ಶ್ರವಣಬೆಳಗೊಳ ಸಾಹಿತ್ಯ ಸಮ್ಮೇಳನದ ಮೊದಲ ದಿನ ಸಂಜೆಯ ಹೊತ್ತಿಗೆ ಸಮ್ಮೇಳನಾಧ್ಯಕ್ಷರಾದ ಡಾ.ಸಿದ್ಧಲಿಂಗಯ್ಯ ಅವರು ದಣಿದಿದ್ದರು. ಅವರು ಎಪ್ಪತ್ತರ ದಶಕದಲ್ಲಿ ತಮ್ಮ ಇಪ್ಪತ್ತರ ಹರೆಯದಲ್ಲಿ ಬರೆದ ಅಸಲಿ ಸಿಟ್ಟಿನ ಹೋರಾಟದ ಹಾಡುಗಳನ್ನು ಆ ಸಂಜೆ ಹಾಡುತ್ತಿದ್ದ ಗಾಯಕ ಪಿಚ್ಚಳ್ಳಿ ಶ್ರೀನಿವಾಸ್ ಕೂಡ ಕೊಂಚ ದಣಿದಿದ್ದರು. ಪಿಚ್ಚಳ್ಳಿಯವರ ದನಿ ದಣಿದ ತಕ್ಷಣ ಹೊಸ ತಲೆಮಾರಿನ ಹಾಡುಗಾರ ಡಿ.ಆರ್. ರಾಜಪ್ಪ ಆ ಹಾಡಿನ ಸಾಲುಗಳನ್ನು ಮತ್ತೆ ಎಪ್ಪತ್ತರ ದಶಕದ ‘ಪಿಚ್’ಗೆ ಏರಿಸುತ್ತಿದ್ದರು! ಒಂದು ತಲೆಮಾರು ಚಳವಳಿಗಳನ್ನು ಮುಂದಿನ ತಲೆಮಾರಿಗೆ ದಾಟಿಸುವಂತೆ ಆ ಸಂಜೆ ಚಳವಳಿಯ ಹಾಡುಗಳ ರಿಲೇ ಕೋಲು ಕೂಡ ಹೊಸ ತಲೆಮಾರಿಗೆ ದಾಟಿದಂತೆ ಕಾಣುತ್ತಿತ್ತು.

‘ಮರೆಯೋದುಂಟೆ ಮೈಸೂರ ದೊರೆಯ, ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯ’ ಎಂದು ಶುರುವಾಗುವ ಕವಿ ಹನಸೋಗೆಯವರ ಹಾಡು ಕರ್ನಾಟಕದಲ್ಲಿ ನಾಲ್ವಡಿಯವರನ್ನು ಸಾಂಸ್ಕೃತಿಕ ನಾಯಕರನ್ನಾಗಿ ನೆಲೆಗೊಳಿಸಿದ ಬಹುಜನ ಸಮಾಜ ಪಕ್ಷದ ಮುಖ್ಯ ಹಾಡಾಗಿಬಿಟ್ಟಿದೆ. ಮೊದಲಿಗೇ ಈ ಹಾಡು ಹಾಡಿದ ಪಿಚ್ಚಳ್ಳಿ ತಂಡ ಆಧುನಿಕ ಕರ್ನಾಟಕದ ಆರಂಭದಲ್ಲಿ ನಾಲ್ವಡಿಯವರು ಮೀಸಲಾತಿ ಹಾಗೂ ಇನ್ನಿತರ ಸುಧಾರಣೆಗಳ ಮೂಲಕ ಉದ್ಘಾಟಿಸಿದ ಸಾಮಾಜಿಕ ನ್ಯಾಯದ ಪರಂಪರೆಯನ್ನು ಕೃತಜ್ಞತೆಯಿಂದ ಸ್ಮರಿಸಿತು.

ಸಿದ್ಧಲಿಂಗಯ್ಯನವರ ‘ಗುಡಿಸಿಲಿನಲ್ಲಿ ಅರಳಿದ ಗುಲಾಬಿ ನಕ್ಷತ್ರ ನನ್ನ ಕವನ’, ‘ದೊಡ್ಡಗೌಡರ ಬಾಗಿಲಿಗೆ ನಮ್ಮ ಮೂಳೆಯ ತೋರಣ’ ಮುಂತಾದ, ಎರಡು ಮೂರು ದಶಕಗಳ ಕಾಲ ಕರ್ನಾಟಕದ ಚಳವಳಿಗಳ ಸ್ಫೂರ್ತಿಯ ಸೆಲೆಯಾಗಿ ಇವತ್ತಿಗೂ ಆ ಶಕ್ತಿಯನ್ನು ಉಳಿಸಿಕೊಂಡಿರುವ ಹೋರಾಟದ ಹಾಡುಗಳನ್ನು ಕೇಳುತ್ತಾ ಜನ ರೋಮಾಂಚನಗೊಳ್ಳುತ್ತಿದ್ದರು. ಈ ಹಿಂದೆ ಆ ಹಾಡುಗಳನ್ನು ಕೇಳಿದ್ದ ಹಿರಿಯರು ಕೊಂಚ ವಿಷಾದದಿಂದ ಕಳೆದು ಹೋದ ದಿನಗಳಿಗೆ ಮರಳಿದಂತಿದ್ದರು.

ನನ್ನ ಪಕ್ಕದಲ್ಲಿ ಕೂತಿದ್ದ ಚಿಗುರು ಮೀಸೆಯ ಪೋಲಿಸ್ ಕಾನ್ಸ್ಟೆಬಲ್ ಸೇರಿದಂತೆ ಹೊಸ ತಲೆಮಾರಿನವರು ಆ ಹೋರಾಟದ ಹಾಡುಗಳನ್ನು ಕೇಳಿ ಮೈದುಂಬುತ್ತಿದ್ದರು. ಸಿದ್ಧಲಿಂಗಯ್ಯನವರ ಕಾರಣಕ್ಕಾಗಿಯೂ ಅಲ್ಲಿ ಸೇರಿದ್ದ ಸಾವಿರಾರು ದಲಿತ ಚಳವಳಿಯ ನಾಯಕರು ಹಾಗೂ ಕಾರ್ಯಕರ್ತರಿಗೆ, ಚಳವಳಿ ಬೇಕೋ ಬೇಡವೋ ಎಂದು ಗೊಂದಲದಲ್ಲಿರುವ ಕೆಂಪುಗಣ್ಣಿನ ಎಳೆಯರಿಗೆ ಈ ಹಾಡುಗಳು ಹಲವು ಬಗೆಯ ಚಳವಳಿಗಳ ಬಗ್ಗೆ ಹೊಸ ಕನಸುಗಳನ್ನು ಮೂಡಿಸಿದ್ದರೆ ಅದು ಅಚ್ಚರಿಯಲ್ಲ. ಈ ತಲೆಮಾರಿನ ಕವಿಯೊಬ್ಬರ ಹೊಸ ನುಡಿಗಟ್ಟಿನಲ್ಲೇ ಹೇಳುವುದಾದರೆ, ಚಳವಳಿಗಾರರು ಅವತ್ತು ‘ರೀಚಾರ್ಜ್’ ಆಗಿದ್ದರು!

ಒಂದು ಕಾಲಘಟ್ಟದಲ್ಲಿ ಸೃಷ್ಟಿಯಾದ ಚಳವಳಿಗಳ ಚರಿತ್ರೆ ಪುನರಾವರ್ತನೆಯಾಗುತ್ತದೆಯೆ? ಆಯಾ ಕಾಲದ ಅಗತ್ಯ, ಸ್ಫೂರ್ತಿ ಮತ್ತು ಒತ್ತಡಗಳಿಂದ ಸೃಷ್ಟಿಯಾದ ಚಳವಳಿಗಳು ಮತ್ತೆ ಹುಟ್ಟುತ್ತವೆಯೆ? ಈ ಹಾಡುಗಳನ್ನು ಕೇಳಿ ಜನ ಚಳವಳಿಗೆ ಬಂದಾರೆ? ಹಳೆಯ ದಮನದ ರೂಪಗಳು ಬೇರೆ ಬೇರೆ ವೇಷದಲ್ಲಿ ಬಂದಂತೆ ಹಳೆಯ ಪ್ರತಿಭಟನೆಗಳು ಕೂಡ ಬೇರೆ ಬೇರೆ ರೂಪದಲ್ಲಿ ಬರಬಹುದಲ್ಲವೆ? ಈ ಥರದ ಪ್ರಶ್ನೆಗಳು ಆ ಹಾಡುಗಳನ್ನು ಕೇಳುತ್ತಿದ್ದ ನನ್ನಂಥ ಹಲವರಲ್ಲಿ ಮೂಡಿರಬಹುದು. ಆ ಗಳಿಗೆಯಲ್ಲಿ ನನಗೆ ಸಿದ್ಧಲಿಂಗಯ್ಯನವರನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ಆರಿಸಿದ ಪುಂಡಲೀಕ ಹಾಲಂಬಿ ಮತ್ತು ತಂಡಕ್ಕೆ ಈ ಸಮ್ಮೇಳನದ ಚಾರಿತ್ರಿಕ ಮಹತ್ವ ನಿಜಕ್ಕೂ ಅರ್ಥವಾಗಿರಲಿಕ್ಕಿಲ್ಲ ಎನ್ನಿಸತೊಡಗಿತು.

ಈ ಸಲದ ಸಮ್ಮೇಳನಕ್ಕೆ ಹೋರಾಟದ ವಲಯಗಳಿಂದ ಬರುತ್ತಿದ್ದ ಉತ್ಸಾಹದ ಪ್ರತಿಕ್ರಿಯೆಗಳನ್ನು ಹಾಗೂ ಸಮ್ಮೇಳನಕ್ಕೆ ಬಂದ ಹಲ ಬಗೆಯ ದಲಿತ ಸಂಘಟನೆಗಳ ನಾಯಕರನ್ನು, ಕಾರ್ಯಕರ್ತರನ್ನು ನೋಡಿದವರಿಗೆ ಈ ಸಮ್ಮೇಳನದ ಚಾರಿತ್ರಿಕ ಮಹತ್ವ ಗೊತ್ತಾಗಿರಬಹುದು. ಶ್ರವಣಬೆಳಗೊಳದಲ್ಲಿ ಹಾಗೂ ಅಲ್ಲಿಗೆ ಬರುವ ಹಾದಿಯಲ್ಲಿ ಎಂದಿನಂತೆ ಸಮ್ಮೇಳನವನ್ನು ಸ್ವಾಗತಿಸುವ ಹಲವು ಬಗೆಯ ಬ್ಯಾನರುಗಳ ನಡುವೆ ಮೊದಲ ಬಾರಿಗೆ ದಲಿತ ಚಳವಳಿಗಳ ಹಲವು ಬಣಗಳ ಬ್ಯಾನರ್ ಹಾಗೂ ಫ್ಲೆಕ್ಸ್ಗಳು ಎದ್ದು ಕಾಣುತ್ತಿದ್ದವು.

ರೈತ ಚಳವಳಿ ಹಾಗೂ ಹಸಿರುಸೇನೆಗಳ ಬ್ಯಾನರ್ ಕೂಡ ಇದ್ದವು. ಈ ಹೊಸ ವಾತಾವರಣದ ಸಾಧ್ಯತೆಯನ್ನು ಊಹಿಸಿ ತುಂಬ ಚುರುಕಾದ ಹಾಗೂ ಗಟ್ಟಿಯಾದ ಸಾಮಾಜಿಕ ಚರ್ಚೆಗಳನ್ನು ರೂಪಿಸಬಲ್ಲ ಮುನ್ನೋಟ ಸಾಹಿತ್ಯ ಪರಿಷತ್ತಿಗೆ ಇದ್ದಂತಿರಲಿಲ್ಲ. ಒಂದು ಕಾಲಕ್ಕೆ ಚಳವಳಿಗಳನ್ನು ರೂಪಿಸಿದ್ದ ಸಿದ್ಧಲಿಂಗಯ್ಯನವರ ಇವತ್ತಿನ ಅಧ್ಯಕ್ಷ ಭಾಷಣ ಈ ಕಾಲದ ಮುಖ್ಯ ಸಮಸ್ಯೆಗಳನ್ನು ಪ್ರಸ್ತಾಪಿಸಿದರೂ ಅದರಲ್ಲಿ ಸಮಸ್ಯೆಗಳ ಪರಿಹಾರಕ್ಕಾಗಿ ಸರ್ಕಾರಕ್ಕೆ ಮಾಡಿಕೊಂಡ ಮನವಿಯ ಧ್ವನಿಯೇ ಪ್ರಧಾನವಾಗಿತ್ತು; ಅಲ್ಲಿ ಕೂಡ ಚಳವಳಿಗಳ ಹಾದಿ ಹಾಗೂ ಇವತ್ತು ಅವುಗಳ ಅಗತ್ಯದ ಬಗ್ಗೆ ಒತ್ತು ಇರಲಿಲ್ಲ.

ಈ ಕೊರತೆ ಕಣ್ಣಿಗೆ ಹೊಡೆಯುವಂತೆ ಕಂಡದ್ದು ಅಷ್ಟೊಂದು ಜನ ಆ ಸಭಾಂಗಣದಲ್ಲಿ ಕೂತು ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದ ರೀತಿ ಕಂಡಾಗ: ಒಂದು ದಶಕದ ಕೆಳಗೆ ತಮ್ಮೂರಿನ ಕಡೆಯ ಶಾಂತರಸರು ಸಮ್ಮೇಳನಾಧ್ಯಕ್ಷರಾಗಿದ್ದಾಗಿನಿಂದ ಸಾಹಿತ್ಯ ಸಮ್ಮೇಳನಗಳಿಗೆ ಹೋಗಲು ಶುರು ಮಾಡಿದ ಸೇಡಂನ ತರುಣ ಶ್ರೀನಿವಾಸ್ ಈಗಾಗಲೇ ಹತ್ತು ಸಮ್ಮೇಳನಗಳಿಗೆ ಹಾಜರಾಗಿದ್ದಾನೆ. ಈ ನಡುವೆ ಕನ್ನಡ ಎಂ.ಎ., ಎಂ.ಫಿಲ್. ಮುಗಿಸಿದ್ದಾನೆ. ಸಮ್ಮೇಳನಗಳಲ್ಲಿ ಹೊಸ ಐಡಿಯಾಗಳು ಸಿಕ್ಕರೆ ಅವನ್ನು ತನ್ನ ತಲೆಯಲ್ಲಿ ಜೋಪಾನವಾಗಿ ಕಾಯ್ದುಕೊಂಡಿದ್ದಾನೆ. ಪ್ರತಿ ಸಮ್ಮೇಳನದಲ್ಲೂ ಇಂಥ ಲಕ್ಷಾಂತರ ಜನ ಸಿಗುತ್ತಾರೆ.

ತಾವು ಎಂದೋ ಓದಿದ ಲೇಖಕ, ಲೇಖಕಿಯರನ್ನು ಕಂಡು ಪುಳಕಗೊಳ್ಳುವ, ಅವರೊಂದಿಗೆ ಫೋಟೊ ತೆಗೆಸಿಕೊಳ್ಳುವ ಮುಗ್ಧ ಓದುಗರಿದ್ದಾರೆ. ಪುಸ್ತಕಗಳನ್ನು ಕೊಂಡು ತಮ್ಮ ಪಾಡಿಗೆ ತಾವು ಓದಿಕೊಳ್ಳುವ ಮೂಲಕವೇ ಕನ್ನಡ ಸಾಹಿತ್ಯವನ್ನು ಪೊರೆಯುತ್ತಿರುವ ಓದುಗರಿದ್ದಾರೆ. ತಪ್ಪದೆ ಸಮ್ಮೇಳನಗಳಿಗೆ ಹಾಜರಾಗುವ ಶಾಲಾ ಟೀಚರುಗಳಿಂದ ಹಿಡಿದು ಎಲ್ಲ ವರ್ಗದ ಜನರಿದ್ದಾರೆ. ಇಂಥ ಕನ್ನಡಿಗರಿಗೆ ಕನ್ನಡ ಸಾಹಿತ್ಯ ಪರಿಷತ್ತು ಕೈ ಮುಗಿದು, ಅವರಿಗೆಲ್ಲ ಪ್ರಯಾಣ ವೆಚ್ಚ ಕೊಟ್ಟು ಬರಮಾಡಿಕೊಳ್ಳಬೇಕು ಎನ್ನಿಸಿತು. ಅದಾಗದಿದ್ದರೂ ಕನ್ನಡ ಸಾಹಿತ್ಯದ ಹಾಗೂ ಒಟ್ಟು ಕರ್ನಾಟಕದ ಮುಖ್ಯ ಪ್ರಶ್ನೆಗಳನ್ನು ಚರ್ಚಿಸಿ, ಈ ಸಮ್ಮೇಳನಗಳಿಗೆ ಬರುವ ಲಕ್ಷಾಂತರ ಜನರ ಸಂವೇದನೆಯನ್ನು ರೂಪಿಸುವ ಜವಾಬ್ದಾರಿ ಹಾಗೂ ದೂರದೃಷ್ಟಿ ಸಾಹಿತ್ಯ ಪರಿಷತ್ತಿಗೆ ಇರಬೇಕು.

ಈಚೆಗೆ ಸಾಹಿತ್ಯಕ್ಕೆ ಸಂಬಂಧಪಟ್ಟ ಗಂಭೀರ ಗೋಷ್ಠಿಗಳನ್ನೇ ‘ಸಾಹಿತ್ಯ’ ಸಮ್ಮೇಳನಗಳು ಕೈಬಿಟ್ಟಿವೆ. ಸಾಮಾಜಿಕ ಹಾಗೂ ಸಾಹಿತ್ಯಕ ವಲಯಗಳೆರಡನ್ನೂ ಇಂಥ ಸಮ್ಮೇಳನಗಳು ಬೆಸೆಯಬೇಕು. ಸಾಹಿತ್ಯ ಸಮ್ಮೇಳನಗಳು ಸಾಹಿತ್ಯದ ಚರ್ಚೆಗಳನ್ನು ಅಂಚಿಗೆ ತಳ್ಳತೊಡಗಿದರೆ, ಸಾಹಿತ್ಯದ ದೇಶಾವರಿ ಭಾಷಣಗಳನ್ನು ಅಥವಾ ಸಾಹಿತಿಗಳು ಹಾಗೂ ಸಾಹಿತ್ಯ ಕೃತಿಗಳ ಬಗೆಗಿನ ಮೇಲ್ಪದರದ ಮಾತುಗಳನ್ನೇ ‘ಸಾಹಿತ್ಯ ಚರ್ಚೆ’ ಎಂದು ಈ ತಲೆಮಾರಿನ ಸಾಹಿತ್ಯಾಸಕ್ತರು ತಿಳಿಯತೊಡಗಿದರೆ ಆಶ್ಚರ್ಯವಲ್ಲ!

ಈ ಬಗೆಯ ಸಮ್ಮೇಳನಗಳಲ್ಲಿ ಹತ್ತಾರು ಬಗೆಯ ವಿಚಾರಗಳನ್ನು ಒಳಗೊಳ್ಳಲು ಸಮಾನಾಂತರ ವೇದಿಕೆಯನ್ನು ರೂಪಿಸುವುದು ಅಗತ್ಯವಿರಬಹುದು. ಆದರೆ ಸಮಾನಾಂತರ ವೇದಿಕೆಗಳನ್ನು ‘ಬಿ’ ಟೀಮ್ ವೇದಿಕೆಯನ್ನಾಗಿ ಮಾಡುವುದು, ಅಲ್ಲಿಗೆ ಜನರೇ ಬಾರದಂಥ ವಾತಾವರಣವಿರುವುದು, ಅಲ್ಲಿ ನಡೆಯುವ ಗೋಷ್ಠಿಗಳ ಬಗ್ಗೆ ಜನರಿಗೆ ಸರಿಯಾದ ತಿಳಿವಳಿಕೆ ಕೊಡದಿರುವುದು ಇವೆಲ್ಲ ಸೇರಿಕೊಂಡು ಸಮಾನಾಂತರ ವೇದಿಕೆಗಳಲ್ಲಿ ನಡೆಯುವ ಗಂಭೀರ ಚರ್ಚೆಗಳು ಯಾರಿಗೂ ತಲುಪದಂಥ ಸ್ಥಿತಿಯನ್ನು ನಿರ್ಮಿಸಿವೆ. ಇಂಥ ಸಮ್ಮೇಳನಗಳಲ್ಲಿ ಚರ್ಚಿಸಲಾಗುವ ವಸ್ತುವಿಷಯಗಳನ್ನು ಆರಿಸಲು ಒಂದು ಜವಾಬ್ದಾರಿಯುತ ತಂಡ ಹಲವು ತಿಂಗಳ ಕಾಲ ಹಲವರೊಂದಿಗೆ ಚರ್ಚಿಸಿ ಸಿದ್ಧತೆ ಮಾಡಿಕೊಳ್ಳುತ್ತಿರಬೇಕಾಗುತ್ತದೆ.

ಈ ವಿಷಯಗಳನ್ನು ಸಮರ್ಥವಾಗಿ ಬಲ್ಲ ಆರೋಗ್ಯಕರ ಮನಸ್ಸಿನ ಚಿಂತಕ, ಚಿಂತಕಿಯರನ್ನು ಗೋಷ್ಠಿಗಳಿಗೆ ಆರಿಸಲು ಸ್ವಜನಪಕ್ಷಪಾತ, ಪೂರ್ವಗ್ರಹಗಳಿಲ್ಲದೆ ಮುಕ್ತವಾಗಿ ಯೋಚಿಸಬೇಕಾಗುತ್ತದೆ. ಈ ದೃಷ್ಟಿಯಿಂದ, ಈ ಕಾಲದಲ್ಲಿ ಆಯೋಜಿಸಲಾಗುತ್ತಿರುವ ಲಿಟರರಿ ಫೆಸ್ಟಿವಲ್ಗಳ ಜೀವಂತಿಕೆ ಹಾಗೂ ಚುರುಕು ರೀತಿಗಳನ್ನೂ ಅಖಿಲ ಭಾರತ ಮರಾಠಿ ಸಾಹಿತ್ಯ ಸಮ್ಮೇಳನಗಳನ್ನೂ ಪರಿಷತ್ತು ಕೊಂಚ ಹತ್ತಿರದಿಂದ ನೋಡಿ ತನ್ನ ಸಮ್ಮೇಳನಗಳ ಸ್ವರೂಪಗಳಲ್ಲಿ ಬದಲಾವಣೆ ಮಾಡಿಕೊಳ್ಳುವುದು ಒಳ್ಳೆಯದು. ಜೊತೆಗೆ, ಸ್ವಾಗತ, ವಂದನೆ ಹಾಗೂ ನಿರೂಪಕರ ಭಯೋತ್ಪಾದನೆಯನ್ನು ತಡೆಗಟ್ಟಿ ಅವನ್ನೆಲ್ಲ ಒಂದು ಸಾಲಿಗೆ ಇಳಿಸುವುದು ಅತ್ಯಗತ್ಯ.

ದೇವನೂರ ಮಹಾದೇವ ಅವರು ಕನ್ನಡ ಮಾಧ್ಯಮದ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಈ ಸಮ್ಮೇಳನದ ಅಧ್ಯಕ್ಷರಾಗಲು ಒಲ್ಲೆನೆಂದದ್ದನ್ನು ಗಂಭೀರವಾಗಿ ತೆಗೆದುಕೊಂಡು ಇಡೀ ಪ್ರಶ್ನೆಯನ್ನು ಕೇಂದ್ರಕ್ಕೆ ತಂದು ಚರ್ಚಿಸುವ ಪ್ರಾಮಾಣಿಕ ಉತ್ಸಾಹವನ್ನು ಈ ಸಮ್ಮೇಳನ ಸೃಷ್ಟಿಸಲಿಲ್ಲ. ಆ ದಿಕ್ಕಿನಲ್ಲಿ ಜನಾಭಿಪ್ರಾಯ ರೂಪಿಸುವ ದನಿ ಸಮ್ಮೇಳನದಲ್ಲಿ ಕೇಳಿ ಬಂದರೂ ಅದರ ಹೊಣೆಯನ್ನು ನಿರ್ವಹಿಸುವ ಖಚಿತ ಮಾರ್ಗಗಳನ್ನು ಕುರಿತು ಸಮ್ಮೇಳನ ಆಳವಾಗಿ ಚಿಂತಿಸಿದಂತಿಲ್ಲ. ಸಮ್ಮೇಳನದ ಯಾಂತ್ರಿಕ ನಿರ್ಣಯಗಳು ಆ ಕೆಲಸ ಮಾಡುತ್ತವೆಂಬ ಖಾತ್ರಿ ಯಾರಿಗೂ ಇಲ್ಲ.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪುಂಡಲೀಕ ಹಾಲಂಬಿ ಕನ್ನಡ ಮಾಧ್ಯಮದ ಜಾರಿಗಾಗಿ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಹೇಳಿದ್ದಾರೆ. ಆ ರೀತಿಯ ಹೇಳಿಕೆಗಳಿಂದ ಸಮಸ್ಯೆ ಪರಿಹಾರವಾಗುವುದಿಲ್ಲ. ಸಂವಿಧಾನ ತಿದ್ದುಪಡಿಯಂಥ ಸೂಕ್ಷ್ಮ ವಿಷಯವನ್ನು ತೀರ ಬಿಡುಬೀಸಾಗಿ ಚರ್ಚಿಸುವುದು ಕೂಡ ತಪ್ಪು. ಯಾಕೆಂದರೆ ಒಮ್ಮೆ ಸಂವಿಧಾನವನ್ನು ತಿದ್ದುಪಡಿ ಮಾಡುವ ಚಾಳಿ ಶುರುವಾದರೆ ಸರ್ವಾಧಿಕಾರಿ ನಾಯಕರು ಹಾಗೂ ಪಕ್ಷಗಳ ಕೈಯಲ್ಲಿ ಇದು ಯಾವ ಮಟ್ಟಕ್ಕಾದರೂ ಇಳಿಯಬಹುದು ಎಂಬ ಎಚ್ಚರ ನಮಗಿರಬೇಕು.

ಈಗ ಕೆಲವರು ಸೂಚಿಸುತ್ತಿರುವಂತೆ ಕರ್ನಾಟಕ ಸರ್ಕಾರವೇ ಮುಂದಾಗಿ ಇನ್ನಿತರ ರಾಜ್ಯಗಳನ್ನು ಭಾಷಾಮಾಧ್ಯಮ ಕುರಿತ ಮಹತ್ವದ ಕೇಸಿನಲ್ಲಿ ಭಾಗಿಯಾಗಲು ಮನವೊಲಿಸಬೇಕು; ಲೇಖಕ ಕೇಶವ ಮಳಗಿ ಹೇಳಿದಂತೆ, ಜಗತ್ತಿನಲ್ಲಿ ಈ ಬಗೆಯ ಬಿಕ್ಕಟ್ಟನ್ನು ಎದುರಿಸುತ್ತಿರುವ ಬೇರೆ ಬೇರೆ ದೇಶಗಳ ವಿದ್ವಾಂಸರನ್ನು, ಬೇರೆ ಬೇರೆ ರಾಜ್ಯಗಳ ಚಿಂತಕರನ್ನು, ಚಳವಳಿಗಾರರನ್ನು ಕರ್ನಾಟಕಕ್ಕೆ ಅಥವಾ ದೆಹಲಿಗೆ ಆಹ್ವಾನಿಸಿ, ವಿಶಾಲವಾದ ಹಾಗೂ ಖಚಿತ ದಿಕ್ಕು ಹುಡುಕುವ ಚರ್ಚೆಯನ್ನು ಆರಂಭಿಸಬೇಕು.

ಕನ್ನಡ ಮಾಧ್ಯಮದ ಪ್ರಶ್ನೆಯನ್ನು ಭಾವುಕ ನೆಲೆಯಲ್ಲಿ ಮಾತಾಡಿ ಪ್ರಯೋಜನವಿಲ್ಲ; ಅದರ ಜೊತೆಗೆ, ಇಂಗ್ಲಿಷ್ ಮಾಧ್ಯಮದ ಶಾಲೆಗಳಲ್ಲೂ ಕನ್ನಡವನ್ನು ಒಂದು ಭಾಷೆಯನ್ನಾಗಿ ಕಲಿಸುವ ಹಾಗೂ ಹೇಮಲತಾ ಮಹಿಷಿಯವರು ಹೇಳಿದಂತೆ ಕನ್ನಡವನ್ನು ಒಂದು ‘ವಿಷಯ’ವಾಗಿ ಕಡ್ಡಾಯವಾಗಿ ಕಲಿಸುವ ಅಗತ್ಯವನ್ನು ಖಾಸಗಿ ಶಾಲೆಗಳಿಗೆ ಮನಗಾಣಿಸಬೇಕು. ಖಾಸಗಿ ಶಾಲೆಗಳು ಕನ್ನಡ ಮಾತೃಭಾಷೆಯಲ್ಲದ ಮಕ್ಕಳಿಗೆ ಅವರವರ ಭಾಷೆಗಳನ್ನು ಕಲಿಯುವ ಅವಕಾಶದ ಜೊತೆಗೆ ಸ್ಥಳೀಯ ಭಾಷೆಯಾದ ಕನ್ನಡವನ್ನು ಸರಳವಾಗಿಯಾದರೂ ಕಲಿಸಬೇಕು.

ಯಾವುದೇ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಹಾಗೂ ಕರ್ನಾಟಕಕ್ಕೆ ಸಂಬಂಧಿಸಿದಂತೆ ಆರೋಗ್ಯಕರ ಪ್ರಧಾನ ಧ್ವನಿಯೊಂದು ಮೂಡಬೇಕು. ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸಾಹಿತಿಗಳು ದಣಿದಿದ್ದರೂ ಸಮ್ಮೇಳನಕ್ಕೆ ಬರುವ ಕನ್ನಡಿಗರು ದಣಿದಿಲ್ಲ ಎಂಬ ತಿಳಿವಳಿಕೆ ಹಾಗೂ ಆ ಕುರಿತು ಗಟ್ಟಿ ನಂಬಿಕೆಯಿರದಿದ್ದರೆ ಎಲ್ಲ ಸಮ್ಮೇಳನಗಳೂ ಯಾಂತ್ರಿಕ ಆಚರಣೆಗಳಾಗುತ್ತವೆ.

ಕೊನೆ ಟಿಪ್ಪಣಿ: ಗಂಭೀರ ಚಿಂತನೆ ಮತ್ತು ಸರಳ ಭಾಷೆಯ ಬೆಸುಗೆ
ಖಾಸಗಿಯಾಗಿ ತುಂಬ ಲವಲವಿಕೆಯಿಂದ ಮಾತಾಡುವ ಡಾ.ಸಿದ್ಧಲಿಂಗಯ್ಯನವರು ಸಮ್ಮೇಳನಾಧ್ಯಕ್ಷ ಭಾಷಣಗಳ ಪರಿಚಿತ ಜಾಡಿಗೆ ಇಳಿದು ತಮ್ಮ ಜೀವಂತಿಕೆ ಕಳೆದುಕೊಂಡಂತಿತ್ತು. ಹಾಗೆಯೇ ಇಂಥ ದೊಡ್ಡ ಸಮ್ಮೇಳನಗಳಲ್ಲಿ ವಿಚಾರ ಮಂಡಿಸುವವರೆಲ್ಲ ಸಂಕೀರ್ಣ ವಿಚಾರಗಳನ್ನು ಸರಳವಾಗಿ ತಲುಪಿಸುವ ನುಡಿಗಟ್ಟು ಹಾಗೂ ಜವಾಬ್ದಾರಿ ಕುರಿತು ಆಳವಾಗಿ ಯೋಚಿಸುತ್ತಿರಬೇಕಾಗುತ್ತದೆ. ಈ ಸಮ್ಮೇಳನದಲ್ಲಿ ಆ ಪ್ರಜ್ಞೆ ಕೆಲವರಲ್ಲಿ ಕೆಲವು ಕಡೆ ಮಾತ್ರ ಕಾಣುತ್ತಿತ್ತು.

ಸಮುದಾಯದ ಸಹಜ ಭಾಷೆಗೆ ಹತ್ತಿರವಾಗುವಂತೆ ಮಾತಾಡಿ ಜನರ ಜೀವನ್ಮರಣದ ಪ್ರಶ್ನೆಗಳನ್ನು ಎಲ್ಲರಿಗೂ ತಲುಪಿಸುವ ಕಲೆಯನ್ನು ನಮ್ಮ ಚಿಂತಕ, ಚಿಂತಕಿಯರು ದಲಿತ ಚಳವಳಿಯನ್ನು ರೂಪಿಸಿದ ಬಿ. ಕೃಷ್ಣಪ್ಪನವರಿಂದ ಹಾಗೂ ರೈತ ಚಳವಳಿಯನ್ನು ಕಟ್ಟಿದ ಎಂ.ಡಿ. ನಂಜುಂಡಸ್ವಾಮಿ, ಸುಂದರೇಶ್ ಥರದವರಿಂದ ಕಲಿಯಬೇಕು. ಇಂಥ ದೊಡ್ಡ ಸಭೆಗಳಲ್ಲಿ ಪರಿಕಲ್ಪನೆಗಳ ಭಾರದಿಂದ ಜನರನ್ನು ಕಣ್ಣು ಕಣ್ಣು ಬಿಡುವಂತೆ ಮಾಡುವ ಅಗತ್ಯವಿಲ್ಲ; ಹಾಗೆಂದು ಅನಗತ್ಯವಾಗಿ ವಿಷಯವನ್ನು ತೆಳುಗೊಳಿಸಿ ಚೀರಬೇಕಾಗಿಲ್ಲ.

ಹಸಿಹಸಿ ಪೂರ್ವಗ್ರಹಗಳು, ವಿಶ್ಲೇಷಣೆಯ ಕಿಕ್ಕಿಗಾಗಿ ಒಗೆಯುವ ಬೀಸು ಹೇಳಿಕೆಗಳು, ಅರೆಬೆಂದ ವ್ಯಾಖ್ಯಾನಗಳು, ಜಾತಿಪೀಡಿತ ‘ಸಂಶೋಧನೆ’ಗಳು ಹಾಗೂ ವಿಕೃತ ಚಿಂತನೆಗಳನ್ನು ಜನರ ಮೇಲೆ ಹರಿಯಬಿಡುವುದರಿಂದ ಜನರ ಕಣ್ಣು ಮುಚ್ಚಿಸಿದಂತಾಗುತ್ತದೆ; ಅವರ ಅಭಿರುಚಿಯನ್ನು ಶಾಶ್ವತವಾಗಿ ಹಾಳು ಮಾಡಿದಂತಾಗುತ್ತದೆ. ಈ ಎಚ್ಚರ ಸದಾ ನಮ್ಮೊಳಗಿರಲಿ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.