ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ತ್ರೀ ಸಬಲೀಕರಣ: ಭಾರತದ ಕ್ರಮಕ್ಕೆ ವಿಶ್ವಬ್ಯಾಂಕ್ ಶ್ಲಾಘನೆ

Last Updated 14 ಏಪ್ರಿಲ್ 2023, 13:58 IST
ಅಕ್ಷರ ಗಾತ್ರ

ವಾಷಿಂಗ್ಟನ್‌ (ಪಿಟಿಐ): ‘ಮಹಿಳಾ ಸಬಲೀಕರಣ ವಿಷಯದಲ್ಲಿ ಭಾರತ ವಿಶೇಷ ಒತ್ತು ನೀಡಿದೆ. ಸ್ತ್ರೀಯರ ಸಶಸ್ತೀಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನಡೆ ಮಾದರಿಯಾದುದು’ ಎಂದು ವಿಶ್ವಬ್ಯಾಂಕ್‌ ಅಧ್ಯಕ್ಷ ಡೇವಿಡ್‌ ಮಾಲ್ಪಾಸ್‌ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ವಿಶ್ವಬ್ಯಾಂಕ್‌ನಿಂದ ಇಲ್ಲಿ ಗುರುವಾರ ಮಹಿಳೆಯರಲ್ಲಿ ಔದ್ಯೋಗಿಕ ಸಾಮರ್ಥ್ಯ ಹೆಚ್ಚಳ ಹಾಗೂ ನಾಯಕತ್ವ ಗುಣ ರೂಪಿಸುವಲ್ಲಿ ಸ್ತ್ರೀ ಸಬಲೀಕರಣದ ಪಾತ್ರ ಕುರಿತು ಹಮ್ಮಿಕೊಂಡಿದ್ದ ಚರ್ಚೆಯಲ್ಲಿ ಅವರು ಮಾತನಾಡಿದರು. ಇದಕ್ಕೆ ಕೇಂದ್ರ ಇಂಧನ ಸಚಿವೆ ನಿರ್ಮಲ ಸೀತಾರಾಮನ್‌ ಸೇರಿದಂತೆ ಹಲವು ಗಣ್ಯರು ಸಾಕ್ಷಿಯಾದರು.

ಈ ವೇಳೆ ಕೇಂದ್ರ ಸರ್ಕಾರ ದೇಶದಲ್ಲಿ ಮಹಿಳೆಯರ ಆರ್ಥಿಕ ಅಭ್ಯುದಯಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆ ನಿರ್ಮಲ ಸಭೆಗೆ ವಿವರಿಸಿದರು.

‘ವಿಶ್ವದಾದ್ಯಂತ ಸ್ತ್ರೀಯರ ಸಬಲೀಕರಣಕ್ಕೆ ವಿಶ್ವ ಬ್ಯಾಂಕ್‌ ಹಲವು ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸಿದೆ. ಮೋದಿ ಸರ್ಕಾರದ ಕಾರ್ಯವೈಖರಿ ಇದಕ್ಕೆ ಪೂರಕವಾಗಿಯೇ ಇದೆ’ ಎಂದು ಡೇವಿಡ್‌ ಮಾಲ್ಪಾಸ್‌ ಪ್ರಶಂಸೆ ವ್ಯಕ್ತಪಡಿಸಿದರು.

ಬಳಿಕ ಮಾತನಾಡಿದ ಸಚಿವೆ ನಿರ್ಮಲ, ‘ಮಹಿಳೆಯರಲ್ಲಿ ಕೌಶಲಾವೃದ್ಧಿಗೆ ಕೇಂದ್ರ ಸರ್ಕಾರ ಆದ್ಯತೆ ನೀಡಿದೆ. ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಇದು ಬಹುಮುಖ್ಯವಾದುದು. ಈ ಹಿಂದೆ ಸರ್ಕಾರಿ ಹುದ್ದೆಯಲ್ಲಿರುವ ಮಹಿಳೆಯರಿಗೆ 12 ವಾರಗಳ ಕಾಲ ಹೆರಿಗೆ ರಜೆ ನೀಡಲಾಗುತ್ತಿತ್ತು. ಈಗ ಸೌಲಭ್ಯವನ್ನು 26 ವಾರಗಳಿಗೆ ವಿಸ್ತರಿಸಲಾಗಿದೆ. ಪಿತೃತ್ವ ರಜೆಗೂ ಅವಕಾಶ ಕಲ್ಪಿಸಿದ್ದೇವೆ’ ಎಂದು ವಿವರಿಸಿದರು.

ದೇಶದ ಬಹಳಷ್ಟು ಖಾಸಗಿ ಕಂಪನಿಗಳಲ್ಲಿ ಕೌಶಲಾಭಿವೃದ್ಧಿ ತರಬೇತಿ ಪಡೆದ ಸಾವಿರಾರು ಮಹಿಳೆಯರು ಸೇವೆ ಸಲ್ಲಿಸುತ್ತಿದ್ದಾರೆ. ಇದು ಹೆಮ್ಮೆಯ ಸಂಗತಿ ಎಂದರು.

ಪ್ರತಿವರ್ಷ ದೇಶದಲ್ಲಿ ವಿಜ್ಞಾನ, ತಾಂತ್ರಿಕ ವಿಜ್ಞಾನ ಹಾಗೂ ಗಣಿತ ವಿಷಯದಲ್ಲಿ ವಿದ್ಯಾರ್ಹತೆ ಪಡೆದ ಸಾವಿರಾರು ಮಹಿಳೆಯರು ಹೊರಬರುತ್ತಿದ್ದಾರೆ. ಆದರೆ, ಅವರಿಗೆ ಸೂಕ್ತ ಉದ್ಯೋಗಾವಕಾಶ ಸಿಗುತ್ತಿಲ್ಲ ಎಂಬುದು ನನ್ನ ಅರಿವಿಗೆ ಇದೆ ಎಂದು ಹೇಳಿದರು.

‘ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ ಪಡೆಯುವ ವಿದ್ಯಾರ್ಥಿನಿಯರು ಮತ್ತು ವಿದ್ಯಾರ್ಥಿಗಳ ಸಂಖ್ಯೆ ಸಮಪ್ರಮಾಣದಲ್ಲಿ ಇರುವುದೇ ಮಹಿಳೆಯರ ಉದ್ಯೋಗಾವಕಾಶದ ತೊಡಕಿಗೆ ಕಾರಣವಾಗಿದೆ. ಜೊತೆಗೆ, ವೃತ್ತಿಪರ ವಿದ್ಯಾರ್ಹತೆ ಪಡೆದ ಬಳಿಕ ಶೇ 60ರಷ್ಟು ಮಹಿಳೆಯರು ಉದ್ಯೋಗ ಕೋರಿ ಅರ್ಜಿಯನ್ನೂ ಸಲ್ಲಿಸುವುದಿಲ್ಲ. ಇದಕ್ಕೆ ಕಾರಣ ಏನೆಂಬುದು ನನ್ನಲ್ಲಿ ಅಚ್ಚರಿ ಮೂಡಿಸಿದೆ. ಅವರೆಲ್ಲರೂ ಉದ್ಯೋಗ ಕ್ಷೇತ್ರಕ್ಕೆ ಮರಳಬೇಕೆಂಬುದೇ ನನ್ನ ಆಶಯ’ ಎಂದು ನಿರ್ಮಲ ಪ್ರತಿಪಾದಿಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT