ಲಂಕಾದಲ್ಲಿ ಹಿಂಸಾಚಾರ: ಮತ್ತೆ ಕರ್ಫ್ಯೂ

ಶುಕ್ರವಾರ, ಮೇ 24, 2019
29 °C
ಸಿಂಹಳೀಯರು–ಮುಸ್ಲಿಮರ ನಡುವೆ ಘರ್ಷಣೆ; 24ಕ್ಕೂ ಹೆಚ್ಚು ಮಂದಿ ಬಂಧನ

ಲಂಕಾದಲ್ಲಿ ಹಿಂಸಾಚಾರ: ಮತ್ತೆ ಕರ್ಫ್ಯೂ

Published:
Updated:
Prajavani

ಕೊಲಂಬೊ: ಶ್ರೀಲಂಕಾದ ವಾಯವ್ಯ ಪ್ರಾಂತ್ಯದಲ್ಲಿ ಕೋಮು ಗಲಭೆ ಉಂಟಾಗಿದ್ದು, ಮುಸ್ಲಿಂ ವ್ಯಕ್ತಿಯೊಬ್ಬರ ಹತ್ಯೆಯಾಗಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ಮತ್ತೆ ಕರ್ಫ್ಯೂ ಜಾರಿ ಮಾಡಲಾಗಿದೆ. 

ಸಿಂಹಳೀಯರು ದಂಗೆ ಎದ್ದಿದ್ದು, ಈ ಪ್ರಾಂತ್ಯದಲ್ಲಿನ ಮುಸ್ಲಿಂ ಮಾಲೀಕತ್ವದ ಅಂಗಡಿ–ಮುಂಗಟ್ಟುಗಳು ಮತ್ತು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಈಸ್ಟರ್‌ ದಾಳಿಗೆ ಪ್ರತೀಕಾರವಾಗಿ ಈ ಘರ್ಷಣೆ ನಡೆಯುತ್ತಿದೆ ಎಂದು ಸಚಿವರೊಬ್ಬರು ಮಂಗಳವಾರ ಹೇಳಿದ್ದಾರೆ.

ಮುಸ್ಲಿಂ ವ್ಯಕ್ತಿಯ ಹತ್ಯೆಯಾಗಿದೆ ಎಂಬುದನ್ನು ಭದ್ರತಾ ಪಡೆಗಳು ಅಲ್ಲಗಳೆದಿವೆ.

ಭಯೋತ್ಪಾದಕ ದಾಳಿ ನಂತರ ದೇಶದಾದ್ಯಂತ ಹೇರಲಾಗಿದ್ದ ಕರ್ಫ್ಯೂವನ್ನು ಸೋಮವಾರ ಹಿಂಪಡೆಯಲಾಗಿತ್ತು. ಆದರೆ, ವಾಯವ್ಯ ಪ್ರಾಂತ್ಯದಲ್ಲಿ ಮಂಗಳವಾರದಿಂದ ಮತ್ತೆ ಕರ್ಫ್ಯೂ ಹೇರಲಾಗಿದೆ. ಅಲ್ಲದೆ, ಸಾಮಾಜಿಕ ಮಾಧ್ಯಮಗಳ ಬಳಕೆ ಮೇಲೆಯೂ ನಿಷೇಧ ಹೇರಲಾಗಿದೆ. ವದಂತಿಗಳು ಹರಡುವ ಸಾಧ್ಯತೆ ಇರುವುದರಿಂದ ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ ಹಾಗೂ ಟ್ವಿಟ್ಟರ್‌ ಬಳಕೆ ಮೇಲೆ ನಿರ್ಬಂಧ ವಿಧಿಸಲಾಗಿದೆ.

ಹಲವರ ಬಂಧನ: ಕೋಮು ಸಂಘರ್ಷಕ್ಕೆ ಕಾರಣರಾದ 24ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. 

‘ಗಲಭೆಗೆ ಕಾರಣರಾಗಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಈ ಪ್ರಕರಣದಲ್ಲಿ ಬಂಧನಕ್ಕೊಳಗಾಗುವವರಿಗೆ ಯಾವುದೇ ಕಾರಣಕ್ಕೂ ಜಾಮೀನು ನೀಡುವುದಿಲ್ಲ. ಹತ್ತು ವರ್ಷ ಜೈಲಿನಲ್ಲಿ ಕಳೆಯಬೇಕಾಗುತ್ತದೆ’ ಎಂದು ಪೊಲೀಸ್‌ ಮುಖ್ಯಸ್ಥ ಚಂದನ ವಿಕ್ರಮರತ್ನೆ ಎಚ್ಚರಿಸಿದ್ದಾರೆ.

‘ಕರ್ಫ್ಯೂ ಜಾರಿಯಾದ ನಂತರವೂ, ದಂಗೆಕೋರರು ನಮ್ಮ ಆಸ್ತಿಗಳನ್ನು ನಾಶ ಪಡಿಸಿದ್ದಾರೆ. ಅಂಗಡಿ–ಮುಂಗಟ್ಟುಗಳಿಗೆ ಬೆಂಕಿ ಹಚ್ಚಿದ್ದಾರೆ’ ಎಂದು ಮುಸ್ಲಿಮರು ಹೇಳಿದ್ದಾರೆ.

‘ಹಿಂಸಾಚಾರ ನಡೆಯುತ್ತಿದ್ದರೂ ಭದ್ರತಾ ಪಡೆಗಳು ಮತ್ತು ಪೊಲೀಸರು ಮೂಕಪ್ರೇಕ್ಷಕರಾಗಿದ್ದಾರೆ’ ಎಂದೂ ಅವರು ದೂರಿದ್ದಾರೆ.

ತನಿಖೆ ಮೇಲೆ ಪರಿಣಾಮ:  ‘ಬೆರಳೆಣಿಕೆಯಷ್ಟು ಮಂದಿ ಹಿಂಸಾಚಾರ ನಡೆಸುತ್ತಿದ್ದು, ಇದರಿಂದ ಈಸ್ಟರ್‌ ಬಾಂಬ್‌ ದಾಳಿ ಪ್ರಕರಣದ ತನಿಖೆ ಮೇಲೆ ಪರಿಣಾಮ ಬೀರಲಿದೆ. ಈ ಗಲಭೆ ಹಿಂದೆ ಎನ್‌ಟಿಜೆ ಉಗ್ರ ಸಂಘಟನೆ ಕೈವಾಡವಿರುವ ಸಾಧ್ಯತೆ ಇದೆ’ ಎಂದು ಪ್ರಧಾನಿ ರನಿಲ್‌ ವಿಕ್ರಮಸಿಂಘೆ ಹೇಳಿದ್ದಾರೆ. 

‘ಹಿಂಸಾಚಾರವನ್ನು ತಡೆಗಟ್ಟುವಲ್ಲಿ ಶ್ರೀಲಂಕಾ ಸರ್ಕಾರ ಸಂಪೂರ್ಣ ವಿಫಲವಾಗಿದೆ ಮತ್ತು ಅಸಮರ್ಥವಾಗಿದೆ’ ಎಂದು ವಿರೋಧ ಪಕ್ಷದ ನಾಯಕ ಮಹಿಂದ ರಾಜಪಕ್ಸೆ ಟೀಕಿಸಿದ್ದಾರೆ.

2.1 ಕೋಟಿ ಜನಸಂಖ್ಯೆ ಇರುವ ಶ್ರೀಲಂಕಾದಲ್ಲಿ ಸಿಂಹಳೀಯರ ಬೌದ್ಧರು ಬಹುಸಂಖ್ಯಾತರಾಗಿದ್ದಾರೆ. ಶೇ 10ರಷ್ಟು ಇರುವ ಮುಸ್ಲಿಮರು ಹಿಂದೂಗಳ ನಂತರ ಅತಿ ದೊಡ್ಡ ಅಲ್ಪಸಂಖ್ಯಾತ ಸಮುದಾಯದವರಾಗಿದ್ದಾರೆ. ಶೇ 7ರಷ್ಟು ಕ್ರೈಸ್ತರಿದ್ದಾರೆ.

ಸಾಮರಸ್ಯವಿರಲಿ: ವಿಶ್ವಸಂಸ್ಥೆ

ಶ್ರೀಲಂಕಾದಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ವಿಶ್ವಸಂಸ್ಥೆ, ‘ಶ್ರೀಲಂಕಾದ ನಾಗರಿಕ ಎಂದರೆ ಸಾಮರಸ್ಯದ ಪ್ರತಿರೂಪವಾಗಿರಬೇಕು. ಬೌದ್ಧ, ಹಿಂದೂ, ಮುಸ್ಲಿಂ ಮತ್ತು ಕ್ರೈಸ್ತ ಎಲ್ಲದರ ಸಂಗಮ ಶ್ರೀಲಂಕಾ ನಾಗರಿಕ’ ಎಂದು ಅಭಿಪ್ರಾಯಪಟ್ಟಿದೆ. 

‘ಶ್ರೀಲಂಕಾದಲ್ಲಿ ರಾಷ್ಟ್ರೀಯವಾದ ಮತ್ತು ಉಗ್ರವಾದ ಹೆಚ್ಚುತ್ತಿರುವುದಕ್ಕೆ ಈ ಹಿಂಸಾಚಾರ ಸಾಕ್ಷಿಯಾಗಿದೆ. ಶ್ರೀಲಂಕಾ ಬಹುತ್ವ ಸಮಾಜವನ್ನು ಹೊಂದಿರುವ ರಾಷ್ಟ್ರ. ಅಲ್ಪಸಂಖ್ಯಾತರಿಗೆ ಆತಂಕ ಉಂಟು ಮಾಡುವುದು ಸರಿಯಲ್ಲ. ದೇಶದ ಸಂವಿಧಾನದ ಆಶಯದಂತೆ ಎಲ್ಲ ಸಮುದಾಯಗಳು ಶಾಂತಿ ಮತ್ತು ಸುರಕ್ಷತೆಯಿಂದ ಇರುವಂತೆ ಸರ್ಕಾರ ನೋಡಿಕೊಳ್ಳಬೇಕು’ ಎಂದು ವಿಶ್ವಸಂಸ್ಥೆ ಸಲಹೆ ನೀಡಿದೆ.

ಉಗ್ರ ಸಂಘಟನೆಗಳಿಗೆ ನಿಷೇಧ

ಈಸ್ಟರ್‌ ದಿನ ಭಯೋತ್ಪಾದಕ ದಾಳಿ ನಡೆಸಿದ್ದ ನ್ಯಾಷನಲ್‌ ತೌಹೀತ್ ಜಮಾತ್‌ (ಎನ್‌ಟಿಜೆ) ಸೇರಿದಂತೆ ಮೂರು ಇಸ್ಲಾಮಿಕ್‌ ಉಗ್ರ ಸಂಘಟನೆಗಳನ್ನು ಶ್ರೀಲಂಕಾ ಸರ್ಕಾರ ನಿಷೇಧಿಸಿದೆ. 

ಈ ಕುರಿತು ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಆದೇಶ ಹೊರಡಿಸಿದ್ದಾರೆ. ಅಲ್ಲದೆ, ಮುಂದಿನ ಸೂಚನೆ ನೀಡುವವರೆಗೆ ಡ್ರೋಣ್‌ ಹಾರಾಟವನ್ನು ದೇಶದಲ್ಲಿ ನಿಷೇಧಿಸಲಾಗಿದೆ ಎಂದೂ ಅವರು ತಿಳಿಸಿದ್ದಾರೆ. 

ಎನ್‌ಟಿಜೆ ಜತೆಗೆ, ಜಮಾತೆ ಮಿಲಾಯಿತೆ ಇಬ್ರಾಹಿಂ (ಜೆಎಂಐ), ವಿಲಾಯತ್‌ ಆ್ಯಸ್ ಸೆಲಾನಿ (ವಾಸ್) ಸಂಘಟನೆಗಳನ್ನು ನಿಷೇಧಿಸಲಾಗಿದೆ.

ಏಪ್ರಿಲ್‌ 21ರಂದು ಒಂಬತ್ತು ಆತ್ಮಾಹುತಿ ಬಾಂಬರ್‌ಗಳು ಸರಣಿ ಸ್ಫೋಟ ನಡೆಸಿ, 258 ಜನರ ಸಾವಿಗೆ ಕಾರಣರಾಗಿದ್ದರು. ಈ ದಾಳಿಯ ಹೊಣೆಯನ್ನು ಇಸ್ಲಾಮಿಕ್‌ ಸ್ಟೇಟ್‌ ಉಗ್ರ ಸಂಘಟನೆ ಹೊತ್ತುಕೊಂಡಿತ್ತು. ಆದರೆ, ಎನ್‌ಟಿಜೆ ಪಾತ್ರವೂ ಈ ದಾಳಿ ಹಿಂದಿದೆ ಎಂದು ಸರ್ಕಾರ ದೂರಿತ್ತು.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !