ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಿಯನ್ನು ಜನರಿಗೊಪ್ಪಿಸಿದ ಸರ್ಕಾರ

ಸುಬ್ರಮಣ್ಯ ಭಾರತಿ ಕೃತಿಗಳ ಹಕ್ಕುಸ್ವಾಮ್ಯ ರಾಷ್ಟ್ರೀಕರಿಸಿ, ಜನರ ಕೈಗೆ ಕೊಟ್ಟ ತಮಿಳುನಾಡು
Last Updated 21 ಜೂನ್ 2018, 16:40 IST
ಅಕ್ಷರ ಗಾತ್ರ

ಪಶ್ಚಿಮದ ದೇಶಗಳಲ್ಲಿ ಲೇಖಕರೊಬ್ಬರ ಕೃತಿಗಳ ಹಕ್ಕುಸ್ವಾಮ್ಯ ಅವರು ಮೃತಪಟ್ಟು ಎಪ್ಪತ್ತೈದು ವರ್ಷಗಳವರೆಗೆ ಚಾಲ್ತಿಯಲ್ಲಿ ಇರುತ್ತದೆ. ಭಾರತದಲ್ಲಿ ಈ ಅವಧಿ ಸ್ವಲ್ಪ ಕಡಿಮೆ: ಇಲ್ಲಿ 60 ವರ್ಷಗಳು. ಹಾಗಾಗಿ, ರವೀಂದ್ರನಾಥ ಟ್ಯಾಗೋರರ ಕೃತಿಗಳ ಸ್ವಾಮ್ಯ 2001ರವರೆಗೆ ಶಾಂತಿನಿಕೇತನದ್ದಾಗಿತ್ತು; ಮಹಾತ್ಮ ಗಾಂಧಿ ಅವರ ಸಮಗ್ರ ಕೃತಿಗಳ ಹಕ್ಕು 2008ರವರೆಗೆ ನವಜೀವನ ಪ್ರೆಸ್‍ನ ನಿಯಂತ್ರಣದಲ್ಲಿತ್ತು. ಜವಾಹರಲಾಲ್‍ ನೆಹರೂ ಅವರ ಕೃತಿಗಳ ಹಕ್ಕು 2024ರವರೆಗೆ ಸೋನಿಯಾ ಗಾಂಧಿ ಅವರ ಕೈಯಲ್ಲಿರುತ್ತದೆ.

ಈ ನಿಯಮಕ್ಕೆ ಅತ್ಯಂತ ಗಮನಾರ್ಹವಾದ ಅಪವಾದ ಮದ್ರಾಸ್‍ ರಾಜ್ಯದಲ್ಲಿ (ಆಗ ತಮಿಳುನಾಡನ್ನು ಹೀಗೆ ಕರೆಯಲಾಗುತ್ತಿತ್ತು) ನಡೆಯಿತು. ಸುಬ್ರಮಣ್ಯ ಭಾರತಿ ಅವರ ಕೃತಿಗಳ ಹಕ್ಕನ್ನು ಸ್ವಾಧೀನಕ್ಕೆ ಪಡೆದಿರುವುದಾಗಿ 1949ರಲ್ಲಿ ಮದ್ರಾಸ್‍ ಸರ್ಕಾರವು ಘೋಷಿಸಿತು. ಐದು ವರ್ಷ ಬಳಿಕ ಈ ಹಕ್ಕುಗಳನ್ನು ಸಾರ್ವಜನಿಕರಿಗೆ ನೀಡಲಾಯಿತು. ಹೀಗಾಗಿ, ಭಾರತಿ ಅವರ ಕೃತಿಗಳನ್ನು ಮರುಮುದ್ರಣ ಮಾಡುವ, ಹಾಡುವ, ಕೃತಿಗಳ ಆಧಾರದಲ್ಲಿ ಸಿನಿಮಾ ನಿರ್ಮಿಸುವ ಮುಂತಾದ ಹಕ್ಕುಗಳು ಯಾವುದೇ ಕಾನೂನು ತೊಡಕು ಇಲ್ಲದೆ ಜನರ ಕೈಗೆ ಬಂತು.

ಚೆನ್ನೈನ ಪ್ರತಿಭಾವಂತ ಇತಿಹಾಸಕಾರ ಎ.ಆರ್.ವೆಂಕಟಾಚಲಪತಿ ಅವರು ತಮ್ಮ ಇತ್ತೀಚಿನ ಪುಸ್ತಕ ‘ಹೂ ಓನ್ಸ್ ದಟ್‍ ಸಾಂಗ್‍’ದಲ್ಲಿ ‘ಲೇಖಕರೊಬ್ಬರ ಕೃತಿಗಳ ಹಕ್ಕನ್ನು ಸರ್ಕಾರ ಪಡೆದುಕೊಂಡ, ಆಧುನಿಕ ಸಾಹಿತ್ಯ ಚರಿತ್ರೆಯ ವಿಶಿಷ್ಟ ವಿದ್ಯಮಾನವನ್ನು’ ವಿಶ್ಲೇಷಿಸುತ್ತಾರೆ. ಭಾರತಿ ಅವರ ಬದುಕಿನ ಬಗೆಗಿನ ಚುಟುಕಾದ ಅಧ್ಯಾಯದೊಂದಿಗೆ ಈ ಪುಸ್ತಕ ಆರಂಭವಾಗುತ್ತದೆ; ದಕ್ಷಿಣ ತಮಿಳುನಾಡಿನಲ್ಲಿ ಅವರ ಬಾಲ್ಯ ಮತ್ತು ಯೌವನ, ಪತ್ರಿಕೋದ್ಯಮ ಪ್ರವೇಶ, ಅವರಲ್ಲಿ ತೀವ್ರತೆ ಪಡೆದುಕೊಂಡ ದೇಶಪ್ರೇಮ, ಫ್ರೆಂಚರ ಆಳ್ವಿಕೆಯಲ್ಲಿದ್ದ ಪಾಂಡಿಚೇರಿಯಲ್ಲಿ ಅವರು ದೇಶಭ್ರಷ್ಟರಾಗಿ ಕಳೆದ ದಿನಗಳು, ಮದ್ರಾಸ್‍ಗೆ ವಾಪಸ್‍ ಮತ್ತು 38ನೇ ವರ್ಷಕ್ಕೆ 1921ರಲ್ಲಿ ಅವರ ಮರಣ ಇಲ್ಲಿ ದಾಖಲಾಗಿದೆ. ಜೀವನದ ಉದ್ದಕ್ಕೂ ಹಣಕಾಸಿನ ಮುಗ್ಗಟ್ಟಿನಲ್ಲಿಯೇ ಇದ್ದ ಭಾರತಿ ತಮ್ಮನ್ನು ಜನರ ಕವಿ ಎಂದು ಪರಿಗಣಿಸಿಕೊಂಡಿದ್ದರು. 1916ರಲ್ಲಿ ಪ್ರಕಟವಾದ ಲೇಖನದ ಭಾಗವೊಂದು ಅದನ್ನು ಹೀಗೆ ಬಿಂಬಿಸುತ್ತದೆ: ‘ದೊರೆಗಳು ಮತ್ತು ಯಜಮಾನರ ಬೆಂಬಲದಿಂದ ವಿವಿಧ ಕಲೆಗಳನ್ನು ಬೆಳೆಸುವ ಪದ್ಧತಿ ಜಗತ್ತಿನಾದ್ಯಂತ ಬಹಳ ಹಿಂದೆಯೇ ಮರೆಯಾಗಿ ಹೋಗಿದೆ. ಈಗ ನಾವು ಜನರನ್ನು ಅವಲಂಬಿಸಲು ಆರಂಭಿಸಲೇಬೇಕು. ಇನ್ನು ಮುಂದೆ ಏನಿದ್ದರೂ ಜನರದ್ದೇ ಬೆಂಬಲ ಮತ್ತು ಒತ್ತಾಸೆ. ಜನರಲ್ಲಿ ಒಳ್ಳೆಯ ಅಭಿರುಚಿ ಬೆಳೆಸುವುದು ಕಲಾವಿದರ ಕರ್ತವ್ಯ’.

1917ರಲ್ಲಿ ಅವರ ಪ್ರಕಾಶಕರೊಬ್ಬರು ಹೀಗೆ ಬರೆಯುತ್ತಾರೆ: ‘ಭಾರತಿ ಅವರ ಬಗ್ಗೆ ತಮಿಳು ಜನರಿಗೆ ಗೊತ್ತು. ಆದರೆ ನಿಜಕ್ಕೂ ಅವರು ಶ್ರೇಷ್ಠ ಎಂಬುದು ಕೆಲವರಿಗಷ್ಟೇ ತಿಳಿದಿದೆ. ಭಾರತಿ ಅಸಾಧಾರಣ ಪ್ರತಿಭಾವಂತ. ಶ್ರೇಷ್ಠ ವಿದ್ವಾಂಸ… ತಮಿಳುನಾಡಿನ ಟ್ಯಾಗೋರ್. ತಮಿಳು ದೇಶಕ್ಕೆಸಿಕ್ಕ ವರ’. ಇದು ದೂರದೃಷ್ಟಿಯ ಹೇಳಿಕೆ. ಯಾಕೆಂದರೆ ಭಾರತಿ ಬದುಕಿದ್ದಾಗ ಅವರ ಮಹತ್ವದ ಯಾವ ಕೃತಿಯೂ ಪ್ರಕಟವಾಗಿರಲಿಲ್ಲ. ಸಾವಿನ ಬಳಿಕವೇ ಅವರ ಪ್ರಭಾವ ಅಪಾರವಾಗಿ ವೃದ‍್ಧಿಸಿತು. ಅವರ ಪುಸ್ತಕಗಳು ಮತ್ತು ಹಸ್ತಪ್ರತಿಗಳನ್ನು ಹೆಂಡತಿ ಹಾಗೂ ಮಲಸಹೋದರ ಜತೆಯಾಗಿ ಪ್ರಕಟಿಸಿದರು. ಈ ಪ್ರಯತ್ನವನ್ನು ವೆಂಕಟಾಚಲಪತಿಯವರು ಅತ್ಯಂತ ಎಚ್ಚರಿಕೆ ಹಾಗೂ ಮಮತೆಯಿಂದ ದಾಖಲಿಸಿದ್ದಾರೆ.

1930ರ ದಶಕದಲ್ಲಿ ಭಾರತಿ ಅವರ ಹಾಡುಗಳು ರಾಷ್ಟ್ರೀಯವಾದಿ ಮೆರವಣಿಗೆಗಳಲ್ಲಿ, ಮುಷ್ಕರಗಳಲ್ಲಿ ಯುದ್ಧ ಘೋಷಗಳಾಗಿದ್ದವು, ಜನರನ್ನು ಉತ್ತೇಜಿಸುವ ಸಾಧನಗಳಾಗಿದ್ದವು. ರಾಜಕೀಯ ನಾಯಕರ ಭಾಷಣಗಳಿಗೆ ಇವು ಬಣ್ಣ ತುಂಬಿದ್ದವು. ಬಳಿಕ ಅವರ ಕವಿತೆಗಳು ಪಠ್ಯಪುಸ್ತಕದಲ್ಲಿ ಸೇರ್ಪಡೆಯಾದವು ಮತ್ತು ಜನಮಾನಸದಲ್ಲಿ ನೆಲೆಯಾದವು. ಹಾಡುಗಳ ಆಧಾರದಲ್ಲಿ ನಾಟಕಗಳು ರಚನೆಯಾದವು ಮತ್ತು ಸಿನಿಮಾಗಳಲ್ಲಿ ಬಳಕೆಯಾದವು. ಅವರ ಹಾಡುಗಳು ಮತ್ತು ಹೆಸರನ್ನು ಸಿನಿಮಾ ನಿರ್ದೇಶಕರು ಮತ್ತು ನಿರ್ಮಾಪಕರು ಅತಿಯಾಗಿ ಬಳಕೆ ಮಾಡಿಕೊಂಡಿದ್ದರಿಂದಾಗಿ ‘ಭಾರತಿ ಅವರ ಪದ್ಯಗಳನ್ನು ಇಂತಹ ಜನರ ಹಿಡಿತದಿಂದ ಬಿಡಿಸಿ’ ಎಂಬ ಆಗ್ರಹಗಳೂ ಕೇಳಿ ಬಂದವು.

‘ಭಾರತಿ ಅವರ ಕೃತಿಗಳು ತಮಿಳು ಭಾಷೆಯ ಸ್ವತ್ತು, ಈ ಕೃತಿಗಳನ್ನು ಕೆಲವೇ ಜನರ ಕೈಯಿಂದ ಬಿಡಿಸಲು ತಮಿಳು ಜನರು ಮತ್ತು ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಭಾರತ ಸ್ವಾತಂತ್ರ್ಯಗೊಂಡ ಬಳಿಕ 1947ರ ಅಕ್ಟೋಬರ್‌ನಲ್ಲಿ ಪ್ರಸಿದ್ಧ ಸಮಾಜಸುಧಾರಕ ಮತ್ತು ವಾಗ್ಮಿ ಪಿ. ಜೀವನಾನಂದಮ್‍ ಪ್ರತಿಪಾದಿಸಿದರು. ಇತರ ಪ್ರಭಾವಿ ವ್ಯಕ್ತಿಗಳೂ ಈ ಆಗ್ರಹಕ್ಕೆ ಧ್ವನಿಗೂಡಿಸಿದರು. ಆಗಿನ ಕಾಲದ ಪ್ರಬಲ ರಾಜಕಾರಣಿಗಳೂ ಈ ಬಗ್ಗೆ ಸಹಾನುಭೂತಿ ಹೊಂದಿದ್ದರು. ತಮಿಳುನಾಡಿನ ಅಮರ ಕವಿಯನ್ನು ಕಬ್ಬಿಣದ ತಿಜೋರಿಯಲ್ಲಿಟ್ಟು ಬೀಗ ಹಾಕುವುದರ ವಿರುದ್ಧದ ಸಾರ್ವಜನಿಕ ಆಕ್ರೋಶಕ್ಕೆ ಸ್ಪಂದಿಸಿದ ಸರ್ಕಾರ, ಭಾರತಿ ಅವರ ಕೃತಿಗಳನ್ನು ರಾಷ್ಟ್ರೀಕರಣ ಮಾಡಿ, ಅವುಗಳನ್ನು ಜನರ ಕೈಗೆ ಕೊಟ್ಟಿತು. ಭಾರತಿ ಅವರ ಕೃತಿಗಳ ಹಕ್ಕುಗಳನ್ನು ಸರ್ಕಾರ ಸ್ವಾಧೀನ ಮಾಡಿಕೊಳ್ಳುವುದನ್ನು ಮತ್ತು ಅವು ಬಳಕೆಗೆ ಹಾಗೂ ವ್ಯಾಖ್ಯಾನಕ್ಕೆ ಯಾರಿಗೆ ಬೇಕಿದ್ದರೂ ದೊರೆಯುವಂತೆ ಮಾಡುವ ಪ್ರಕ್ರಿಯೆಯ ಮೇಲ್ವಿಚಾರಣೆಯನ್ನು ಮದ್ರಾಸ್‍ ರಾಜ್ಯದ ಆಗಿನ ಮುಖ್ಯಮಂತ್ರಿ ಒ.ಪಿ. ರಾಮಸ್ವಾಮಿ ರೆಡ್ಡಿಯಾರ್ ನೋಡಿಕೊಂಡರು.

ಜೀವಿಸಿದ್ದಾಗ ಪ್ರಸಿದ್ಧಿ ಪಡೆಯದೆ, ಸಾವಿನ ಬಳಿಕ ಪ್ರಸಿದ್ಧಿ ಪಡೆದುಕೊಂಡ ವಿಚಾರದಲ್ಲಿ ಭಾರತಿ ಅವರು ಅಂಬೇಡ್ಕರ್ ಅವರನ್ನು ಹೋಲುತ್ತಾರೆ. ಭಾರತಿ ಅಂತ್ಯ ಸಂಸ್ಕಾರದಲ್ಲಿ ಹತ್ತಿಪ್ಪತ್ತು ಮಂದಿಯಷ್ಟೇ ಭಾಗವಹಿಸಿದ್ದರು. ವೈವಿಧ್ಯಮಯ ವ್ಯಾಖ್ಯಾನಗಳು ಮತ್ತು ಅಪವ್ಯಾಖ್ಯಾನಗಳಿಗೆ ಅವರ ಕೃತಿಗಳು ಗುರಿಯಾಗಿವೆ ಎಂಬ ವಿಚಾರದಲ್ಲಿ ಭಾರತಿ, ಗಾಂಧೀಜಿಯನ್ನು ಹೋಲುತ್ತಾರೆ. ಎಲ್ಲರೂ ತಮ್ಮ ವಾದದ ಸಮರ್ಥನೆಗೆ ಭಾರತಿಯನ್ನು ಬಳಸಿಕೊಂಡಿದ್ದಾರೆ. ಈ ಬಗ್ಗೆ ವೆಂಕಟಾಚಲಪತಿ ಹೀಗೆ ಬರೆಯುತ್ತಾರೆ: ‘ಆಧುನಿಕ ತಮಿಳು ಸಂಸ್ಕೃತಿಯನ್ನು ರೂಪಿಸುವಲ್ಲಿ ಭಾರತಿ ಕೇಂದ್ರ ಪಾತ್ರವಾಗುತ್ತಿದ್ದಂತೆಯೇ ವಿವಿಧ ಸಿದ್ಧಾಂತಗಳನ್ನು ಪ್ರತಿಪಾದಿಸುವ ಮಂದಿ ಅವರನ್ನು ತಮ್ಮವರು ಎಂದು ಹೇಳಿಕೊಳ್ಳಲಾರಂಭಿಸಿದ್ದಾರೆ. ರಾಷ್ಟ್ರೀಯವಾದಿ ಲೇಖಕರಾದ ಕಲ್ಕಿಯಂತಹ ಕೆಲವರು ಭಾರತಿ ಅವರ ವಿಚಾರವಾದವನ್ನು ನಿರ್ಲಕ್ಷಿಸಿ ಅವರೊಬ್ಬ ದೇಶಭಕ್ತಿಯ ಹಾಡುಗಳನ್ನು ಬರೆದ ಕವಿ ಮಾತ್ರ ಎಂದು ಬಿಂಬಿಸಲು ಯತ್ನಿಸಿದ್ದಾರೆ. ದ್ರಾವಿಡ ಚಳವಳಿಯ ಭಾಗವಾಗಿದ್ದ ಭಾರತೀದಾಸನ್‍, ಭಾರತಿ ಅವರ ಬ್ರಿಟಿಷ್‍ ವಿರೋಧಿ ನಿಲುವನ್ನು ನಿರ್ಲಕ್ಷಿಸಿ ಅವರ ಸಮಾಜ ಸುಧಾರಣೆ ಮತ್ತು ಜಾತಿ ವಿರೋಧಿ ಕಾರ್ಯಸೂಚಿಗಷ್ಟೇ ಪ್ರಾಧಾನ್ಯ ನೀಡಿದ್ದಾರೆ. ಸಿ. ರಾಜಗೋಪಾಲಾಚಾರಿಯಂತಹ (ರಾಜಾಜಿ) ಸಂಪ್ರದಾಯವಾದಿಗಳು ಭಾರತಿಯವರನ್ನು ವೇದಾಂತ ಕವಿ ಮಾತ್ರ ಎಂದು ಸೀಮಿತಗೊಳಿಸಲು ಯತ್ನಿಸಿದ್ದಾರೆ. ಅವರ ಕಾವ್ಯದಲ್ಲಿದ್ದ ಹಿಂದೂ ಅಂಶಗಳು ಇದಕ್ಕೆ ಕಾರಣ. ಕಮ್ಯುನಿಸ್ಟರು ಮತ್ತು ಸಮಾಜವಾದಿಗಳು ವಸಾಹತುವಿರೋಧಿ ಮತ್ತು ಸಾಮ್ರಾಜ್ಯಶಾಹಿ ವಿರೋಧಿ ದೃಷ್ಟಿಕೋನಗಳನ್ನು ಮಾತ್ರ ಎತ್ತಿಹಿಡಿದರು… ಒಟ್ಟಿನಲ್ಲಿ ಭಾರತಿಯವರು ಎಲ್ಲರಿಗೂ ಅವರವರಿಗೆ ಬೇಕಾದ ವಿಚಾರಗಳನ್ನೂ ಒದಗಿಸಿದರು’.

ಜೀವಿಸಿದ್ದಾಗಲೇ ಪ್ರಕಾಶಕರು ಅವರನ್ನು ಟ್ಯಾಗೋರ್‌ಗೆ ಹೋಲಿಸಿದ್ದಾರೆ; ತಮಗಿಂತ ಹಿರಿಯ ಮತ್ತು ಪ್ರಸಿದ್ಧ ಕವಿಯ ಬಗ್ಗೆ ಭಾರತಿ ಅವರು ಬಹುದೊಡ್ಡ ಗೌರವ ಹೊಂದಿದ್ದರು. ಟ್ಯಾಗೋರ್‌ ಬಗ್ಗೆ ಅವರು ಹಲವು ಲೇಖನಗಳನ್ನು ಬರೆದಿದ್ದರು. ಟ್ಯಾಗೋರ್‌ರನ್ನು ಮಹಾಕವಿಯಾಗಿ ಅಷ್ಟೇ ಅಲ್ಲ, ಭಾರತದ ಪುನರುತ್ಥಾನದ ಸಂಕೇತವಾಗಿಯೂ ಕಂಡಿದ್ದರು. ‘ಭಾರತವು ಲೋಕಗುರು ಎಂಬುದನ್ನು ಟ್ಯಾಗೋರರು ಸ್ಥಾಪಿಸಿದ್ದಾರೆ’ ಎಂದು ಭಾರತಿ ಹೊಗಳಿದ್ದರು.

ಬೇಸರದ ಸಂಗತಿ ಎಂದರೆ, ತಮಿಳುನಾಡಿನ ಹೊರಗೆ ಭಾರತಿ ಅವರಿಗೆ ಜನಪ್ರಿಯತೆ ಇಲ್ಲ, ಆದರೆ ಟ್ಯಾಗೋರ್‌ ಪಶ್ಚಿಮ ಬಂಗಾಳದ ಹೊರಗೂ ಭಾರಿ ಜನಪ್ರಿಯತೆ ಹೊಂದಿದ್ದಾರೆ. ಇದಕ್ಕೆ ಹಲವು ಕಾರಣಗಳಿವೆ– ಭಾರತಿ ಅವರು 40 ವರ್ಷದೊಳಗೇ ತೀರಿಕೊಂಡರೆ ಟ್ಯಾಗೋರ್‌ 80 ವರ್ಷ ಬದುಕಿದ್ದರು ಎಂಬುದು ಒಂದು ಕಾರಣ. ಭಾರತಿ ಅವರು ತೀವ್ರ ರಾಷ್ಟ್ರಪ್ರೇಮ ಹೊಂದಿದ್ದರೂ ತಮಿಳುನಾಡಿನ ಹೊರಗಿದ್ದ ಆಗಿನ ರಾಷ್ಟ್ರೀಯವಾದಿ ಕಾಂಗ್ರೆಸ್ಸಿಗರು ಭಾರತಿ ಅವರನ್ನು ಎಲ್ಲಿಯೂ ಪ್ರಸ್ತಾಪಿಸಲಿಲ್ಲ. ಆದರೆ, ಟ್ಯಾಗೋರ್‌ ಅವರನ್ನು ನಿರಂತರವಾಗಿ ಶ್ಲಾಘಿಸಲಾಯಿತು ಮತ್ತು ಇದು ಅವರನ್ನು ಗಾಂಧೀಜಿ ಮತ್ತು ನೆಹರೂ ಅವರ ಮಟ್ಟಕ್ಕೆ ಜನಪ್ರಿಯರನ್ನಾಗಿಸಿತು. ಮೂರನೆಯ ಕಾರಣವೆಂದರೆ, ಇತರ ರಾಜ್ಯಗಳ ವಿದ್ವಾಂಸರಿಗೆ ಹೋಲಿಸಿದರೆ ಪಶ್ಚಿಮ ಬಂಗಾಳದ ವಿದ್ವಾಂಸರಿಗೆ ಎರಡೆರಡು ಭಾಷೆಗಳು ಹೆಚ್ಚಿನ ಪ್ರಯತ್ನವಿಲ್ಲದೇ ವಶವಾಗಿದ್ದವು. ಟ್ಯಾಗೋರ್‌ ಅವರ ಪದ್ಯಗಳು, ಪ್ರಬಂಧಗಳು, ಚಿಂತನೆಗಳು ಹಾಗೂ ಅವರ ಜೀವನಕತೆ ಭಾರತದಾದ್ಯಂತ ಇದ್ದ ಓದುಗರಿಗೆ ಲಭ್ಯವಾಗಿತ್ತು. ಬಾಂಗ್ಲಾ ಭಾಷೆಯಂತೆಯೇ ಇಂಗ್ಲಿಷ್‌ನ ಮೇಲೆಯೂ ಪ್ರಭುತ್ವ ಹೊಂದಿದ್ದ ಪಶ್ಚಿಮ ಬಂಗಾಳದ ವಿದ್ವಾಂಸರು ಇವುಗಳನ್ನು ಜಗತ್ತಿನಾದ್ಯಂತ ತಲುಪಿಸಿದ್ದರು. ಆದರೆ, ತಮಿಳಿನ ಹೆಚ್ಚಿನ ವಿದ್ವಾಂಸರು ಒಂದು ಭಾಷೆಯಲ್ಲಿಯಷ್ಟೇ ಪ್ರವೀಣರಾಗಿದ್ದರು. ಒಂದೋ ಅವರು ತಮ್ಮ ಮಾತೃಭಾಷೆಯಲ್ಲಿ ಅಥವಾ ಜಾಗತಿಕ ಭಾಷೆಯಾದ ಇಂಗ್ಲಿಷ್‌ನಲ್ಲಿ ಪಾಂಡಿತ್ಯ ಹೊಂದಿದ್ದರು. ಎರಡೂ ಭಾಷೆಗಳಲ್ಲಿ ಪ್ರಾವೀಣ್ಯ ಪಡೆದವರು ಬಹಳ ವಿರಳ.

ಎ.ಆರ್‌. ವೆಂಕಟಾಚಲಪತಿ ಅಂತಹ ವಿರಳ ವ್ಯಕ್ತಿಗಳಲ್ಲಿ ಒಬ್ಬರು. ತಮ್ಮ ಆರಂಭಿಕ ಪುಸ್ತಕಗಳನ್ನು ಅವರು ತಮಿಳಿನಲ್ಲಿಯೇ ಪ್ರಕಟಿಸಿದ್ದಾರೆ. ಈಗಲೂ ಅವರು ತಮಿಳು ಪುಸ್ತಕಗಳನ್ನು ಬರೆಯುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಅವರು ಇಂಗ್ಲಿಷ್‌ನಲ್ಲಿ ಬರೆಯಲು ಆರಂಭಿಸಿದ್ದಾರೆ. ತಮಿಳುನಾಡಿನಿಂದ ಹೊರಗೆ ಬಹಳ ಹೆಚ್ಚು ಪ್ರಸಿದ್ಧಿ ಪಡೆಯಬೇಕಾಗಿದ್ದ ವ್ಯಕ್ತಿಯ ಜೀವನದ ಬಗೆಗಿನ ಅಪೂರ್ವವಾದ ಕೆಲವು ಝಲಕುಗಳನ್ನು ಇಲ್ಲಿ ಉಲ್ಲೇಖಿಸಿರುವ ಪುಸ್ತಕವು ನೀಡುತ್ತದೆ. ಮರಾಠಿ, ಗುಜರಾತಿ, ತೆಲುಗು, ಕನ್ನಡ, ಮಲಯಾಳ, ಪಂಜಾಬಿ, ಅಸ್ಸಾಮಿ ಮತ್ತು ಒಡಿಯಾ ಮಾತೃಭಾಷೆಯಾಗಿರುವ ದ್ವಿಭಾಷಿ ವಿದ್ವಾಂಸರು ತಮ್ಮ ಭಾಷೆಗಳಲ್ಲಿ ಬರೆದ ಭಾರತಿಯವರ ರೀತಿಯ ವ್ಯಕ್ತಿತ್ವಗಳ ಬಗ್ಗೆ ಹೊರಜಗತ್ತಿಗೆ ತಿಳಿಸಿಕೊಡಲು ಈ ಪುಸ್ತಕವು ಉತ್ತೇಜನವಾಗಲಿ ಎಂದು ನಾನು ಬಯಸುತ್ತೇನೆ.

ಟ್ಯಾಗೋರ್‌ ಅವರಂತಲ್ಲದೆ, ಬೇಗನೆ ನಿಧನರಾದ ಕಾರಣಕ್ಕೆ ಭಾರತಿ ಅವರು ತಮ್ಮ ಭಾಷಿಕ ಸಮುದಾಯದ ಹೊರಗೆ ಹೆಚ್ಚು ಜನಪ್ರಿಯತೆ ಪಡೆಯುವುದು ಸಾಧ್ಯವಾಗಲಿಲ್ಲ. ಹಾಗಿದ್ದರೂ ಬೇರೊಂದು ರೀತಿಯಲ್ಲಿ ಚರಿತ್ರೆಯು ಅವರನ್ನು ಹೆಚ್ಚು ಕರುಣೆಯಿಂದ ನೋಡಿಕೊಂಡಿದೆ. ಶಾಂತಿನಿಕೇತನವು ಟ್ಯಾಗೋರ್‌ ಅವರ ಕೃತಿಗಳ ಹಕ್ಕನ್ನು ಜತನದಿಂದ ಕಾಯ್ದುಕೊಂಡದ್ದರಿಂದಾಗಿ ಅವರ ಕೃತಿಗಳ ಸಮಕಾಲೀನ ಸೃಜನಶೀಲ ವ್ಯಾಖ್ಯಾನಗಳು ಬಹಳ ಕಡಿಮೆ. ಆದರೆ, ಭಾರತಿ ಅವರ ವಿಚಾರದಲ್ಲಿ ಇದು ತದ್ವಿರುದ್ಧವಾಯಿತು. ವೆಂಕಟಾಚಲಪತಿಯವರು ಹೇಳುವಂತೆ, ‘ಭಾರತಿ ಅವರ ಕೃತಿಗಳ ಹಕ್ಕುಸ್ವಾಮ್ಯ ಬಹಳ ಬೇಗನೆ ಜನರಿಗೆ ಸಿಕ್ಕಿದ್ದರಿಂದಾಗಿ ಅವರ ಹಾಡುಗಳನ್ನು ಸಂಗೀತದ ಮೂಲಕ ಬೆಳೆಸುವುದು ಸಾಧ್ಯವಾಯಿತು. ಅವರ ಹಾಡುಗಳನ್ನು ತಮಿಳು ಸಿನಿಮಾ ವ್ಯಾಪಕವಾಗಿ ಬಳಸಿಕೊಂಡಿತು ಮತ್ತು ಅವುಗಳಲ್ಲಿ ಹಲವು ಭಾರಿ ಜನಪ್ರಿಯತೆಯನ್ನೂ ಪಡೆದುಕೊಂಡವು.

ತಮಿಳು ಮಾತನಾಡಲು ಅಥವಾ ಓದಲು ಬಾರದ, ತಮಿಳಿನಲ್ಲಿ ಹಾಡಲು ಗೊತ್ತಿಲ್ಲದ ಜನರಿಗೂ ಭಾರತಿ ಅವರ ಮಹತ್ವ ಅರ್ಥವಾಗಬೇಕು ಎಂಬುದು ವೆಂಕಟಾಚಲಪತಿಯವರ ಈ ಗಮನಾರ್ಹ ಪುಸ್ತಕದ ಪ್ರತಿಪಾದನೆ. ಇಡೀ ಕತೆಯಲ್ಲಿ ಭಾಗಿಯಾಗಿರುವ ಹಲವು ಪಾತ್ರಗಳನ್ನೂ ವೆಂಕಟಾಚಲಪತಿ ಕಟ್ಟಿಕೊಡುತ್ತಾರೆ. ಭಾರತಿ ಅವರ ಹೆಂಡತಿ ಮತ್ತು ಮಕ್ಕಳು, ಅವರ ಕೃತಿಗಳಿಂದ ಲಾಭ ಪಡೆದುಕೊಂಡ ಸಿನಿಮಾ ನಿರ್ದೇಶಕರು, ಅವರ ಕೃತಿಗಳನ್ನು ರಾಷ್ಟ್ರೀಕರಣಗೊಳಿಸಿದ ಸಿದ್ಧಾಂತಬದ್ಧ ನಾಯಕರು ಮತ್ತು ಇತರರು ಇದರಲ್ಲಿ ಸೇರಿದ್ದಾರೆ. ‘ಹೂ ಓನ್ಸ್‌ ದಟ್‌ ಸಾಂಗ್‌’ ಪುಸ್ತಕವನ್ನು ಓದುತ್ತಿದ್ದಂತೆಯೇ ಭಾರತಿ ಅವರ ಬಗ್ಗೆ ಪೂರ್ಣಪ್ರಮಾಣದ ಜೀವನಚರಿತ್ರೆಯೊಂದು ಬೇಕು ಎಂಬ ಭಾವನೆ ಮೂಡುತ್ತದೆ. ಅವರ ಜೀವನ ಆಧರಿಸಿದ ಸಿನಿಮಾ ನಿರ್ಮಾಣವಾಗಲಿ ಎಂಬ ಬಯಕೆ ಉಂಟಾಗುತ್ತದೆ. ಇದಕ್ಕೆ ಬೇಕಾದ ಸೃಜನಶೀಲ ಪ್ರತಿಭೆ, ವೈಯಕ್ತಿಕ ಸಂಕಷ್ಟಗಳು, ಮಾದಕ ಪದಾರ್ಥ ಮತ್ತು ಪ್ರಣಯಗಳೆಲ್ಲವೂ ಅವರ ಜೀವನದಲ್ಲಿ ಇವೆ. ಅದಕ್ಕೆ ತಕ್ಕಂತಹ ವಸಾಹತುಶಾಹಿ ಮತ್ತು ರಾಷ್ಟ್ರೀಯವಾದದ ಹಿನ್ನೆಲೆಯೂ ದೊರೆಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT