ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ಸಂಕಷ್ಟದಲ್ಲಿರುವ ಶ್ರೀಲಂಕಾದಲ್ಲಿ ಅಧ್ಯಕ್ಷೀಯ ಚುನಾವಣೆಯ ಬಿರುಸಿನ ಚರ್ಚೆ

Published 1 ಮೇ 2024, 10:29 IST
Last Updated 1 ಮೇ 2024, 10:29 IST
ಅಕ್ಷರ ಗಾತ್ರ

ಕೊಲಂಬೊ: ಶ್ರೀಲಂಕಾದ ಅಧ್ಯಕ್ಷೀಯ ಚುನಾವಣೆ ಇದೇ ವರ್ಷ ನಡೆಯಲಿದ್ದು, ಒಂದೊಮ್ಮೆ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ಅವರು ಸ್ಪರ್ಧಿಸಿದರೆ, ತಮ್ಮದೇ ಸಂಪುಟದ ಸಹೋದ್ಯೋಗಿ, ಕಾನೂನು ಸಚಿವ ವಿಜಯದಾಸ ರಾಜಪಕ್ಷ ಅವರನ್ನು ಎದುರಿಸಬೇಕಿದೆ.

ಶ್ರೀಲಂಕಾ ಮಾಜಿ ಅಧ್ಯಕ್ಷ, ಫ್ರೀಡಂ ಪಾರ್ಟಿಯ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ಅಧ್ಯಕ್ಷೀಯ ಚುನಾವಣೆ ಕುರಿತು ಮಾತನಾಡಿ, ‘ನ. 15ರೊಳಗೆ ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆ ನಡೆಯುವ ಸಾಧ್ಯತೆ ಇದ್ದು, ತಮ್ಮ ಪಕ್ಷವು ರಾಜಪಕ್ಷ (65) ಅವರನ್ನು ಕಣಕ್ಕಿಳಿಸಲಿದೆ’ ಎಂದಿದ್ದಾರೆ.

‘ರಾಜಪಕ್ಷ ಅವರು ಸದ್ಯ ವಿಭಜನೆಗೊಂಡಿರುವ ಶ್ರೀಲಂಕಾದ ಪೊದುಜನ ಪೆರಮುನಾ ಪಾರ್ಟಿಯ ಸದಸ್ಯರಾಗಿದ್ದಾರೆ. ಯುನೈಟೆಡ್ ಪೀಪಲ್ಸ್ ಫ್ರೀಡಂ ಅಲಯನ್ಸ್‌ನ ಸದಸ್ಯರೂ ಹೌದು. ಜತೆಗೆ ಮುಖಂಡ ಮಹಿಂದಾ ರಾಜಪಕ್ಷ ಅವರ ಅನುಯಾಯಿ ಕೂಡಾ. 75 ವರ್ಷದ ವಿಕ್ರಮಸಿಂಘೆ  ಅವರು ಸದ್ಯ ಎಸ್‌ಎಲ್‌ಪಿಪಿ ಭಾಗವಾಗಿದ್ದಾರೆ. ಸಾಜಿತ್ ಪ್ರೇಮದಾಸ ನಾಯಕತ್ವದ ಪ್ರಮುಖ ವಿರೋಧಪಕ್ಷ ಸಮಗಿ ಜನ ಬಲವೇಗಯಾ ಪಕ್ಷಕ್ಕೂ ಇದರ ಮತ್ತೊಂದು ಗುಂಪು ಬೆಂಬಲ ವ್ಯಕ್ತಪಡಿಸಿದೆ. 

ಶ್ರೀಲಂಕಾದಲ್ಲಿ 2022ರಲ್ಲಿ ತಲೆದೋರಿದ ತೀವ್ರ ಆರ್ಥಿಕ ಬಿಕ್ಕಟ್ಟು ವಿರೋಧಿಸಿ ದೇಶವ್ಯಾಪಿ ನಡೆದ ಪ್ರತಿಭಟನೆಯಲ್ಲಿ ಪ್ರಭಾವಿ ರಾಜಪಕ್ಷ ಕುಟುಂಬದ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದರು. ಅದಾದ ನಂತರ ಪಕ್ಷದ ವಿರುದ್ಧ ವ್ಯಕ್ತವಾದ ಆಕ್ರೋಶದಿಂದಾಗಿ ಎಸ್‌ಎಲ್‌ಪಿಪಿಯ ರಾಜಪಕ್ಷ ಅನುಯಾಯಿಗಳು ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸದಿರಲು ನಿರ್ಧರಿಸಿದೆ ಎಂದು ಮೂಲಗಳು ಹೇಳಿವೆ.

ದೇಶವನ್ನು ಆರ್ಥಿಕವಾಗಿ ಸುಸ್ಥಿತಿಗೆ ತರುವ ನಿಟ್ಟಿನಲ್ಲಿ ಹೊಸ ನೀತಿ ರೂಪಿಸುವ ಉದ್ದೇಶದಿಂದ ಪಕ್ಷಗಳು ಒಮ್ಮತದಿಂದ ಅಭ್ಯರ್ಥಿಯ ಆಯ್ಕೆ ಮಾಡುವ ಸಾಧ್ಯತೆ ಇದೆ ಎಂದೆನ್ನಲಾಗಿದೆ.

ಅಧ್ಯಕ್ಷ ಸ್ಥಾನಕ್ಕೆ ಸಾಜಿತ್ ಪ್ರೇಮದಾಸಾ ಮತ್ತು ಅನುರಾ ಕುಮಾರ ದಿಸನಾಯಕೆ ಅವರು ಸ್ಪರ್ಧಿಸುವುದಾಗಿ ಈಗಾಗಲೇ ಹೇಳಿದ್ದಾರೆ. ವಿಕ್ರಮಸಿಂಘೆ ಅವರು ಈವರೆಗೂ ತಮ್ಮ ಸ್ಪರ್ಧೆ ಕುರಿತು ಅಧಿಕೃತವಾಗಿ ಏನನ್ನೂ ಹೇಳಿಲ್ಲ.

ಸದ್ಯ ಶ್ರೀಲಂಕಾ ಫ್ರೀಡಂ ಪಾರ್ಟಿಯ ಚುಕ್ಕಾಣಿ ವಿಷಯವೂ ಜಟಿಲತೆಯಿಂದ ಕೂಡಿದೆ.  ಕಳೆದ ಏಪ್ರಿಲ್‌ನಲ್ಲಿ ನ್ಯಾಯಾಲಯದ ಆದೇಶದಂತೆ ಸಿರಿಸೇನಾ ಅವರನ್ನು ಬಂಧಿಸಲಾಗಿದೆ. ಇದರಿಂದ ತೆರವಾದ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜಪಕ್ಷ ಅವರು ಪ್ರಭಾರ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಆದರೆ ಅಧಿಕಾರ ಚಲಾಯಿಸಲು ನ್ಯಾಯಾಲಯ ಇವರಿಗೂ ನಿರ್ಬಂಧ ವಿಧಿಸಿದೆ. ಮತ್ತೊಂದೆಡೆ ಸಿರಿಸೇನಾ ಮತ್ತು ಮಾಜಿ ಅಧ್ಯಕ್ಷೆ ಚಂದ್ರಿಕಾ ಕುಮಾರತುಂಗಾ ಅವರ ನಡುವೆ ಪಕ್ಷದ ಚುಕ್ಕಾಣಿಗಾಗಿ ತೀವ್ರ ಸಂಘರ್ಷ ನಡೆದಿದೆ ಎಂದು ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT