ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಭರವಸೆ– ಭೀತಿ: ಉದ್ದೀಪನದ ಎರಡು ಶೈಲಿಗಳು

‘ಅಚ್ಛೇ ದಿನ್‌’ ಭರವಸೆ ಹುಸಿಯಾದ ಬಳಿಕ ಬಿಜೆಪಿ ಈ ಬಾರಿ ಹಿಂದುತ್ವದ ಮೊರೆ ಹೋಗಬಹುದು
Last Updated 16 ಆಗಸ್ಟ್ 2018, 19:30 IST
ಅಕ್ಷರ ಗಾತ್ರ

ಜಗತ್ತಿನಾದ್ಯಂತ ವಿಸ್ತರಿಸಿರುವ ಆಧುನಿಕ ಪ್ರಜಾಸತ್ತಾತ್ಮಕ ರಾಜಕಾರಣವನ್ನು ಎರಡು ರೀತಿಯ, ಪರಸ್ಪರ ವಿರುದ್ಧವಾದ ಮಾತಿನ ಶೈಲಿಗಳು ಆವರಿಸಿವೆ ಎಂದು 2007ರಲ್ಲಿ ಪ್ರಕಟವಾದ ಪುಸ್ತಕವೊಂದರಲ್ಲಿ ನಾನು ಬರೆದಿದ್ದೆ. ಮೊದಲನೆಯದು, ಭರವಸೆ. ಜನರ ಆರ್ಥಿಕ ಸಮೃದ್ಧಿಯ ಆಕಾಂಕ್ಷೆಗಳು ಮತ್ತು ಸಾಮಾಜಿಕ ಶಾಂತಿಗಾಗಿ ಮನವಿ ಮಾಡುತ್ತದೆ ಅದು. ಎರಡನೆಯದು, ಭೀತಿ. ಇದು, ಚಾರಿತ್ರಿಕ ಶತ್ರುತ್ವವನ್ನು ಇನ್ನಷ್ಟು ತೀವ್ರಗೊಳಿಸುವ ವರ್ಗೀಯ ಚಿಂತೆಗಳನ್ನು ಮತ್ತಷ್ಟು ಹೆಚ್ಚಿಸಲು ಮನವಿ ಮಾಡುತ್ತದೆ.

ಜವಾಹರಲಾಲ್‍ ನೆಹರೂ ನೇತೃತ್ವದ ಕಾಂಗ್ರೆಸ್‍, ಸಾಮಾನ್ಯವಾಗಿ ಭರವಸೆಯ ನೆಲೆಗಟ್ಟಿನಲ್ಲಿ ಪ್ರಚಾರ ಮಾಡಿತ್ತು. ನೆಹರೂ ಮತ್ತು ಅವರ ಪಕ್ಷವು ಆರ್ಥಿಕ ಪ್ರಗತಿ, ಸಾಮಾಜಿಕ ಶಾಂತಿ ಮತ್ತು ಜಗತ್ತಿನಲ್ಲಿ ಭಾರತಕ್ಕೆ ಉನ್ನತ ಸ್ಥಾನವನ್ನು ಮತದಾರರಿಗೆ ಭರವಸೆ ನೀಡಿತ್ತು. ಇದನ್ನೇ ಇಟ್ಟುಕೊಂಡು ಅವರು ಮೂರು ಸಾರ್ವತ್ರಿಕ ಚುನಾವಣೆಗಳನ್ನು ಎದುರಿಸಿದರು. ನೆಹರೂ ಅಥವಾ ಅವರ ಪಕ್ಷ ಅಧಿಕಾರದಲ್ಲಿ ಇದ್ದಾಗ ಈ ಗುರಿಗಳನ್ನು ಈಡೇರಿಸಲು ಸಾಧ್ಯವಾಗಲಿಲ್ಲ ಎಂಬುದು ವಾಸ್ತವ. ಹಾಗಿದ್ದರೂ, ಚುನಾವಣೆ ಗೆಲ್ಲುವುದಕ್ಕಾಗಿ ಅವರು ಭಾರತ-ಪಾಕಿಸ್ತಾನ ಅಥವಾ ಹಿಂದೂ-ಮುಸ್ಲಿಂ ಅಥವಾ ಕೆಳಜಾತಿ-ಮೇಲ್ಜಾತಿಗಳು ಅಥವಾ ಹಿಂದಿ ಭಾಷಿಕ ಪ್ರದೇಶಗಳು-ಭಾರತದ ಇತರ ಪ್ರದೇಶಗಳನ್ನು ಒಂದರ ವಿರುದ‍್ಧ ಮತ್ತೊಂದನ್ನು ಎತ್ತಿಕಟ್ಟುವ ಕೆಲಸ ಮಾಡಲಿಲ್ಲ ಎಂಬುದು ನೆಹರೂ ಅವರ ಹಿರಿಮೆ.

ಇನ್ನೊಂದೆಡೆ, ಬಾಳಾ ಠಾಕ್ರೆ ಅವರ ನೇತೃತ್ವದ ಶಿವಸೇನಾ ಸದಾ ಭೀತಿಯ ನೆಲೆಗಟ್ಟಿನಲ್ಲಿಯೇ ಪ್ರಚಾರ ನಡೆಸಿತ್ತು. ಈ ಪಕ್ಷ 1966ರಲ್ಲಿ ಸ್ಥಾಪನೆಗೊಂಡಿತು; ಮುಂಬೈ ನಗರವು ಮರಾಠಿ ಭಾಷಿಕರಿಗಷ್ಟೇ ಸೀಮಿತವಾಗಿರಬೇಕು ಎಂಬುದನ್ನು ದೃಢಪಡಿಸುವುದು ಮೊದಲ 20 ವರ್ಷ ಈ ಪಕ್ಷದ ಮುಖ್ಯ ಗುರಿಯಾಗಿತ್ತು. ಜೀವನ ಮತ್ತು ಕೆಲಸಕ್ಕಾಗಿ ಮುಂಬೈಗೆ ಬಂದಿದ್ದ ದಕ್ಷಿಣ ಭಾರತೀಯರನ್ನು ಶಿವಸೇನಾ ತನ್ನ ಮೊದಲ ಗುರಿಯಾಗಿಸಿಕೊಂಡಿತು. ನಗರಕ್ಕೆ ಬಂದಿದ್ದ ಉತ್ತರ ಮತ್ತು ಪೂರ್ವ ಭಾರತೀಯರು ನಂತರದ ಹಂತದಲ್ಲಿ ಈ ಪಕ್ಷದ ಗುರಿಯಾದರು. ರಾಜ್ಯದ ಇತರ ಭಾಗಗಳಿಗೂ ವಿಸ್ತರಣೆಗೊಳ್ಳಲು ಬಯಸಿದಾಗ ಪಕ್ಷವು ಹೊಸ ಬಲಿಪಶುಗಳನ್ನು ಹುಡುಕಿಕೊಂಡಿತು. ಮುಸ್ಲಿಮರು ಮುಂಬೈ, ಮಹಾರಾಷ್ಟ್ರ ಮತ್ತು ಭಾರತದ ಶತ್ರುಗಳು ಎಂದು ಸೇನಾ ಚಿತ್ರಿಸಿತು.

ಭೀತಿ ಬಿತ್ತುವುದು ಅಥವಾ ಭರವಸೆ ಮೂಡಿಸುವುದು ಸಾಮಾನ್ಯವಾಗಿ ನಿಮ್ಮ ವ್ಯಕ್ತಿತ್ವ ಮತ್ತು ನಂಬಿಕೆಯನ್ನು ಆಧರಿಸಿರುತ್ತದೆ. ಮುಸ್ಲಿಮರು ದುಷ್ಟರು ಎಂದು ಭಾವಿಸುವುದು ನೆಹರೂ ಅವರಿಗೆ ಸಾಧ್ಯವೇ ಇರಲಿಲ್ಲ; ಅದೇ ರೀತಿ, ಮುಸ್ಲಿಮರು ಈ ದೇಶದ ಪೂರ್ಣ ಮತ್ತು ಸಮಾನ ಪ್ರಜೆಗಳು ಎಂದು ಬಾಳಾ ಠಾಕ್ರೆ ತಿಳಿದುಕೊಳ್ಳಬಹುದು ಎಂದು ಭಾವಿಸುವುದಕ್ಕೇ ಸಾಧ್ಯವಿಲ್ಲ.

ಹೆಚ್ಚಿನ ರಾಜಕಾರಣಿಗಳು ತಮ್ಮ ವೃತ್ತಿಜೀವನದ ಉದ್ದಕ್ಕೂ ಭರವಸೆ ಅಥವಾ ಭೀತಿಯನ್ನು ನಿರಂತರವಾಗಿ ಬಳಸಿಕೊಂಡಿದ್ದಾರೆ. ಆದರೆ, ನರೇಂದ್ರ ಮೋದಿ ಅವರು ಇದಕ್ಕೆ ಅಪವಾದ. ಅವರು ಈ ಎರಡು ರೀತಿಯ ಪ್ರಚಾರವನ್ನೂ ಪರ್ಯಾಯವಾಗಿ ಬಳಸಿಕೊಂಡಿದ್ದಾರೆ. ಗುಜರಾತ್‍ ಮುಖ್ಯಮಂತ್ರಿಯಾಗಿದ್ದ ಮೊದಲ ಕೆಲವು ವರ್ಷಗಳಲ್ಲಿ ಅವರ ಪ್ರಚಾರ ಮತ್ತು ಆಡಳಿತ ಮುಖ್ಯವಾಗಿ ಭೀತಿಯ ನೆಲೆಗಟ್ಟಿನಲ್ಲಿಯೇ ಆಗಿತ್ತು. ‘ಮಿಯಾ ಮುಷರಫ್‍’, ಸೋನಿಯಾ ಗಾಂಧಿಯ ವಿದೇಶಿ ಮೂಲ, ಕಾಂಗ್ರೆಸ್‍ ಪಕ್ಷದ ಮುಸ್ಲಿಂ ಓಲೈಕೆ ಎಂಬ ಆರೋಪ, ಜನಸಂಖ್ಯಾ ಬಲಕ್ಕಾಗಿ ಮುಸ್ಲಿಮರು ನಡೆಸುತ್ತಿದ್ದಾರೆ ಎಂಬ ಅಭಿಯಾನದ ಆರೋಪ (ನಾವು ಐವರು, ನಮ್ಮದು ಇಪ್ಪತ್ತೈದು ಎಂದು ಇದನ್ನು ಮೋದಿ ಬಣ್ಣಿಸಿದ್ದರು) ಮುಂತಾದವುಗಳಿಂದ ತಮ್ಮ ರಾಜ್ಯ ಮತ್ತು ದೇಶಕ್ಕೆ ಇರುವ ಅಪಾಯಗಳ ಬಗ್ಗೆ ಮೋದಿ ಮಾತನಾಡಿದ್ದರು. ವಿದೇಶಿಯರ ಬಗ್ಗೆ ಭಾರತೀಯರ ಭಯ, ಗುಜರಾತಿಗಳಿಗೆ ಇರುವ ಹೊರಗಿನವರ ಭಯ, ಹಿಂದೂಗಳಿಗೆ ಇರುವ ಮುಸ್ಲಿಮರ ಭಯ ಎಲ್ಲವನ್ನೂ ಅವರು ಏಕಕಾಲಕ್ಕೆ ಉದ್ದೀಪಿಸಿದ್ದರು. ಸಾರ್ವತ್ರಿಕವಾಗಿ ಗುಜರಾತನ್ನು, ನಿರ್ದಿಷ್ಟವಾಗಿ ಗುಜರಾತಿ ಹಿಂದೂಗಳನ್ನು ಬೆದರಿಸಿರುವ ದುಷ್ಟ ಶಕ್ತಿಗಳ ವಿರುದ್ಧದ ರಕ್ಷಕ ಎಂದು ತಮ್ಮನ್ನು ಅವರು ಬಿಂಬಿಸಿಕೊಂಡಿದ್ದರು. ರಾಜ್ಯವನ್ನು ದುಷ್ಟ ಶಕ್ತಿಗಳಿಂದ ಕಾಪಾಡುವ ಶಕ್ತಿ ತಮಗೆ ಮಾತ್ರ ಇದೆ ಎಂಬುದನ್ನು ಅವರು ಒತ್ತಿ ಹೇಳಿದ್ದರು.

ಮುಖ್ಯಮಂತ್ರಿಯಾಗಿ ಎರಡನೇ ಅವಧಿಯ ಮಧ್ಯಭಾಗದಲ್ಲಿ ಅವರು ತಮ್ಮನ್ನು ಭಿನ್ನವಾಗಿ ಅಂದರೆ, ವಿಕಾಸ ಪುರುಷ ಎಂದು ಬಿಂಬಿಸಿಕೊಳ್ಳಲು ಆರಂಭಿಸಿದರು. ಅವರು ‘ವೈಬ್ರಂಟ್‍ ಗುಜರಾತ್‍’ ಶೃಂಗಸಭೆಗಳನ್ನು ನಡೆಸಲು ಆರಂಭಿಸಿದರು. ಕೈಗಾರಿಕೋದ್ಯಮಿಗಳು ಈ ಸಭೆಗಳಲ್ಲಿ ಸಾವಿರಾರು ಕೋಟಿ ರೂಪಾಯಿಯ ಹೂಡಿಕೆಗಳನ್ನು ಘೋಷಿಸಿದರು. ಇಂಧನ, ಮೂಲಸೌಕರ್ಯ ಮತ್ತು ಕೃಷಿ ಕ್ಷೇತ್ರಗಳಲ್ಲಿ ತಮ್ಮ ರಾಜ್ಯದ ಸಾಧನೆಗಳ ಬಗ್ಗೆ ಮೋದಿ ಬಡಾಯಿ ಕೊಚ್ಚಿಕೊಳ್ಳತೊಡಗಿದರು. ಹೂಡಿಕೆ ಭರವಸೆಗಳಲ್ಲಿ ಹೆಚ್ಚಿನವು ಕಾರ್ಯರೂಪಕ್ಕೆ ಬರಲಿಲ್ಲ ಮತ್ತು ಸಾಧನೆಗಳು ಉತ್ಪ್ರೇಕ್ಷೆಗಳಾಗಿದ್ದವು. 2010ರ ನಂತರದ ದಿನಗಳಲ್ಲಿ ಮೋದಿ ಅವರು ಭೀತಿ ಉದ್ದೀಪಿಸುವ ಶೈಲಿಯಿಂದ ಭರವಸೆ ಮೂಡಿಸುವ ಶೈಲಿಗೆ ಬದಲಾಗತೊಡ
ಗಿದ್ದು ಸ್ಪಷ್ಟವಾಗಿತ್ತು. ಆದರೆ, ಇದು ಸಂಪೂರ್ಣವಾಗಿರಲಿಲ್ಲ; ಅವರಿಗೆ ಮುಸ್ಲಿಮರ ಬಗ್ಗೆ ಇನ್ನೂ ಶಂಕೆ ಇತ್ತು (2011ರಲ್ಲಿ ಅವರು ಮುಸ್ಲಿಮರು ಧರಿಸುವ ಟೋಪಿ ಧರಿಸಲು ನಿರಾಕರಿಸಿದರು). ಹಾಗಿದ್ದರೂ, ಅವರ ವರ್ಚಸ್ಸು (ಬ್ರ್ಯಾಂಡ್‍) ಬದಲಾವಣೆಯ ಕೆಲಸ ಆರಂಭವಾಗಿತ್ತು, ಹಿಂದುತ್ವದ ಆಚೆಗೆ ಇರುವವರನ್ನೂ ಆಕರ್ಷಿಸುವ ಪ್ರಯತ್ನ ಇದಾಗಿತ್ತು.

2014ರ ಲೋಕಸಭೆ ಚುನಾವಣಾ ಪ್ರಚಾರದಲ್ಲಿ ಮೋದಿ ಅವರು ಕೋಮು ವಿಚಾರಗಳನ್ನು ಹಿಂದಕ್ಕೆ ತಳ್ಳಿ, ಆರ್ಥಿಕ ವಿಷಯಗಳನ್ನು ಮುನ್ನೆಲೆಗೆ ತಂದರು. ಸಾರ್ವತ್ರಿಕವಾಗಿ ಎಲ್ಲರಿಗೂ ಮತ್ತು ನಿರ್ದಿಷ್ಟವಾಗಿ ಯುವ ಜನರಿಗೆ ‘ಅಚ್ಛೇ ದಿನ’ದ ಭರವಸೆ ಕೊಟ್ಟರು, ಕೋಟ್ಯಂತರ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದರು. ‘ಸಬ್‍ ಕಾ ಸಾಥ್‍, ಸಬ್‍ ಕಾ ವಿಕಾಸ್‍’ ಪರ ನಿಲ್ಲುವುದಾಗಿ ವಿಶ್ವಾಸ ಮೂಡಿಸಿದರು. ತಮ್ಮ ಆಡಳಿತವು ತರುವ ಆರ್ಥಿಕ ಪ್ರಗತಿಯಿಂದ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಗಳೂ ಪ್ರಯೋಜನ ಪಡೆದುಕೊಳ್ಳಲಿವೆ ಎಂಬ ಅರ್ಥದ ಮಾತುಗಳನ್ನು ಆಡಿದರು.

ಮೋದಿ ಅವರು ಕೊನೆಗೂ ತಮ್ಮ ಕಟ್ಟರ್ ವರ್ಚಸ್ಸು ಕಳೆದುಕೊಂಡಿದ್ದಾರೆ ಎಂದು ಚುನಾವಣೆ ಗೆದ್ದು ಅವರು ಪ್ರಧಾನಿಯಾದ ಬಳಿಕ ಕೆಲವು ವಿಶ್ಲೇಷಕರು ಅಭಿಪ್ರಾಯಪಟ್ಟರು. ಸಂಘರ್ಷಾತ್ಮಕ ಗುಂಪುಗಳ ನಡುವೆ ಅವರು ರಾಜಿ ಮಾಡಿಸಬಹುದು, ನಮ್ಮ ಸಮಾಜ ಮತ್ತು ಆರ್ಥಿಕತೆಯನ್ನು ಹಿಂದಕ್ಕೆ ಒಯ್ಯುವ ಪುರಾತನ ಕಾನೂನುಗಳನ್ನು ಬದಲಾಯಿಸಬಹುದು ಮತ್ತು ಜಾಗತಿಕ ಮಟ್ಟದಲ್ಲಿ ಭಾರತದ ಘನತೆ ಹೆಚ್ಚಿಸಬಹುದು ಎಂಬುದು ಅವರ ನಿರೀಕ್ಷೆಯಾಗಿತ್ತು. ಸ್ಟ್ಯಾಂಡ್‍ ಅಪ್‍ ಇಂಡಿಯಾ, ಸ್ಟಾರ್ಟ್ ಅಪ್‍ ಇಂಡಿಯಾ, ಮೇಕ್‍ ಇನ್‍ ಇಂಡಿಯಾ, ಮೇಡ್‍ ಇನ್‍ ಇಂಡಿಯಾಗಳಂತಹ ಮೋದಿ ಅವರ ಅಬ್ಬರದ ಘೋಷಣೆಗಳು ಅವರನ್ನು ಇನ್ನಷ್ಟು ಮಂತ್ರಮುಗ್ಧ ಗೊಳಿಸಿದವು.

ಮೋದಿ ಅವರ ಆಡಳಿತದಲ್ಲಿ ಭಾರತೀಯರು ಹೊಸ ಉದ್ಯಮ ಆರಂಭಿಸಿದ್ದಾರೆ. ಆದರೆ, ಅದು ರಫ್ತು ಮಾಡುವುದಕ್ಕಾಗಿ ವಸ್ತುಗಳ ತಯಾರಿಕೆ ಅಲ್ಲ, ಬದಲಿಗೆ ನಿರಪರಾಧಿ ಜನರ ಮೇಲೆ ಹಲ್ಲೆ ಮಾಡಿ ಕೊಲೆ ಮಾಡುವ ಉದ್ಯಮ. ಗೆಲುವಿಗಾಗಿ ಮೋದಿ ಅವರನ್ನು ಅಭಿನಂದಿಸಿದ್ದ ಅದೇ ವಿಶ್ಲೇಷಕರು, ಈ ಗುಂಪುಗಳನ್ನು ನಿಯಂತ್ರಿಸಿ ಎಂದು ಬಳಿಕ ಕೋರತೊಡಗಿದರು. ಆದರೆ, ಹಾಗೆ ಮಾಡಲು ಮೋದಿ ಅವರಿಗೆ ಮನಸಿರಲಿಲ್ಲ. ಈ ಮಧ್ಯೆ, ಈ ಧ್ರುವೀಕರಣವು ಆದಷ್ಟು ಬೇಗ ಆಗುವುದು ಅವರ ಪಕ್ಷದ ಅಧ್ಯಕ್ಷರಿಗೆ ಬಹಳ ಖುಷಿಯ ವಿಚಾರವೇ ಆಗಿದೆ. ಹಲವು ಸಂಸದರು ಮುಸ್ಲಿಮರ ವಿರುದ್ಧ ದ್ವೇಷದ ಹೇಳಿಕೆಗಳನ್ನು ನೀಡತೊಡಗಿದರು. ಇವರಲ್ಲಿ ಹೆಚ್ಚಿನವರು ಉತ್ತರ ಪ್ರದೇಶದವರು ಮತ್ತು ಅವರನ್ನು ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಅಮಿತ್‍ ಶಾ ಅವರೇ ಆಯ್ಕೆ ಮಾಡಿಕೊಂಡಿದ್ದರು.

ಹೀಗೆ ಆಯ್ಕೆ ಮಾಡಲಾದ ಒಬ್ಬರು ಸಂಸದರನ್ನು 2017ರ ಮಾರ್ಚ್‌ನಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿಯನ್ನಾಗಿ ಮಾಡಲಾಯಿತು. ಅಲ್ಪಸಂಖ್ಯಾತರ ಹಿಂಸಕ ಎಂಬುದು ಅವರು ಹೊಂದಿದ್ದ ಹಿನ್ನೆಲೆಯಾದರೆ, ಅವರು ಯಾವ ರೀತಿಯಲ್ಲಿಯೂ ಅಭಿವೃದ್ಧಿಯ ಪ್ರವರ್ತಕ ಆಗಿರಲಿಲ್ಲ. ಐದು ಅವಧಿಗೆ ಅವರು ಸಂಸದರಾಗಿದ್ದರೂ ಅವರ ಕ್ಷೇತ್ರವು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ವೈದ್ಯಕೀಯವಾಗಿ ಬಹಳ ಹಿಂದುಳಿದಿದೆ. ಮುಖ್ಯಮಂತ್ರಿಯಾಗಿ ಕೂಡ ಅವರು ನೀಡುತ್ತಿರುವ ಹೇಳಿಕೆಗಳು ಅಲ್ಪಸಂಖ್ಯಾತರಿಗೆ ಕೊಳ್ಳಿ ಇರಿಸುವ ಉದ್ದೇಶವನ್ನೇ ಹೊಂದಿವೆ. ಹೀಗಿದ್ದರೂ ಅವರು ಮುಖ್ಯಮಂತ್ರಿಯಾಗಿ ಮುಂದುವರಿದಿದ್ದಾರೆ ಮಾತ್ರವಲ್ಲ, ದ್ವೇಷ ಮತ್ತು ವಿಭಜನೆಯ ಸಂದೇಶವನ್ನು ಬೇರೆಡೆಗೆ ಪಸರಿಸುವುದಕ್ಕಾಗಿ ಅವರನ್ನು ಬೇರೆ ರಾಜ್ಯಗಳಿಗೂ ಬಿಜೆಪಿ ಕಳುಹಿಸುತ್ತಿದೆ.

ಹಿಂದೂಗಳಲ್ಲದವರ ಬಗ್ಗೆ ಅನುಮಾನವು ಸಂಘ ಪರಿವಾರದ ಸಾಂಸ್ಥಿಕ ಮತ್ತು ಸೈದ್ಧಾಂತಿಕ ರಚನೆಯಲ್ಲಿಯೇ ಹಾಸುಹೊಕ್ಕಾಗಿರುವ ವಿಚಾರ. ನರೇಂದ್ರ ಮೋದಿ ಅವರಲ್ಲಿಯೂ ಇದು ಮೊದಲು ಇತ್ತು. ದ್ವೇಷದ ಗುರು ಎಂ.ಎಸ್‍. ಗೊಳವಲ್ಕರ್ ಅವರನ್ನು ಹೊಗಳಿ ಮೋದಿ ಅವರು ಬರೆದಿರುವ ಲೇಖನಗಳಲ್ಲಿ ಇದು ಸ್ಪಷ್ಟ. ಆದರೆ, 2014ರ ಲೋಕಸಭೆ ಚುನಾವಣೆ ಪ್ರಚಾರ ಸಂದರ್ಭದಲ್ಲಿ ತಮ್ಮ ಲಾಭಕ್ಕಾಗಿ ಅವರು ಮುಸ್ಲಿಮರನ್ನು ರಾಕ್ಷಸರು ಎಂದು ಚಿತ್ರಿಸುವುದರಿಂದ ಹಿಂದೆ ಸರಿದರು. ಆದರೆ, ಈಗ, ಭರವಸೆ ನೀಡಿದಂತೆ ‘ಅಚ್ಛೇ ದಿನ’ ಬಾರದೇ ಇರುವುದರಿಂದ ಮುಂದಿನ ಚುನಾವಣೆಯಲ್ಲಿ ಹಿಂದುತ್ವದ ನೆಲೆಗೆ ಪುನಶ್ಚೇತನ ಕೊಡಲು ಪಕ್ಷವು ನಿರ್ಧರಿಸಿದಂತಿದೆ.

ಅಸ್ಸಾಂನಲ್ಲಿ ನಡೆದ ರಾಷ್ಟ್ರೀಯ ಪೌರತ್ವ ನೋಂದಣಿಯ ಸುತ್ತಲಿನ ಚರ್ಚೆಯನ್ನು ಈ ದೃಷ್ಟಿಯಲ್ಲಿ ಗಮನಿಸಿ. ಇದು ಪೂರ್ವಭಾವಿ ಪಟ್ಟಿ, ಇದರಲ್ಲಿ ಹೆಸರು ಇಲ್ಲದವರಿಗೆ ಅರ್ಜಿ ಸಲ್ಲಿಸಲು ಮತ್ತೊಂದು ಅವಕಾಶ ಇದೆ. ಮತ್ತೆ ಅರ್ಜಿ ಸಲ್ಲಿಸಿಯೂ ಹೆಸರು ಸೇರ್ಪಡೆ ಆಗದಿದ್ದರೆ, ಮೇಲ್ಮನವಿ ಸಲ್ಲಿಸಬಹುದು ಎಂದು ಕೇಂದ್ರ ಗೃಹ ಸಚಿವ ರಾಜನಾಥ್‍ ಸಿಂಗ್‍ ಮೊದಲು ಹೇಳಿದ್ದರು. ಇದು ಸಮಚಿತ್ತದ ಸಂವೇದನಾಶೀಲ ಹೇಳಿಕೆ. ಭಾರತದ ಅಧಿಕಾರಶಾಹಿಗೆ ಅದಕ್ಷತೆಯ ಇತಿಹಾಸವೇ ಇದೆ. ಹಲವು ಅರ್ಹ ಪೌರರ ಹೆಸರು ಪಟ್ಟಿಯಿಂದ ಹೊರಗೆ ಉಳಿದಿರುವುದು ಈಗ ಬೆಳಕಿಗೆ ಬರುತ್ತಿದೆ. ಅಸ್ಸಾಂನ ಗೌರವಾನ್ವಿತ ಹಲವು ವೃತ್ತಿಪರರು, ದೇಶದ ಮಾಜಿ ರಾಷ್ಟ್ರಪತಿಯ ಕುಟುಂಬಿಕರು ಮಾತ್ರವಲ್ಲದೆ, ಬಿಜೆಪಿಯ ಒಬ್ಬ ಶಾಸಕರ ಹೆಸರು ಕೂಡ ಪಟ್ಟಿಯಲ್ಲಿ ಇಲ್ಲ.

ಆದರೆ, ಪಟ್ಟಿಯಲ್ಲಿ ಹೆಸರು ಇಲ್ಲದವರೆಲ್ಲರೂ ಅಕ್ರಮ ವಲಸಿಗರು ಮತ್ತು ಅವರೆಲ್ಲರನ್ನೂ ಗಡಿಪಾರು ಮಾಡಬೇಕಿದೆ ಎಂದು ಪಟ್ಟಿ ಪ್ರಕಟವಾದ ತಕ್ಷಣವೇ ಬಿಜೆಪಿ ಅಧ್ಯಕ್ಷರು ಘೋಷಿಸಿದರು. ಬೇರೆ ರಾಜ್ಯಗಳಲ್ಲಿ ಇರುವ ಅವರ ಅನುಚರರು ಇದನ್ನು ಇನ್ನಷ್ಟು ಜೋರಾಗಿ ಹೇಳಿದರು. ರಾಜಸ್ಥಾನ, ಬಿಹಾರ, ಪಶ್ಚಿಮ ಬಂಗಾಳ, ಮುಂಬೈ ಮತ್ತು ದೆಹಲಿಯ ಬಿಜೆಪಿ ಮುಖಂಡರು ತಮ್ಮ ರಾಜ್ಯ ಅಥವಾ ನಗರಗಳಲ್ಲಿ ಇರುವ ‘ವಿದೇಶಿ’ ಯರನ್ನು ಗುರುತಿಸಿ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು. ಇವರೆಲ್ಲರೂ ತೀವ್ರ ಹಿಂದುತ್ವವಾದಿಗಳು ಎಂದು ನಿರ್ಲಕ್ಷಿಸೋಣ; ಆದರೆ, ಹಾರ್ವರ್ಡ್‌ನಲ್ಲಿ ಶಿಕ್ಷಣ ಪಡೆದ, ಮೆಕ್‍ಕಿನ್ಸೆಯಂತಹ ಕಂಪನಿಯಲ್ಲಿ ಕೆಲಸ ಮಾಡಿದ ಜಾರ್ಖಂಡ್‍ನ ಸಚಿವರೊಬ್ಬರು ಕೂಡ ಗಡಿಪಾರಿಗೆ ಒತ್ತಾಯ ಮಾಡಿದ್ದಾರೆ.

ಈ ಸಂದರ್ಭದಲ್ಲಿ, ವಾಸ್ತವವಾಗಿ ‘ವಿದೇಶಿಯರು’ ಎಂಬುದು ‘ಮುಸ್ಲಿಮರು’ ಎಂಬುದಕ್ಕೆ ಇರುವ ಸಂಕೇತ ಪದ. ರೈತರು ಸಂಕಷ್ಟದಲ್ಲಿದ್ದಾರೆ, ದಲಿತರು ಆಕ್ರೋಶಗೊಂಡಿದ್ದಾರೆ, ಲಕ್ಷಾಂತರ ಯುವ ಜನರು ಘನತೆಯ ಉದ್ಯೋಗಕ್ಕಾಗಿ ವ್ಯರ್ಥವಾಗಿ ಕಾಯುತ್ತಿದ್ದಾರೆ. ಹೀಗಾಗಿ, ಮುಂದಿನ ಲೋಕಸಭಾ ಚುನಾವಣೆಯನ್ನು ಭೀತಿ ಉದ್ದೀಪಿಸುವ ಮೂಲಕ ಎದುರಿಸಲು ಬಿಜೆಪಿ ನಿರ್ಧರಿಸಿದಂತೆ ಕಾಣಿಸುತ್ತಿದೆ. ವಿವಿಧ ಜಿಲ್ಲೆಗಳು ಮತ್ತು ರಾಜ್ಯಗಳ ಮತದಾರರಲ್ಲಿ ‘ಅಸ್ಸಾಂ ನಿದರ್ಶನ’ ಮುಂದಿಟ್ಟು ಭೀತಿ ಹುಟ್ಟಿಸಲಾಗಿದೆ. ಅವರು ಹೊಂದಿರುವ ಉದ್ಯೋಗಗಳು ಕೂಡ ಅನ್ಯ ಮತ್ತು ವಿದೇಶಿ ಧರ್ಮದ ಜನರಿಂದಾಗಿ ಅಪಾಯದಲ್ಲಿವೆ ಎಂದು ಹೇಳಲಾಗಿದೆ.

ಪ್ರಧಾನಿಯವರು ತಮ್ಮ ಭಾಷಣಗಳಲ್ಲಿ ಕೋಮು ಭಾಷೆಗೆ ಒತ್ತು ನೀಡದಿರುವ ಸಾಧ್ಯತೆ ಇದೆ. ಕನಿಷ್ಠ ಪಕ್ಷ ಅವರು ಈ ಭಾಷೆಯನ್ನು ಅತಿಯಾಗಿ ಬಳಸದಿರಬಹುದು. ಆದರೆ, ಅವರು ಬೇರೊಂದು ರೀತಿಯನ್ನು ಉದ್ದೀಪಿಸಬಹುದು; ಎರಡನೇ ಅವಧಿಗೆ ತಮ್ಮನ್ನು ಆಯ್ಕೆ ಮಾಡದೇ ಇದ್ದರೆ ಅಧಿಕಾರಲಾಲಸೆಯ ಅಥವಾ ಭ್ರಷ್ಟರಾದ ಪ್ರಾದೇಶಿಕ ಪಕ್ಷಗಳ ಮುಖಂಡರ ಕಿಚಡಿ ಮೈತ್ರಿಕೂಟವು ತಾವು ದೇಶಕ್ಕೆ ನೀಡಿದ ಭರವಸೆಗಳೆಲ್ಲವನ್ನೂ ಹಾಳುಗೆಡವಬಹುದು ಅಥವಾ ದೇಶವನ್ನೇ ಹಾಳುಗೆಡವಬಹುದು
ಎಂಬುದು ಈ ಭೀತಿ. ಜತೆಗೆ, ಹಿಂದೂಗಳಲ್ಲದವರ ಬಗ್ಗೆ ಎಚ್ಚರದಿಂದಿರಿ ಎಂದು ಪಕ್ಷದ ಕಾರ್ಯಕರ್ತರು ಮತದಾರರಿಗೆ ಹೇಳಬಹುದು; ಬೇರೆ ನಾಯಕರ ಬಗ್ಗೆ ಎಚ್ಚರದಿಂದ ಇರಿ ಎಂದು ಬಿಜೆಪಿಯ ಮುಖಂಡರು ಹೇಳಬಹುದು. 2014ರಲ್ಲಿ ಅಚ್ಛೇ ದಿನದ ಹುಸಿ ಭರವಸೆ ಕೊಟ್ಟ ನರೇಂದ್ರ ಮೋದಿ, ಈಗ, ತಮ್ಮ ಪ್ರತಿಸ್ಪರ್ಧಿಗಳು ‘ಬುರೇ ದಿನ್‍’ (ಕೆಟ್ಟ ದಿನ) ತರುವುದಕ್ಕೆ ಮಾತ್ರ ಶಕ್ತರು ಎಂದು ಹೇಳಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT