ಬುಧವಾರ, ಏಪ್ರಿಲ್ 21, 2021
27 °C

ನೋಟಾ: ಸಿನಿಕತನ ಯಾಕೆ?

ಅರುಣ್ ಜೋಳದಕೂಡ್ಲಿಗಿ Updated:

ಅಕ್ಷರ ಗಾತ್ರ : | |

Prajavani

ಚುನಾವಣೆಯಲ್ಲಿ ಯಾವ ಅಭ್ಯರ್ಥಿಯೂ ಸರಿಕಾಣದಿದ್ದರೆ ನಾಗರಿಕರು ನೋಟಾ (NOTA– None of the above) ಒತ್ತಲು ಇರುವ ಅವಕಾಶವನ್ನು ಪ್ರಕಾಶ್ ದೇಶಪಾಂಡೆ ತಮ್ಮ ಲೇಖನದಲ್ಲಿ ವಿರೋಧಿಸಿದ್ದಾರೆ (ಸಂಗತ– ಏ. 15). ಈ ಅಭಿಪ್ರಾಯ ಪ್ರಜಾಪ್ರಭುತ್ವ ವಿರೋಧಿಯಾಗಿದೆ. ಹಾಗಾದರೆ ನೋಟಾ ಅಭಿವ್ಯಕ್ತಿಯ ಸಾಂವಿಧಾನಿಕ ನೆಲೆ ಯಾವುದು ಎನ್ನುವ ಪ್ರಶ್ನೆ ಬರುತ್ತದೆ. ನೋಟಾ ಸ್ವತಃ ಚುನಾವಣಾ ಆಯೋಗ ಜಾರಿಗೊಳಿಸಿದ್ದಲ್ಲ. ಬದಲಾಗಿ, ಜನರ ಹಕ್ಕೊತ್ತಾಯದ ಪರಿಣಾಮವಾಗಿ ಆಯೋಗಕ್ಕೆ ಸುಪ್ರೀಂ ಕೋರ್ಟ್ ಆದೇಶ ನೀಡಿ ಜಾರಿಗೊಳಿಸಿದ್ದು.

ಇದೀಗ ದೇಶದಲ್ಲಿ ನೋಟಾ ಚಲಾವಣೆ ಒಟ್ಟು ಮತದಾನದ ಶೇ 2.02ರಷ್ಟಿದೆ. ಬಿಹಾರ ವಿಧಾನಸಭೆಗೆ 2015ರಲ್ಲಿ ನಡೆದ ಚುನಾವಣೆಯಲ್ಲಿ 3 ಕೋಟಿಗೂ ಹೆಚ್ಚು ಮತದಾರರಲ್ಲಿ ಶೇ 2.48ರಷ್ಟು ಮಂದಿ ನೋಟಾ ಗುಂಡಿ ಒತ್ತಿದ್ದರು. ಈ ಮೂಲಕ, ಅತಿ ಹೆಚ್ಚು ನೋಟಾ ಚಲಾಯಿಸಿದವರಲ್ಲಿ ದೇಶದಲ್ಲಿ ಬಿಹಾರ ಮೊದಲ ಸ್ಥಾನದಲ್ಲಿದ್ದರೆ, ಗುಜರಾತಿನಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ 5.5 ಲಕ್ಷದಷ್ಟು ಮತದಾರರು (ಶೇ 1.8) ನೋಟಾ ಚಲಾಯಿಸಿ ಎರಡನೇ ಸ್ಥಾನದಲ್ಲಿದ್ದಾರೆ.

ಸದ್ಯಕ್ಕೆ ಚುನಾವಣಾ ಆಯೋಗವು ನೋಟಾ ಮತವನ್ನು ಎಣಿಸಿ ದಾಖಲಿಸುತ್ತದೆ ಬಿಟ್ಟರೆ, ಈ ಮತಕ್ಕೆ ಒಂದು ನಿರ್ದಿಷ್ಟ ಅಧಿಕಾರದ ಮೌಲ್ಯವನ್ನು ಕೊಟ್ಟಿಲ್ಲ. ಸಾವಿರ ಮತಗಳಲ್ಲಿ 999 ಮತ ನೋಟಾ ಚಲಾವಣೆಯಾಗಿ, ಇನ್ನುಳಿದ ಒಂದು ಮತ ಪಡೆದ ವ್ಯಕ್ತಿಯನ್ನೇ ಚುನಾಯಿತ ಅಭ್ಯರ್ಥಿ ಎಂದು ಘೋಷಿಸಬಹುದು. ಈ ಕಾರಣಕ್ಕೆ ನೋಟಾ ಚಲಾಯಿಸದೆ, ಯಾವುದೇ ಅಭ್ಯರ್ಥಿಗೆ ಮತ ಹಾಕುವ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಆದರೆ ಪ್ರಜಾಪ್ರಭುತ್ವವನ್ನು ಬಲಪಡಿಸುವ ನಿಟ್ಟಿನಲ್ಲಿ ನೋಡುವುದಾದರೆ, ನೋಟಾವು ಮತದಾರರ ಮೂಲಭೂತ ಹಕ್ಕು.

ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿ ನಿರಾಕರಣೆ ಸ್ವತಂತ್ರವೂ ಒಳಗೊಳ್ಳುತ್ತದೆ. 2004ರಲ್ಲಿ ‘ಪೀಪಲ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್‌’ ಸಂಸ್ಥೆಯವರು ನೋಟಾ ಹಕ್ಕಿಗಾಗಿ ಸುಪ್ರೀಂ ಕೋರ್ಟ್‍ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಇವರ ಹೋರಾಟದ ಫಲವಾಗಿ ಕೋರ್ಟ್ 2013ರಲ್ಲಿ, ಅಭಿವ್ಯಕ್ತಿ ಸ್ವಾತಂತ್ರ್ಯದಡಿಯಲ್ಲಿ ಮತ ಚಲಾಯಿಸುವ ಹಕ್ಕಿರುವಂತೆ, ಚುನಾವಣೆಯಲ್ಲಿ ಸ್ಪರ್ಧಿಸಿದವರಾರೂ ಅರ್ಹರಲ್ಲ ಎಂದು ಮತ ಚಲಾಯಿಸುವ ಅಭಿವ್ಯಕ್ತಿಗೂ ಪ್ರಜಾಪ್ರಭುತ್ವದಲ್ಲಿ ಅವಕಾಶವಿದೆ, ನಕಾರಾತ್ಮಕ ಮತಚಲಾವಣೆಯೂ ಮೂಲಭೂತ ಹಕ್ಕು ಎನ್ನುವ ಅಂಶವನ್ನು ಎತ್ತಿಹಿಡಿಯಿತು.

ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿಯ 2018ರ ಫೆ. 10ರ ಸಂಚಿಕೆಯಲ್ಲಿ ವಿ.ಆರ್.ವಚನ ಮತ್ತು ಮಾಯಾ ರಾಯ್ ಅವರಿಂದ ನೋಟಾ ಕುರಿತು ಒಳನೋಟದ ವಿಶ್ಲೇಷಣೆಯಿದೆ. ಇದು 2013ರ ನಂತರದಲ್ಲಿ ದಾಖಲಾದ ನೋಟಾ ಕುರಿತ ಚುನಾವಣಾ ಆಯೋಗದ ಅಂಕಿ ಅಂಶಗಳನ್ನು ಆಧರಿಸಿದೆ. ಈ ಬರಹ ಕೆಲವು ಮುಖ್ಯ ಸಂಗತಿಗಳ ಕಡೆಗೆ ಗಮನ ಸೆಳೆಯುತ್ತದೆ. ದೇಶದ ನೋಟಾ ಚಲಾವಣೆಯು ನಾಲ್ಕು ಪ್ರವೃತ್ತಿಗಳನ್ನು ಕಾಣಿಸುತ್ತಿದೆ.

ಮೊದಲನೆಯದಾಗಿ, ಪರಿಶಿಷ್ಟ ಜಾತಿ/ ಪಂಗಡದ ಮೀಸಲಾತಿ ಕ್ಷೇತ್ರಗಳಲ್ಲಿ ಹೆಚ್ಚು ನೋಟಾ ದಾಖಲಾಗಿದೆ. ಎರಡನೆಯದಾಗಿ, ಎಡಪಂಥೀಯ ತೀವ್ರವಾದಿಗಳ ಪ್ರಭಾವ ಹೆಚ್ಚಿರುವ ಕಡೆ ಆಡಳಿತ ವಿರುದ್ಧದ ಅಭಿವ್ಯಕ್ತಿಯಾಗಿ ನೋಟಾ ದಾಖಲಾಗಿದೆ. ಮೂರನೆಯದಾಗಿ, ಕಾಂಗ್ರೆಸ್ ಮತ್ತು ಬಿಜೆಪಿಯ ನೇರಾನೇರ ಸ್ಪರ್ಧೆ ಇರುವೆಡೆ ನೋಟಾ ಚಲಾವಣೆ ಹೆಚ್ಚಾಗಿದೆ. ಇದು ದೇಶದ ಎರಡು ರಾಷ್ಟ್ರೀಯ ಪಕ್ಷಗಳ ಬಗೆಗೆ ಜನರ ತಿರಸ್ಕಾರವನ್ನು ಸಾಂಕೇತಿಸುತ್ತದೆ. ಕೊನೆಯದಾಗಿ, ಮೂಲಭೂತ ಸೌಕರ್ಯಗಳ ಕೊರತೆ ಇರುವ ಕಡೆಗಳಲ್ಲಿ ನೋಟಾ ದಾಖಲಾಗಿದೆ. ಈ ಪ್ರವೃತ್ತಿಗಳನ್ನು ನೋಡಿದರೆ, ಜನರು ರಾಜಕಾರಣಿಗಳ ವಿರುದ್ಧ ಸಿನಿಕವಾಗಿ ನೋಟಾ ಒತ್ತುತ್ತಿಲ್ಲ, ಬದಲಾಗಿ ರಾಜಕೀಯ ವ್ಯವಸ್ಥೆಯ ಬಗೆಗೆ ಅಸಮಾಧಾನಗೊಂಡು ಪ್ರತಿಭಟನೆಯ ಭಾಗವಾಗಿಯೂ ನೋಟಾ ಚಲಾಯಿಸುತ್ತಿದ್ದಾರೆ ಎನ್ನುವುದು ಮನವರಿಕೆಯಾಗುತ್ತದೆ.

ಅತಿ ಹೆಚ್ಚು ನೋಟಾ ಚಲಾವಣೆ ಪರಿಶಿಷ್ಟ ಜಾತಿ/ ಪಂಗಡದ ಮೀಸಲು ಕ್ಷೇತ್ರಗಳಲ್ಲಿ ಎನ್ನುವುದನ್ನು ಗಮನಿಸಬೇಕು. ಮೇಲ್ಜಾತಿ, ಮೇಲ್ವರ್ಗಗಳು ದಲಿತ ಬುಡಕಟ್ಟುಗಳ ರಾಜಕೀಯ ಮೀಸಲಾತಿ ಬಗೆಗೆ ಇರುವ ಅಸಹನೆಯನ್ನು ಹೊರಹಾಕಿವೆ. ಈ ಸಂಖ್ಯೆಯನ್ನು ಸಂವಿಧಾನ ಬದಲಿಸಬಯಸುವವರು ‘ಭಾರತದ ಜನಾಭಿಪ್ರಾಯ ಎಸ್‌ಸಿ, ಎಸ್‌ಟಿಗಳ ರಾಜಕೀಯ ಮೀಸಲಾತಿ ವಿರುದ್ಧವಿದೆ’ ಎಂದು ಬಳಸಿಕೊಳ್ಳುವ ಅಪಾಯವಿದೆ. ಆದರೆ ಈಗಲೂ ಈ ದೇಶದಲ್ಲಿ ಜೀವಂತವಿರುವ ಜಾತಿಪದ್ಧತಿಯ ಅಳತೆಗೋಲಾಗಿ ಅದನ್ನು ಬಳಸಿ, ಎಸ್‌ಸಿ, ಎಸ್‌ಟಿಗಳ ರಾಜಕೀಯ ಮೀಸಲಾತಿ ಪ್ರಮಾಣ ಹೆಚ್ಚಿಸುವ ಬಗ್ಗೆ ಚರ್ಚಿಸಬೇಕಿದೆ.

ನೋಟಾದ ಬಗ್ಗೆ ಜಾಗೃತಿ ಹೆಚ್ಚಾದಂತೆ ಇದರ ಪ್ರಮಾಣ ಸಹ ಹೆಚ್ಚಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಆಗ ಸಹಜವಾಗಿ ಈ ಮತಗಳಿಗೆ ಮೌಲ್ಯ ಬೇಕೆನ್ನುವ ಕೂಗು ಏಳುತ್ತದೆ. ಅಂತಿಮವಾಗಿ, ನೋಟಾ ಚಲಾವಣೆಗೆ ಒಂದು ಮೌಲ್ಯ ದಕ್ಕಿದರೆ ಇಡೀ ರಾಜಕೀಯ ವ್ಯವಸ್ಥೆಯಲ್ಲಿ ಬದಲಾವಣೆಯ ಪರ್ವಕ್ಕೆ ಒಂದು ಅಸ್ತ್ರ ಸಿಕ್ಕಂತಾಗುತ್ತದೆ. ಆಗ ಮತದಾರ ನಿಜಕ್ಕೂ ಪ್ರಭುವಾಗುವ ಸಾಧ್ಯತೆಗಳು ಹೆಚ್ಚತೊಡಗುತ್ತವೆ. ಅಂತೆಯೇ ಪ್ರಜಾಪ್ರಭುತ್ವದಲ್ಲಿ ಸುಧಾರಣೆ ತರಲು ನೋಟಾ ಮತದಾರರಿಗೆ ದೊಡ್ಡ ಶಕ್ತಿಯಾಗುತ್ತದೆ. ಹಾಗಾಗಿ ನೋಟಾ ಬಗೆಗೆ ಸಿನಿಕರಾಗದೆ ಗಂಭೀರವಾಗಿ ಯೋಚಿಸೋಣ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು