ಕರ್ನಾಟಕದಲ್ಲಿ ಬಿಜೆಪಿ ರಾಜಕಾರಣ ತಲುಪಿರುವ ಅಧೋಗತಿಗೆ ಹೊಣೆಗಾರರು ಯಾರು ಎಂಬ ಪ್ರಶ್ನೆ ಕೇಳಿದರೆ ಜನ ಪೈಪೋಟಿಯಿಂದ ಹೆಸರುಗಳನ್ನು ಪಟ್ಟಿಮಾಡಿ ಹೇಳಬಲ್ಲರು. ಬಿ.ಎಸ್.ಯಡಿಯೂರಪ್ಪ, ಬಳ್ಳಾರಿಯ ರೆಡ್ಡಿ ಸೋದರರು, ಪಕ್ಷಾಂತರಿ ಶಾಸಕರು,ಅನಂತಕುಮಾರ್, ಜಗದೀಶ್ ಶೆಟ್ಟರ್, ಡಿ.ವಿ.ಸದಾನಂದಗೌಡ..... ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ಇವರೆಲ್ಲ ತೆರೆಯ ಮುಂದೆ ಕಾಣುತ್ತಿರುವ ಪಾತ್ರಧಾರಿಗಳು. ಇವರ ಹೆಸರೆತ್ತಿ ಮನಸಾರೆ ಬೈದುಬಿಡಬಹುದು, ಸ್ವಲ್ಪ ಧೈರ್ಯಮಾಡಿದರೆ ಕಲ್ಲೆತ್ತಿ ಹೊಡೆಯಲೂಬಹುದು. ಅಂತಹ ಸಾಹಸ ಮಾಡುವ ಧೈರ್ಯ ಇಲ್ಲ ಎಂದಾದರೆ ಮುಂದಿನ ಚುನಾವಣೆಯಲ್ಲಿ ಇವರನ್ನು ಮಣ್ಣುಮುಕ್ಕಿಸಿ ಸೇಡು ತೀರಿಸಿಕೊಳ್ಳಬಹುದು.

ಆದರೆ ನೇಪಥ್ಯದಲ್ಲಿ ಕೂತು ಈ ಪಾತ್ರಗಳನ್ನು ಆಡಿಸುತ್ತಿರುವ ಸೂತ್ರಧಾರರನ್ನು ಏನು ಮಾಡುವುದು? ಇವರು ಯಾರ ಕಣ್ಣಿಗೂ ಕಾಣುವುದಿಲ್ಲ, ಇವರ ಅಂತರಂಗದ ಪಿಸುಮಾತುಗಳು ಹೊರಗಿರುವ ಯಾರಿಗೂ ಕೇಳಿಸುತ್ತಿಲ್ಲ, ಇವರು ವಿಧಾನಸಭೆ ಪ್ರವೇಶಿಸದೆಯೂ ಅಧಿಕಾರವನ್ನು ಅನುಭವಿಸಬಲ್ಲರು, ಜಾತಿವಾದಿ ಎಂದು ಕರೆಸಿಕೊಳ್ಳದೆಯೇ ಜಾತಿಯ ರಾಜಕಾರಣ ಮಾಡಬಲ್ಲರು, ಭ್ರಷ್ಟರನ್ನು ಪೋಷಿಸುತ್ತಲೇ ಪ್ರಾಮಾಣಿಕರು ಎಂಬ ಹಣೆಪಟ್ಟಿ ಹಚ್ಚಿಕೊಂಡು ಓಡಾಡಬಲ್ಲರು.

ಇವರನ್ನು ಕಾಣಬೇಕಾದರೆ ಸಂಘ ಪರಿವಾರದ ಗರ್ಭಗುಡಿಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ಕ್ಕೆ ಪ್ರವೇಶಿಸಬೇಕು. ಸಂಘ ಪರಿವಾರದ ಮಾತೃಸಂಸ್ಥೆಯಾದ ಆರ್‌ಎಸ್‌ಎಸ್ ತನ್ನನ್ನು ಸಾಂಸ್ಕೃತಿಕ ಸಂಘಟನೆ ಎಂದು ಕರೆಸಿಕೊಂಡರೂ ಸಂಸ್ಕೃತಿಯೇತರ ಚಟುವಟಿಕೆಗಳಿಗಾಗಿ ಅದು ಹಲವಾರು ಅಂಗಸಂಸ್ಥೆಗಳನ್ನು ಹುಟ್ಟುಹಾಕಿದೆ.

ರಾಜಕೀಯಕ್ಕಾಗಿ ಬಿಜೆಪಿ (ಮೊದಲು ಜನಸಂಘ), ಧರ್ಮಕ್ಕಾಗಿ ವಿಎಚ್‌ಪಿ, ಹಿಂದೂ ಜಾಗರಣ ಮಂಚ, ಬಜರಂಗದಳ ಇತ್ಯಾದಿ, ವಿದ್ಯಾರ್ಥಿಗಳಿಗಾಗಿ ಎಬಿವಿಪಿ, ಕಾರ್ಮಿಕರಿಗಾಗಿ ಬಿಎಂಎಸ್...ಹೀಗೆ ತರಹೇವಾರಿ ಸಂಘಟನೆಗಳು. ಇದರ ಜತೆಗೆ ನೂರಾರು ಸ್ವಯಂಸೇವಾ ಸಂಸ್ಥೆಗಳು.

ಈ ಎಲ್ಲ ಅಂಗಸಂಸ್ಥೆಗಳ ಯಜಮಾನನ ಸ್ಥಾನದಲ್ಲಿ ಕೂತಿರುವುದು ಆರ್‌ಎಸ್‌ಎಸ್, ಒಂದು ರೀತಿಯಲ್ಲಿ ಇದು ಪರಿವಾರದ ಹೈಕಮಾಂಡ್. ಪರಿವಾರಕ್ಕೆ ಸಂಬಂಧಿಸಿದ ಎಲ್ಲ ನೀತಿ-ನಿರ್ಧಾರಗಳು ಇತ್ಯರ್ಥವಾಗುವುದು ಇದೇ ಗರ್ಭಗುಡಿಯಲ್ಲಿ. ಇದು ತನ್ನ ಆದೇಶಗಳನ್ನು ಪತ್ರಿಕಾಗೋಷ್ಠಿ ಕರೆದು ಇಲ್ಲವೇ ಪತ್ರಿಕಾ ಹೇಳಿಕೆಗಳ ಮೂಲಕ ಜಾರಿಗೊಳಿಸುವುದಿಲ್ಲ.

ಅದೇನಿದ್ದರೂ ಕಣ್ಸನ್ನೆ, ಕೈಸನ್ನೆಯ ಮೂಲಕವೇ ನಡೆಯುತ್ತದೆ. ಈ ಸಂಘಟನೆಯಲ್ಲಿ ಪ್ರಾಮಾಣಿಕತೆ, ತ್ಯಾಗ, ಸಾರ್ವಜನಿಕ ಸೇವೆ ಮತ್ತು ಸರಳ-ಶಿಸ್ತುಬದ್ಧ ಜೀವನಕ್ಕೆ ಅರ್ಪಿಸಿಕೊಂಡ ಅನೇಕ ಹಿರಿಯ ಜೀವಗಳಿದ್ದವು. ಆರ್‌ಎಸ್‌ಎಸ್ ಜತೆಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯವನ್ನು ಇಟ್ಟುಕೊಂಡವರು ಕೂಡಾ ವೈಯಕ್ತಿಕವಾಗಿ ಅವರಿಗೆ ಗೌರವದಿಂದ ತಲೆಬಾಗುತ್ತಿದ್ದರು.

ಆದರೆ ಇಂದಿನ ಆರ್‌ಎಸ್‌ಎಸ್‌ನಲ್ಲಿ ಹಳೆಯ ತಲೆಮಾರಿನ ನಾಯಕರು ಪಳೆಯುಳಿಕೆಯಂತೆ ಅಲ್ಲಲ್ಲಿ ಕಾಣುತ್ತಿದ್ದಾರೆಯೇ ಹೊರತು ಬಹುಸಂಖ್ಯಾತ ನಾಯಕರು ಬೇರೆ ದಾರಿ ಹಿಡಿದಿದ್ದಾರೆ. ಇದಕ್ಕೆ ಮುಖ್ಯ ಕಾರಣ ಆರ್‌ಎಸ್‌ಎಸ್ ತನ್ನ ಮೂಲ ಕ್ಷೇತ್ರಗಳಾದ ಧರ್ಮ ಮತ್ತು ಸಂಸ್ಕೃತಿಯನ್ನು ಪಕ್ಕಕ್ಕಿಟ್ಟು ರಾಜಕೀಯ ಕ್ಷೇತ್ರದಲ್ಲಿ ತೋರುತ್ತಿರುವ ಅತಿಯಾದ ಆಸಕ್ತಿ.

1925ರಲ್ಲಿ ಸ್ಥಾಪನೆಗೊಂಡ ರಾಷ್ಟ್ರೀಯ ಸ್ವಯಂಸೇವಕ ಸಂಘ 1949ರಲ್ಲಿ ಒಪ್ಪಿಕೊಂಡ ಲಿಖಿತ ಸಂವಿಧಾನದ ಪ್ರಕಾರ ನೇರವಾಗಿ ರಾಜಕೀಯ ಚಟುವಟಿಕೆಗಳನ್ನು ನಡೆಸುವಂತಿಲ್ಲ. `ಹಿಂದೂ `ಸಮಾಜ~ದೊಳಗಿನ ವಿಭಿನ್ನ ಗುಂಪುಗಳನ್ನು ಸಂಘಟಿಸುವುದು ಮತ್ತು ಅದನ್ನು `ಧರ್ಮ~ ಮತ್ತು ಸಂಸ್ಕೃತಿಯ ಆಧಾರದಲ್ಲಿ ಪುನರುಜ್ಚೀವನಗೊಳಿಸಿ ಆ ಮೂಲಕ `ಭರತವರ್ಷ~ದ ಸರ್ವಾಂಗೀಣ ಅಭಿವೃದ್ಧಿಯನ್ನು ಸಾಧಿಸುವುದು ಸಂಘದ ಗುರಿ ಮತ್ತು ಉದ್ದೇಶ...~ ಎಂದು ಆರ್‌ಎಸ್‌ಎಸ್ ಒಪ್ಪಿಕೊಂಡಿರುವ ಸಂವಿಧಾನದ ಮೂರನೆ ಪರಿಚ್ಛೇದ ಹೇಳುತ್ತದೆ.

`ಸಂಘಕ್ಕೆ ರಾಜಕೀಯ ಉದ್ದೇಶ ಇಲ್ಲ, ಇದು ಶುದ್ಧವಾಗಿ ಸಾಂಸ್ಕೃತಿಕ ಚಟುವಟಿಕೆಗಳಿಗೆ ಬದ್ಧವಾದ ಸಂಸ್ಥೆ~ ಎಂದು ಪರಿಚ್ಛೇದ 4ರಲ್ಲಿ ಉದ್ದೇಶವನ್ನು ಇನ್ನಷ್ಟು ಸ್ಪಷ್ಟಪಡಿಸಲಾಗಿದೆ. ಇಷ್ಟು ಹೇಳಿದ ನಂತರ ಮುಂದುವರಿಯುತ್ತಾ `...ಸಂಘದ ಸದಸ್ಯರು ರಾಜಕೀಯ ಪಕ್ಷ ಸೇರುವುದಕ್ಕೆ ಅಭ್ಯಂತರ ಇಲ್ಲ...ಮುಂದೊಂದು ದಿನ ರಾಜಕೀಯ ಪಕ್ಷವಾಗಿ ಪರಿವರ್ತನೆಗೊಳ್ಳಲು ಆರ್‌ಎಸ್‌ಎಸ್ ಸ್ವತಂತ್ರವಾಗಿದೆ~ (ಪ್ಯಾರಾ 18 ಮತ್ತು 19) ಎಂದು ಹೇಳಿ ಆರ್‌ಎಸ್‌ಎಸ್ ತನ್ನ ಸಂವಿಧಾನದಲ್ಲಿಯೇ ಅಡ್ಡಗೋಡೆಯ ಮೇಲೆ ದೀಪ ಇಟ್ಟಿದೆ. ಈ ದ್ವಂದ್ವವನ್ನು ಆರ್‌ಎಸ್‌ಎಸ್ ಇತಿಹಾಸದುದ್ದಕ್ಕೂ ಅದರ ನಡವಳಿಕೆಯಲ್ಲಿ ಕಾಣಬಹುದು.

ಸಂವಿಧಾನದಲ್ಲಿ ಅವಕಾಶ ಇರುವಂತೆ ಆರ್‌ಎಸ್‌ಎಸ್ ನೇರವಾಗಿ ರಾಜಕೀಯ ಪಕ್ಷವಾಗಿ ಪರಿವರ್ತನೆಗೊಳ್ಳಲಿಲ್ಲ, ಬದಲಿಗೆ 1951ರಲ್ಲಿ ಜನಸಂಘ ಎಂಬ ರಾಜಕೀಯ ಪಕ್ಷವನ್ನು ಹುಟ್ಟುಹಾಕಿತು. ಇದರ ನಂತರವೂ ಹಿಂದಿನ ಜನಸಂಘ ಇಲ್ಲವೇ ಈಗಿನ ಬಿಜೆಪಿ ತಮ್ಮ ನಿಯಂತ್ರಣಕ್ಕೆ ಒಳಪಟ್ಟಿದೆ ಎಂದು ಅದು ಒಪ್ಪಿಕೊಳ್ಳುವುದಿಲ್ಲ.

ಆದರೆ ವಾಜಪೇಯಿ-ಅಡ್ವಾಣಿಯವರಿಂದ ಹಿಡಿದು ಯಡಿಯೂರಪ್ಪ-ಶೆಟ್ಟರ್ ವರೆಗೆ ಎಲ್ಲರೂ ಆರ್‌ಎಸ್‌ಎಸ್‌ನಿಂದಲೇ ಬಂದವರು ಮತ್ತು ಅದಕ್ಕೆ ನಿಷ್ಠರಾಗಿರುವವರು. ಬಿಜೆಪಿಯ ಸಂಘಟನೆಯಲ್ಲಿ ಮಾತ್ರ ಆರ್‌ಎಸ್‌ಎಸ್‌ನಿಂದ ಎರವಲು ಸೇವೆಯ ರೂಪದಲ್ಲಿ ಬಂದ ಸ್ವಯಂಸೇವಕರಿರುತ್ತಾರೆ.

ಬಿಜೆಪಿಯನ್ನು ಹೊರತುಪಡಿಸಿ ಬೇರೆ ಯಾವ ರಾಜಕೀಯ ಪಕ್ಷದಲ್ಲಿಯೂ ಆರ್‌ಎಸ್‌ಎಸ್ ಜತೆ ತನ್ನನ್ನು ಗುರುತಿಸಿಕೊಳ್ಳುವ ನಾಯಕರಿಲ್ಲ. ಇದೇ ರೀತಿ ಬೇರೆ ರಾಜಕೀಯ ಪಕ್ಷಗಳಿಗೆ ಸೇರಿದ ಯಾವ ನಾಯಕರನ್ನೂ ಕೂಡಾ ಆರ್‌ಎಸ್‌ಎಸ್ `ನಮ್ಮವನು~ ಎಂದು ಒಪ್ಪಿಕೊಳ್ಳುವುದೂ ಇಲ್ಲ.

ಆರ್‌ಎಸ್‌ಎಸ್ ಮತ್ತು ಬಿಜೆಪಿ ಎಂದರೆ ಬೇರೆಬೇರೆ ಅಲ್ಲ, ಅದು ಒಂದೇ ನಾಣ್ಯದ ಎರಡು ಮುಖಗಳು. ಹೀಗಿರುವಾಗ ಬಿಜೆಪಿಯ ಎಲ್ಲ ಒಳ್ಳೆಯ ಮತ್ತು ಕೆಟ್ಟ ನಡವಳಿಕೆಗಳಿಗೆ ಆರ್‌ಎಸ್‌ಎಸ್ ಕೂಡಾ ಹೊಣೆ.

ಈ ಜವಾಬ್ದಾರಿಯಿಂದ ಅದು ನುಣುಚಿಕೊಳ್ಳಲಾಗುವುದಿಲ್ಲ. ಹೊಲಸು ರಾಜಕಾರಣದ ಮೂಲಕ ಗಳಿಸುವ ರಾಜಕೀಯ ಅಧಿಕಾರ ಬೇಕು, ಆದರೆ ಅದರ ನೈತಿಕ ಹೊಣೆಗಾರಿಕೆ ಬೇಡ ಎನ್ನುವುದು ಆರ್‌ಎಸ್‌ಎಸ್‌ನ ಆತ್ಮವಂಚನೆಯ ಮುಖವನ್ನಷ್ಟೇ ಅನಾವರಣಗೊಳಿಸುತ್ತದೆ. ದೇಶದ ಎದುರು ರಾಜ್ಯದ ಜನತೆ ತಲೆತಗ್ಗಿಸಬೇಕಾಗಿ ಬಂದಿರುವ ಇಂದಿನ ನೀತಿಭ್ರಷ್ಟ ರಾಜಕಾರಣದ ಮೂಲ `ಆಪರೇಷನ್ ಕಮಲ~ ಎಂಬ ಅನೈತಿಕ ರಾಜಕಾರಣದಲ್ಲಿದೆ.

ಶಾಖೆಗಳಲ್ಲಿ ಸೇರುವ ಸ್ವಯಂಸೇವಕರಿಗೆ ಪ್ರಾಮಾಣಿಕತೆಯ ಪಾಠ ಹೇಳುವ ಆರ್‌ಎಸ್‌ಎಸ್ ನಾಯಕರಿಂದ ಇದನ್ನು ತಡೆಯಲು ಸಾಧ್ಯ ಇರಲಿಲ್ಲವೇ? ಈ ರೀತಿಯ ಮಾರ್ಗದರ್ಶನ ನೀಡಲಿಕ್ಕಾಗಿಯೇ ಅಲ್ಲವೇ, ಸಂಘ ತನ್ನ ಪ್ರತಿನಿಧಿಯನ್ನು ಪಕ್ಷದ ಸಂಘಟನೆಗೆ ಎರವಲು ಸೇವೆ ಮೂಲಕ ಕಳುಹಿಸುವುದು.

ಇಷ್ಟೆಲ್ಲ ಅವಾಂತರಗಳು ನಡೆಯುತ್ತಿದ್ದಾಗ ಸಂಘಟನಾ ಕಾರ್ಯದರ್ಶಿ ಎಂಬ ಆ ಮಹಾನುಭಾವರು ಏನು ಮಾಡುತ್ತಿದ್ದರು? ದೇಶ ಭಕ್ತಿ ಎಂದರೆ ಭಾರತಮಾತೆಯ ಭಾವಚಿತ್ರಕ್ಕೆ ಪೂಜೆ ಮಾಡಿ, ಮುಸ್ಲಿಮರ ವಿರುದ್ಧ ಘೋಷಣೆ ಕೂಗುವುದು ಮಾತ್ರವೇ? ಸತ್ಯ, ನ್ಯಾಯ ಮತ್ತು ಪ್ರಾಮಾಣಿಕತೆಯ ಹಾದಿಯಲ್ಲಿ ನಡೆಯುವುದು ಕೂಡಾ ದೇಶಭಕ್ತಿ ಅಲ್ಲವೇ?

ವಿಚಿತ್ರವೆಂದರೆ ಸಚ್ಚಾರಿತ್ರ್ಯ ಮತ್ತು ಮೌಲ್ಯಾಧರಿತ ರಾಜಕಾರಣದ ಬಗ್ಗೆ ಉಪನ್ಯಾಸ ನೀಡುವ ಆರ್‌ಎಸ್‌ಎಸ್ ನಾಯಕರಿಗೆ ಈಗ ಜೈಲಲ್ಲಿರುವ ಜನಾರ್ದನ ರೆಡ್ಡಿ ಅವರನ್ನು ಪಕ್ಕದಲ್ಲಿ ಕೂರಿಸಿಕೊಂಡಾಗ ಯಾವ ಮುಜುಗರವೂ ಆಗಲಿಲ್ಲ. ತಾವು ಖಾಸಗಿಯಾಗಿ ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳು ಮತ್ತು ಸಂಘ ಸಂಸ್ಥೆಗಳಿಗೆ ಬಳ್ಳಾರಿಯ ಗಣಿಲೂಟಿಕೋರರಿಂದ ಕೈತುಂಬಾ ದೇಣಿಗೆ ಪಡೆಯುತ್ತಿದ್ದಾಗ ಸಂಘದ ನಾಯಕರಿಗೆ ಯಾವ ಆತ್ಮಸಾಕ್ಷಿಯೂ ಕಾಡಲಿಲ್ಲ.

ಯಡಿಯೂರಪ್ಪ ಒಬ್ಬ ರಾಜಕಾರಣಿ, ಅಡ್ಡಮಾರ್ಗದಿಂದ ಗಳಿಸಿದ ಹಣವನ್ನು ದೇಣಿಗೆ ಪಡೆದು ಅವರು ರಾಜಕಾರಣ ಮಾಡಿದಾಗ ತಪ್ಪು ಎಂದು ಹೇಳಬಹುದು, ಆದರೆ ಅಸಹಜ ಎಂದು ಹೇಳಲಾಗುವುದಿಲ್ಲ. ಆದರೆ ಆರ್‌ಎಸ್‌ಎಸ್? ತನ್ನ ಆರು ಅಂಗ ಸಂಸ್ಥೆಗಳು ಮತ್ತು ಮತ್ತು ಏಳು ಮಂದಿ ನಾಯಕರಿಗೆ ಯಡಿಯೂರಪ್ಪ ಸರ್ಕಾರ ಅಂದಾಜು 50 ಕೋಟಿ ರೂಪಾಯಿ ಬೆಲೆಬಾಳುವ ಜಮೀನನ್ನು ನೀಡಿದೆ ಎಂಬ ಆರೋಪವನ್ನು ಆರ್‌ಎಸ್‌ಎಸ್ ನಿರಾಕರಿಸುವ ಸ್ಥಿತಿಯಲ್ಲಿದೆಯೇ? ಇದು ಅನೈತಿಕ ಎಂದು ಅನಿಸಲಿಲ್ಲವೇ?

ವಾಸ್ತವ ಸಂಗತಿ ಏನೆಂದರೆ ಆರ್‌ಎಸ್‌ಎಸ್‌ಗೆ ಕೂಡಾ ರಾಜಕೀಯ ಅಧಿಕಾರ ಬೇಕು ಮತ್ತು ಅದರ ಮೂಲಕ ಸುಲಭದಲ್ಲಿ ಬರುವ ಸುಖ-ಸಂತೋಷಗಳನ್ನು ಅನುಭವಿಸಬೇಕು.

ತನ್ನ ಮಾತಿಗೆ ಗೋಣು ಆಡಿಸುವ ನಾಯಕರನ್ನಷ್ಟೇ ಅದು ಸಹಿಸಿಕೊಳ್ಳುತ್ತದೆ, ನಿರಾಕರಿಸಿದರೆ ಅದು ವಾಜಪೇಯಿ-ಅಡ್ವಾಣಿ ಇರಲಿ, ಯಡಿಯೂರಪ್ಪ - ಸದಾನಂದಗೌಡರಿರಲಿ ಯಾರ ಗೋಣು ಮುರಿಯಲೂ ಹಿಂದೆಮುಂದೆ ನೋಡುವುದಿಲ್ಲ. ಯಡಿಯೂರಪ್ಪನವರ ಪದಚ್ಯುತಿಗೆ ಆರ್‌ಎಸ್‌ಎಸ್ ಒತ್ತಡ ಹೇರಲು ಭ್ರಷ್ಟಾಚಾರದ ಆರೋಪಗಳಷ್ಟೇ ಕಾರಣ ಅಲ್ಲ, ರಾಜ್ಯದ ಒಂದು ಪ್ರಬಲ ಕೋಮಿಗೆ ಸೇರಿದ ನಾಯಕನೊಬ್ಬ ತಮ್ಮ ನಿಯಂತ್ರಣವನ್ನು ಮೀರಿ ಬೆಳೆಯುತ್ತಿದ್ದಾರೆ ಎಂಬ ಅಸುರಕ್ಷತೆಯೂ ಕಾರಣ.

ಅದೇ ರೀತಿ ಯಡಿಯೂರಪ್ಪನವರು ಸದಾನಂದಗೌಡರ ತಲೆದಂಡ ಕೇಳಿದ್ದನ್ನು ಬೆಂಬಲಿಸಲು ಗೌಡರು ತಮ್ಮ ತಾಳಕ್ಕೆ ತಕ್ಕಂತೆ ಕುಣಿಯುತ್ತಿಲ್ಲ ಎನ್ನುವ ಅಸಮಾಧಾನವೂ ಕಾರಣ.

ಇಲ್ಲದೆ ಇದ್ದರೆ ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲ ಬಾರಿ ರಾಜ್ಯದ ಜನತೆ ಪಕ್ಷಭೇಧ ಮರೆತು ಸಜ್ಜನ, ಪ್ರಾಮಾಣಿಕ ಎಂದು ಕೊಂಡಾಡುತ್ತಿದ್ದ ಮುಖ್ಯಮಂತ್ರಿಯ ಬದಲಾವಣೆಗೆ ಆರ್‌ಎಸ್‌ಎಸ್ ಒಪ್ಪಿಕೊಳ್ಳಲು ಹೇಗೆ ಸಾಧ್ಯ? ಗೌಡರು ಶಾಖೆಗಳಲ್ಲಿ ಹೇಳಿಕೊಟ್ಟಿದ್ದ ಪಾಠಕ್ಕೆ ತಕ್ಕಂತೆ ನಡೆದುಕೊಳ್ಳುತ್ತಾ ಬಂದರೂ ಆರ್‌ಎಸ್‌ಎಸ್ ಯಾಕೆ ಅವರ ಕೈಬಿಟ್ಟಿತು? ಉಳಿದೆಲ್ಲ ಕಳಂಕಿತ ಕಡತಗಳ ಜತೆಯಲ್ಲಿ ಆರ್‌ಎಸ್‌ಎಸ್ ನಾಯಕರ ಶಿಫಾರಸನ್ನೊಳಗೊಂಡ ಕಡತಗಳನ್ನೂ ಗೌಡರು ಪಕ್ಕಕ್ಕೆ ತೆಗೆದಿಟ್ಟರೇ? ಈಗಿನ ಆರ್‌ಎಸ್‌ಎಸ್ ಅಖಂಡ ಹಿಂದುತ್ವಕ್ಕೆ ಅರ್ಪಿಸಿಕೊಂಡ ಸಂಸ್ಥೆಯಾಗಿ ಉಳಿದಿಲ್ಲ.

ಅಲ್ಲಿಯೂ ಜಾತಿ, ಪ್ರಾದೇಶಿಕತೆ, ಸ್ವಾರ್ಥ, ದ್ವೇಷ, ಅಸೂಯೆಗಳಿವೆ. ಮುಖ್ಯಮಂತ್ರಿ ಕುರ್ಚಿಯಿಂದ ಯಡಿಯೂರಪ್ಪನವರು ಇಳಿದದ್ದು, ಗೌಡರು ಹತ್ತಿದ್ದು, ಈಗ ಗೌಡರು ಇಳಿದು ಶೆಟ್ಟರ್ ಹತ್ತಿದ್ದು ಹೊರನೋಟಕ್ಕೆ ಕಾಣುವಷ್ಟು ಸುಲಭದಲ್ಲಿ ನಡೆದಿಲ್ಲ. ಇದರ ಹಿಂದೆ ಸೂತ್ರಹಿಡಿದು ಆಡಿಸುತ್ತಿರುವವರು ಮೈ.ಚ.ಜಯದೇವ, ಕಲ್ಲಡ್ಕ ಪ್ರಭಾಕರ ಭಟ್ಟ ಮತ್ತು ದತ್ತಾತ್ರೇಯ ಹೊಸಬಾಳೆ ಎಂಬ ಆರ್‌ಎಸ್‌ಎಸ್‌ನ ಮೂವರು ಪ್ರಮುಖ ನಾಯಕರು. ಇವರಲ್ಲಿ ಅತ್ಯಂತ ವಿವಾದಾತ್ಮಕ ನಾಯಕರಾದ ಪ್ರಭಾಕರ ಭಟ್ಟರು ಈಗ ಕುಂದಾಪುರದ ಸಜ್ಜನ ಶಾಸಕ ಹಾಲಾಡಿ ಶ್ರಿನಿವಾಸ ಶೆಟ್ಟಿಯವರ ಸಾತ್ವಿಕ ಸಿಟ್ಟಿಗೆ ಈಡಾಗಿದ್ದಾರೆ.

ರಾಜ್ಯದಂತೆ ಕೇಂದ್ರದಲ್ಲಿಯೂ ಈ ಅಧಿಕಾರದ ಆಟ ಸಾಗಿದೆ. ವಾಜಪೇಯಿ-ಅಡ್ವಾಣಿಯವರಂತಹ ಹಿರಿಯ ಮತ್ತು ಜನಪ್ರಿಯ ನಾಯಕರಿದ್ದಾಗ ಬಾಲ ಮುದುಡಿಕೊಂಡಿದ್ದ ಆರ್‌ಎಸ್‌ಎಸ್ ಅವರು ನೇಪಥ್ಯಕ್ಕೆ ಸರಿಯುತ್ತಿದ್ದಂತೆಯೇ ಇಡೀ ಪಕ್ಷವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡು ಬಿಟ್ಟಿದೆ.

ಎಲ್.ಕೆ.ಅಡ್ವಾಣಿಯವರಂತಹ ಹಿರಿಯ ನಾಯಕನ ವಿರುದ್ಧ ನಿತಿನ್ ಗಡ್ಕರಿಯವರಂತಹ ಯಃಕಶ್ಚಿತ್ ನಾಯಕನನ್ನು ಎತ್ತಿಕಟ್ಟಿದೆ. ನರೇಂದ್ರಮೋದಿಯವರನ್ನು ಮಣಿಸಲು ಹೋಗಿ ಸಾಧ್ಯವಾಗದೆ ಸದ್ಯಕ್ಕೆ ಅವರಿಗೆ ಶರಣಾಗಿದೆ.

ಹೇಳುವವರು-ಕೇಳುವವರು ಇಲ್ಲದ ಪುಂಡುಪೋಕರಿಯಂತೆ ಬಿಜೆಪಿ ಬೆಳೆಯಲು ದುರ್ಬಲ ಹೈಕಮಾಂಡ್ ಕಾರಣ ಎಂಬ ಆರೋಪ ಪಕ್ಷದ ಒಳಗೆ ಮತ್ತು ಹೊರಗೆ ಕೇಳಿಬರುತ್ತಿದೆ. ಅದು ದುರ್ಬಲಗೊಳ್ಳಲು ಮುಖ್ಯ ಕಾರಣ- ಪರ್ಯಾಯ ಹೈಕಮಾಂಡ್ ಆಗಿ ಕಾರ್ಯನಿರ್ವಹಿಸುತ್ತಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ. ಇದು ರಾಜಕೀಯ ರಂಗಸ್ಥಳದ ನೇಪಥ್ಯದಲ್ಲಿ ಸೂತ್ರ ಹಿಡಿದುಕೊಂಡು ನಿಂತಿದೆ. ನಾಟಕ ಕೆಟ್ಟರೆ ಪಾತ್ರಧಾರಿಗಳಿಗೆ ಜನ ಕಲ್ಲು ಹೊಡೆಯುತ್ತಾರೆ, ಮರೆಯಲ್ಲಿ ನಿಂತ ಸೂತ್ರಧಾರರು ಸುರಕ್ಷಿತ.

(ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.