ಢಾಕಾ: ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ 32 ವರ್ಷದ ಪತ್ರಕರ್ತೆಯೊಬ್ಬರು ಕೆರೆಯೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ಮೃತ ಪತ್ರಕರ್ತೆಯನ್ನು ಗಾಝಿ ಟಿವಿ ಸುದ್ದಿ ವಾಹಿನಿಯ ಸುದ್ದಿ ಸಂಪಾದಕಿ ಸಾರಾ ರೆಹನುಮಾ ಎಂದು ಗುರುತಿಸಲಾಗಿದೆ. ಗಾಝಿ ಟಿವಿಯು ಗಾಝಿ ಗ್ರೂಪ್‌ನ ಬೆಂಗಾಳಿ ಭಾಷೆಯ ಸಾಟಲೈಟ್ ಮತ್ತು ಕೇಬಲ್ ಟಿವಿ ಚಾನೆಲ್ ಆಗಿದೆ.
ಢಾಕಾದಲ್ಲಿರುವ ಹತ್ರಿಜ್‌ಹೀಲ್ ಎನ್ನುವ ಕರೆಯಲ್ಲಿ ಸಾರಾ ಅವರ ಮೃತದೇಹ ತೇಲುತ್ತಿತ್ತು ಎಂದು ಟ್ರಿಬ್ಯೂನ್ ಪತ್ರಿಕೆಯಲ್ಲಿ ವರದಿಯಾಗಿದೆ.
ಸಾರಾ ಸಾಯುವ ಮುನ್ನಾದಿನ ಫೇಸ್ಬುಕ್‌ನಲ್ಲಿ ಫಾಹಿಮ್ ಫೈಸಲ್ ಎನ್ನುವವರ ಬಗ್ಗೆ ‘ನಿಮ್ಮಂತಹ ಗೆಳೆಯನನ್ನು ಹೊಂದಿರುವುದು ಖುಷಿಯ ಸಂಗತಿ. ದೇವರು ಒಳ್ಳೆಯದು ಮಾಡಲಿ. ಆದಷ್ಟು ಬೇಗ ನಿಮ್ಮ ಕನಸುಗಳು ನನಸಾಗಿ. ನಾವಿಬ್ಬರು ಬಹಳಷ್ಟು ಕನಸುಗಳನ್ನು ಕಟ್ಟಿಕೊಂಡಿದ್ದೆವು. ಅದನ್ನು ನೆರವೇರಿಸಲು ಸಾಧ್ಯವಿಲ್ಲ. ಸತ್ತಂತೆ ಬದುಕುವುದಕ್ಕಿಂತ ಸಾಯುವುದೇ ಒಳಿತು’ ಎಂದು ಬರೆದುಕೊಂಡು ಪೋಸ್ಟ್ ಹಂಚಿಕೊಂಡಿದ್ದರು ಎಂದು ವರದಿಯಾಗಿದೆ.
ಸಾರಾ ಅವರ ಸಾವಿನ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಅದಾಗ್ಯೂ, ಸಾರಾ ಅವರ ಸಾವಿಗೆ ರಾಜಕೀಯ ಬಣ್ಣ ಬಳಿದಿರುವ ಶೇಖ್ ಹಸೀನಾ ಪುತ್ರ ಸಾಜೀಬ್ ವಾಝಿದ್, ‘ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಮತ್ತೊಂದು ಭೀಕರ ದಾಳಿಯಾಗಿದೆ’ ಎಂದಿದ್ದಾರೆ.
‘ಬೆಳಿಗ್ಗೆ ಕಚೇರಿಗೆ ತೆರಳಿದ್ದ ಸಾರಾ ಮನೆಗೆ ವಾಪಸ್ಸಾಗಲಿಲ್ಲ. ಅಲ್ಲದೆ ನನ್ನಿಂದ ವಿಚ್ಛೆದನ ಬಯಸಿದ್ದರು. ದೇಶದಲ್ಲಿ ಪರಿಸ್ಥಿತಿ ಸರಿಯಿಲ್ಲದ ಕಾರಣ ವಿಚ್ಛೇದನ ಪಡೆಯುವ ಪ್ರಕ್ರಿಯೆ ಸಾಧ್ಯವಾಗಿರಲಿಲ್ಲ. ಈ ನಡುವೆ ಸಾರಾ ಮೃತಪಟ್ಟಿರುವುದು ಅನುಮಾನಕ್ಕೆ ಕಾರಣವಾಗಿದೆ’ ಎಂದು ಸಾರಾ ಪತಿ ಸಯ್ಯದ್ ಶುವ್ರೊ ಹೇಳಿರುವುದಾಗಿ ವರದಿಯಾಗಿದೆ.