ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಂಚನೆಯ ದಾಳವಾಗಿರುವ ರೈತರು

ಅಕ್ಷರ ಗಾತ್ರ

ಕೇಂದ್ರ ಸರ್ಕಾರದ ಹೊಸ ಭೂ ಸ್ವಾಧೀನ ಮಸೂದೆಯು ರಾಜಕಾರಣಿಗಳ ಪಾಲಿಗೆ ರಾಜಕೀಯ ಕಾಲ್ಚೆಂಡಿನ ಆಟವಾಗಿ ಪರಿಣಮಿಸಿದೆ. ವರ್ಷಗಳ ಉದ್ದಕ್ಕೂ ಪ್ರತಿಯೊಂದು ಸರ್ಕಾರವೂ ರೈತರನ್ನು ವಂಚಿಸುತ್ತಲೇ ಬಂದಿದೆ. ಒಂದೆಡೆ ಸಬ್ಸಿಡಿಗಳ ರಾಜಕೀಯದ ಆಮಿಷ, ಇನ್ನೊಂದೆಡೆ ದುರಾಸೆಯ ಬಂಡವಾಳಶಾಹಿಗಳ ಮಧ್ಯೆ ರೈತರು ಸಾಕಷ್ಟು ನಲುಗಿದ್ದಾರೆ.

ರೈತಾಪಿ ಸಮುದಾಯ ಎದುರಿಸುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸದ್ಯಕ್ಕೆ ಸರ್ಕಾರದ ಆದ್ಯತೆಗಳು ತುರ್ತಾಗಿ ಬದಲಾಗಬೇಕಾಗಿದೆ. ಆದರೆ, ಸರ್ಕಾರಗಳಿಗೆ ದೂರದೃಷ್ಟಿಯೇ ಇಲ್ಲ. ಅವುಗಳ ಉದ್ದೇಶಗಳಲ್ಲಿ ಪ್ರಾಮಾಣಿಕತೆಯೂ ಕಂಡು ಬರುತ್ತಿಲ್ಲ.

ರೈತನೊಬ್ಬ ಎದುರಿಸುವ ದುರದೃಷ್ಟಗಳಲ್ಲಿ ಬೆಳೆ ವೈಫಲ್ಯವಂತೂ ಹೃದಯ ಹಿಂಡುವ ಸಂಗತಿಯಾಗಿದೆ. ವಾಣಿಜ್ಯ ವಹಿವಾಟು ಸಾಕಷ್ಟು ಬಾರಿ ಏರುಪೇರು ಆಗುತ್ತಿರುತ್ತದೆ. ಅನೇಕ ಬಾರಿ ವ್ಯಾಪಾರ – ವಹಿವಾಟು ದಿವಾಳಿ ಏಳುವುದೂ ಸಹಜ. ಒಬ್ಬ ರೈತ ಮತ್ತು ಉದ್ಯಮಿಯಾಗಿ ನಾನು ಎರಡೂ ಬಗೆಯ ದುರದೃಷ್ಟಗಳನ್ನು ಸ್ವತಃ ಅನುಭವಿಸಿದ್ದೇನೆ.

ಸಾಕಿದ ಹಸು, ಸಾಂಕ್ರಾಮಿಕ ರೋಗಕ್ಕೆ ಬಲಿಯಾಗುವುದು, ಅತಿವೃಷ್ಟಿ – ಅನಾವೃಷ್ಟಿ, ಅತಿಯಾದ ಕೀಟನಾಶಕ ಮತ್ತು ಕಳಪೆ ಬೀಜಗಳನ್ನು ಬಳಸಿದ್ದರಿಂದ ಫಸಲು ನಾಶವಾದಾಗ ರೈತರು ಅಸಹಾಯಕತೆಯಿಂದ ಬೆಳೆದ ಫಸಲಿಗೆ ಬೆಂಕಿ ಹಚ್ಚುತ್ತಾರೆ. ತಾನೇ ಬಿತ್ತಿ ಬೆಳೆದು ಜೋಪಾನವಾಗಿ ನೋಡಿಕೊಂಡ ಬೆಳೆಯನ್ನು ಕಟಾವು ಮಾಡುವುದರಿಂದ ಕೂಲಿ ಕೊಡುವಷ್ಟು, ಪೇಟೆಗೆ ಸಾಗಿಸುವಷ್ಟು ಹಣವೂ ಗಿಟ್ಟದೆ ಹೋದಾಗ ಅನಿವಾರ್ಯವಾಗಿ ಬೆಳೆಗೆ ಕೊಳ್ಳಿ ಇಡುತ್ತಾನೆ.

ಗಾಯಕ್ಕೆ ಉಪ್ಪು ಸವರಿದಂತೆ ಇದೇ ವೇಳೆಗೆ ಸಾಲಗಾರರು ಸಾಲ ವಸೂಲಿಗೆ ಮನೆ ಬಾಗಿಲಿಗೆ ಬಂದಾಗ ಅವಮಾನದ ಸಾಮಾಜಿಕ ಕಳಂಕವೂ ಅಂಟಿಕೊಳ್ಳುತ್ತದೆ. ಸಂಕಷ್ಟಗಳ ಸರಮಾಲೆ ಏಕಕಾಲಕ್ಕೆ ದಾಳಿ ಮಾಡಿದಾಗ ದಾರಿ ಕಾಣದೆ ತನ್ನೆಲ್ಲ ಸಮಸ್ಯೆಗಳಿಗೆ ರೈತ ಆತ್ಮಹತ್ಯೆಯಲ್ಲಿ ಪರಿಹಾರ ಕಂಡುಕೊಳ್ಳುತ್ತಾನೆ.

ವ್ಯಾಪಾರ – ವಹಿವಾಟು ದಿವಾಳಿ ಏಳುವುದು ಎಂದರೆ ಅದೊಂದು ನಿಜಕ್ಕೂ ಆಘಾತಕಾರಿ ಸಂಗತಿ. ಆದರೆ, ರೈತನೊಬ್ಬ ಎದುರಿಸುವ ದುರಂತದ ಎದುರು ಉದ್ಯಮಿಯ ದಿವಾಳಿತನ ಮಂಕಾಗಿ ಕಾಣುತ್ತದೆ. ವಹಿವಾಟಿನಲ್ಲಿ ಸೋತಾಗೊಮ್ಮೆ ಉದ್ಯಮಿದಾರನೊಬ್ಬ ಇನ್ನಷ್ಟು ಗಟ್ಟಿಯಾಗಿ ಪುಟಿದೇಳುತ್ತಾನೆ. ನಗರದ ಜೀವನವು ಉದ್ಯಮಿಗೆ ಒಂದು ಬಗೆಯ ಅಜ್ಞಾತವಾಸ ಒದಗಿಸುತ್ತದೆ. ವಹಿವಾಟಿನ ಒಂದು ಬಾಗಿಲು ಮುಚ್ಚಿದರೆ, ಅವಕಾಶಗಳ ಹತ್ತು ಬಾಗಿಲುಗಳು ತೆರೆಯುತ್ತವೆ. ಆದರೆ, ರೈತ ಸಂಕಷ್ಟಗಳ ಹೊಡೆತಕ್ಕೆ ನಲುಗಿ ಸೋತು ಸುಣ್ಣವಾಗಿರುತ್ತಾನೆ. ಆತನಿಗೆ ತನ್ನ ಸ್ವಂತ ಕಾಲ ಮೇಲೆ ನಿಲ್ಲಲು ಸಾಧ್ಯವಾಗುವುದೇ ಇಲ್ಲ.

ವರ್ಷದಲ್ಲಿ ಒಂದು ಬಾರಿ ಬೆಳೆ ವಿಫಲವಾದರೆ, ರೈತ ತನ್ನ ಅದೃಷ್ಟ ಪರೀಕ್ಷೆಗೆ ಇನ್ನೊಂದು ಮಳೆಗಾಲದವರೆಗೆ ಕಾಯಬೇಕಾಗುತ್ತದೆ. ಉದ್ಯಮಿ, ಷೇರು ದಲ್ಲಾಳಿ, ವ್ಯಾಪಾರಿಗಳಿಗೆ ಕೈತುಂಬ ಲಾಭ ಬಾಚಿಕೊಳ್ಳಲು ವರ್ಷದಲ್ಲಿ ನೂರಾರು ಅವಕಾಶಗಳು ಕಾದು ಕುಳಿತಿರುತ್ತವೆ. ವ್ಯಾಪಾರವೊಂದು ಕೈಹಿಡಿಯದಿದ್ದರೆ ಇನ್ನೊಂದು ವಹಿವಾಟಿಗೆ ಕೈಹಾಕಿ ಲಾಭ ಮಾಡಿಕೊಳ್ಳಬಹುದು. ಆದರೆ, ರೈತನಿಗೆ ಮಾತ್ರ ಇಂತಹ ಅದೃಷ್ಟ ಅಥವಾ ಅವಕಾಶಗಳು ಮತ್ತೆ ಮತ್ತೆ ಬರುವುದೇ ಇಲ್ಲ್ಲ.

ದೇಶದ ಒಟ್ಟು ಜನಸಂಖ್ಯೆಯ ಶೇ 60ರಷ್ಟು ಜನರು ತಮ್ಮ ಜೀವನೋಪಾಯಕ್ಕೆ ಕೃಷಿಯನ್ನೇ ಅವಲಂಬಿಸಿದ್ದಾರೆ. ಇಡೀ ದೇಶಕ್ಕೆ ಸಾಕಾಗುವಷ್ಟು ಆಹಾರ ಧಾನ್ಯ ಬೆಳೆಯುವ ಮೂಲಕ ದೇಶಕ್ಕೆ ಆಹಾರ ಭದ್ರತೆಯನ್ನೂ ಒದಗಿಸುವ ರೈತರು ಎದುರಿಸುವ ಸಂಕಷ್ಟಗಳ ಬಗ್ಗೆ ನಮ್ಮ ಕಲ್ಲೆದೆಯ ರಾಜಕಾರಣಿಗಳು ಮತ್ತು ಸರ್ಕಾರಿ ಬಾಬುಗಳು ಮಾತ್ರ ಉದ್ದಕ್ಕೂ ಉದಾಸೀನತೆ ತೋರುತ್ತಲೇ ಬಂದಿದ್ದಾರೆ.

ಸಂಕಷ್ಟಗಳ ಸರಮಾಲೆಯಲ್ಲಿ ಸಿಲುಕಿರುವ ರೈತರು ಎದುರಿಸುತ್ತಿರುವ ಸಮಸ್ಯೆಗಳ ಮೂಲ ಕಾರಣಗಳನ್ನು ಪರಿಹರಿಸಲು ಮತ್ತು ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಸರಿಪಡಿಸಲು ಸ್ವರೂಪಾತ್ಮಕ ಬದಲಾವಣೆಯ ಕ್ರಮಗಳನ್ನು ಕೈಗೊಳ್ಳದೇ ಹೋದರೆ, ಗ್ರಾಮೀಣ ಪ್ರದೇಶಗಳಲ್ಲಿ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸಿ ಸಬ್ಸಿಡಿ ಬದಲಿಗೆ ಬಂಡವಾಳ ಹೂಡಿಕೆಯಂತಹ ದಿಟ್ಟ ಕ್ರಮಗಳನ್ನು ಕೈಗೊಳ್ಳದೇ ಹೋದರೆ ರೈತರ ಬವಣೆಗಳು ಯಾವತ್ತೂ ಕೊನೆಗೊಳ್ಳಲಾರವು ಮತ್ತು ಆತನ ಸಾವು ನಮ್ಮೆಲ್ಲರ ಕೈಯಲ್ಲೇ ಇರುತ್ತದೆ.

‘ರೈತರು ಈಗಲೂ ದೇಶದ ಅರ್ಥವ್ಯವಸ್ಥೆಯ ಬೆನ್ನೆಲುಬು ಆಗಿದ್ದಾರೆ’ ಎಂದು ಪ್ರೊ. ಸ್ವಾಮಿನಾಥನ್ ಅಭಿಪ್ರಾಯಪಡುತ್ತಾರೆ. ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ರೈತರ ಸಂಖ್ಯೆ ಕಡಿಮೆಯಾಗಿರದಿದ್ದರೂ, ಒಟ್ಟು ಆಂತರಿಕ ಉತ್ಪನ್ನಕ್ಕೆ (ಜಿಡಿಪಿ) ಕೃಷಿ ಕ್ಷೇತ್ರದ ಕೊಡುಗೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ರೈತರು ಬಡತನದಲ್ಲಿಯೇ ಬೇಯುತ್ತಿದ್ದಾರೆ.

‘ಕೃಷಿ ಕ್ಷೇತ್ರದ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲು ಸಮಗ್ರ ಸ್ವರೂಪದ ಶಿಫಾರಸುಗಳನ್ನು ಮಾಡಲಾಗಿದ್ದು, ಈ ರಂಗದ ಲೋಪಗಳನ್ನು ಪರಿಹರಿಸಲು ದೂರಗಾಮಿ ಪರಿಣಾಮ ಬೀರುವ ಸುಧಾರಣಾ ಕ್ರಮಗಳನ್ನು ಕೈಗೊಳ್ಳುವ ಅಗತ್ಯ ಇದೆ’ ಎಂದು ಸ್ವಾಮಿನಾಥನ್ ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಅಂತಹ ಸಲಹೆಗಳೆಲ್ಲ ದೂಳು ತಿನ್ನುತ್ತಿವೆ. ಭೀತಿ ಹುಟ್ಟಿಸುವ ಬಡತನ ಮತ್ತು ಜನರಲ್ಲಿನ ಅಪೌಷ್ಟಿಕತೆಗೆ ಸರ್ಕಾರಗಳು ವರ್ಷಗಳ ಉದ್ದಕ್ಕೂ ಕೃಷಿ ರಂಗವನ್ನು ನಿರ್ಲಕ್ಷಿಸುತ್ತ ಬಂದಿರುವುದೇ ಮುಖ್ಯ ಕಾರಣ ಎಂದೂ ಅವರು ದೂರುತ್ತಾರೆ.

ರಾಜಕಾರಣಿಗಳು ರೈತರನ್ನು ಬರೀ ವೋಟ್ ಬ್ಯಾಂಕ್ ರಾಜಕಾರಣದ ನೆಲೆಯಲ್ಲೇ ಪರಿಗಣಿಸುತ್ತಿದ್ದಾರೆ. ಕೃಷಿಕರ ಬೇಕು ಬೇಡಗಳಿಗೆ ಕಿವುಡರಾಗಿ, ಅವರನ್ನು ತುಳಿಯುತ್ತಲೇ ಬಂದಿದ್ದಾರೆ. ಧೂರ್ತ ರಾಜಕಾರಣಿಗಳು ರೈತರನ್ನು ಜಾತಿ ಆಧರಿಸಿ ಬೇರ್ಪಡಿಸಿದ್ದಾರೆ. ಕೋಮುವಾದದ ರಾಜಕೀಯಕ್ಕೆ ರೈತರೂ ಸುಲಭವಾಗಿ ಬಲಿಬಿದ್ದಿದ್ದಾರೆ.

ಹಣದುಬ್ಬರ ನಿಯಂತ್ರಣ ವಿಷಯದಲ್ಲಿಯೂ ಸರ್ಕಾರ ರೈತರ ಜತೆ ಚೆಲ್ಲಾಟ ಆಡುತ್ತಿದೆ. ಆಹಾರ ಧಾನ್ಯಗಳ ಬೆಲೆಗಳು ಏರುಗತಿಯಲ್ಲಿ ಇದ್ದಾಗ, ಚುನಾವಣೆಯಲ್ಲಿ ಹಣದ ಥೈಲಿ ಮೂಲಕ ಪ್ರಭಾವ ಬೀರುವ ವಣಿಕ ಸಮುದಾಯದ ಮತ್ತು ನಗರವಾಸಿಗಳ ಒತ್ತಡಕ್ಕೆ ಮಣಿಯುವ ಸರ್ಕಾರವು ಆಹಾರ ಧಾನ್ಯಗಳ ರಫ್ತು ನಿಷೇಧಿಸುವ ಇಲ್ಲವೇ ಮಾರುಕಟ್ಟೆಗೆ ಹೆಚ್ಚುವರಿ ಧಾನ್ಯ ಬಿಡುಗಡೆ ಮಾಡುವ ಮೂಲಕ ರೈತರ ವರಮಾನಕ್ಕೆ ಕತ್ತರಿ ಹಾಕುತ್ತದೆ.

ಆದರೆ, ಆಹಾರ ಧಾನ್ಯಗಳ ಬೆಲೆಗಳು ಕುಸಿತ ಕಂಡಾಗ ಇಲ್ಲವೇ ಹಲವಾರು ಕಾರಣಗಳಿಗೆ ಬೆಳೆ ನಾಶವಾದಾಗ ಸರ್ಕಾರ ಸೂಕ್ತ ಬೆಂಬಲ ಘೋಷಿಸಿ ರೈತರ ನೆರವಿಗೆ ಧಾವಿಸುವುದಿಲ್ಲ. ಸಣ್ಣ ಮೊತ್ತದ ಪರಿಹಾರ ಘೋಷಿಸಿ ಕೈತೊಳೆದುಕೊಳ್ಳುತ್ತದೆ. ನೈಸರ್ಗಿಕ ಪ್ರಕೋಪಗಳ ಸಂತ್ರಸ್ತ ರೈತರಿಗೆ ಸಕಾಲಕ್ಕೆ ನೆರವು ಕೂಡ ದೊರೆಯುವುದಿಲ್ಲ. ಪರಿಹಾರ ಧನವು ಹಲವು ಹಂತಗಳಲ್ಲಿನ ಭ್ರಷ್ಟತೆ, ಸೋರಿಕೆ ಕಾರಣಗಳಿಗೆ ಫಲಾನುಭವಿಗಳಿಗೆ ಪೂರ್ಣವಾಗಿ ದಕ್ಕುವುದೂ ಇಲ್ಲ.

ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಮತ್ತು ಇಂತಹ ಇತರ ಯೋಜನೆಗಳು ವರಮಾನ ಹೆಚ್ಚಿಸುವ ಸಂಪತ್ತು ಸೃಷ್ಟಿಸುವುದಿಲ್ಲ. ಹೆದ್ದಾರಿ, ಬಂದರು, ವಿದ್ಯುತ್ ಸ್ಥಾವರ ನಿರ್ಮಾಣ, ಗರಿಷ್ಠ ವೇಗದ ರೈಲ್ವೆ ಕಾಮಗಾರಿಯಂತಹ ಮೂಲ ಸೌಕರ್ಯಗಳ ಯೋಜನೆ ಹಮ್ಮಿಕೊಂಡರೆ ಕೃಷಿ ಅರ್ಥವ್ಯವಸ್ಥೆಯ ಬೆಳವಣಿಗೆಗೂ ನೆರವಾಗುತ್ತದೆ. ಸರಕುಗಳ ಚಿಲ್ಲರೆ ವಹಿವಾಟಿನಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶ ಮಾಡಿಕೊಟ್ಟರೆ ಸರಕು ಪೂರೈಕೆ ವ್ಯವಸ್ಥೆ ಸುಗಮವಾಗಲಿದೆ.

ಶೈತ್ಯಾಗಾರಗಳ ನಿರ್ಮಾಣ ಮತ್ತು ವಿತರಣಾ ವ್ಯವಸ್ಥೆ ಸುಧಾರಿಸಿದರೆ ಕೃಷಿ ಉತ್ಪನ್ನಗಳು ತ್ವರಿತವಾಗಿ ನಗರಗಳಿಗೆ ತಲುಪಿ ನ್ಯಾಯಯುತ ಬೆಲೆ ದೊರೆಯಲೂ ಸಾಧ್ಯವಾಗುತ್ತದೆ.

ಸದ್ಯದ ಎನ್‌ಡಿಎ, ಹಿಂದಿನ ಯುಪಿಎ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ವ್ಯಾಪಾರಿಗಳ ದುರಾಸೆಗೆ ಒತ್ತಾಸೆಯಾಗಿ ನಿಲ್ಲುತ್ತ, ದೇಶಿ ಕಾರ್ಪೊರೇಟ್ ಸಂಸ್ಥೆಗಳ ಹಿತಾಸಕ್ತಿ ರಕ್ಷಿಸುತ್ತ, ಬಹು ಬ್ರ್ಯಾಂಡ್ ಚಿಲ್ಲರೆ ವಹಿವಾಟಿಗೆ ಗೊಂದಲಕಾರಿ ಹೇಳಿಕೆ ನೀಡುತ್ತ ರೈತರ ಹಿತಾಸಕ್ತಿಗಳಿಗೆ ಧಕ್ಕೆ ತಂದಿವೆ.

ಈ ಹಿಂದೆ ನಾನು ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾಗ, ರೈತರು ಸಾಲದ ಬಲೆಯಲ್ಲಿ ಸಿಲುಕುವುದನ್ನು ತುಂಬ ಹತ್ತಿರದಿಂದ ಕಂಡಿದ್ದೆ. ಸಾಲದ ಬಲೆಗೆ ಬೀಳುವ ರೈತನನ್ನು ವ್ಯವಸ್ಥೆಯು ಅಂತಿಮವಾಗಿ ಆಪೋಶನ ತೆಗೆದುಕೊಳ್ಳದೆ ಬಿಡುವುದಿಲ್ಲ.

‘ಪರಿಸರ ಸ್ನೇಹಿ’ ಕೃಷಿ ಚಟುವಟಿಕೆ ಬದಲಿಗೆ ಆಧುನಿಕ, ಆಕ್ರಮಣಕಾರಿ ರೀತಿಯ ಮತ್ತು ತೀಕ್ಷ್ಣ ಸ್ವರೂಪದ ಕೃಷಿಯು ಅತಿಯಾದ ರಾಸಾಯನಿಕ ಗೊಬ್ಬರ, ಕೀಟನಾಶಕ ಮತ್ತು ಹೈಬ್ರಿಡ್ ಬೀಜಗಳ ಬಳಕೆಯ ಪರಿಣಾಮವಾಗಿ ರೈತರಿಗೆ ಇನ್ನೊಂದು ರೀತಿಯಲ್ಲಿಯೂ ಹೊರೆಯಾಗಿ ಪರಿಣಮಿಸಿದೆ.

ತೀವ್ರ ಪರಿಣಾಮದ ರಾಸಾಯನಿಕಗಳನ್ನು ಬಳಸಿದಷ್ಟೂ ಬೆಳೆ ಹುಲುಸಾಗಿ ಬಂದರೂ ಮಣ್ಣಿನ ಫಲವತ್ತತೆ ನಾಶವಾಗುತ್ತದೆ. ಸಮೃದ್ಧವಾಗಿ ಬೆಳೆ ಬೆಳೆದರೂ ವೆಚ್ಚವೂ ದುಪ್ಪಟ್ಟಾಗಿರುವುದರಿಂದ ನಿವ್ವಳ ಲಾಭವೂ ಕಡಿಮೆ ಆಗಿರುತ್ತದೆ. ಒಂದು ವೇಳೆ ಪ್ರಕೃತಿ ವಿಕೋಪ, ಹವಾವಾನ ವೈಪರೀತ್ಯ, ಕೀಟಬಾಧೆ ಮತ್ತಿತರ ಕಾರಣಗಳಿಗೆ ಬೆಳೆಯು ಸಂಪೂರ್ಣವಾಗಿ ನಾಶವಾದರೆ ರೈತರು ತಾವು ಪಡೆದ ಸಾಲ ಮರುಪಾವತಿಸಲಿಕ್ಕಾಗದೇ ಸಂಕಷ್ಟಕ್ಕೆ ಸಿಲುಕುತ್ತಾರೆ.

ಪರಂಪರಾಗತ ‘ಪರಿಸರ ಸ್ನೇಹಿ’ ಕೃಷಿಯನ್ನೇ ನೆಚ್ಚಿಕೊಂಡಿದ್ದರೆ ಆತನಿಗೆ ಇಂತಹ ಬಿಕ್ಕಟ್ಟು ಎದುರಾಗುತ್ತಿರಲಿಲ್ಲ. ನೈಸರ್ಗಿಕ ಗೊಬ್ಬರ, ಸ್ಥಳೀಯ ಬೀಜಗಳ ಬಳಕೆಯ, ಕೀಟನಾಶಕ ರಹಿತ ಬೆಳೆ ಕೈಕೊಟ್ಟರೂ ಆತನಿಗೆ ಹೆಚ್ಚಿನ ಆರ್ಥಿಕ ಹೊರೆ ಬೀಳುತ್ತಿರಲಿಲ್ಲ.

ನಮ್ಮ ರೈತರ ಹಣೆಬರಹವೆ ಸರಿ ಇಲ್ಲ. ಕಾರ್ಪೊರೇಟ್ ಸಂಸ್ಥೆಗಳು ತಯಾರಿಸುವ ರಾಸಾಯನಿಕ ಗೊಬ್ಬರ, ಕೀಟನಾಶಕಗಳು ಮತ್ತು ಹೈಬ್ರಿಡ್ ಬೀಜಗಳ ಮಾರಾಟಗಾರರು ಹಣದ ಲೇವಾದೇವಿಗಾರರೂ ಆಗಿರುತ್ತಾರೆ. ಇವರಿಂದ ಸಾಲ ಪಡೆಯುವ ರೈತರು ಸಾಲದ ಚಕ್ರವ್ಯೂಹದಲ್ಲಿ ಸಿಲುಕಿ ಹೊರಬರುವ ದಾರಿ ಕಾಣದೆ ಪರಿತಪಿಸುತ್ತಾರೆ.

ರಸಗೊಬ್ಬರ, ಕೀಟನಾಶಕಗಳನ್ನು ಸಾಲಕ್ಕೆ ನೀಡುವ ಲೇವಾದೇವಿಗಾರರಿಗೇ ರೈತರು ತಮ್ಮ ಸರಕನ್ನು ಮಾರುವ ಒಪ್ಪಂದ ಮಾಡಿಕೊಂಡು, ಮುಂಗಡ ಹಣವನ್ನೂ ಪಡೆದುಕೊಂಡಿರುತ್ತಾರೆ. ವ್ಯಾಪಾರಿಯು ಎಲ್ಲ ಕಡೆಗಳಿಂದಲೂ ಲಾಭ ಬಾಚಿಕೊಳ್ಳುತ್ತಾನೆ. ಗೊಬ್ಬರ, ಕೀಟನಾಶಕಗಳ ಮಾರಾಟ ಕಮಿಷನ್, ರೈತರಿಗೆ ನೀಡುವ ಸಾಲದ ಮೇಲಿನ ಬಡ್ಡಿ, ರೈತರ ಉತ್ಪನ್ನಗಳನ್ನು ಅಗ್ಗದ ಬೆಲೆಗೆ ಖರೀದಿಸಿ ದುಬಾರಿ ಬೆಲೆಗೆ ಮಾರಾಟ –ಹೀಗೆ ಆತನ ಲಾಭದ ಮೂಲಗಳು ಒಂದಕ್ಕಿಂತ ಹೆಚ್ಚಿಗೆ ಇರುತ್ತವೆ.

ಈ ಎಲ್ಲ ಸಮಸ್ಯೆಗಳು ವ್ಯವಸ್ಥೆಯಲ್ಲಿ ಆಳವಾಗಿ ಬೇರೂರಿರುವುದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ನಲ್ಲಿಯೇ ಒಪ್ಪಿಕೊಂಡಿದ್ದಾರೆ. ಇವುಗಳನ್ನೆಲ್ಲ ಪರಿಹರಿಸಲು ಸಾಕಷ್ಟು ಸಮಯ ಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಎಲ್ಲ ರಾಜಕೀಯ ಪಕ್ಷಗಳು ಕೈಜೋಡಿಸಿ, ರೈತರ ಸಮಸ್ಯೆಗಳನ್ನು ಮೂಲಭೂತ ನೆಲೆಯಲ್ಲಿ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದರೆ ಮತ್ತು ಸ್ವಾಮಿನಾಥನ್ ಸಮಿತಿಯ ಶಿಫಾರಸುಗಳೂ ಸೇರಿದಂತೆ ಇತರ ಸಲಹೆಗಳ ಜಾರಿಗೆ ತರಲು ಮುಂದಾದರೆ ಮುಂಬರುವ ವರ್ಷಗಳಲ್ಲಿ ಸಕಾರಾತ್ಮಕ ಫಲಿತಾಂಶವನ್ನು ಕಾಣಬಹುದು.

ಸರ್ಕಾರಿ ಆಸ್ಪತ್ರೆಗಳ ಅವ್ಯವಸ್ಥೆಯಿಂದ ರೋಸಿ ಹೋಗಿರುವ ರೈತರು ಖಾಸಗಿ ನರ್ಸಿಂಗ್‌ಹೋಂಗಳಲ್ಲಿ ಚಿಕಿತ್ಸೆ ಪಡೆಯಲು, ಮಕ್ಕಳ ಮದುವೆ ಮಾಡಲು, ಮಕ್ಕಳಿಗೆ ಖಾಸಗಿ ಕಾನ್ವೆಂಟ್ ಶಾಲೆಗಳಲ್ಲಿ ಶಿಕ್ಷಣ ಕೊಡಿಸಲು ಸಾಲ ಪಡೆಯುತ್ತಿದ್ದಾರೆ. ಇದು ಕೂಡ ರೈತರ ಬದುಕಿನ ಸಮಸ್ಯೆಗಳನ್ನು ಇನ್ನಷ್ಟು ಹೆಚ್ಚಿಸಿವೆ. ಇವೆಲ್ಲವೂ ಅವರ ಬದುಕಿನ ಮೇಲೆ ದುಷ್ಪರಿಣಾಮ ಬೀರುತ್ತಿವೆ. ರೈತರೇ ಈ ದೇಶದ ನಿಜವಾದ ಸಂಪತ್ತು. ನಗರಗಳಲ್ಲಿ ಇರುವವರಲ್ಲಿ ಬಹುತೇಕರು ಗ್ರಾಮೀಣ ಪ್ರದೇಶಗಳಿಂದ ಬಂದವರೆ ಹೆಚ್ಚು ಜನರಿದ್ದಾರೆ. ನಗರಗಳು ಸಮೃದ್ಧವಾಗಿ ಬೆಳೆಯುತ್ತಿದ್ದರೂ ಅದಕ್ಕೆ ಕಾರಣವಾಗಿರುವ ಹಳ್ಳಿಗಳು ಬಡವಾಗಿರುವುದು ವ್ಯವಸ್ಥೆಯ ವಿರೋಧಾಭಾಸಕ್ಕೆ ಕನ್ನಡಿ ಹಿಡಿಯುತ್ತದೆ.

ಪಂಜಾಬ್‌ ರೈತ ಗಜೇಂದ್ರ ಸಿಂಗ್‌ ಅವರ ಸಾವಿನ ನಂತರವಾದರೂ, ಎಲ್ಲ ರಾಜಕೀಯ ಪಕ್ಷಗಳು ತಮ್ಮೆಲ್ಲ ಭಿನ್ನಾಭಿಪ್ರಾಯ, ಭ್ರಷ್ಟ ನಡವಳಿಕೆ, ಚಿಲ್ಲರೆತನ ಮತ್ತು ಕೊಳಕು ರಾಜಕೀಯವನ್ನು ಬದಿಗಿಟ್ಟು ರೈತನ ಬದುಕು ಸುಧಾರಣೆಗೆ ರಚನಾತ್ಮಕ ಯೋಜನೆಗಳನ್ನು ಜಾರಿಗೆ ತರಲು ಮುಂದಾಗಬೇಕಾಗಿದೆ. ವಿಳಂಬ ಮಾಡದೇ ಇಂತಹ ಕಾರ್ಯಕ್ರಮಗಳನ್ನು ಆದ್ಯತೆ ಮೇರೆಗೆ ಕೈಗೆತ್ತಿಕೊಂಡರೆ ಗಜೇಂದ್ರ ಸಿಂಗ್‌ ಅವರಿಗೆ ಅದೇ ನಿಜವಾದ ಶ್ರದ್ಧಾಂಜಲಿ.
editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT