆರಿಕದ ಸೇನಾನೆಲೆ ಮೇಲೆ ಇರಾನ್‌ ಬೆಂಬಲಿತ ಬಂಡುಕೋರರು ಡ್ರೋನ್‌ ದಾಳಿ ನಡೆಸಿ, ಮೂವರು ಸೈನಿಕರನ್ನು ಕೊಂದಿದ್ದಕ್ಕೆ ಪ್ರತೀಕಾರವಾಗಿ ಅಮೆರಿಕ ಈ ದಾಳಿ ನಡೆಸಿದೆ. ಮುಂದಿನ ದಿನಗಳಲ್ಲಿ ಸೇನಾ ಕಾರ್ಯಾಚರಣೆಯನ್ನು ಮತ್ತಷ್ಟು ಹೆಚ್ಚಿಸುವ ಸುಳಿವನ್ನೂ ನೀಡಿದೆ.

ಹಲವು ಯುದ್ಧ ವಿಮಾನಗಳನ್ನು ಈ ಕಾರ್ಯಾಚರಣೆಗಳಲ್ಲಿ ಬಳಸಲಾಗಿದ್ದು, 85ಕ್ಕೂ ಹೆಚ್ಚು ಗುರಿಗಳನ್ನು ಧ್ವಂಸಗೊಳಿಸಲಾಯಿತು. ಧ್ವಂಸಗೊಂಡ ಗುರಿಗಳಲ್ಲಿ ಐಆರ್‌ಜಿಸಿಯ ಕಮಾಂಡ್ ಮತ್ತು ನಿಯಂತ್ರಣ ಕೇಂದ್ರಗಳು, ಗುಪ್ತಚರ ಕೇಂದ್ರಗಳು, ರಾಕೆಟ್‌ಗಳು ಮತ್ತು ಕ್ಷಿಪಣಿಗಳು, ಡ್ರೋನ್‌ಗಳ ಸಂಗ್ರಹ, ಸಶಸ್ತ್ರ ಗುಂಪುಗಳಿಗೆ ಪೂರೈಕೆಯಾಗುತ್ತಿದ್ದ ಸರಕು ಮತ್ತು ಯುದ್ಧಸಾಮಗ್ರಿ ಸೌಲಭ್ಯಗಳು ಸೇರಿವೆ ಎಂದು ಅಮೆರಿಕ ಸೇನೆ ಹೇಳಿದೆ.

ಇರಾನ್‌ ಬೆಂಬಲಿತ ಬಂಡುಕೋರರ ಮೇಲೆ ಪ್ರತೀಕಾರದ ದಾಳಿ ನಡೆಯಲಿದೆ ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಮತ್ತು ಇತರ ಉನ್ನತ ನಾಯಕರು ಎಚ್ಚರಿಕೆ ನೀಡುತ್ತಾ ಬಂದಿದ್ದರು. 

‘ನನ್ನ ನಿರ್ದೇಶನದ ಮೇರೆಗೆ ಅಮೆರಿಕ ಸೇನಾ ಪಡೆಗಳು, ಇರಾಕ್‌ ಮತ್ತು ಸಿರಿಯಾದಲ್ಲಿ ಐಆರ್‌ಜಿಸಿ ಮತ್ತು ಅದರ ಬೆಂಬಲಿತ ಗುಂಪುಗಳು ಬಳಸುತ್ತಿದ್ದ ಮೂಲ ಸೌಕರ್ಯಗಳನ್ನು ಗುರಿಯಾಗಿಸಿ ದಾಳಿ ನಡೆಸಿವೆ. ನಮ್ಮ ಪ್ರತಿಕ್ರಿಯೆ ಶುರುವಾಗಿದೆ’ ಎಂದು ಬೈಡನ್‌ ಹೇಳಿದ್ದಾರೆ. 

ಇರಾಕ್‌ ಕಳವಳ: (ಬಾಗ್ದಾದ್‌ ವರದಿ): ಅಮೆರಿಕದ ದಾಳಿಯನ್ನು ಖಂಡಿಸಿರುವ ಇರಾಕ್, ಈ ಪ್ರದೇಶದ ಭದ್ರತೆಯು ಪ್ರಪಾತದ ಅಂಚಿನಲ್ಲಿದೆ ಎಂದು ಕಳವಳ ವ್ಯಕ್ತಪಡಿಸಿದೆ. ‘ಈ ದಾಳಿಗೆ ಅಮೆರಿಕದ ಜತೆಗೆ ಇರಾಕ್‌ ಸರ್ಕಾರದ ಪೂರ್ವಯೋಜಿತ ಸಹಕಾರವಿತ್ತು’ ಎನ್ನುವುದನ್ನು ಅಲ್ಲಗಳೆದಿರುವ ಇರಾಕ್ ಸರ್ಕಾರದ ವಕ್ತಾರ ಬಸ್ಸೆಮ್ ಅಲ್-ಅವಾದಿ, ಇದೊಂದು ಸುಳ್ಳು ಆರೋಪ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT