ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮರ್ಶೆಯ ಪಲ್ಲಟಗಳು

Last Updated 3 ನವೆಂಬರ್ 2012, 19:30 IST
ಅಕ್ಷರ ಗಾತ್ರ

ಸಾಹಿತ್ಯವಿಮರ್ಶೆ ಎನ್ನುವ ಸಂಸ್ಥೆಯು ನಾಗಾಲೋಟದಲ್ಲಿ ಸಾವಿನ ಕಡೆಗೆ ಚಲಿಸುತ್ತಿದೆ. ಹಲವು ವರ್ಷಗಳ ಹಿಂದೆಯೇ ತೇಜಸ್ವಿಯವರು, ``ವಿಮರ್ಶಕರು ನಶಿಸಿಹೋಗುತ್ತಿರುವ ಜೀವಜಾತಿಗೆ ಸೇರಿದವರು, ಅವರನ್ನು ಮೃಗಶಾಲೆಯ ಪಂಜರಗಳಲ್ಲಿ ಇಟ್ಟು ಪ್ರದರ್ಶಿಸಬೇಕು~~ ಎಂದು ಗೇಲಿ ಮಾಡಿದ್ದರು. ನಾವು ಅದನ್ನು ಕೇಳಿಸಿಕೊಂಡು, ಅವರ ಬಗ್ಗೆ ಮತ್ತು ನಮ್ಮ ಬಗ್ಗೆ ನಕ್ಕಿದ್ದೆವು. ಆದರೆ, ಈಗ ಗಂಭೀರವಾಗಿ ಯೋಚಿಸಬೇಕಾಗಿದೆ.
 
ನಮ್ಮ ವಿಮರ್ಶೆಗಳನ್ನು, `ಸಾಹಿತ್ಯದ ವಿದ್ಯಾರ್ಥಿ~ಗಳು ಬಿಟ್ಟರೆ, ಬೇರೆ ಯಾರು ಯಾಕೆ ಓದುತ್ತಾರೆ? ಅವರಾದರೂ ಯಾಕೆ ಓದುತ್ತಾರೆ? ಸೃಜನಶೀಲ ಲೇಖಕರು ವಿಮರ್ಶೆಯಿಂದ ಕಲಿಯುವ ಮನಃಸ್ಥಿತಿಯಲ್ಲಿ ಇದ್ದಾರೆಯೇ? ಹಾಗೆ ಕಲಿಯುವುದು ಸಾಧ್ಯವೇ? ಅವರಿವರು ಇರಲಿ, ಸ್ವತಃ ವಿಮರ್ಶಕರು ಮತ್ತೊಬ್ಬರು ಬರೆದುದನ್ನು ಎಷ್ಟರಮಟ್ಟಿಗೆ ಓದುತ್ತಾರೆ? ನಾವು ಬರೆದುದನ್ನು ಓದಲು ನಮಗೇ ಬೋರ್ ಆಗುವುದಲ್ಲ, ಯಾಕೆ? ನಾವೆಲ್ಲರೂ ಅಹಂಕಾರದ ಗುಳ್ಳೆಗಳಿಂದ ಹೊರಬಂದು ಪ್ರಶ್ನೆಗಳ ಈ ಸರಮಾಲೆಯನ್ನು ಎದುರಿಸಬೇಕು. ಬರವಣಿಗೆಯ ಹೊಸ ಬಗೆಗಳನ್ನು ಕಂಡುಕೊಳ್ಳಬೇಕು.
 
ಸ್ವತಃ ಸಾಹಿತ್ಯರಚನೆಯಲ್ಲಿ ತೊಡಗಿಕೊಂಡು, ವಿಮರ್ಶೆಯನ್ನು ಹವ್ಯಾಸವಾಗಿ ಇಟ್ಟುಕೊಂಡವರು, ಈ ಸಮಸ್ಯೆಗಳನ್ನು ನೋಡುವ ಬಗೆಗೂ ಕೇವಲ ವಿಮರ್ಶೆಯಲ್ಲೇ ತೊಡಗಿಕೊಂಡವರಿಗೂ ವ್ಯತ್ಯಾಸವಿದೆ. ವಿಮರ್ಶೆ ಕೂಡ ಸೃಜನಶೀಲ ಚಟುವಟಿಕೆಯೆಂಬುದು ನಿಜ. ಆದರೂ ಸೃಜನಶೀಲರಿಗೆ ಬದಲುಹಾದಿಗಳಿರುತ್ತವೆ.

ವಿಮರ್ಶೆಯು, ಸಾಹಿತ್ಯಕೃತಿಗಳನ್ನು ಅವಲಂಬಿಸಿದ  `ಸೆಕೆಂಡರಿ~ ಚಟುವಟಿಕೆಯಲ್ಲ.  ಅದು ಕೂಡ ಲೋಕದಿಂದ ಕಲಿಯುವ, ಲೋಕವನ್ನು ಗ್ರಹಿಸುವ, ಹಾಗೂ ಲೋಕವನ್ನು ಕಟ್ಟಿಕೊಡುವ ಬಗೆಯೇ ಆಗಿದೆ. ವಿಮರ್ಶಕಿಯು ಸಾಹಿತ್ಯ, ಸಂಗೀತ, ಶಿಲ್ಪ ಮುಂತಾದ ಕಲಾಕೃತಿಗಳನ್ನು ಒಳಗೊಳ್ಳುತ್ತಿರುವಂತೆ, ಅವುಗಳ ಸಂಗಡ ಮಾತಾಡುತ್ತಿರುವಂತೆ ಕಂಡರೂ ವಾಸ್ತವದಲ್ಲಿ ಅವಳು ಆ ಕೃತಿಗಳನ್ನು ತಾನು ಬಲ್ಲ ಅನುಭವ, ವಿಚಾರ, ಭಾವನೆ ಮತ್ತು ನಿಲುವುಗಳೊಂದಿಗೆ ತಾಳೆ ಹಾಕುತ್ತಿರುತ್ತಾಳೆ.

ತಾನು ಬಳಸುವ ಕಲಾಕೃತಿಗಳ ಅಂತರಂಗವನ್ನು ರೂಪಿಸುವ ಸಾಹಿತ್ಯತತ್ವ ಮತ್ತು ಅವುಗಳ ಆಶಯಗಳನ್ನು ರೂಪಿಸುವ ಜೀವನತತ್ವ ಮತ್ತು ಅಷ್ಟೇ ಮುಖ್ಯವಾಗಿ ಇವೆರಡನ್ನು ಒಂದಾಗಿ ಬೆಸೆಯಬಲ್ಲ ಕೌಶಲ ಅವಳ ತಿಳಿವಳಿಕೆಯ ವ್ಯಾಪ್ತಿಯಲ್ಲಿ ಬರುತ್ತವೆ. ನಿಜವಾಗಿ ನೋಡಿದರೆ, ಸಾಹಿತ್ಯಮೀಮಾಂಸೆ, ವಿಮರ್ಶೆ ಮತ್ತು ಸಂಶೋಧನೆಗಳು ಒಂದಕ್ಕೊಂದು ಬೆಸೆದುಕೊಂಡ ಚಟುವಟಿಕೆಗಳು. ಇದನ್ನು ತಿಳಿಯದೆ ಇರುವುದರಿಂದಲೇ, ನಮ್ಮಲ್ಲಿ ಸಾಹಿತ್ಯದಲ್ಲಿ ಆಸಕ್ತಿ ತೋರಿಸದೆ ಕೇವಲ ಛಂದಸ್ಸು, ಗ್ರಂಥಸಂಪಾದನೆ ಮತ್ತು ಅಲಂಕಾರಶಾಸ್ತ್ರಗಳಲ್ಲಿ ಮಗ್ನರಾದ `ವಿದ್ವಾಂಸ~ರ ಪಡೆ ಸೃಷ್ಟಿಯಾಯಿತು.

ಹಾಗೆಯೇ ಸಾಹಿತ್ಯದ ಶರೀರವನ್ನು ಕಟ್ಟಿಕೊಡುವ ಈ ವಿಷಯಗಳ ಕಡೆಗೆ ಗಮನವನ್ನೇ ಹರಿಸದೆ, ಆಶಯಗಳ ನೆಲೆಯಲ್ಲಿ ಮಾತ್ರ `ವಿಮರ್ಶೆ~ ಮಾಡುವ  `ಪ್ರಜ್ಞಾವಂತ~ರ ಗುಂಪು ಹುಟ್ಟಿಕೊಂಡಿತು. ಈ ಕವಲುಗಳು ಒಂದುಗೂಡದೆ ಹೋದರೆ, ಜಡತೆ, ಹುಸಿತನ ಮತ್ತು ಅರ್ಧಸತ್ಯಗಳ ಮೆರವಣಿಗೆ ನಡೆಯುತ್ತದೆ, ನಡೆಯುತ್ತಿದೆ.  

ಕಳೆದ ಕೆಲವು ವರ್ಷಗಳಲ್ಲಿ ಮುನ್ನೆಲೆಗೆ ಬಂದಿರುವ ಸಂಸ್ಕೃತಿ ವಿಮರ್ಶೆಯು ಹೊಸದಾಗಿ ಹುಟ್ಟಿಕೊಂಡ ಕೂಸಲ್ಲ. ಸಂಸ್ಕೃತಿ ರಾಜಕೀಯವು, ಎಲ್ಲ ಕಾಲದಲ್ಲಿಯೂ ಮಾರುವೇಷದಲ್ಲಿ ಅಡಗಿ ಕುಳಿತಿರುವ ಅಥವಾ ಢಾಣಾಡಂಗುರವಾಗಿ ವಿಜೃಂಭಿಸುತ್ತಿರುವ ಸತ್ಯವೇ.

ಏಕೆಂದರೆ, ಯಾವ ಕಾಲದಲ್ಲಿಯೂ ಸಾಂಸ್ಕೃತಿಕ ನಿರ್ವಾತ ಮತ್ತು ಸಾಮಾಜಿಕ ತಟಸ್ಥತೆ ಇರುವುದಿಲ್ಲ. ಆದರೆ, ಇಂದಿನ ಬಹುಮುಖೀ ಸನ್ನಿವೇಶವು ಸಹಜವಾಗಿಯೇ ಸಂಘರ್ಷಗಳಿಗೆ ಎಡೆಮಾಡಿಕೊಡುತ್ತದೆ. ಇದು ಪ್ರಜಾಪ್ರಭುತ್ವ, ವಿದ್ಯಾಭ್ಯಾಸ ಮತ್ತು ಸಾಮಾಜಿಕ ತಿಳಿವಳಿಕೆಗಳ ಫಲ. ಸಾಹಿತ್ಯದ ಅಧ್ಯಯನವನ್ನು ಸಾಂಸ್ಕೃತಿಕ ನೆಲೆಗಳಿಂದ ಮಾಡಬೇಕೆಂಬ ನಿಲುವು ಸರಿಯಾದುದು. ಆದರೆ, ಸಾಹಿತ್ಯವನ್ನು ಓದುವವರೆಲ್ಲರೂ ಇಂತಹುದೇ ಉದ್ದೇಶಗಳಿಂದ ಓದುತ್ತಾರೆ ಎಂದು ಹೇಳಬಹುದೇ? ಸಾಮಾಜಿಕ ಪ್ರಜ್ಞೆಯನ್ನು ಹೊಂದಿರುವ ಓದುಗರೆಲ್ಲರೂ ಹಗಲು-ಇರುಳು ಅಂತಹ ಬರೆಹಗಳನ್ನೇ ಓದುವರೆಂದು ತೀರ್ಮಾನಿಸಬಹುದೇ? ನಮ್ಮ `ಓದುಗಳು~ ಏಕೆ, ಹೇಗೆ ನಡೆಯುತ್ತವೆ ಎನ್ನುವುದರ ಬಗ್ಗೆ ಹೆಚ್ಚಿನ ಸಂಶೋಧನೆಗಳು ನಡೆದಿಲ್ಲ. ವಿಮರ್ಶಕರು ಕೊಟ್ಟ ಸಲಹೆ ಸೂಚನೆಗಳಿಗೆ ಅನುಗುಣವಾಗಿ `ಓದು~ ನಡೆಯುವುದಿಲ್ಲ. ನಮ್ಮ ಕಾಲದ ಇತರ ಚಟುವಟಿಕೆಗಳಂತೆಯೇ ಅದು ಕೂಡ `ಆರ್ಥಿಕ ಹಿತಾಸಕ್ತಿ~ಗಳಿಂದ ನಿಯಂತ್ರಿತವಾಗಿದೆ.

ತನ್ನ ಅಗತ್ಯಕ್ಕೆ ಅನುಗುಣವಾದ ವಿಮರ್ಶೆಯನ್ನೂ ರೂಪಿಸುವ ಶಕ್ತಿಯು `ಮಾರುಕಟ್ಟೆ~ಗೆ ಇದೆ. ಅದರಾಚೆಗಿದ್ದು ಬರೆಯುವವರು ಹೇಗೂ ಬಹಿಷ್ಕೃತರು. ಮಾಧ್ಯಮಗಳು ಕೂಡ ಈ ಕೆಲಸವನ್ನು ತಮ್ಮದೇ ಆದ ಅನಿವಾರ್ಯತೆಯ ಚೌಕಟ್ಟಿನೊಳಗೆ ಮಾಡಬೇಕಾಗುತ್ತದೆ.

ಇಂದು `ಸಾಹಿತ್ಯ~ ಎನ್ನುವ ಪರಿಕಲ್ಪನೆಯ ತನ್ನತನವನ್ನು ನಿರಾಕರಿಸಿ ಎಲ್ಲ ಬರವಣಿಗೆಯನ್ನೂ `ಸಾಂಸ್ಕೃತಿಕ ಪಠ್ಯ~ವೆಂದು ತಿಳಿಯುವುದು ರೂಢಿಯಾಗಿದೆ. ಇದು ಸಂಗೀತ, ಶಿಲ್ಪ, ಚಿತ್ರ ಮುಂತಾದ  ಅ-ಶಾಬ್ದಿಕ ಪಠ್ಯಗಳಿಗೂ ಅನ್ವಯಿಸುತ್ತದೆಯೇ? ಇದು ನಿಜವಾದರೆ, ಸೌಂದರ್ಯಮೀಮಾಂಸೆಯ ಬಹುಮುಖೀ ಸಾಧ್ಯತೆಗಳ ಮಾತು ಹಾಗಿರಲಿ, ಅಂತಹ ಒಂದು ತಿಳಿವಳಿಕೆಯ ಅಗತ್ಯವೇ ಪ್ರಶ್ನಿತವಾಗುತ್ತದೆ. ಈ ವಾದಗಳನ್ನು ಓದುಗ/ಕೇಳುಗ/ನೋಡುಗರು ಒಪ್ಪುತ್ತಾರೆಯೇ? ಇಂದು ಸಂಜೆ ನಾನು ಪುಸ್ತಕದ ಅಂಗಡಿಗೆ ಹೋಗಿದ್ದೆ. ಅಲ್ಲಿ `ಔಜಿಠಿಛ್ಟಿಠ್ಠ್ಟಿಛಿ~ ಎಂದು ಒಂದು ವಿಭಾಗವಿದ್ದರೆ, ‘Fiction~ ಎಂದು ಇನ್ನೊಂದು ವಿಭಾಗವಿತ್ತು. `ಕಾವ್ಯ~ವೆನ್ನುವ ವಿಭಾಗವು ಗೈರುಹಾಜರಾಗಿತ್ತು.
 
ಇಡೀ ಅಂಗಡಿಯಲ್ಲಿ ಹತ್ತು ಕವನ ಸಂಕಲನಗಳು ಇರಲಿಲ್ಲ. ಆದ್ದರಿಂದ  ಸಾಹಿತ್ಯ ವಿಮರ್ಶೆ, ಸಾಹಿತ್ಯ ಮುಂತಾದವುಗಳ ಸಾಮಾಜಿಕ ಸಾಧ್ಯತೆಗಳನ್ನು ಕುರಿತು ಭೋಳೆ ಮಾತುಗಳನ್ನು ಆಡುವುದನ್ನು ನಾವು ಬಿಡಬೇಕು. ಸಾಹಿತ್ಯವು ಎಲ್ಲಿಯೂ ಯಾವ ಕಾಲದಲ್ಲಿಯೂ ಸಮಾಜಗಳನ್ನು ಸಮುದಾಯಗಳನ್ನು ಬದಲಾಯಿಸಿಲ್ಲ. ವ್ಯಕ್ತಿಗಳನ್ನು ಬದಲಾಯಿಸುವುದು ಕೂಡ ದೂರವೇ ಉಳಿಯಿತು. ಆದರೆ, ಸಾಹಿತ್ಯವು ತಳೆಯುವ ನಿಲುವುಗಳಲ್ಲಿ ಅಂತಹ ಆಸೆಗಳು/ಅಪೇಕ್ಷೆಗಳು ಇರಬಹುದು, ಇದ್ದರೆ ತಪ್ಪಲ್ಲ. ಆದ್ದರಿಂದ ನಾವು ಇಂತಹ `ಸೆಲ್ಫ್ ಸರ್ವಿಂಗ್~ ಮಾತುಗಳನ್ನು ಬದಿಗಿಟ್ಟು, ಸಾಹಿತ್ಯವನ್ನು ಸೃಷ್ಟಿಸುತ್ತಿರುವ, ಓದುತ್ತಿರುವ ಅಲ್ಪಸಂಖ್ಯಾತರ ವಲಯಕ್ಕೆ ಸೀಮಿತವಾಗಬೇಕು.
 
ಹಾಗೆ ಓದುವವರ, ಬರೆಯುವವರ ಅಭಿರುಚಿಗಳನ್ನು ತಿದ್ದುವ ತೀಡುವ ಕೆಲಸವನ್ನು ನಮ್ಮ ಪಾಡಿಗೆ ನಾವು ಮಾಡಬೇಕು. ಈ ಕೆಲಸಕ್ಕೆ ಸರ್ಕಾರದ, ಹುಸಿ ಸಿದ್ಧಾಂತಗಳ, ಚಳುವಳಿಗಳ ಹಂಗು ಇಲ್ಲ. ಕೊನೆಗೂ ಸಮಕಾಲೀನ ಅಬ್ಬರಗಳನ್ನು ಮೀರಿಯೂ ಉಳಿಯುವ ಅನೇಕ ಕೃತಿಗಳನ್ನು ನಾವು ನೋಡಿದ್ದೇವೆ. ಸಮಾಜ ಮತ್ತು ಇತಿಹಾಸಗಳನ್ನು ಅಧ್ಯಯನ ಮಾಡುವವರು, ತಮ್ಮ ಆಕರಗಳಾಗಿ ಸಾಹಿತ್ಯವನ್ನು ಬಳಸಿಕೊಂಡಾಗ, ಅದರ ಬೇರೆ ಹಲವು ನೆಲೆಗಳು ಪ್ರಸ್ತುತವಾಗುತ್ತವೆ. ಈಗ ಸಾಹಿತ್ಯವಿಮರ್ಶೆಯಲ್ಲಿಯೂ ಅಂತಹ ಕೆಲಸ ನಡೆಯುತ್ತಿದೆ. ಅದು ಹೊಸ ಆಯಾಮವೇ ಹೌದು.

ನಿಷ್ಪಕ್ಷಪಾತವಾದ, ವಸ್ತುನಿಷ್ಠವಾದ ವಿಮರ್ಶೆಯ ಬಗ್ಗೆ ಬಂಡಿಗಟ್ಟಲೆ ಮಾತುಗಳನ್ನು ಆಡುತ್ತಿದ್ದ ಕಾಲ ಒಂದಿತ್ತು. ಅಂತಹ ತಟಸ್ಥಭಾವ ಸಾಧ್ಯವಿಲ್ಲವೆನ್ನುವ ಸತ್ಯವು ಈಗ ಮನದಟ್ಟಾಗಿದೆ. ಎಲ್ಲ ಕಾಲದ ವಿಮರ್ಶೆಯೂ, ವಸ್ತುನಿಷ್ಠವೆಂದು ಹೇಳಿಕೊಳುತ್ತಲೇ, ತನಗೆ ಬೇಕಾದ್ದನ್ನು  ಎತ್ತಿಹಿಡಿಯುವ ಬೇಡವಾದದ್ದನ್ನು ಬದಿಗೆ ಸರಿಸುವ ಕೆಲಸದಲ್ಲಿ ತಲ್ಲೀನವಾಗಿರುತ್ತದೆ.

`ನವ್ಯಕವಿತೆ~ಗಳ ಏರುವೆಯಲ್ಲಿ, ಕನ್ನಡ ಚಲನಚಿತ ಗೀತೆಗಳಾಗಲೀ ಅಷ್ಟೇಕೆ, ಭಾವಗೀತೆಗಳಾಗಲೀ ಇಷ್ಟವೆಂದು ಹೇಳುವುದೇ ಕಷ್ಟವಾಗುತ್ತಿತ್ತು. ಆದ್ದರಿಂದಲೇ ವಿಮರ್ಶೆಯ ಹಿಂದಿರುವ ನಿರ್ದಿಷ್ಟವಾದ ಸಾಹಿತ್ಯತತ್ವವು, ವಸ್ತುನಿಷ್ಠತೆಯನ್ನು ಅಸಾಧ್ಯವಾಗಿಸುತ್ತದೆ. ಅಷ್ಟೇ ಅಲ್ಲ, ಸಾಹಿತ್ಯತತ್ವ ಎನ್ನುವುದೇ ಸಾಮಾಜಿಕವಾದ ಸಂಗತಿಗಳ ಕೂಸು. ಸರ್ವಸಮ್ಮತವಾದ ಒಂದು ಸಾಹಿತ್ಯತತ್ವ, ಇರಲಿಲ್ಲ, ಇರುವುದಿಲ್ಲ.
 
ಅದು ತನ್ನ ಸುತ್ತಲೂ ಜೀವನಮೌಲ್ಯಗಳ, ಸಾಮಾಜಿಕವಾದ ಆಯ್ಕೆಗಳ ಆವರಣವನ್ನು ಹೊಂದಿರುತ್ತದೆ. ಅಗತ್ಯಕ್ಕೆ ತಕ್ಕಹಾಗೆ ಬದಲಾಗುತ್ತಿರುತ್ತದೆ. ಓದುಗ ಅಥವಾ ವಿಮರ್ಶಕಿ ತನ್ನ ಆಯ್ಕೆ, ಅಪೇಕ್ಷೆಗಳನ್ನು ಇನ್ನೊಬ್ಬರ ಮೇಲೆ ಹೇರುವುದು ಸಾಧ್ಯವಿಲ್ಲ. ಆದರೆ, ಅವಳಿಗೆ ತನ್ನ ಗ್ರಹಿಕೆ ಮತ್ತು ಆಯ್ಕೆಯ ಮಾನದಂಡಗಳನ್ನು ವಿವರಿಸುವ, ಸಮರ್ಥಿಸಿಕೊಳ್ಳುವ ಹಕ್ಕು ಇರುತ್ತದೆ. ಅವಳು ಜನಪ್ರಿಯವಾದ ಮಾದರಿಗಳನ್ನು ತಿರಸ್ಕರಿಸುವುದರಿಂದ ಹೆಚ್ಚೇನೂ ಆಗುವುದಿಲ್ಲ.
 
ಒಬ್ಬ ವಿಮರ್ಶಕಿಗೆ ನಿಜವಾಗಿಯೂ ಸಾಧ್ಯವಾಗುವುದು ಒಂದು ಮಟ್ಟದ ತೆರೆದ ಮನಸ್ಸು ಮತ್ತು `ಅಹಂಕಾರದ ನಿರಸನ~ ಮಾತ್ರ. ಇದೆಲ್ಲ ನಿಜವಾದರೂ ಸಾಹಿತ್ಯದ ಓದುಗರಿಗೆ ಅತ್ಯುತ್ತಮವಾದ ಕೃತಿಯ ಒಳಗಿರುವ ತಲ್ಲಣಗಳು, ಶಕ್ತಿಮೂಲಗಳು ಹೇಗೋ ಸಂವಹನವಾಗುತ್ತವೆ. ಇಂತಹವರ ಸಂಖ್ಯೆಯು ಕಡಿಮೆ ಇರುತ್ತದೆ. ಎಲ್ಲ ಕಲೆಗಳ ವಿಷಯದಲ್ಲಿಯೂ ಈ ಮಾತು ನಿಜವಲ್ಲವೇ?

ಹಾಗೆ ನೋಡಿದರೆ, ಸಾಹಿತ್ಯವು ಒಬ್ಬ ಓದುಗನ ಮೇಲೆ ಬೀರುವ ಪರಿಣಾಮಕ್ಕೂ ಸಾಹಿತ್ಯವೆನ್ನುವ ಸಂಸ್ಥೆಯು ಸಮಾಜದಲ್ಲಿ ನಿರ್ವಹಿಸುವ ಪಾತ್ರಕ್ಕೂ ಅಂತರವಿದೆ. ನಾವು ಸಾಹಿತ್ಯವನ್ನು ಕಲಿಸುವ, ಬೆಲೆ ಕಟ್ಟುವ ಕೆಲಸದಲ್ಲಿ ಇವೆರಡೂ ನೆಲೆಗಳು ಬೇರೆಬೇರೆ ಪ್ರಮಾಣದಲ್ಲಿ ಸೇರಿಕೊಂಡಿರುತ್ತವೆ. ಸಮಾಜದ ಒಂದು ಗುಂಪು ಮಾತ್ರ ಶಿಕ್ಷಣಕ್ಕೆ ಅನಾವರಣವಾಗುತ್ತಿರುವಾಗ, ಮೊದಲ ನೆಲೆ ಮುಖ್ಯವಾದರೆ, ಹಲವು ಬಗೆಯ ಸಮುದಾಯಗಳು ಕಲಿಯುತ್ತಿರುವಾಗ ಎರಡನೆಯದು ಮುಖ್ಯವೆನಿಸುತ್ತದೆ. ಆಗ ಸಾಮಾಜಿಕವಾದ ತಿಳಿವಳಿಕೆಯನ್ನು ಸಾಹಿತ್ಯದಿಂದ ಕೊಡಬಹುದೆಂಬ `ನಂಬಿಕೆ~ ಮತ್ತು ಕೊಡಬೇಕೆಂಬ ಅಪೇಕ್ಷೆ ಇರುತ್ತದೆ.

ಸಾಹಿತ್ಯವನ್ನು ಅನುಭವಿಸುವ ಓದುಗರ ವಲಯವು ವಿಸ್ತಾರವೂ ಬಹುಮುಖಿಯೂ ಆದಾಗ, ಅದನ್ನು ಹೇಗೆ ಅಣಿಗೊಳಿಸಬೇಕು, ಹೇಗೆ ಒಳಗೊಳ್ಳಬೇಕು ಎನ್ನುವುದರ ಬಗ್ಗೆ ಸಾಹಿತ್ಯಶಿಕ್ಷಣ ಮತ್ತು ವಿಮರ್ಶೆಯು ಬಹಳ ಕಾಲ ಯೋಚನೆ ಮಾಡಲಿಲ್ಲ. ಅವರು ಅಲ್ಪಪ್ರಾಣ ಮಹಾಪ್ರಾಣಗಳ ಅಂತರವನ್ನೂ ತಿಳಿಯದ ದಡ್ಡರೆಂದೋ ಇಂಗ್ಲಿಷ್ ಓದಲಾಗದ `ಅನಾಗರಿಕ~ರೆಂದೋ ಟೀಕಿಸುವುದರಲ್ಲಿಯೇ ದಶಕಗಳು ಕಳೆದವು. ಜನಸಮುದಾಯಗಳ ನಡುವೆಯೇ  ಮೂಡಿಬಂದ ಜಾನಪದ ಬರವಣಿಗೆಯ ಸಾಹಿತ್ಯಕ ನೆಲೆಗಳನ್ನು ಕಂಡುಕೊಳ್ಳುವ ಕೆಲಸ ಈಗತಾನೇ ಮೊದಲಾಗಿದೆ. ಇದು ವಿಮರ್ಶಕರ, ವಿದ್ವಾಂಸರ ಪ್ರತಿಭೆ-ಪ್ರಾಮಾಣಿಕತೆಗಳ ಪ್ರಶ್ನೆಯಲ್ಲ, ಅವರನ್ನು ಹುಟ್ಟಿಸಿದ ಸಾಮಾಜಿಕ ಸನ್ನಿವೇಶಗಳ ಮಾತು.

ಎಲ್ಲ ಕಾಲದಲ್ಲಿಯೂ ವಿಭಿನ್ನ ಚಳುವಳಿಗಳ/ಸಮುದಾಯಗಳ ಮುಖವಾಣಿಯಾದ ವಿಮರ್ಶೆಯೂ ಇರುತ್ತದೆ. ತಾನು ಹಾಗಿಲ್ಲವೆಂದು `ಹೇಳಿಕೊಳ್ಳುವ~ ವಿಮರ್ಶೆಯೂ ಇರುತ್ತದೆ. ಎಲ್ಲ ವಿಮರ್ಶೆಯೂ ಹಳೆಯ ಪರಂಪರೆಗಳೊಂದಿಗೆ ಜಗಳ ಆಡುತ್ತಿರುತ್ತದೆ, ಆಯ್ಕೆ ಮಾಡಿಕೊಳ್ಳುತ್ತದೆ, ಅವುಗಳನ್ನು ತನಗೆ ಬೇಕಾದ ಹಾಗೆ ವಿವರಿಸುತ್ತದೆ ಅಥವಾ ಅದರ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯ ತೋರಿಸುತ್ತದೆ. ಅಥವಾ ಪರಂಪರೆಯೊಳಗೇ ಇದ್ದರೂ ಇಲ್ಲದಂತಿದ್ದ  `ನೆಲದ ಮರೆಯ ನಿದಾನ~ಗಳನ್ನು ಹುಡುಕಿ ತೋರಿಸುತ್ತದೆ. ನಾವು ನಮ್ಮ ಕಾಲವನ್ನು ನೋಡುವ ರೀತಿಯೇ, ನಮ್ಮ ಇಂದಿನ ಅಗತ್ಯವೇ ಕಳೆದ ಕಾಲದ ಬರವಣಿಗೆಯನ್ನು ನೋಡುವ ಬಗೆಗಳನ್ನೂ ತೀರ್ಮಾನ ಮಾಡುತ್ತದೆ.

ಆದರೆ, ವಿಮರ್ಶಕರು ವಕೀಲರಾಗಬಾರದು, ಬಾಲಬಡುಕರಾಗಬಾರದು. ಐಡಿಯಾಲಜಿಗಳ, ಜಾತಿಗಳ, ಪ್ರಸಿದ್ಧ ಲೇಖಕರ, ಗೆಳೆಯರ ಗುಂಪುಗಳ ವಕೀಲರಾಗುವುದಕ್ಕಿಂತ ದೊಡ್ಡ ದುರಂತವಿಲ್ಲ. ಇದು ಸಣ್ಣ ವಿಷಯವೆಂದು ತೋರಬಹುದು. ಆದರೆ, ಇದು ನಮ್ಮ ಕಾಲದ ದೊಡ್ಡ ಸಮಸ್ಯೆ. ನಾವು ಆರಾಧಿಸುವ ಲೇಖಕರನ್ನು `ಹೋಲಿ ಕೌ~ಗಳಾಗಿ ಮಾಡಿಕೊಂಡು ಅವರ ತಂಟೆಗೆ ಯಾರೂ ಬರದ ಹಾಗೆ ಕಾಪಾಡುವುದು. ಆರಾಧಿಸದೆ ಇರುವವರನ್ನು ಕಾಲಕಸದಂತೆ ನೋಡುವುದು. ಇದರ ಸಂಗಡವೇ ಅತ್ಯುಕ್ತಿ, ಉತ್ಪ್ರೇಕ್ಷೆಗಳ ಭಾಷೆ. ಇವೆಲ್ಲವೂ ನಮ್ಮ ವಿಮರ್ಶೆಗೆ ಅಂಟಿಕೊಂಡಿರುವ ರೋಗಗಳೇ. ಜುಜುಬಿ ಅನ್ನಿಸಬಹುದು, ಆದರೆ ಜುಜುಬಿ ಅಲ್ಲ. 

ಇಂದು ಸಾಹಿತ್ಯ ಮತ್ತು ವಿಮರ್ಶೆಗಳಲ್ಲಿ ಪಲ್ಲಟಗಳು ನಡೆಯುತ್ತಿರುವುದಕ್ಕೆ ಮುಖ್ಯ ಕಾರಣಗಳಲ್ಲಿ ಒಂದು ಅವು ಮಾಧ್ಯಮಗಳು ಮತ್ತು ತಂತ್ರಜ್ಞಾನಗಳ ನಿಯಂತ್ರಣದಲ್ಲಿ ಇರುವುದು. ಕೇವಲ ಈಗ ಮಾತ್ರವಲ್ಲ, ಬರವಣಿಗೆ, ಮುದ್ರಣ, ಕಂಪ್ಯೂಟರ್, ಪತ್ರಿಕೆಗಳು, ವಿದ್ಯುನ್ಮಾನ ಮಾಧ್ಯಮಗಳು ಎಲ್ಲವೂ ಇಂಥ ನಿಯಂತ್ರಣದಲ್ಲಿ ಮೂಡಿಬಂದ ದಾರಿಯ ಹೆಜ್ಜೆಗಳೇ ಆಗಿವೆ. ಈ ವಿಷಯದಲ್ಲಿ ನಮಗೆ ಹೆಚ್ಚಿನ ಆಯ್ಕೆ ಇರುವಂತೆ ಕಾಣುವುದಿಲ್ಲ.

ಏಕೆಂದರೆ, ಪುಸ್ತಕಗಳನ್ನು ಸೃಷ್ಟಿಸುವ, ಪ್ರದರ್ಶಿಸುವ, ಬೆಲೆಕಟ್ಟುವ ಕೆಲಸವನ್ನೂ ಅವೇ ತೆಗೆದುಕೊಂಡಂತಿದೆ. ಕಥೆ, ಕವಿತೆ, ಪ್ರಬಂಧ ಅಥವಾ ನಗೆಬರೆಹ ಹೇಗೆ ಇರಬೇಕು, ಎಷ್ಟು ಇರಬೇಕು ಮತ್ತು ಯಾವುದರ ಜೊತೆಗೆ ಇರಬೇಕು ಎನ್ನುವುದನ್ನು ಅವೇ ತೀರ್ಮಾನಿಸುವಂತೆ ಆಗಿದೆ. ಬೇಡವೆನ್ನುವುದಾದರೆ, ಬರವಣಿಗೆಗೆ ಅಜ್ಞಾತವಾಸವೇ ಗತಿ ಎನ್ನುವಂತೆ ಆದರೆ, ಏನು ಮಾಡುವುದು? ಇಷ್ಟಕ್ಕೂ ಮಾಧ್ಯಮಗಳ ಗುರಿ ಯಾವುದೇ ಬಗೆಯ ಓದುಗರೋ ಅಥವಾ ಜಾಹಿರಾತುದಾರರೋ ಎನ್ನುವುದು ಕೂಡ ಮುಖ್ಯವಾದ ಪ್ರಶ್ನೆ.

ಈ ನಿಟ್ಟಿನಲ್ಲಿ ಕೊಂಚ ಬೇರೆ ಬಗೆಯಲ್ಲಿ ಕೆಲಸ ಮಾಡುತ್ತಿದ್ದ ಸಾಹಿತ್ಯಕ ಪತ್ರಿಕೆಗಳು ಕೂಡ ಇಂದು ಏದುಸಿರು ಬಿಡುತ್ತಿವೆ. ನಿಜ. ಅವು ಒಂದು ಮಟ್ಟದ ಗುಂಪುಗಾರಿಕೆಯನ್ನು ಅಥವಾ ನಿರ್ದಿಷ್ಟವಾಗಿ ಯೋಚನೆ ಮಾಡುವವರ ಒಂದುಗೂಡಿಕೆಯನ್ನು ಸಾಧಿಸುತ್ತಿತ್ತು. ಆದರೂ ಅವುಗಳಲ್ಲಿ ಬರೆಹಗಳಲ್ಲಿ ಬೇರೆತನಕ್ಕೆ, ಹೊಸ ಪ್ರಯೋಗಗಳಿಗೆ ಎಡೆ ಇರುತ್ತಿತ್ತು. ಈಗ ಅವು ಕೂಡ ತಾವೇ ಕಟ್ಟಿಕೊಂಡ ಸೆರೆಮನೆಗಳಲ್ಲಿ ನರಳುತ್ತ, ಕಡ್ಡಿಯನ್ನೇ ಗುಡ್ಡಮಾಡುತ್ತಾ ಕಾಲ ಕಳೆಯುತ್ತಿವೆ. ಆದರೂ ಅಲ್ಲಿ ವಿಮರ್ಶೆಗೆ ಆಲೋಚನೆಗೆ ಕೊಂಚ ಅವಕಾಶ ಇದೆ.

ಇಂದು ಎಲ್ಲ ವಿಮರ್ಶಕರನ್ನೂ ಕಾಡುತ್ತಿರುವ ಹಾಗೂ ವಿಮರ್ಶೆಯ ಬೇರೆತನಗಳಿಗೆ ಕಾರಣ ಆಗುತ್ತಿರುವ ಇನ್ನೊಂದು ಸಂಗತಿ, ನಾವು ಬಳಸಬೇಕಾದ ಸಾಹಿತ್ಯಮೀಮಾಂಸೆಯ ಸ್ವರೂಪಕ್ಕೆ ಸಂಬಂಧಿಸಿದೆ. ವಿಮರ್ಶೆಯೆಂದರೆ, ಸಾಹಿತ್ಯಕೃತಿಗಳನ್ನು ಕುರಿತು ಬರೆಯುವುದೆಂದು ನಂಬಿದಾಗಲೂ ಈ ಸವಾಲು ಇದ್ದೇ ಇರುತ್ತದೆ. ಕಳೆದ ಸಾವಿರ ವರ್ಷಗಳಲ್ಲಿ ಬಂದಿರುವ ಬೇರೆಬೇರೆ ಬಗೆಯ ಬರಹಗಳು ಒಂದೇ ರೀತಿಯ ಸಾಹಿತ್ಯತತ್ವವನ್ನು, ಹತಾರುಗಳನ್ನು ಬಯಸುತ್ತವೆಯೋ ಅಥವಾ ತಮತಮಗೆ ಅನನ್ಯವಾದ ಬಗೆಗಳನ್ನು ಬೇಡುತ್ತವೆಯೋ ಎನ್ನುವುದು ಮುಖ್ಯವಾದ ಪ್ರಶ್ನೆ.

ಕವಿರಾಜಮಾರ್ಗ, ಆದಿಪುರಾಣಗಳನ್ನು ತಿಳಿಯುವ ಹಾಗೆಯೇ, `ಶಿಕಾರಿ~, `ಶೂದ್ರತಪಸ್ವಿ~ಗಳನ್ನೂ ನೋಡಬೇಕೇ ಎನ್ನುವುದು ಕಡೆಗಣಿಸಲಾಗದ ಸಂಗತಿ. ಸಂಸ್ಕೃತದ ಅಗತ್ಯಗಳಿಗೆ ತಕ್ಕಂತೆ ರೂಪಿತವಾದ ಅಲಂಕಾರ ಶಾಸ್ತ್ರವನ್ನು ಕನ್ನಡಕ್ಕೂ ಸರಿಯೆಂದು ತಿಳಿದು, ಉಪಮೆ, ರೂಪಕ, ಉತ್ಪ್ರೇಕ್ಷೆಗಳ, ರಸ, ಧ್ವನಿ, ವಕ್ರೋಕ್ತಿಗಳ ಹಾಗೆಯೆ ಅಷ್ಟಾದಶ ವರ್ಣನೆಗಳ ಸಂತೆಯಲ್ಲಿ ನಾವು ಎಷ್ಟೋ ನೂರು ವರ್ಷಗಳನ್ನು ಕಳೆದೆವು. ಈ ಸಮಯದಲ್ಲಿ ಕನ್ನಡಕ್ಕೆ ಹತ್ತಿರವಾಗಬಹುದಾಗಿದ್ದ ದ್ರಾವಿಡ/ ತಮಿಳು ಕಾವ್ಯಮೀಮಾಂಸೆಯ ಕಡೆಗೆ ನಾವು ಕಣ್ಣೆತ್ತಿಯೂ ನೋಡಲಿಲ್ಲ. ನಮ್ಮ ಕಾವ್ಯಗಳ ಯೋಗ್ಯತೆಗೆ ಅನುಗುಣವಾದ ಮೀಮಾಂಸೆ ಮತ್ತು ವಿಮರ್ಶೆಗಳನ್ನು ಕಟ್ಟಿಕೊಳ್ಳದೆ ಇರುವುದು ಕನ್ನಡದ ಬಹು ದೊಡ್ಡ ಕೊರತೆ.

ಹೀಗೆ ಸಂಸ್ಕೃತದ ಹೆಗಲ ಮೇಲೆ ಕುಳಿತುಕೊಂಡು ಮಾಡುತ್ತಿದ್ದ ತಪ್ಪುಹಾದಿಯ ಪ್ರಯಾಣವು,  ಕ್ರಮೇಣ ಪಡುವಣದ ದಿಕ್ಕಿಗೆ ತಿರುಗಿಕೊಂಡಿತು. ಪಾಶ್ಚಾತ್ಯ ಸಾಹಿತ್ಯಮೀಮಾಂಸೆಯು ನಮ್ಮ ಬಳಕೆಯ ಉಪಕರಣವಾಯಿತು. ಆ ಕಡೆಯಿಂದ ಬಂದ ಕಥೆ, ಕಾದಂಬರಿ, ಭಾವಗೀತೆ, ನಾಟಕಗಳ ಸಂಗಡವೇ ಅವುಗಳನ್ನು ಕಾಣುವ ಬಗೆಗಳೂ ಆಮದಾಗಿ ಬಂದವು. ಇವುಗಳನ್ನು ನಮ್ಮದೇ ಆದ ಆಲೋಚನೆಯ ಹಾದಿಗಳಿಗೆ ಕಸಿಮಾಡಿ, ಕೆಲವು `ಹೈಬ್ರಿಡ್‌` ವಿಧಾನಗಳನ್ನು ರೂಪಿಸಿಕೊಂಡೆವು. ದಿನಕಳೆದಂತೆ ಹಳೆಯದು, ಹೊಸದು ಎಲ್ಲಕ್ಕೂ ಒಂದೇ ಬಗೆಯ ವಿಧಾನಗಳನ್ನು ಬಳಸಿಕೊಂಡೆವು.

ಹೀಗೆ ತಂದುಕೊಂಡಿದ್ದು ಕೇವಲ ಸಾಹಿತ್ಯತತ್ವವನ್ನು ಮಾತ್ರ ಅಲ್ಲ. ಜೀವನ ಮತ್ತು ಸಮಾಜಗಳನ್ನು ಅರ್ಥ ಮಾಡಿಕೊಳ್ಳುವ ಬಗೆಗಳನ್ನೂ ಅಲ್ಲಿಂದಲೇ ಕಲಿತೆವು. ನಮ್ಮ ಜೀವನಕ್ರಮದಲ್ಲಿ ಆಗುವ ಬದಲಾವಣೆಗಳಿಗೂ ಸಾಹಿತ್ಯವನ್ನು ನೊಡುವ ಬಗೆಗೂ ಹತ್ತಿರದ ಸಂಬಂಧವಿದೆ. ಇಲ್ಲಿ ಮುಖ್ಯವಾಗಿ ನೋಡಬೇಕಾದ ವಿಷಯವೆಂದರೆ, `ಸಾಹಿತ್ಯವನ್ನು ಕುರಿತ ಆಲೋಚನೆಗಳು~ ತಾವು ಹುಟ್ಟಿದ ಪ್ರದೇಶ, ಕಾಲ ಮತ್ತು ಚಾರಿತ್ರಕ ಸಂದರ್ಭಗಳಿಂದ ಕಟ್ಟಿಹಾಕಿಸಿಕೊಳ್ಳುವುದೋ ಅಥವಾ ಅದು ಎಲ್ಲ ಕಾಲಕ್ಕೂ ಹೊಂದಿಕೊಳ್ಳುತ್ತದೆಯೋ ಎನ್ನುವುದು.

ಕೊನೆಗೂ ಕೇಳಿಕೊಳ್ಳಬೇಕಾದ ಪ್ರಶ್ನೆಯೆಂದರೆ, ಕನ್ನಡ ಸಾಹಿತ್ಯವು ಮೊದಲಿನಂದಲೂ ತನಗೆ ಸರಿಹೊಂದುವ ತಾತ್ವಿಕತೆಯನ್ನು ಕಟ್ಟಿಕೊಂಡು ಬಂದಿದೆಯೇ ಎನ್ನುವದು. ಈ ಪ್ರಶ್ನೆಗೆ ಉತ್ತರವು ಕವಿಗಳು ನೇರವಾಗಿ ಹೇಳಿಕೊಂಡಿರುವ ಮಾತುಗಳಿಂದ ತಿಳಿಯುವುದಿಲ್ಲ. ಬದಲಾಗಿ ಅವರು ತಮ್ಮ ಕಾವ್ಯಗಳನ್ನು ಕಟ್ಟಿಕೊಟ್ಟಿರುವ ಬಗೆಯಲ್ಲಿಯೇ ಅವರ ಸಾಹಿತ್ಯತತ್ವವು ಅಡಗಿಕೊಂಡಿರುತ್ತದೆ. 

ಉದಾಹರಣೆಗೆ ಪಂಪನು ಕಟ್ಟಿಕೊಟ್ಟ ಕಾವ್ಯತತ್ವವನ್ನು ರನ್ನನು ಬಹುಮಟ್ಟಿಗೆ ಅನುಸರಿಸಿದರೆ, ವಚನಕಾರರು ಅದನ್ನು ಅನಾಮತ್ತಾಗಿ ಮುರಿದು ಮತ್ತೊಂದನ್ನು ರೂಪಿಸಿಕೊಳ್ಳುತ್ತಾರೆ. ಮತ್ತೆ ಅವರಲ್ಲಿಯೇ ಅಲ್ಲಮ, ಬಸವಣ್ಣ ಮತ್ತು ಅಕ್ಕಮಹಾದೇವಿಯರ ಆಲೋಚನಾವಿಧಾನಗಳ ನಡುವೆ ಅಂತರವಿರುತ್ತದೆ. ಆದ್ದರಿಂದ ಕನ್ನಡ ಕವಿಗಳ ಒಡಲಿನಲ್ಲಿ ಕಾಣಿಸಿಕೊಂಡಿರುವ `ಅಲಂಕಾರಶಾಸ್ತ್ರ~ವನ್ನು ಪಕ್ಕಕ್ಕೆ ತಳ್ಳಿ ಅವುಗಳ ಒಳಗೆ ಅಡಗಿರುವ ಕಾವ್ಯಮೀಮಾಂಸೆಯನ್ನು ತೆಗೆಯಬೇಕಾಗಿದೆ. ಹಾಗೆಯೇ ನಮ್ಮ ಕಾಲದ ಬರಹಗಳಲ್ಲಿ ಅವುಗಳ ಮುಂದುವರಿಕೆ ಮತ್ತು ಮರುಕಟ್ಟೋಣಗಳನ್ನು ಅರಸಬೇಕಾಗಿದೆ.
 
ಎಂದರೆ `ವಡ್ಡಾರಾಧನೆ~, `ಮಂಟೇಸ್ವಾಮಿ ಕಾವ್ಯ~ ಮತ್ತು `ಕುಸುಮಬಾಲೆ~ಗಳ ನಡುವೆ ಇರುವ ಸಮಾನ ಎಳೆಗಳನ್ನು ಹುಡುಕಿ ತೆಗೆದು ತೋರಿಸುವ ಕೆಲಸ.     

ವಿಮರ್ಶೆಯನ್ನು ಬರೆಯುವ ಭಾಷೆಯಲ್ಲಿ ಬದಲಾವಣೆಯಾಗುವುದು ಈಗ ಅನಿವಾರ್ಯವಾಗಿದೆ. ಏಕೆಂದರೆ, ಕನ್ನಡ ಅಥವಾ ಇಂಗ್ಲಿಷ್ ಸಾಹಿತ್ಯದ ಅಧ್ಯಾಪಕರು ಮಾತ್ರವೇ ಸಾಹಿತ್ಯದ ರಚನೆ, ಓದು ಮತ್ತು ವಿಮರ್ಶೆಗಳಲ್ಲಿ ತೊಡಗಿಕೊಳ್ಳುತ್ತಿದ್ದ ಕಾಲ ಹಿಂದೆ ಉಳಿಯಿತು. ಇಂದು ವಿಮರ್ಶೆಯ ಪರಿಭಾಷೆಯ ನೆರವಿಲ್ಲದೆ ವಿಮರ್ಶೆಯನ್ನು ಬರೆಯಬೇಕಾದ ಬಿಕ್ಕಟ್ಟು ಮೂಡಿಬಂದಿದೆ. ಇಲ್ಲವಾದರೆ, ನಾವು ಬರೆದುದನ್ನು ಯಾರೋ ಕೆಲವರು ಮಾತ್ರ, ಅದೂ ಮುಖ ಹಿಂಡಿಕೊಂಡು ಓದುವ ಸನ್ನಿವೇಶವನ್ನು ಎದುರಿಸಬೇಕು.
ಸಾಹಿತ್ಯದ ವಿದ್ಯಾರ್ಥಿಗಳು ಕೂಡ ಇದೇ ನೆಲೆಯನ್ನು ತಲುಪಿರುವುದರಿಂದ, ಲೇಖಕರ ಮತ್ತು ಅವರು ಬರೆದ ಪುಸ್ತಕಗಳ ಹೆಸರುಗಳು ಮುಖ್ಯವಾಗುತ್ತವೆಯೇ ಹೊರತು ಅವುಗಳ ಒಳಗೆ ಇರುವ ವಿಷಯ ಅಲ್ಲ. ಈಚಿನ ದಿನಗಳಲ್ಲಿ ಸೆಮಿನಾರುಗಳಿಗೆ ಹೋದಾಗ, ಕನ್ನಡ ಅಧ್ಯಾಪಕರೇ ನಮ್ಮ ಬಳಿಗೆ ಬಂದು, ನಮ್ಮ ಬಯೋಡೇಟಾಗಾಗಿ ಹಲ್ಲುಗಿಂಜುತ್ತಾ ನಿಲ್ಲುವುದನ್ನು ನೆನೆಸಿಕೊಂಡರೆ ನಾಚಿಕೆಯಾಗುತ್ತದೆ. ಅವರ ಬಗ್ಗೆ ಮತ್ತು ನಮ್ಮ ಬಗ್ಗೆ. ಆದ್ದರಿಂದ ವಿಮರ್ಶೆಯು ಎರಡು ಕವಲುಗಳಾಗಿ ಒಡೆದು, ಪರಿಭಾಷೆಯ ಒಳಗೆ ಮತ್ತು ಅದನ್ನು ಬಳಸದೆ ಕೆಲಸ ಮಾಡುವುದು ಸೂಕ್ತವೆಂದು ತೋರುತ್ತದೆ.

ನನ್ನ ಈ ಮಾತುಗಳಲ್ಲಿ ಉತ್ತರಗಳಿಗಿಂತ ಪ್ರಶ್ನೆಗಳೇ ಹೆಚ್ಚಾಗಿವೆ. ಇವು ನಮ್ಮೆಲ್ಲರನ್ನೂ ಕಾಡುತ್ತಿರುವ ಸಮಸ್ಯೆಗಳು. ಪರಿಹಾರಗಳನ್ನೂ ಸಮುದಾಯಗಳೇ ಕಂಡುಕೊಳ್ಳಬೇಕು. ಗೊಂದಲಗಳು ತುಂಬಿದ ಹಾದಿಯಲ್ಲಿಯೇ ತಾತ್ಕಾಲಿಕವಾಗಿಯಾದರೂ ಬೆಳಕು ತೋರುವ ಹರಹಗಳು ಮೂಡುತ್ತವೆ. ವಿಮರ್ಶೆಯ ಪಾಡು ಏನಾದರೂ ಆಗಲಿ, ನಮ್ಮ ಕಾಲದ ಸಮುದಾಯಗಳ ಹಾಡುಪಾಡುಗಳನ್ನು, ವ್ಯಕ್ತಿಗಳ ಅಂತರಂಗದ ತಲ್ಲಣಗಳನ್ನು, ಎಲ್ಲ ಕಾಲಕ್ಕೂ ಸಲ್ಲುವ ತಾತ್ವಿಕ ಸಂಕಟಗಳನ್ನು ಒಳಗೊಳ್ಳುವ ಕಥೆ, ಕವಿತೆ, ನಾಟಕಗಳು ಬರಲಿ ಎನ್ನುವುದು ನನ್ನ ಹಂಬಲ.


                      
    
   
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT