ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಭಾಗಿತ್ವದ ಮೂಲಕ ಪ್ರತಿಭೆಯ ಅನಾವರಣ

Last Updated 15 ಜನವರಿ 2011, 11:20 IST
ಅಕ್ಷರ ಗಾತ್ರ

ಮೀಸಲಾತಿಯ ಕುರಿತ ಚರ್ಚೆಯಲ್ಲಿ ನಾವು ಮೀಸಲಾತಿ ಎಂಬ ತತ್ವವನ್ನು ಇಲ್ಲಿಯ ತನಕ ಅವಮಾನಾಧಾರಿತವಾಗಿ ಮಾತ್ರ ಗ್ರಹಿಸಿದ್ದೆವು. ಈ ಕಾಲದಲ್ಲಿ ಅದಕ್ಕೆ ಕೇವಲ ಅವಮಾನ ಮಾತ್ರ ಆಧಾರವಾದರೆ ಸಾಕಾಗದು; ಯಾರು ತಮ್ಮ ತಂತ್ರಜ್ಞಾನಗಳನ್ನು ಕಳೆದುಕೊಳ್ಳುತ್ತಾರೋ ಅವರಿಗೂ ಮೀಸಲಾತಿ ಇರಬೇಕು ಎಂದಿದ್ದೆ. ನಾನು ಹೀಗೆ ಹೇಳಿದ್ದಕ್ಕೆ ಒಂದು ಕಾರಣವಿದೆ

. ಸದ್ಯ ಮೀಸಲಾತಿ ಜಾರಿಗೆ ಬರುತ್ತಿರುವ ವಿಧಾನ ಹೇಗಿದೆಯೆಂದರೆ ಒಂದು ಲೆದರ್ ಟೆಕ್ನಾಲಜಿ ಇನ್ಸ್‌ಟಿಟ್ಯೂಟ್ ಮಾಡಿದರೆ ಅದಕ್ಕೆ ಪ್ರವೇಶ ಪಡೆಯಲು ಎಸ್‌ಎಸ್‌ಎಲ್‌ಸಿಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾಗಿರಬೇಕು. ಇಷ್ಟಾದ ಮೇಲೆ ಆ ಇನ್ಸ್‌ಟಿಟ್ಯೂಟ್‌ನವರು ನಡೆಸುವ ಪ್ರವೇಶ ಪರೀಕ್ಷೆಯಲ್ಲಿ ಪಾಸಾಗಬೇಕು. ಅಂದರೆ ಇದು ಯಾವ ಚಮ್ಮಾರನ ಮಗನಿಗೂ ಸೀಟು ಸಿಗದಂಥ ವ್ಯವಸ್ಥೆ.

ಯಾವತ್ತೂ ಚಪ್ಪಲಿಯ ಬಗ್ಗೆ ಆಲೋಚನೆಯನ್ನೇ ಮಾಡದ, ಆದರೆ ಎಸ್‌ಎಸ್‌ಎಲ್‌ಸಿಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾಗಿ, ಇನ್ಸ್‌ಟಿಟ್ಯೂಟ್ ನಡೆಸುವ ಪ್ರವೇಶ ಪರೀಕ್ಷೆಯಲ್ಲಿ ಒಳ್ಳೆಯ ಅಂಕವನ್ನು ಪಡೆದ ವಿದ್ಯಾರ್ಥಿ ಇಲ್ಲಿ ಸೀಟು ಪಡೆಯುತ್ತಾನೆ. ಹೀಗೆ ಸೀಟು ಪಡೆದವರನ್ನು ನಾವು ‘ಪ್ರತಿಭಾವಂತರು’ ಎಂದು ಕರೆಯುತ್ತೇವೆ.

ಕೇರಳದ ಶೈಕ್ಷಣಿಕ ಭೂಪಟ ವಿಶಿಷ್ಟವಾದುದು. ಶಿಕ್ಷಣವನ್ನು ವ್ಯಾಪಕವಾಗಿಸಲು ಇಲ್ಲಿ ನಡೆದಿರುವ ಪ್ರಯತ್ನಗಳಿಗೆಲ್ಲಾ ಒಂದು ಜನಾಂದೋಲನದ ಸ್ವರೂಪವಿದೆ. ಶಿಕ್ಷಣವನ್ನು ಎಲ್ಲೆಲ್ಲಿಯೂ ಎಲ್ಲರಿಗೂ ತಲುಪಿಸುವ ಉದ್ದೇಶದಿಂದ ಮಿಶನರಿಗಳು ಸ್ಥಾಪಿಸಿದ ಶಿಕ್ಷಣ ಸಂಸ್ಥೆಗಳು, ಇವುಗಳ ಪ್ರೇರಣೆಯಿಂದ ಇತರ ಸಮುದಾಯಗಳವರು ಆರಂಭಿಸಿದ ಶಿಕ್ಷಣ ಸಂಸ್ಥೆಗಳ ಸಂಖ್ಯೆಯ ಮುಂದೆ ಸರ್ಕಾರಿ ಶಿಕ್ಷಣ ಸಂಸ್ಥೆಗಳ ಸಂಖ್ಯೆ ಸಣ್ಣದು.

ಖಾಸಗಿಯವರು ಸ್ಥಾಪಿಸಿರುವ ಶಿಕ್ಷಣ ಸಂಸ್ಥೆಗಳಲ್ಲಿಯೂ ಎರಡು ವಿಧ. ಕೆಲವಕ್ಕೆ ಸರ್ಕಾರ ವೇತನಾನುದಾನ ಕೊಡುತ್ತಿದೆ.ಇತ್ತೀಚಿನ ವರ್ಷಗಳಲ್ಲಿ ಆರಂಭವಾಗಿರುವ ಸಂಸ್ಥೆಗಳಿಗೆ ವೇತನಾನುದಾನವಿಲ್ಲ. ಅಲ್ಪಸಂಖ್ಯಾತರ ಒಡೆತನದಲ್ಲಿ ನಡೆಯುತ್ತಿರುವ ಶಿಕ್ಷಣ ಸಂಸ್ಥೆಗಳ ಸಂಖ್ಯೆ ಇಲ್ಲಿ ಉಳಿದೆಡೆಗಳಿಗಿಂತ ಹೆಚ್ಚು.

ಇವಕ್ಕೆ ಸಾಂವಿಧಾನಿಕವಾಗಿ ಇರುವ ಹಕ್ಕುಗಳು ವರ್ತಮಾನದ ಶಿಕ್ಷಣದ ವ್ಯಾಪಾರೀಕರಣಕ್ಕೆ ಬಳಕೆಯಾಗುವ ವಿಚಿತ್ರ ಸ್ಥಿತಿ ಇಲ್ಲಿಯೂ ಇದೆ. ಈ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಉನ್ನತ ಶಿಕ್ಷಣದ ಸುಧಾರಣೆಗಾಗಿ ಮಾಡಿರುವ ಶಿಫಾರಸುಗಳ ಸಾರಾಂಶವನ್ನು ಇಲ್ಲಿ ಹೇಳಲು ಪ್ರಯತ್ನಿಸುತ್ತೇನೆ.

****
ಗುಣಮಟ್ಟದ ಶಿಕ್ಷಣ ಎಲ್ಲೆಡೆ ಎಲ್ಲರಿಗೆ ಎಂಬುದನ್ನು ಕೇವಲ ಪ್ರಾಥಮಿಕ ಶಿಕ್ಷಣ ಕ್ಷೇತ್ರಕ್ಕಷ್ಟೇ ಅನ್ವಯಿಸಿ ನೋಡುತ್ತಿದ್ದೇವೆ.ಇದನ್ನು ಉನ್ನತ ಶಿಕ್ಷಣ ಕ್ಷೇತ್ರಕ್ಕೂ ಅನ್ವಯಿಸಿ ಶಿಕ್ಷಣ ನೀತಿಯನ್ನು ಅನುಷ್ಠಾನಗೊಳಿಸಬೇಕು. ಈ ದೃಷ್ಟಿಯಲ್ಲಿ ಶೈಕ್ಷಣಿಕ ಸುಧಾರಣೆಗಳನ್ನು ಗ್ರಹಿಸಿದಾಗ ಸುಧಾರಣೆಯೆಂಬುದು ಕೇವಲ ಒಂದು ಕ್ಷೇತ್ರಕ್ಕೆ ಸೀಮಿತವಾಗಿ ಉಳಿಯುವುದಿಲ್ಲ.

ಉನ್ನತ ಶಿಕ್ಷಣದಲ್ಲಿ ಗುಣಮಟ್ಟ ಸಾಧ್ಯವಾಗುವುದಕ್ಕೆ ಪ್ರಾಥಮಿಕ ಮಟ್ಟದಲ್ಲಿನ ಶಿಕ್ಷಣದ ಗುಣಮಟ್ಟವೂ ಉತ್ತಮವಾಗಿರಬೇಕು. ಪ್ರಾಥಮಿಕ ಮಟ್ಟದಲ್ಲಿ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವುದಕ್ಕೆ ಅಲ್ಲಿಗೆ ಶಿಕ್ಷಕರನ್ನು ಪೂರೈಸುವ ಉನ್ನತ ಶಿಕ್ಷಣದ ವಿಧಿ ವಿಧಾನಗಳಲ್ಲಿ ಬದಲಾವಣೆಗಳಾಗಬೇಕಾಗುತ್ತದೆ.  ಈ ಒಟ್ಟಂದದ ಗ್ರಹಿಕೆಯಲ್ಲಿ ರೂಪುಗೊಳ್ಳುವ ಶೈಕ್ಷಣಿಕ ನೀತಿಗಳಷ್ಟೇ ಈ ಸಮಸ್ಯೆಯನ್ನು ಸಮರ್ಪಕವಾಗಿ ನಿವಾರಿಸಲು ಸಾಧ್ಯ.

ಶಿಕ್ಷಣದ ಪ್ರಜಾಪ್ರಭುತ್ವೀಕರಣದ ಕ್ರಿಯೆಗೆ ಪ್ರೌಢಶಾಲಾ ಹಂತದ ತನಕ ಸಾಮಾನ್ಯ ಶಾಲೆಗಳ ಪರಿಕಲ್ಪನೆಯನ್ನು ಜಾರಿಗೆ ತರಬೇಕು. ಇದರ ಜೊತೆ ಜೊತೆಯಲ್ಲೇ ಉನ್ನತ ಶಿಕ್ಷಣವನ್ನು ಎಲ್ಲರಿಗೂ ತಲುಪಿಸುವ ಕ್ರಿಯೆ ಆರಂಭವಾಗಬೇಕು. ಇದು ಉನ್ನತ ಶಿಕ್ಷಣದ ಕ್ಷೇತ್ರದ ಸುಧಾರಣೆಯ ಮುನ್ನುಡಿಯಾಗುತ್ತದೆ.

ಸಮಾನತೆ, ಉತ್ಕೃಷ್ಟತೆ ಮತ್ತು ವಿಸ್ತರಣೆಗಳು ಉನ್ನತ ಶಿಕ್ಷಣ ಸುಧಾರಣೆಯ ಮೂರು ಮುಖ್ಯ ಅಂಶಗಳಾಗಿರಬೇಕು. ಸಮಾನತೆಯನ್ನು ಖಾತರಿಪಡಿಸಿಕೊಳ್ಳಲು ಈಗ ಇರುವ ಮೀಸಲಾತಿಯಂಥ ಮಾರ್ಗಗಳ ಜೊತೆಗೆ ಖಾಸಗಿ ಅನುದಾನಿತ ಮತ್ತು ಅನುದಾನರಹಿತ ಶಿಕ್ಷಣ ಸಂಸ್ಥೆಗಳು ಸಮಾಜಕ್ಕೆ ಉತ್ತರದಾಯಿಯನ್ನಾಗಿ ಮಾಡುವ ಹೊಸ ನಿಯಮಗಳನ್ನು ರೂಪಿಸುವ ಅಗತ್ಯವಿದೆ.

ಈ ಸಂಸ್ಥೆಗಳ ಒಳಾಡಳಿತದಲ್ಲಿ ಪ್ರಜಾಸತ್ತಾತ್ಮಕತೆ ಮತ್ತು ಪಾರದರ್ಶಕತೆಯನ್ನು ತರುವುದಕ್ಕಾಗಿ ಆಡಳಿತ ಮಂಡಳಿಗಳಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿ ಪ್ರತಿನಿಧಿಗಳಿಗೂ ಅವಕಾಶವಿರುವಂತೆ ನೋಡಿಕೊಳ್ಳಬೇಕು. ಹಾಗೆಯೇ ಸಮಾನತೆಯನ್ನು ಖಾತರಿಪಡಿಸಿಕೊಳ್ಳಲು ಸರ್ಕಾರವೇ ನಡೆಸುವ ಪ್ರವೇಶ ಪರೀಕ್ಷೆಯೇ ಪ್ರವೇಶಕ್ಕೆ ಮಾನದಂಡವಾಗಿರಬೇಕು.

ಆರ್ಥಿಕವಾಗಿ ದುರ್ಬಲರಾಗಿರುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಖಾಸಗಿ ಆಡಳಿತದ ಸಂಸ್ಥೆಗಳಲ್ಲೂ ವಿದ್ಯಾರ್ಥಿವೇತನದಂಥ ಸವಲತ್ತುಗಳಿರಬೇಕು. ವಿಷಯವಾರು ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸುವ ಹೊಸ ಪ್ರವೃತ್ತಿಯೊಂದು ಇತ್ತೀಚೆಗೆ ಎಲ್ಲೆಡೆ ಕಾಣಿಸಿಕೊಳ್ಳುತ್ತಿದೆ.

ಇದು ವಿಶ್ವವಿದ್ಯಾನಿಲಯಗಳ ಮೂಲ ಕಲ್ಪನೆಗೇ ವಿರುದ್ಧವಾದ ಪ್ರವೃತ್ತಿ. ಜೊತೆಗೆ ಬಹುಶಿಸ್ತೀಯ ಅಧ್ಯಯನಗಳ ಮೂಲಕ ಹೊಸ ಅರಿವನ್ನು ಪಡೆಯುವ ಸಾಧ್ಯತೆಯನ್ನೇ ಇಲ್ಲವಾಗಿಸುತ್ತದೆ. ಈ ರೀತಿ ವಿಷಯವಾರು ವಿಶ್ವವಿದ್ಯಾಲಯಗಳ ಬದಲಿಗೆ ವಿಶ್ವವಿದ್ಯಾಲಯಗಳ ವ್ಯಾಪ್ತಿಯೊಳಗೇ ನಿರ್ದಿಷ್ಟ ವಿಷಯಗಳಲ್ಲಿ ಉತ್ಕೃಷ್ಟತೆಯನ್ನು ಸಾಧಿಸುವ ಸಂಸ್ಥೆಗಳನ್ನು ಗುರುತಿಸಿ ಅವುಗಳಿಗೆ ಪ್ರೋತ್ಸಾಹ ನೀಡಬೇಕು.

ಆಗ ಒಂದೇ ವಿಶ್ವವಿದ್ಯಾಲಯದ ಪರಿಧಿಯೊಳಗೆ ವಿವಿಧ ವಿಷಯಗಳಲ್ಲಿ ಉತ್ಕೃಷ್ಟತೆ ಸಾಧ್ಯವಾಗುತ್ತದೆ. ಇದು ಜ್ಞಾನಶಾಖೆಗಳ ನಡುವಣ ಕೊಡುಕೊಳ್ಳುವಿಕೆಗೆ ಅವಕಾಶ ಕಲ್ಪಿಸುತ್ತದೆ. ಇಂಗ್ಲಿಷ್ ಈಗ ಅಂತರ್ಜಾಲ ಮತ್ತು ಅಂತರರಾಷ್ಟ್ರೀಯ ವ್ಯಾಪಾರದ ಭಾಷೆಯೂ ಆಗಿರುವುದರಿಂದ ಪಾಲಕರು ಸಹಜವಾಗಿಯೇ ತಮ್ಮ ಮಕ್ಕಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಅತ್ತ ಹೋಗುತ್ತಿದ್ದಾರೆ.

ಒಂದು ಪ್ರಬುದ್ಧ ಸಮಾಜ ಸೃಷ್ಟಿಯಾಗುವುದು ಕೇವಲ ತಂತ್ರಜ್ಞರು ಮತ್ತು ಮ್ಯಾನೇಜ್‌ಮೆಂಟ್ ತಜ್ಞರಿಂದಷ್ಟೇ ಅಲ್ಲ.ಸಮಾಜ ವಿಜ್ಞಾನಗಳ ಕಲಿಕೆಗೆ ಈಗಲೂ ಮಾತೃಭಾಷಾ ಮಾಧ್ಯಮವೇ ಅನುಕೂಲಕರ. ಮಾತೃಭಾಷೆಯಲ್ಲೇ ಸಮಾಜ ವಿಜ್ಞಾನಗಳ ಕಲಿಕೆಯನ್ನು ಪ್ರೇರೇಪಿಸುತ್ತಲೇ ಇಂಗ್ಲಿಷ್‌ನಲ್ಲಿ ಗ್ರಹಿಸುವ ಮತ್ತು ಅಭಿವ್ಯಕ್ತಿಸುವ ಕೌಶಲ್ಯವನ್ನು ಕಲಿಸಬೇಕು.

ಇಂಗ್ಲಿಷ್ ಈಗ ಅಂತರರಾಷ್ಟ್ರೀಯ ಬೌದ್ಧಿಕ ಸಂವಹನದ ಭಾಷೆಯೂ ಆಗಿರುವುದನ್ನು ನಾವು ಮರೆಯಬಾರದು.ಮಾತೃಭಾಷೆಯಲ್ಲಿಯೇ ಅಧ್ಯಯನ ನಡೆಸುವುದನ್ನು ಪ್ರೋತ್ಸಾಹಿಸಿ ಹೀಗೆ ರಚಿತವಾದ ಸಂಶೋಧನಾ ಪ್ರಬಂಧಗಳನ್ನು ಇಂಗ್ಲಿಷ್‌ಗೆ ಅನುವಾದಿಸುವ ವ್ಯವಸ್ಥೆಯೊಂದನ್ನು ರೂಪಿಸಬೇಕು.

ವಿಶ್ವವಿದ್ಯಾಲಯ ಧನ ಸಹಾಯ ಆಯೋಗ (ಯುಜಿಸಿ) ಸ್ವಾಯತ್ತ ಕಾಲೇಜುಗಳ ಸ್ಥಾಪನೆಯನ್ನು ಪ್ರೋತ್ಸಾಹಿಸುತ್ತಿದೆ.ಈಗ ಇರುವ ಮಾನ್ಯತೆಯ ಪದ್ಧತಿಗೆ ಹಲವು ಮಿತಿಗಳಿವೆ. ಪರೀಕ್ಷೆ, ಪಠ್ಯಕ್ರಮ ಎಲ್ಲವನ್ನೂ ವಿಶ್ವವಿದ್ಯಾಲಯವೇ ನಡೆಸಬೇಕಾಗುತ್ತದೆ. ನೂರಾರು ಕಾಲೇಜುಗಳು, ಅವುಗಳ ಸಂಖ್ಯೆಯ ಹಲವು ಪಟ್ಟಿನಷ್ಟು ಇರುವ ಕೋರ್ಸ್‌ಗಳು ಇವೆಲ್ಲವನ್ನೂ ವಿಶ್ವವಿದ್ಯಾಲಯವೇ ನೋಡಿಕೊಳ್ಳುವ ಕ್ರಿಯೆಯು ಆಡಳಿತಾತ್ಮಕವಾಗಿ ಬಹುದೊಡ್ಡ ಹೊರೆ.

ಪರಿಣಾಮವಾಗಿ ಎಲ್ಲಾ ಜ್ಞಾನಶಾಖೆಗಳಲ್ಲಿ ನಿರಂತರವಾಗಿ ನಡೆಯುತ್ತಿರುವ ಬದಲಾವಣೆಗಳಿಗೆ ಅನುಗುಣವಾಗಿ ಪಠ್ಯಕ್ರಮವನ್ನು ಕಾಲ ಕಾಲಕ್ಕೆ ಬದಲಾಯಿಸುವುದು ಸಾಧ್ಯವಾಗುವುದಿಲ್ಲ. ಆದ್ದರಿಂದ ಕೆಲವು ಉತ್ತಮ ಕಾಲೇಜುಗಳಿಗೆ ಸ್ವಾಯತ್ತತೆಯನ್ನು ನೀಡಿ ಪರೀಕ್ಷೆ, ಪಠ್ಯಕ್ರಮಗಳ ಜವಾಬ್ದಾರಿಯನ್ನು ಬಿಟ್ಟುಕೊಡುವುದು ಯುಜಿಸಿಯ ಉದ್ದೇಶ.

ಆದರೆ ಇದರ ದುರ್ಬಳಕೆಯ ಸಾಧ್ಯತೆಗಳೇ ಹೆಚ್ಚಾಗಿರುವುದರಿಂದ ಇದು ಹೆಚ್ಚು ಜನಪ್ರಿಯವಾಗಿಲ್ಲ. ಇದೇ ಪರಿಕಲ್ಪನೆಯನ್ನು ಸ್ವಲ್ಪಮಟ್ಟಿಗೆ ಬದಲಾಯಿಸಿ ಒಂದು ಸಂಸ್ಥೆಯನ್ನು ಸ್ವಾಯತ್ತಗೊಳಿಸುವ ಬದಲಿಗೆ ಕಾಲೇಜುಗಳ ಸಮೂಹವೊಂದಕ್ಕೆ ಈ ಬಗೆಯ ಸ್ವಾಯತ್ತತೆಯನ್ನು ನೀಡುವುದು ಹೆಚ್ಚು ಪ್ರಾಯೋಗಿಕ ಮತ್ತು ಪ್ರಜಾಸತ್ತಾತ್ಮಕ. ಈ ಕಾಲೇಜುಗಳ ಸಮೂಹವೇ ಮುಂದೊಂದು ದಿನ ವಿಶ್ವವಿದ್ಯಾಲಯವಾಗಿ ಬದಲಾಗಬಹುದು. ಹಾಗೆಯೇ ಮೊದಲೇ ಹೇಳಿದ ಉತ್ಕೃಷ್ಟತಾ ಕೇಂದ್ರಗಳನ್ನು ವಿಶ್ವವಿದ್ಯಾಲಯದ ವ್ಯಾಪ್ತಿಯೊಳಗೇ ರೂಪಿಸುವ ಕ್ರಿಯೆಗೂ ಇದು ಪೂರಕವಾಗುತ್ತದೆ.

ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳಲ್ಲೂ ಸಂಸ್ಥೆಯ ಸಾಮಾಜಿಕ ಉತ್ತರದಾಯಿತ್ವವನ್ನು ಖಾತರಿ ಪಡಿಸುವ ಒಂದು ಸೆಲ್ (ಸೋಷಿಯಲ್ ಅಕೌಂಟಬಿಲಿಟಿ ಸೆಲ್) ಇರಬೇಕು. ಇದು ಸಂಸ್ಥೆಯ ಶೈಕ್ಷಣಿಕ ಆಡಿಟಿಂಗ್ ನಡೆಸುವುದರ ಜೊತೆಗೆ ಅದರ ವಿವರಗಳನ್ನು ಮುಕ್ತವಾಗಿ ಒದಗಿಸುವ ಕೆಲಸ ಮಾಡಬೇಕು. ಸಂಸ್ಥೆಯ ವೆಬ್‌ಸೈಟ್‌ನಲ್ಲಿ ಈ ಎಲ್ಲಾ ಮಾಹಿತಿಗಳು ಕಾಲಾನುಕ್ರಮದಲ್ಲಿ ಲಭ್ಯವಿರಬೇಕು. ಹಾಗೆಯೇ ಪ್ರತಿಯೊಬ್ಬ ಶಿಕ್ಷಕನಿಗೂ ಒಂದೊಂದು ವೆಬ್ ಪುಟವಿರಬೇಕು.

ಇದರಲ್ಲಿ ಅವರ ಶೈಕ್ಷಣಿಕ ಉತ್ತರದಾಯಿತ್ವವನ್ನು ಖಾತರಿಪಡಿಸುವ ಎಲ್ಲ ವಿವರಗಳಿರಬೇಕು. ಶಿಕ್ಷಕ ಪಠ್ಯಕ್ರಮದ ಮಿತಿಯೊಳಗೆ ಮತ್ತು ಅದರ ಹೊರತಾಗಿ ಕೈಗೊಂಡ ಎಲ್ಲಾ ಕೆಲಸಗಳ ವಿವರಗಳನ್ನು ಕಾಲಾನುಕ್ರಮದಲ್ಲಿ ಈ ಪುಟಕ್ಕೆ ಸೇರಿಸುತ್ತಾ ಹೋಗಬೇಕು. ಇದನ್ನು ರಾಜ್ಯಮಟ್ಟದಲ್ಲಿ ಒಟ್ಟುಗೂಡಿಸಿದ ಒಂದು ಡೇಟಾ ಬ್ಯಾಂಕ್ ಇರಬೇಕು.

ಸಾರ್ವಜನಿಕ ಖಾಸಗಿ ಪಾಲುದಾರಿಕೆಯೊಂದಿಗೆ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವಾಗ ಸಹಕಾರಿ ತತ್ವಕ್ಕೆ ಹೆಚ್ಚಿನ ಒತ್ತು ಕೊಡಬೇಕು. ಇದರ ಮೂಲಕ ಶಿಕ್ಷಣದ ವ್ಯಾಪಾರೀಕರಣವನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. ಜೊತೆಗೆ ಒಟ್ಟು ಶೈಕ್ಷಣಿಕ ಕ್ಷೇತ್ರಕ್ಕೆ ಕೇಂದ್ರ ಸರ್ಕಾರ ವ್ಯಯಿಸುವ ಸಂಪನ್ಮೂಲದ ಪ್ರಮಾಣವನ್ನು ಬಜೆಟ್‌ನ ಶೇಕಡಾ ಹತ್ತಕ್ಕೆ ಏರಿಸಬೇಕು. ರಾಜ್ಯ ಸರ್ಕಾರ ತನ್ನ ಬಜೆಟ್‌ನ ಶೇಕಡಾ ಹತ್ತರಷ್ಟನ್ನು ಶಿಕ್ಷಣಕ್ಕಾಗಿ ಮೀಸಲಿರಿಸಬೇಕು. ಇದರಲ್ಲಿ ಶೇಕಡಾ 30ರಷ್ಟು ಉನ್ನತ ಶಿಕ್ಷಣ ಕ್ಷೇತ್ರಕ್ಕಾಗಿ ವ್ಯಯಿಸಬೇಕು.

***
ಮೇಲೆ ಹೇಳಿದ ವಿಷಯಗಳು ನಮ್ಮ ಸಮಿತಿಯ ಶಿಫಾರಸುಗಳ ಸ್ಥೂಲ ರೂಪ. ಇವುಗಳು ಕೇವಲ ಕೇರಳ ರಾಜ್ಯಕ್ಕಷ್ಟೇ ಸೀಮಿತವಾದವಲ್ಲ. ಉನ್ನತ ಶಿಕ್ಷಣ ಕ್ಷೇತ್ರದ ಸುಧಾರಣೆಯ ಹಾದಿಯಲ್ಲಿ ಕರ್ನಾಟಕವೂ ಹೆಜ್ಜೆಯಿಡುತ್ತಿದೆ. ದೇಶದ ಐ.ಟಿ. ರಾಜಧಾನಿಯನ್ನು ಹೊಂದಿರುವ ಕರ್ನಾಟಕ ಒಂದರ್ಥದಲ್ಲಿ ಕೇರಳಕ್ಕಿಂತ ಭಿನ್ನವಾದ ಸ್ವರೂಪದಲ್ಲಿ ಜಾಗತೀಕರಣಕ್ಕೆ ತೆರೆದುಕೊಂಡಿದೆ.

ಎಲ್ಲವನ್ನೂ ಒಳಗೊಂಡು ಸಾಧಿಸುವ ಗುಣಮಟ್ಟಕ್ಕಿಂತ ಹೆಚ್ಚಾಗಿ ಸ್ಪರ್ಧಾತ್ಮಕ ಗುಣಮಟ್ಟಕ್ಕೆ ಮನಸ್ಸು ಕೊಟ್ಟಿದೆ.ಪ್ರಜಾಸತ್ತಾತ್ಮಕ ಒಳಗೊಳ್ಳುವಿಕೆಯ ಮೂಲಕವೂ ಉತ್ಕೃಷ್ಟತೆಯನ್ನು ಸಾಧಿಸುವ ಸಾಧ್ಯತೆಗಳ ಕುರಿತಂತೆ ಚಿಂತಿಸಲು ಈ ಶಿಫಾರಸುಗಳು ಪ್ರೇರಕವಾಗಲಿ ಎಂಬ ಆಸೆ ನನ್ನದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT