ಭಾರತದ ಪ್ರಮುಖ ಮೊಬೈಲ್ ಸೇವಾದಾತ ಕಂಪೆನಿಗಳಲ್ಲಿ ಒಂದಾದ ಏರ್‌ಟೆಲ್‌ನ ಜಾಹೀರಾತೊಂದು ಕರ್ನಾಟಕದ ಎಲ್ಲಾ ಪ್ರಮುಖ ದಿನಪತ್ರಿಕೆಗಳ ಮುಖಪುಟವನ್ನು ಆವರಿಸಿಕೊಂಡಿತ್ತು. ಎರಡು ಮೂರು ದಿನಗಳ ಕಾಲ ನಿರಂತರವಾಗಿ ಪ್ರಕಟವಾದ ಈ ಜಾಹೀರಾತನ್ನು ಕನ್ನಡದಲ್ಲಿಯೂ ಇತ್ತು. ಆದರೆ ಇದನ್ನು ಓದಿ ಅರ್ಥ ಮಾಡಿಕೊಳ್ಳಲು ಕನ್ನಡದ ಯಾವ ವಿದ್ವಾಂಸರಿಗೂ ಸಾಧ್ಯವಿರಲಿಲ್ಲ.

ಇದೇ ಜಾಹೀರಾತು ಇಂಗ್ಲಿಷ್ ಪತ್ರಿಕೆಗಳಲ್ಲಿ ಇಂಗ್ಲಿಷ್‌ನಲ್ಲೇ ಪ್ರಕಟವಾದ್ದರಿಂದ ಕಂಪೆನಿ ಜನರಿಗೆ ಏನನ್ನು ಹೇಳಲು ಹೊರಟಿದೆ ಎಂಬುದು ಅಸ್ಪಷ್ಟವಾಗಿಯಾದರೂ ತಿಳಿಯಿತು. ಸದ್ಯ ನಡೆಯುತ್ತಿರುವ ಮೊಬೈಲ್ ಕರೆ ಕಡಿತಕ್ಕೆ ಸಂಬಂಧಿಸಿದ ಚರ್ಚೆಗಳ ಹಿನ್ನೆಲೆಯಲ್ಲಿ ಈ ಜಾಹೀರಾತನ್ನು ಅರ್ಥ ಮಾಡಿಕೊಳ್ಳಬಹುದು.

ಇಂಗ್ಲಿಷ್ ಹೊರತು ಪಡಿಸಿದ ಹೆಚ್ಚಿನ ಎಲ್ಲಾ ಭಾಷೆಗಳಲ್ಲೂ ಅರ್ಥವಾಗದಂಥ ಪದಪುಂಜಗಳನ್ನಷ್ಟೇ ಹೊಂದಿದ್ದ ಈ ಜಾಹೀರಾತು ಒಂದರ್ಥದಲ್ಲಿ ‘ಕರೆ ಕಡಿತ’ ಅಥವಾ ‘ಕಾಲ್ ಡ್ರಾಪ್’ ಸಮಸ್ಯೆಯ ಸುತ್ತ ಇರುವ ನಿಗೂಢತೆಯ ರೂಪಕವೆಂಬಂತೆ ಕಾಣಿಸಿದ್ದಂತೂ ನಿಜ. ಏರ್‌ಟೆಲ್ ತನ್ನ ಜಾಹೀರಾತಿನಲ್ಲಿ ಹೇಳಿಕೊಳ್ಳುತ್ತಿರುವಂತೆ ಭಾರತದಲ್ಲಿ ಇದೇ ಮೊದಲ ಬಾರಿಗೆ ಮೊಬೈಲ್ ಸೇವೆ ನೀಡುವ ಕಂಪೆನಿಯೊಂದು ತನ್ನ ಸಂಪರ್ಕ ಜಾಲದ ಸಾಮರ್ಥ್ಯವೇನು ಎಂದು ಜನರ ಎದುರು ತೆರೆದಿಟ್ಟಿದೆ.

ಅದುವೇ ‘ಏರ್‌ಟೆಲ್ ಓಪನ್ ನೆಟ್ ವರ್ಕ್’. ನಮ್ಮ ಮೊಬೈಲ್ ಫೋನ್‌ಗೆ ಏರ್‌ಟೆಲ್ ಒದಗಿಸುವ ಆಪ್ ಹಾಕಿಕೊಂಡರೆ ಏರ್‌ಟೆಲ್‌ನ ಸಂಪರ್ಕ ಜಾಲವೇ ನಮ್ಮೆದುರು ತೆರೆದುಕೊಳ್ಳುತ್ತದೆ. ಅಷ್ಟೇ ಅಲ್ಲ ಮೊಬೈಲ್ ಸಿಗ್ನಲ್ ಹೇಗಿದೆ ಎಂಬುದನ್ನೂ ಅದು ಹೇಳುತ್ತದೆ. ಒಂದು ವೇಳೆ ಸಮಸ್ಯೆ ಇದ್ದರೆ ಅದನ್ನು ಏರ್‌ಟೆಲ್‌ಗೆ ತಿಳಿಸಬಹುದು. ಸಂಸ್ಥೆ ಆ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸುತ್ತದೆ.

ಮೇಲು ನೋಟಕ್ಕೆ ಇದು ಮೊಬೈಲ್ ಸೇವೆ ನೀಡುವ ಸಂಸ್ಥೆಯೊಂದು ತನ್ನ ಸೇವೆಯನ್ನು ಪರಿಣಾಮಕಾರಿಯಾಗಿಸಲು ಕೈಗೊಳ್ಳುತ್ತಿರುವ ಪಾರದರ್ಶಕ ಕ್ರಮ ಎಂಬಂತೆ ಕಾಣಿಸುತ್ತದೆ. ಆದರೆ ಸೂಕ್ಷ್ಮ ವಿಶ್ಲೇಷಣೆಗೆ ಹೊರಟರೆ ಕಾಣಸಿಗುವ ಅಂಶಗಳೇ ಬೇರೆ. ಮೊಬೈಲ್ ಸಿಗ್ನಲ್‌ಗಳ ಸಾಮರ್ಥ್ಯವನ್ನು ಪರೀಕ್ಷಿಸುವುದಕ್ಕೆ ಕೆಲವು ಸ್ವತಂತ್ರ ಆಪ್‌ಗಳೂ ಲಭ್ಯವಿವೆ.

ಇವು ಬಳಕೆದಾರರು ನೀಡುವ ಮಾಹಿತಿಯನ್ನು ಬಳಸಿಕೊಂಡು ಯಾರು ಯಾವ ಪ್ರದೇಶದಲ್ಲಿ ಉತ್ತಮ ಗುಣಮಟ್ಟದ ಸೇವೆ ನೀಡುತ್ತಿದ್ದಾರೆ ಎಂಬುದನ್ನು ಹೇಳುತ್ತವೆ. ಏರ್‌ಟೆಲ್ ತನ್ನ ಸಂಪರ್ಕಜಾಲವನ್ನೇ ಜನರೆದುರು ತೆರೆದಿಟ್ಟಿರುವುದು ಅದರ ಮಾರುಕಟ್ಟೆ ವಿಸ್ತರಣೆ ತಂತ್ರದಾಚೆಗೂ ಒಂದು ಧನಾತ್ಮಕ ಹೆಜ್ಜೆ. ಆದರೆ ಏರ್‌ಟೆಲ್‌ನ ಈ ‘ತೆರೆದ ಜಾಲ’ ನಿಜವಾದ ಮಾಹಿತಿಯನ್ನು ನೀಡುತ್ತದೆಯೇ ಎಂಬ ಪ್ರಶ್ನೆ ಇಲ್ಲಿದೆ.

ಏರ್‌ಟೆಲ್‌ನ ಆಪ್ ನೀಡುತ್ತಿರುವ ಮಾಹಿತಿಯಂತೆ ಬೆಂಗಳೂರಿನ ಬೆನ್ಸನ್‌ಟೌನ್‌ನ ಎಸ್.ಕೆ.ಗಾರ್ಡನ್‌ನಲ್ಲಿ ಅತ್ಯುತ್ಕೃಷ್ಟ ಸಿಗ್ನಲ್ ಇದೆ. ಆದರೆ ಇಲ್ಲಿ ಏರ್‌ಟೆಲ್ ಸೇವೆಯನ್ನು ಬಳಸುವ ಯಾರೂ ಈ ಮಾತನ್ನು ಒಪ್ಪುವುದಿಲ್ಲ. ಈ ಪ್ರದೇಶದಲ್ಲಿ ವಾಸಿಸುವ ಲೇಖಕನ ಅನುಭವ ಕೂಡಾ ಇದೇ. ಏರ್‌ಟೆಲ್ ನೀಡುವ ಮಾಹಿತಿಯಂತೆ ಮಹಾತ್ಮಾಗಾಂಧಿ ರಸ್ತೆಯಲ್ಲಿ ಅತ್ಯುತ್ಕೃಷ್ಟ ಡೇಟಾ ಸಿಗ್ನಲ್ ಮತ್ತು ವಾಯ್ಸ್ ಸಿಗ್ನಲ್ ಇದೆ. ಆದರೆ ಕರೆ ಕಡಿತದ ಸಮಸ್ಯೆ ಇಲ್ಲೇನು ಕಡಿಮೆ ಇಲ್ಲ.

ಏರ್‌ಟೆಲ್‌ನ ಆಪ್ ತೋರಿಸುತ್ತಿರುವ ಮಾಹಿತಿ ಸರಿ ಇಲ್ಲ ಎಂದು ಅದನ್ನು ಕಂಪೆನಿಗೆ ತಿಳಿಸುವುದಕ್ಕೆ ಅವಕಾಶವಿದೆ. ಅದಕ್ಕೆ ಸಂಬಂಧಿಸಿದ ಬಟನ್ ಒತ್ತಿದರೆ ನಮ್ಮೆದುರು ತೆರೆದುಕೊಳ್ಳುವ ಪುಟ ನಮ್ಮ ಫೋನ್‌ನ ಸೆಟ್ಟಿಂಗ್ ಹೇಗೆ ಇರಬೇಕು ಎಂಬ ಮಾಹಿತಿಯನ್ನು ಕೊಡುತ್ತದೆ. ಇದು ಸರಿಯಾಗಿದೆ ಎಂದರೆ ನೀವು ಏರ್‌ಟೆಲ್ ನೀಡಿರುವ ಗ್ರಾಹಕ ಸೇವಾ ದೂರವಾಣಿ ಸಂಖ್ಯೆಗೆ ಕರೆ ಮಾಡಿ ದೂರಬೇಕಷ್ಟೇ, ಅಂದರೆ ಏರ್‌ಟೆಲ್ ಗ್ರಾಹಕರು ಲಿಖಿತವಾಗಿ ನೀಡುವ ದೂರುಗಳನ್ನೇನೂ ಈ ಯೋಜನೆಯ ಭಾಗವಾಗಿ ಸ್ವೀಕರಿಸುತ್ತಿಲ್ಲ ಎಂದರ್ಥ. ಈ ತನಕ ಜಾಹೀರಾತಿನಲ್ಲಿ ಪ್ರಕಟಿಸಿರುವಂತೆ ಗ್ರಾಹಕರ ದೂರುಗಳ ಸಂಖ್ಯೆ ಮತ್ತು ಸ್ವರೂಪವನ್ನೇನೂ ಏರ್‌ಟೆಲ್ ಬಹಿರಂಗಪಡಿಸುತ್ತಿಲ್ಲ.

ಏರ್‌ಟೆಲ್‌ನ ಈ ವರ್ತನೆಯನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಕರೆ ಕಡಿತ ಸಮಸ್ಯೆಯ ಇತಿಹಾಸವನ್ನೊಮ್ಮೆ ಅವಲೋಕಿಸಬೇಕಾಗುತ್ತದೆ. ಸ್ವತಃ ಪ್ರಧಾನ ಮಂತ್ರಿಯವರೇ ಈ ಸಮಸ್ಯೆಯ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದರು. ದೂರಸಂಪರ್ಕ ಇಲಾಖೆ ಕೂಡಾ ಈ ಕುರಿತಂತೆ ಕ್ರಮ ಕೈಗೊಳ್ಳುವಂತೆ ಟೆಲಿಕಾಂ ಕಂಪನಿಗಳಿಗೆ ಮತ್ತೆ ಮತ್ತೆ ಹೇಳಿದೆ.

ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಕರೆ ಕಡಿತಕ್ಕೆ ದಂಡ ವಿಧಿಸುವ ತನಕ ಮುಂದುವರಿದಿತ್ತು. ಸುಪ್ರೀಂ ಕೋರ್ಟ್ ಈ ಪ್ರಸ್ತಾಪವನ್ನು ತಳ್ಳಿ ಹಾಕದೇ ಇದ್ದಿದ್ದರೆ ಕರೆ ಕಡಿತಕ್ಕೆ ಟೆಲಿಕಾಂ ಕಂಪೆನಿಗಳು ದಂಡ ಪಾವತಿಸಬೇಕಾಗುತ್ತಿತ್ತು.

ಕರೆ ಕಡಿತದ ಸಮಸ್ಯೆ ತೀವ್ರವಾದಾಗ ಭಾರತದ ಎಲ್ಲಾ ಪ್ರಮುಖ ಟೆಲಿಕಾಂ ಕಂಪೆನಿಗಳು ಗ್ರಾಹಕರನ್ನು ವಂಚಿಸುವುದಕ್ಕೆ ಹೊಸತೊಂದು ತಂತ್ರವನ್ನು ಹೆಣೆದವು. ಇದು ಎಲ್ಲಾ ಮೊಬೈಲ್ ಬಳಕೆದಾರರ ಅನುಭವಕ್ಕೂ ಬಂದಿರುತ್ತದೆ. ನಾವು ಮಾತನಾಡುತ್ತಿರುವಾಗಲೇ ಕರೆ ಕಡಿತವಾದರೂ ಅದು ನಮ್ಮ ಅನುಭವಕ್ಕೆ ಬರುವುದಿಲ್ಲ. ಆಚೆ ಬದಿಯ ಮಾತು ಕೇಳದೇ ಹೋದಾಗಲಷ್ಟೇ ನಾವು ಎಚ್ಚೆತ್ತುಕೊಳ್ಳುತ್ತೇವೆ.

ರೇಡಿಯೋ ಲಿಂಕ್ ತಂತ್ರಜ್ಞಾನವನ್ನು ತಮಗೆ ಬೇಕಾದಂತೆ ಮಾರ್ಪಡಿಸಿಕೊಂಡ ಟೆಲಿಕಾಂ ಕಂಪೆನಿಗಳು ಕರೆ ಕಡಿತವಾಗಿದ್ದರೂ ಅದು ಚಾಲನೆಯಲ್ಲೇ ಇರುವಂತೆ ತೋರಿಸಿ ಗ್ರಾಹಕರ ಜೇಬಿಗೆ ಕನ್ನ ಹಾಕುತ್ತಿವೆ. ಇದನ್ನು ಸ್ವತಃ ಟ್ರಾಯ್ ನಡೆಸಿದ ಪರೀಕ್ಷೆಗಳೇ ಬಯಲು ಮಾಡಿವೆ.

ಕರೆ ಕಡಿತ ಸಮಸ್ಯೆ ಹಿಂದೆ ಇರುವ ಮುಖ್ಯ ಕಾರಣ ಮೂಲ ಸೌಕರ್ಯದ ಮೇಲೆ ಟೆಲಿಕಾಂ ಕಂಪೆನಿಗಳು ಹೂಡಿಕೆ ಮಾಡದೇ ಇರುವುದು. ಕರೆ ಕಡಿತಕ್ಕೆ ದಂಡ ವಿಧಿಸುವ ಟ್ರಾಯ್ ಪ್ರಸ್ತಾಪಕ್ಕೆ ಸಂಬಂಧಿಸಿದ ಮೊಕದ್ದಮೆಯಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ಮುಕುಲ್ ರೋಹಟಗಿ ಅವರು ನೀಡಿದ ಮಾಹಿತಿಯಂತೆ ಟೆಲಿಕಾಂ ಕಂಪೆನಿಗಳ ದಿನವೊಂದರ ಗಳಿಕೆ 250 ಕೋಟಿ ರೂಪಾಯಿಗಳು. ಭಾರತದಲ್ಲಿರುವ ಮೊಬೈಲ್ ಸಂಪರ್ಕಗಳ ಸಂಖ್ಯೆ 96.2 ಕೋಟಿ. ಇಷ್ಟಾಗಿಯೂ ಯಾವುದೇ ಕಂಪೆನಿ ಕೂಡಾ ಕರೆಗಳ ಗುಣಮಟ್ಟವನ್ನು ಉತ್ತಮ ಪಡಿಸುವ ಹೂಡಿಕೆಗೆ ಸಿದ್ಧವಿಲ್ಲ.

ಮೊಬೈಲ್ ಕರೆಗಳು 300 ರಿಂದ 900 ಮೆಗಾ ಹರ್ಟ್ಸ್ ಕಂಪನಾಂಕದ ಸೂಕ್ಷ್ಮ ತರಂಗಗಳಲ್ಲಿ ಕಾರ್ಯ ನಿರ್ವಹಿಸುತ್ತವೆ. ಇದಕ್ಕಿಂತ ಹೆಚ್ಚಿನ ಕಂಪನಾಂಕದ ತರಂಗಗಳು ದತ್ತಾಂಶ ಅಥವಾ ಇಂಟರ್ನೆಟ್ ಸಂಪರ್ಕಕ್ಕಾಗಿ ಬಳಕೆಗೆ ಬರುತ್ತವೆ. 300ರಿಂದ 900 ಮೆಗಾಹರ್ಟ್ಸ್ ಕಂಪನಾಂಕದ ತರಂಗಗಳು ಖರೀದಿಗೆ ಲಭ್ಯವಿದ್ದರೂ ಯಾವ ಕಂಪೆನಿಯೂ ಖರೀದಿಸುತ್ತಿಲ್ಲ.

ಏರ್‌ಟೆಲ್ ಮೇಲೆ ಹೇಳಿದ ವರ್ಗದ ತರಂಗಗಳಲ್ಲಿ ಹೆಚ್ಚುವರಿ ಖರೀದಿಯ ಬದಲಿಗೆ ತನ್ನ 4ಜಿ ಜಾಲಕ್ಕೆ ಅಗತ್ಯವಿರುವ ಕಂಪನಾಂಕಗಳನ್ನು ಭಾರೀ ಬೆಲೆ ಕೊಟ್ಟು ಖರೀದಿಸಿತು. ಹೆಚ್ಚು ಕಡಿಮೆ ಎಲ್ಲಾ ಸೇವಾದಾತರೂ ದತ್ತಾಂಶದತ್ತಲೇ ತಮ್ಮ ಗಮನವನ್ನು ಕೇಂದ್ರೀಕರಿಸಿರುವುದರಿಂದ ಕರೆಗಳ ಗುಣಮಟ್ಟ ತೀವ್ರವಾಗಿ ಕುಸಿದಿದೆ. ಇದನ್ನು ಮುಚ್ಚಿಡುವುದಕ್ಕೆ ರೇಡಿಯೋ ಲಿಂಕ್ ತಂತ್ರಜ್ಞಾನದ ದುರ್ಬಳಕೆಯೂ ಆಗುತ್ತಿದೆ ಎಂಬುದು ಟ್ರಾಯ್ ನಮ್ಮ ಮುಂದೆ ತೆರೆದಿಟ್ಟಿರುವ ವಾಸ್ತವ.

ಈ ಹಿನ್ನೆಲೆಯಲ್ಲಿ ಏರ್‌ಟೆಲ್‌ನ ‘ಮುಕ್ತ ಸಂಪರ್ಕ ಜಾಲ’ ಮತ್ತು ಅದಕ್ಕೆ ಸಂಬಂಧಿಸಿದ ಅಸಂಬದ್ಧ ಕನ್ನಡ ಪದಗಳ ಜಾಹೀರಾತನ್ನು ನೋಡುವ ಅಗತ್ಯವಿದೆ. ಏರ್‌ಟೆಲ್ ಪೂರ್ಣ ಪುಟದ ಜಾಹೀರಾತುಗಳ ಮೂಲಕ ಜನರ ಮುಂದಿಡುತ್ತಿರುವ ಪಾರದರ್ಶಕತೆ ಅರ್ಥವೇ ಆಗದಷ್ಟು ಅಪಾರದರ್ಶಕವಾಗಿದೆ. ಕಡಿಮೆ ಕಂಪನಾಂಕದ ತರಂಗಗಳ ಮೇಲೆ ಹೂಡಿಕೆ ಮಾಡದೆ ತನ್ನ ಸಂಪರ್ಕ ಜಾಲ ಚೆನ್ನಾಗಿದೆ ತೋರಿಸುವ ಆಪ್ ಒಂದನ್ನು ಏರ್‌ಟೆಲ್ ಜನರಿಗೆ ನೀಡಿದೆ ಅಷ್ಟೇ.

ನಿಜಕ್ಕೂ ಪಾರದರ್ಶಕವಾಗಿರುವುದು ಸಂಸ್ಥೆಯ ಉದ್ದೇಶವಾಗಿದ್ದರೆ ಗ್ರಾಹಕರಿಂದ ದೊರೆತ ಮಾಹಿತಿಯನ್ನೂ ಮುಕ್ತವಾಗಿಟ್ಟು ಸ್ವತಂತ್ರ ಏಜೆನ್ಸಿಗಳು ಗುಣಮಟ್ಟವನ್ನು ಅಳೆಯುವಂತೆ ಮಾಡಬಹುದಿತ್ತು.

ಸದ್ಯದ ಸ್ವತಂತ್ರ ಲೆಕ್ಕಚಾರಗಳಂತೆ ಬೆಂಗಳೂರು, ದೆಹಲಿ, ಪುಣೆ, ಮುಂಬಯಿ ನಗರಗಳಲ್ಲಿ ಪ್ರತೀ ನಾಲ್ಕನೇ ಕರೆ ಅರ್ಧದಲ್ಲೇ ಕಡಿತಗೊಳ್ಳುತ್ತದೆ. ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ಅಷ್ಟೇಕೆ ಕಡುಬಡವರಿಗೆ ನೀಡುವ ಪಡಿತರ ಚೀಟಿಯೂ ಮೊಬೈಲ್ ಸಂಖ್ಯೆಯೊಂದನ್ನು ಬಯಸುವ ಕಾಲ ಇದು. ಫೋನ್ ಬ್ಯಾಂಕಿಂಗ್ ಬಳಸುವಾತನ ಕರೆ ಕಡಿತವಾದರೆ ಉಂಟಾಗುವ ಸಮಸ್ಯೆಯನ್ನೊಮ್ಮೆ ಊಹಿಸಿಕೊಂಡರೆ ಸಾಕು.

ಹಣ ಪಾವತಿಯಾಯಿತೇ ಇಲ್ಲವೇ ಎಂದು ಅರಿಯಲು ಕರೆಯ ಪುನರಾವರ್ತನೆ ಮಾಡಬೇಕಾಗುತ್ತದೆ. ಈ ಸಮಸ್ಯೆಗಳ ಕುರಿತು ಯಾವ ಟೆಲಿಕಾಂ ಕಂಪೆನಿಯೂ ಮಾತನಾಡುವುದಿಲ್ಲ. ಟ್ರಾಯ್ ಏಕಪಕ್ಷೀಯವಾಗಿ ವರ್ತಿಸುತ್ತದೆ ಎಂದು ನ್ಯಾಯಾಲಯವನ್ನು ಸಮೀಪಿಸುವ ಕೆಲಸವನ್ನಷ್ಟೇ ಅವು ಮಾಡುತ್ತಿವೆ. ಎಲ್ಲಾ ಟೆಲಿಕಾಂ ಕಂಪೆನಿಗಳ ಸೇವೆಯೂ ಒಂದೇ ಬಗೆಯಲ್ಲಿ ಇರುವುದರಿಂದ ಗ್ರಾಹಕನಿಗೆ ಆಯ್ಕೆಗಳೇ ಇಲ್ಲದ ಸ್ಥಿತಿ.

ಹಿಂದಿನ ಸರ್ಕಾರದ 2ಜಿ ಹಗರಣವನ್ನು ಚುನಾವಣಾ ವಿಷಯವನ್ನಾಗಿ ಬಳಸಿಕೊಂಡ ಈಗಿನ ಆಡಳಿತಾರೂಢರು ಮಾತಿನಲ್ಲಷ್ಟೇ ಕರೆ ಕಡಿತದ ಮೇಲೆ ದಾಳಿ ಮಾಡಿ ಸುಮ್ಮನಾಗುತ್ತಿದ್ದಾರೆ. ಟೆಲಿಕಾಂ ಕಂಪೆನಿಗಳ ಮೇಲೆ ಕ್ರಮ ಕೈಗೊಳ್ಳಲು ಅನುಕೂಲವಾಗುವಂತೆ ಕಾಯ್ದೆಯನ್ನು ತಿದ್ದುಪಡಿ ಮಾಡಬೇಕೆಂಬ ಟ್ರಾಯ್ ಪ್ರಸ್ತಾಪವನ್ನೇ ದೂರ ಸಂಪರ್ಕ ಸಚಿವರು ತಳ್ಳಿಹಾಕಿದ್ದಾರೆ. ಕಾಲ್ ಡ್ರಾಪ್ ಸಮಸ್ಯೆಗೆ ಸದ್ಯಕ್ಕೆ ಪರಿಹಾರವಂತೂ ಕಾಣಿಸುತ್ತಿಲ್ಲ. ಟೆಲಿಕಾಂ ಕಂಪೆನಿಗಳ ಸುಂದರ ಜಾಹೀರಾತುಗಳನ್ನು ನೋಡಿ ಆನಂದಿಸುವುದಷ್ಟೇ ಗ್ರಾಹಕನಿಗೆ ಉಳಿದಿರುವ ಆಯ್ಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.