ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಂಬಾಬ್ವೆ ಅಧ್ಯಕ್ಷ ಎಮರ್ಸನ್‌ ನಂಗಾಗ್ವ ಎರಡನೇ ಅವಧಿಗೆ ಪುನರ್‌ ಆಯ್ಕೆ

Published 27 ಆಗಸ್ಟ್ 2023, 4:16 IST
Last Updated 27 ಆಗಸ್ಟ್ 2023, 4:16 IST
ಅಕ್ಷರ ಗಾತ್ರ

ಹರಾರೆ: ಜಿಂಬಾಬ್ವೆ ಅಧ್ಯಕ್ಷ ಎಮರ್ಸನ್‌ ನಂಗಾಗ್ವ ಅವರು ಶನಿವಾರ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಎರಡನೇ ಅವಧಿಗೆ ಮರು ಆಯ್ಕೆಯಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಇದರೊಂದಿಗೆ ಝುನು –ಪಿಎಫ್ (ZANU-PF) (ಜಿಂಬಾಬ್ವೆ ಆಫ್ರಿಕನ್ ನ್ಯಾಷನಲ್ ಯೂನಿಯ‌ನ್–ಪೆಟ್ರಿಯಾಟಿಕ್ ಫ್ರಂಟ್) ಆಡಳಿತಾರೂಢ ಪಕ್ಷವಾಗಿ ಹೊರಹೊಮ್ಮಿದೆ.

ಎಮರ್ಸನ್‌ ನಂಗಾಗ್ವ ಅವರಿಗೆ ವಿಪಕ್ಷ ಎಂಡಿಸಿ–ಟಿ (ಮೂವ್‌ಮೆಂಟ್‌ ಫಾರ್‌ ಡೆಮಾಕ್ರಿಟಿಕ್‌ ಚೇಂಜ್‌) ನಾಯಕ ನೆಲ್ಸನ್‌ ಛಾಮಿಸಾ ನಡುವೆ ತೀವ್ರ ಸ್ಪರ್ಧೆ ನೀಡಿದ್ದರು.

1980ರಲ್ಲಿ ದೇಶ ಸ್ವಾತಂತ್ರ್ಯವಾದ ನಂತರದಿಂದ ಅಧಿಕಾರ ನಡೆಸಿದ ರಾರ್ಬಟ್‌ ಮುಗಾಬೆ 2018ರ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ. ದೇಶದಲ್ಲಿ 1987ರಲ್ಲಿ ಅಧ್ಯಕ್ಷೀಯ ಪದ್ಧತಿ ಜಾರಿಯಾಗುವವರೆಗೆ ಪ್ರಧಾನಿಯಾಗಿದ್ದ ಇವರು, 2017ರ ನವೆಂಬರ್‌ನಲ್ಲಿ ಪದಚ್ಯುತರಾಗುವವರೆಗೂ ಅಧ್ಯಕ್ಷರಾಗಿದ್ದರು. ಸತತ 37 ವರ್ಷಗಳ ಕಾಲ ಅಧಿಕಾರ ನಡೆಸಿದ್ದ ಕೀರ್ತಿ ಮುಗಾಬೆ ಅವರದ್ದಾಗಿದೆ.

ಝನು–ಪಿಎಫ್‌ ಪಕ್ಷದಲ್ಲಿ ತಲೆದೋರಿದ್ದ ಉತ್ತರಾಧಿಕಾರಿ ಆಯ್ಕೆಯ ವಿಚಾರದಲ್ಲಿ 2015ರಿಂದ ಹಲವು ಬೆಳವಣಿಗೆಗಳು ಘಟಿಸಿದ್ದವು. ಮುಗಾಬೆ ತನ್ನ ಆಪ್ತನಾಗಿದ್ದ ಎಮರ್ಸನ್‌ ನಂಗಾಗ್ವ ಅವರನ್ನು ಪಕ್ಷದ ಉಪಾಧ್ಯಕ್ಷ ಸ್ಥಾನದಿಂದ ವಜಾ ಮಾಡಿದ್ದರು. 2015ರಲ್ಲಿ ಮುಗಾಬೆ ಪತ್ನಿ ಗ್ರೇಸ್‌ ಅವರನ್ನು ಝನು ಪಿಎಫ್‌ ಪಕ್ಷದ ಮಹಿಳಾ ಘಟಕದ ಮುಖ್ಯಸ್ಥೆಯನ್ನಾಗಿ ನೇಮಿಸಲಾಗಿತ್ತು. ಅವರನ್ನೇ ಅಧ್ಯಕ್ಷ ಸ್ಥಾನಕ್ಕೆ ನೇಮಿಸುವ ಇರಾದೆ ಮುಗಾಬೆ ಅವರದ್ದಾಗಿತ್ತು ಎಂದೇ ವಿಶ್ಲೇಷಿಸಲಾಗಿತ್ತು. ಆದರೆ, ಸೇನೆಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಎಮರ್ಸನ್‌ ನಂಗಾಗ್ವ ಅವರಿಗೆ ಸೇನೆ ಬೆಂಬಲ ನೀಡಿತ್ತು. ಮುಗಾಬೆ ಅವರನ್ನು ಗೃಹ ಬಂಧನದಲ್ಲಿ ಇಡಲಾಗಿತ್ತು.

ನಂತರದ ದಿನಗಳಲ್ಲಿ ಮುಗಾಬೆ ಅವರನ್ನು ಝನು–ಪಿಎಫ್‌ ಪಕ್ಷದ ಮುಖ್ಯಸ್ಥ ಸ್ಥಾನದಿಂದ ಪದಚ್ಯುತಿಗೊಳಿಸಿ ನಂಗಾಗ್ವ ಅವರನ್ನು ನೇಮಕ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT