ಇಪ್ಪತ್ತೊಂದನೆಯ ಶತಮಾನದ ಆಮ್ ಆದ್ಮಿ ಪಾರ್ಟಿ, ಗಾಂಧಿ ಟೋಪಿ ಹಾಗೂ ಪೊರಕೆಯನ್ನು ತನ್ನ ಸಂಕೇತವಾಗಿ ಆರಿಸಿಕೊಂಡಾಗ ಆ ಪಕ್ಷ ತೀರಾ ನಾಜೂಕಾದ ಸಂಕೇತಗಳ ರಾಜಕಾರಣವನ್ನು ಆರಂಭಿಸಿರುವುದು ಎದ್ದು ಕಾಣುತ್ತಿತ್ತು. ದಲಿತ ಸಂಘರ್ಷ ಸಮಿತಿಯ ಶುರುವಿನಲ್ಲಿ ದೇವನೂರ ಮಹಾದೇವ ಅವರು ಪೊರಕೆಯನ್ನು ದಸಂಸದ ಸಂಕೇತವನ್ನಾಗಿಸಿಕೊಳ್ಳಲು ಗೆಳೆಯರ ಮನ ಒಲಿಸಿದ್ದು ನೆನಪಾಗಿ, ಆಮ್ ಆದ್ಮಿ ಪಕ್ಷ, ಕರ್ನಾಟಕದ ದಲಿತ ಚಳವಳಿಯ ಸಂಕೇತವನ್ನು ಕಬ್ಜಾ ಮಾಡಿಕೊಂಡಂತೆ ಕಂಡಿತು.

ದಲಿತ ಚಳವಳಿಯ ಚರಿತ್ರೆಯಾಗಲೀ, ಈ ಸಂಕೇತದ ಆಳವಾಗಲೀ ಗೊತ್ತಿರದ ಆಪ್ ಅಭಿಮಾನಿಗಳು ಪೊರಕೆಯನ್ನು ಭ್ರಷ್ಟಾಚಾರದ ವಿರುದ್ಧದ ಸಂಕೇತವನ್ನಾಗಿ ಮಾತ್ರ ಝಳಪಿಸುತ್ತಿದ್ದರು. ಕಳೆದ ಅಕ್ಟೋಬರ್ ಎರಡರಂದು ನರೇಂದ್ರ ಮೋದಿಯವರ ‘ಸ್ವಚ್ಛ ಭಾರತ’ ಆಂದೋಲನದ ಕರೆ ಕೇಳಿ ಟೆಲಿವಿಷನ್ ತೆರೆಗಳಲ್ಲಿ ಪ್ಲಾಸ್ಟಿಕ್ ಪೊರಕೆಗಳು ಕುಣಿಯಲಾರಂಭಿಸಿದವು.

ಆಗ ಬಿಜೆಪಿಯ ಅಭಿಮಾನಿಗಳು ಆಮ್ ಆದ್ಮಿ ಪಕ್ಷದ ಸಂಕೇತವನ್ನು ಫಿನಿಷ್ ಮಾಡಿದೆವೆಂದು ಬೀಗಿರಬಹುದು! ಸಂಕೇತಗಳ ಸುತ್ತ ನಡೆವ ಹುನ್ನಾರಗಳನ್ನು ಅರಿಯುವುದು ಕಷ್ಟ. ಆದರೆ ಸತ್ಯಕ್ಕಿಂತ ಸಂಕೇತಗಳಿಗೇ ಹೆಚ್ಚು ಬೆಲೆ ಕೊಡುವ ಈ ದೇಶದಲ್ಲಿ ಸಂಕೇತಗಳ ರಾಜಕಾರಣವನ್ನು ಎಚ್ಚರದಿಂದ ಗಮನಿಸುತ್ತಿರಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಆಪ್ ಹಾಕಿಕೊಂಡಿರುವ ಗಾಂಧಿ ಟೋಪಿಯನ್ನು ಎಗರಿಸುವ ಸ್ಟ್ರ್ಯಾಟಿಜಿಗಳು ಕೂಡ ತಯಾರಾಗುತ್ತಿರಬಹುದು!

ಅದೇನೇ ಇರಲಿ, ಇದೀಗ ಆಮ್ ಆದ್ಮಿ ಪಕ್ಷ ದೆಹಲಿಯ ಚುನಾವಣೆಯಲ್ಲಿ ಮತ್ತೆ ಅಧಿಕಾರದ ಹತ್ತಿರ ಬಂದಂತೆ ಕಾಣುತ್ತಿದೆಯೆಂದು ಸಮೀಕ್ಷೆಗಳು ಹೇಳುತ್ತಿವೆ. ಈ ಸಮೀಕ್ಷೆಗಳ ಆಳ ಅಗಲಗಳು ಈಗ ಆಪ್ ಜೊತೆಗಿರುವ ಚುನಾವಣಾ ಭವಿಷ್ಯವಿಜ್ಞಾನಿ ಯೋಗೇಂದ್ರ ಯಾದವ್ ಅವರಿಗೆ ಚೆನ್ನಾಗಿ ಗೊತ್ತಿರಬಲ್ಲವು. ಆದರೆ ಒಂದಂತೂ ಎದ್ದು ಕಾಣುತ್ತಿದೆ: ಕೇಂದ್ರದಲ್ಲಿ ಆಳುತ್ತಿರುವ ಪಕ್ಷಕ್ಕೆ ಈ ಚುನಾವಣೆಯ ಗೆಲುವಿನ ಬಗ್ಗೆ ಅಷ್ಟು ಗ್ಯಾರಂಟಿಯಿರುವಂತಿಲ್ಲ!

ದೆಹಲಿ ಚುನಾವಣೆ ಇಷ್ಟು ತಡವಾಗುವುದಕ್ಕೆ ಅಲ್ಲಿ ಆಳುವ ಸರ್ಕಾರಕ್ಕೆ ಅನುಕೂಲಕರ ಸ್ಥಿತಿಯಿಲ್ಲವೆಂಬ ವರದಿಗಳು ಕೂಡ ಕಾರಣವಿರಬಹುದು. ಕಿರಣ್ ಬೇಡಿಯವರ ತುರ್ತು ಆಮದು ಕೂಡ ಕೇಜ್ರಿವಾಲರ ಕ್ಲೀನ್ ಇಮೇಜಿಗೆ ಹೆದರಿದ ಬಿಜೆಪಿ ಆಡುತ್ತಿರುವ ಯುದ್ಧ ಕಾಲದ ಜೂಜಿನಂತೆ ಕಾಣುತ್ತಿದೆ! ಭಾರತದ ರಾಜಕಾರಣದಲ್ಲಿ ಮತ್ತೊಂದು ಆಟ ಶುರುವಾಗಲಿದೆ.

ಭಾರತದ ರಾಜಕಾರಣಕ್ಕೆ ಹೊಸ ಕಾಲದ ಭಾಷೆಯನ್ನು ಪರಿಚಯಿಸಿರುವ ಆಮ್ ಆದ್ಮಿ ಪಕ್ಷದ ಹಣಕಾಸು ನಿರ್ವಹಣೆಯಲ್ಲಿ ಕಾಣುವ ಹೊಸ ಬಗೆಯ ದಕ್ಷತೆ ಹಾಗೂ ಅಕೌಂಟಬಲಿಟಿಯನ್ನು ಕೂಡ ಗಮನಿಸಬೇಕು. ಮೇಲು ನೋಟಕ್ಕಂತೂ ಆಮ್ ಆದ್ಮಿ ಪಾರ್ಟಿ ತನಗೆ ಹಣ ಕೊಡುವವರ ಹಿಡಿತದಲ್ಲಿ ಇರುವಂತೆ ಕಾಣುತ್ತಿಲ್ಲ. ಈ ದೃಷ್ಟಿಯಿಂದ ಉಳಿದ ಪಕ್ಷಗಳಿಗಿಂತ ಅದು ಕೊಂಚ ಸ್ವತಂತ್ರ. ಐವತ್ತು ವರ್ಷಗಳ ಕೆಳಗೆ ಕರ್ನಾಟಕದಲ್ಲಿ ಶಾಂತವೇರಿ ಗೋಪಾಲಗೌಡರು ‘ಒಂದು ವೋಟು, ಒಂದು ನೋಟು’ ಎಂದು ಜನರಿಂದ ಹಣ ಪಡೆದು ಚುನಾವಣೆಯನ್ನು ನಿಭಾಯಿಸುವ ಹೊಣೆಯನ್ನು ಜನರಿಗೇ ಬಿಡುತ್ತಿದ್ದರು.

ಅದಕ್ಕಿಂತ ಕೇವಲ ಏಳೆಂಟು ವರ್ಷಗಳ ಹಿಂದಷ್ಟೇ ಸ್ವಾತಂತ್ರ್ಯ ಚಳವಳಿಯ ಕಾಲದಲ್ಲಿ ಜನ ತಾವೇ ಮುಂದಾಗಿ ಬಂದು ಚಳವಳಿಗೆ ಹಣ ಕೊಡುತ್ತಿದ್ದರು; ಹೆಂಗಸರು ತಮ್ಮ ಕಿವಿಯ ಓಲೆಗಳನ್ನು ಬಿಚ್ಚಿ ಕೊಡುತ್ತಿದ್ದರು. ಗೋಪಾಲಗೌಡರು ಐವತ್ತರ ದಶಕದಲ್ಲಿ ಚುನಾವಣೆಗೆ ನಿಂತಾಗ ಸಾಗರದ ಜನರಿಗೆ ಕೆಲವೇ ವರ್ಷಗಳ ಕೆಳಗೆ ತಾವೇ ರೂಪಿಸಿದ ಸ್ವಾತಂತ್ರ್ಯ ಚಳವಳಿಯ ನೆನಪು ಮರುಕಳಿಸಿರಬಹುದು. ಆ ಕಾಲದಲ್ಲಿ ಒಂದು ಊರು ತಲುಪಿ ಚುನಾವಣಾ ಭಾಷಣ ಮಾಡಿದ ಗೋಪಾಲಗೌಡರಿಗೆ ಮುಂದಿನ ಊರು ತಲುಪಲು ದುಡ್ಡಿರುತ್ತಿರಲಿಲ್ಲ; ಆಗ ಜನ ಒಂದು ರೂಪಾಯಿ, ಎರಡು ರೂಪಾಯಿ ಕೂಡಿಸಿ ಕೊಟ್ಟು ಅವರನ್ನು ಮುಂದಿನ ಊರಿಗೆ ಕಳಿಸುತ್ತಿದ್ದರು.

ಮೊನ್ನೆ ಮೊನ್ನೆ ತಾನೇ ಇಪ್ಪತ್ತೊಂದನೆಯ ಶತಮಾನದಲ್ಲಿ ಅಣ್ಣಾ ಹಜಾರೆಯವರ ಗಾಂಧಿಯನ್ ಹಿನ್ನೆಲೆ, ಕೇಜ್ರಿವಾಲರ ನೈತಿಕ ಸಿಟ್ಟು, ಹೊಸ ತಲೆಮಾರಿಗೆ ಸರ್ಕಾರಿ ವ್ಯವಸ್ಥೆಯ ಬಗ್ಗೆ ಇರುವ ಕೋಪ, ಬಿಜೆಪಿಯ ಬೆಂಬಲ ಎಲ್ಲ ಸೇರಿಕೊಂಡು ಲೋಕಪಾಲ್ ಮಸೂದೆಗಾಗಿ ಶುರುವಾದ ಚಳವಳಿಗೆ ಕೂಡ ಜನ ಹಣ ಕೊಟ್ಟರು.

ಈ ಹಣವನ್ನು ಜನ ತಾವೇ ಸ್ಫೂರ್ತಿಗೊಂಡು ಕೊಟ್ಟರೆಂದು ಬಿಂಬಿಸಲಾಗಿದೆಯಾದರೂ ಅದರಲ್ಲಿ ಅರ್ಧ ಭಾಗ ಯು.ಪಿ.ಎ. ಸರ್ಕಾರದ ವಿರುದ್ಧ ಕೆಲವು ಪ್ರೈವೇಟ್ ವಲಯಗಳು ಕೊಟ್ಟ ಹಣವೂ ಆಗಿರಬಹುದು. ಅಂದು ಹಣ ಕೊಟ್ಟವರಲ್ಲಿ ಅರ್ಧದಷ್ಟು ಜನ ಬಿಜೆಪಿಯ ಬೆಂಬಲಿಗರಿರಬಹುದು. ಆದರೆ ಆಪ್ ಬಡಿದೆಚ್ಚರಿಸಿದ ನೈತಿಕತೆ ಇನ್ನರ್ಧದಷ್ಟು ಜನರನ್ನು ಇವತ್ತಿಗೂ ಆಪ್ ಜೊತೆಗೆ ಉಳಿಸಿದಂತಿದೆ.

ಈಗಲೂ ಅವರಲ್ಲಿ ಅರ್ಧದಷ್ಟು ಜನರಾದರೂ ನಿಜಕ್ಕೂ ವ್ಯವಸ್ಥೆ ಬದಲಾಗಬೇಕೆಂದು ಆಪ್ಗೆ ಹಣ ಕೊಡುತ್ತಿರಬಹುದು. ಕಳೆದ ನವೆಂಬರ್ ಒಂದನೆಯ ತಾರೀಕಿನಿಂದ ಇಪ್ಪತ್ತನಾಲ್ಕು ಸಾವಿರಕ್ಕೂ ಹೆಚ್ಚು ಜನ ಎಂಟು ಕೋಟಿ ರೂಪಾಯಿಗಿಂತ ಹೆಚ್ಚು ಹಣವನ್ನು ಆಪ್ಗೆ ಕೊಟ್ಟಿದ್ದಾರೆ. ನಗದು, ಡೆಬಿಟ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಮೂಲಕ ಹಣ ಪಡೆದ ದಾಖಲೆ ಆ ಪಕ್ಷದ ವೆಬ್ ಸೈಟಿನಲ್ಲಿದೆ. ಯಾರಿಂದ ಹಣ ಪಡೆಯುತ್ತಿದ್ದೇವೆ, ಯಾವುದಕ್ಕೆ ಎಷ್ಟು ಹಣ ಖರ್ಚು ಮಾಡುತ್ತಿದ್ದೇವೆ ಎಂಬುದನ್ನು ಪ್ರಕಟಿಸುವ ಪಕ್ಷವೇ ಹೆಚ್ಚು ನಂಬಲರ್ಹವೆಂದು ಸಜ್ಜನರು ತಿಳಿದರೆ ಆಶ್ಚರ್ಯವಲ್ಲ. ಕ್ರಮೇಣ ಈ ಒತ್ತಾಯ ಉಳಿದ ಪಕ್ಷಗಳ ಮೇಲೂ ಬಂದು ಆ ಪಕ್ಷಗಳು ಕೂಡ ಸುಧಾರಿಸಬಹುದು.

ಕೇವಲ ಹಣದ ವಿಷಯದಲ್ಲಷ್ಟೇ ಅಲ್ಲದೆ, ಇನ್ನೂ ಕೆಲವು ಅಂಶಗಳಲ್ಲಿ ಆಪ್ ಶೈಲಿಗೂ ಉಳಿದ ಪಕ್ಷಗಳ ಶೈಲಿಗೂ ವ್ಯತ್ಯಾಸಗಳಿವೆ. ಜನರಲ್ಲಿರುವ ಒಳಿತಿನ ಪ್ರಜ್ಞೆಯನ್ನು ಹೊರ ಬರುವಂತೆ ಮಾಡಿರುವ ಈ ಪಕ್ಷ ಆಡುವ ಮಾತಿಗೂ ನಡೆಗೂ ಅಂತರ ಕಡಿಮೆಯಿರಬೇಕು ಎಂಬುದನ್ನು ಕೊಂಚವಾದರೂ ತೋರಿಸಲೆತ್ನಿಸಿದೆ. ಅಷ್ಟೇ ಮುಖ್ಯವಾಗಿ, ಕಳೆದ ಲೋಕಸಭಾ ಚುನಾವಣೆಯಲ್ಲಿ ಪ್ರಕಟವಾದ ಅದರ ಪ್ರಣಾಳಿಕೆಯಲ್ಲಿ ‘ಸೋಷಿಯಲ್ ಜಸ್ಟೀಸ್’ ಎಂಬ ಶೀರ್ಷಿಕೆಯ ಅಡಿಯಲ್ಲಿ ಸಾಮಾಜಿಕ ನ್ಯಾಯದ ಬಗೆಗೆ ಮುಖ್ಯ ಭರವಸೆಗಳಿವೆ.

ಅಲ್ಲಿ ಜಾತಿ ಅಸಮಾನತೆಯನ್ನು ತೊಡೆದು ಹಾಕುವುದರಿಂದ ಹಿಡಿದು ಆದಿವಾಸಿಗಳ ಹಕ್ಕುಗಳವರೆಗೂ ಚಿಂತನೆಯಿದೆ. ಈ ಸಲದ ಚುನಾವಣೆಯ ಪ್ರಣಾಳಿಕೆ ‘ದೆಹಲಿ ಡೈಲಾಗ’ನ್ನು ಜನರ ಜೊತೆ ಚರ್ಚಿಸುವ ಮೂಲಕ ಆಪ್ ನಡೆಸುತ್ತಿರುವ ರಾಜಕಾರಣ ಕೂಡ ಜನರು ಪಾಲ್ಗೊಳ್ಳುವ ಪ್ರಜಾಪ್ರಭುತ್ವವನ್ನು ವಿಸ್ತರಿಸಲೆತ್ನಿಸುತ್ತಿದೆ. ಅರವಿಂದ ಕೇಜ್ರಿವಾಲ್ ಮೇಲುನೋಟಕ್ಕೆ ಪ್ರಜಾಪ್ರಭುತ್ವವಾದಿಯಂತೆ ಕಾಣದಿರಬಹುದು. ಆದರೆ ಭಾರತದ ಅನೇಕ ರಾಜಕೀಯ ನಾಯಕರಲ್ಲಿ ಕಾಣುವ ಬೂಟಾಟಿಕೆ ಅವರಲ್ಲಿ ಹೆಚ್ಚು ಇದ್ದಂತಿಲ್ಲ.

‘ಇಂಡಿಯಾದಲ್ಲಿ ಒಂದು ಅತಿಗೆ ಹೋಗಿ ಹೇಳದಿದ್ದರೆ ಏನೂ ಸರಿಯಾಗಿ ತಲುಪುವುದಿಲ್ಲ’ ಎಂದು ಲೋಹಿಯಾ ಹೇಳುತ್ತಿದ್ದರು. ಅಂಬೇಡ್ಕರ್ ಕೂಡ ಹಾಗೆ ನಂಬಿದ್ದರು. ಅವರಿಬ್ಬರ ಸಿದ್ಧತೆ ಹಾಗೂ ಆಳ ಕೇಜ್ರಿವಾಲರಿಗೆ ಇಲ್ಲ. ಗಾಂಧೀಜಿಯನ್ನು ಅಷ್ಟಿಷ್ಟು ಬಲ್ಲ ಕೇಜ್ರಿವಾಲ್ ದೊಡ್ಡ ನಾಯಕನಾಗಬೇಕಾದರೆ ಈ ಇಬ್ಬರೂ ಚಿಂತಕರನ್ನು ಆಳವಾಗಿ ಅರಿಯ ಬೇಕಾಗುತ್ತದೆ. ಆ ಹಾದಿ ಇನ್ನೂ ದೂರವಿದೆ.

ಇವತ್ತು ಕರ್ನಾಟಕದಲ್ಲಿ ಒಬ್ಬ ಶಾಸಕರನ್ನುಳ್ಳ ‘ಸರ್ವೋದಯ ಕರ್ನಾಟಕ ಪಕ್ಷ’ದ ಬಗ್ಗೆ ಆಪ್ ನಾಯಕ ಯೋಗೇಂದ್ರ ಯಾದವ್ ಮೊನ್ನೆ ತೋರಿರುವ ಗೌರವ ಹಾಗೂ ಆಸಕ್ತಿ ಕರ್ನಾಟಕದಲ್ಲೂ ಹೊಸ ರಾಜಕಾರಣದ ಸಾಧ್ಯತೆಗಳನ್ನು ಸೂಚಿಸುವಂತಿದೆ. ಕರ್ನಾಟಕದಲ್ಲಿ ಆಗಾಗ್ಗೆ ನಡೆದ ಪರ್ಯಾಯ ರಾಜಕಾರಣದ ಚಿಂತನೆಗಳ ಮುಂದುವರಿದ ಘಟ್ಟವೊಂದರಲ್ಲಿ ಮೈದಳೆದ ಸರ್ವೋದಯ ಕರ್ನಾಟಕ ಪಕ್ಷಕ್ಕೂ ಮುನ್ನ ಕರ್ನಾಟಕದಲ್ಲಿ ಈ ಬಗೆಯ ಪ್ರಯೋಗಗಳು ನಡೆಯುತ್ತಾ ಬಂದಿದ್ದವು.

ಒಮ್ಮೆ ಪ್ರೊ. ಎಂ.ಡಿ. ನಂಜುಂಡಸ್ವಾಮಿಯವರ ನಾಯಕತ್ವದಲ್ಲಿ ರೈತ ಸಂಘ ‘ಜನತೆಯ ಅಭ್ಯರ್ಥಿಗಳು’ ಎಂದು ಅಧ್ಯಾಪಕರನ್ನು, ನ್ಯಾಯವಾದಿಗಳನ್ನು ಚುನಾವಣೆಗೆ ನಿಲ್ಲಿಸಿತು. ಆದರೆ ಕೇವಲ ‘ಸಾಂಕೇತಿಕ’ವಾಗಿ ಅಖಾಡಕ್ಕೆ ಇಳಿದವರನ್ನು ಮತದಾರರು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ನಂತರ ರೈತಸಂಘ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿತು.

ರೈತಸಂಘದ ನಾಯಕರಾಗಿದ್ದ ಬಾಬಾಗೌಡ ಪಾಟೀಲರು ಧಾರವಾಡ ಜಿಲ್ಲೆಯ ಎರಡು ಕ್ಷೇತ್ರಗಳಲ್ಲಿ ಚುನಾವಣೆ ಗೆದ್ದದ್ದು ಚಾರಿತ್ರಿಕವಾಗಿತ್ತು. ಬಾಬಾಗೌಡರು ಧಾರವಾಡ ಗ್ರಾಮೀಣ ಕ್ಷೇತ್ರಕ್ಕೆ ರಾಜಿನಾಮೆ ಕೊಟ್ಟ ನಂತರ ನಂಜುಂಡಸ್ವಾಮಿಯವರು ಅದೇ ಕ್ಷೇತ್ರದಿಂದ ಗೆದ್ದು ಬಂದರು. ಮುಂದೆ ಪುಟ್ಟಣ್ಣಯ್ಯ ಕೂಡ ರೈತ ಸಂಘದಿಂದ ಗೆದ್ದು ಶಾಸಕರಾದರು. ಶ್ರೀರಂಗಪಟ್ಟಣದಲ್ಲಿ ರೈತನಾಯಕ ನಂಜುಂಡೇಗೌಡರು ಪ್ರತಿಸಲದ ಚುನಾವಣೆಯಲ್ಲೂ ಗೆಲುವಿನ ಹತ್ತಿರ ಬಂದಿರುವುದು ಕೂಡ ಚಳವಳಿ ರಾಜಕಾರಣಕ್ಕೆ ಕರ್ನಾಟಕದ ಕೆಲವು ಭಾಗಗಳಲ್ಲಾದರೂ ಬೆಂಬಲವಿದೆ ಎಂಬುದನ್ನು ಸೂಚಿಸುತ್ತದೆ.

ಇಪ್ಪತ್ತೊಂದನೆಯ ಶತಮಾನದ ಶುರುವಿನಲ್ಲಿ ಕರ್ನಾಟಕದ ದಲಿತ ಚಳವಳಿ ಹಾಗೂ ರೈತ ಚಳವಳಿಗಳು ಒಗ್ಗೂಡಿ ರಾಜಕೀಯ ಪಕ್ಷ ರಚಿಸಬೇಕೆಂಬ ಒತ್ತಾಯಗಳ ಹಿನ್ನೆಲೆಯಲ್ಲಿ ಹುಟ್ಟಿ, ಈ ಕಾಲದ ಪ್ರಗತಿಪರ ಚಿಂತನೆಗಳನ್ನು ಬೆಸೆದುಕೊಂಡಿರುವ ಸರ್ವೋದಯ ಕರ್ನಾಟಕ ಪಕ್ಷ, ಆಮ್ ಆದ್ಮಿ ಪಕ್ಷದಲ್ಲಿ ವಿಲೀನವಾಗುವ ಅಥವಾ ಜೊತೆಗೂಡಿ ನಡೆಯುವ ಅಂಶವನ್ನು ಇವತ್ತು ಗಂಭೀರವಾಗಿ ಚರ್ಚಿಸಬೇಕಾಗಿದೆ. ಇದು ಕರ್ನಾಟಕದ ಪ್ರಾದೇಶಿಕ ಪಕ್ಷವೊಂದರ ನಡೆಯಾದ್ದರಿಂದ ರಾಜಕಾರಣದಲ್ಲಿ ಆಸಕ್ತಿಯಿರುವ ಲೇಖಕ, ಲೇಖಕಿಯರು, ಪತ್ರಕರ್ತರು ಈ ನಡೆಯ ಮಹತ್ವವನ್ನು ಕಾಳಜಿಯಿಂದ ಅರಿಯುವ ಅಗತ್ಯವಿದೆ. ಪ್ರಗತಿಪರ ಆಶಯಗಳಿಗೆ ಹತ್ತಿರವಿರುವ ರಾಜಕೀಯ ಪಕ್ಷಗಳು ಏನು ಮಾಡುತ್ತಿವೆ, ವಿಧಾನಸಭೆಯ ಒಳಹೊರಗೆ ಅವು ಯಾವ ಥರದ ಪ್ರಶ್ನೆಗಳನ್ನು ಕೈಗೆತ್ತಿಕೊಳ್ಳುತ್ತಿವೆ ಎಂಬ ಬಗ್ಗೆ ಕರ್ನಾಟಕದ ಬುದ್ಧಿಜೀವಿ ವಲಯ ಈಚಿನ ವರ್ಷಗಳಲ್ಲಿ ಕಳೆದುಕೊಂಡಿರುವ ಕುತೂಹಲ ಈಗ ಮರುಜೀವ ಪಡೆಯಬೇಕಾಗಿದೆ.

ಕರ್ನಾಟಕ ರಾಜಕಾರಣದ ಈ ಘಟ್ಟದಲ್ಲಿ ಸರ್ವೋದಯ ಕರ್ನಾಟಕ, ಆಮ್ ಆದ್ಮಿ ಪಕ್ಷದ ಜೊತೆಗಿರುವುದು ಅನೇಕ ದೃಷ್ಟಿಯಂದ ಮುಖ್ಯವೆನ್ನಿಸುತ್ತದೆ. ಈಗ ಸರ್ವೋದಯ ಕರ್ನಾಟಕ ಕೆಲವೇ ಕ್ಷೇತ್ರಗಳ ಗ್ರಾಮೀಣ ಲೋಕವನ್ನು ಮಾತ್ರ ನೆಚ್ಚಿಕೊಂಡಿದೆ. ನಗರದಲ್ಲಿ ಅಷ್ಟಿಷ್ಟು ಆದರ್ಶಗಳನ್ನು ಇಟ್ಟುಕೊಂಡಿರುವ ಹೊಸ ತಲೆಮಾರಿನ ಜೊತೆಗೆ ಸಂವಾದ ಮಾಡಲು ತಕ್ಕ ನುಡಿಗಟ್ಟನ್ನು, ಕಾರ್ಯಕ್ರಮಗಳನ್ನು ಈ ಪಕ್ಷ ಇನ್ನೂ ರೂಪಿಸಿಕೊಂಡಿಲ್ಲ.

ಆ ನಿಟ್ಟಿನಲ್ಲಿ ಕೆಲಸ ಮಾಡಿರುವ ಆಪ್ ಎಲ್ಲ ಕಾಲದಲ್ಲಿಯೂ ಎಲ್ಲ ವರ್ಗಗಳಲ್ಲಿಯೂ ರೂಪುಗೊಳ್ಳುವ ಸರಳ ಆದರ್ಶಗಳನ್ನು ಮುಂಚೂಣಿಗೆ ತರಲೆತ್ನಿಸಿದೆ. ನಗರಪ್ರದೇಶಗಳಲ್ಲಿ ಹೊಸ ನುಡಿಗಟ್ಟು ಬಳಸುವ ಹಾಗೂ ಕ್ಷಣಕ್ಷಣಕ್ಕೂ ಮೊಬೈಲ್, ಇಂಟರ್ನೆಟ್ ಮೂಲಕ ಪ್ರತಿಕ್ರಿಯೆ ನೀಡುವ ಹೊಸ ತಲೆಮಾರನ್ನು ಭ್ರಷ್ಟಾಚಾರದ ವಿರುದ್ಧ ನಿಲ್ಲಿಸಲೆತ್ನಿಸಿದೆ. ಭ್ರಷ್ಟಾಚಾರವನ್ನು ಇನ್ನೂ ಸೂಕ್ಷ್ಮ ನೆಲೆಯಲ್ಲಿ ವಿವರಿಸಿಕೊಳ್ಳುವ ಪ್ರಯತ್ನವನ್ನೂ ಆಪ್ ಮಾಡಬೇಕಾಗಿದೆ. ವರದಕ್ಷಿಣೆಯ ಮದುವೆ ಕೂಡ ಭ್ರಷ್ಟಾಚಾರ ಎನ್ನುವುದನ್ನು ಮೊದಲು ತನ್ನ ಕಾರ್ಯಕರ್ತರಿಗೆ ಅದು ಮನದಟ್ಟು ಮಾಡಿಕೊಡಬೇಕಾಗುತ್ತದೆ. ಸರ್ಕಾರಿ ಭ್ರಷ್ಟಾಚಾರದ ವಿರುದ್ಧ ಮಾತ್ರ ಹರಿಹಾಯುತ್ತಾ, ಭ್ರಷ್ಟಾಚಾರದ ಭೀಕರ ಮಾರ್ಗಗಳನ್ನೇ ಸೃಷ್ಟಿಸಿರುವ ಖಾಸಗಿ ವಲಯದ ಬಗ್ಗೆ ಸುಮ್ಮನಿದ್ದ ಆಪ್ ಈಗ ಆ ಪ್ರಶ್ನೆಗಳನ್ನೂ ಕೈಗೆತ್ತಿಕೊಂಡಿದೆ.

ಅಂಬಾನಿ, ಅದಾನಿಗಳನ್ನೂ ಕೇಜ್ರಿವಾಲ್ ಬಯಲು ಮಾಡಿದ್ದಾರೆ. ಇದೀಗ ರೈತರ ಭೂಮಿಯ ಪ್ರಶ್ನೆಯನ್ನು ದೊಡ್ಡ ಮಟ್ಟದಲ್ಲಿ ಕೈಗೆತ್ತಿಕೊಂಡಿರುವ ಆಮ್ ಆದ್ಮಿ ಪಾರ್ಟಿಗೆ ಸರ್ವೋದಯ ಕರ್ನಾಟಕದ ಗ್ರಾಮೀಣ ಅನುಭವ ನೆರವಾಗಬಹುದು. ನಗರಾನುಭವ ಹಾಗೂ ಗ್ರಾಮೀಣಾನುಭವಗಳು ಪ್ರಾಮಾಣಿಕವಾಗಿ ಬೆರೆಯುವುದು ಭಾರತದ ರಾಜಕಾರಣ ಹಾಗೂ ಆರ್ಥಿಕ ಯೋಜನೆಗಳ ಆರೋಗ್ಯಕ್ಕೆ ತೀರಾ ಒಳ್ಳೆಯದು.

ಕೊನೆ ಟಿಪ್ಪಣಿ: ಬೆಳಕಿಲ್ಲದ ಹಾದಿ, ಕನಸಿನ ಹಾದಿ ‘ಬೆಳಕಿಲ್ಲದ ಹಾದಿಯಲ್ಲಿ ನಡೆಯಬಹುದು. ಆದರೆ ಕನಸಿಲ್ಲದ ಹಾದಿಯಲ್ಲಿ ನಡೆಯಲಾಗುವುದೇ?’ ಎಂದು ಡಿ.ಆರ್. ನಾಗರಾಜರು ಬರೆದ ನೆನಪು. ಭಾರತದ ರಾಜಕಾರಣದಲ್ಲಿ ಕಗ್ಗತ್ತಲು ಆವರಿಸಿದಾಗಲೆಲ್ಲ ಅಲ್ಲಿ ಹೊಸ ಕನಸುಗಳೂ ಭರವಸೆಗಳೂ ಮೂಡುತ್ತಾ ಬಂದಿವೆ. ಇದು ನಿಲ್ಲದ ಪ್ರಕ್ರಿಯೆ. ಇವತ್ತು ಆಮ್ ಆದ್ಮಿ ಪಕ್ಷವನ್ನಾಗಲೀ ಸರ್ವೋದಯ ಕರ್ನಾಟಕ ಅದರ ಜೊತೆ ಹೆಜ್ಜೆ ಹಾಕುವ ಪ್ರಯೋಗವನ್ನಾಗಲೀ ಅತಿಯಾದ ನಿರೀಕ್ಷೆ ಅಥವಾ ಕೆಟ್ಟ ಸಿನಿಕತೆಯಿಂದ ನೋಡಬೇಕಾದ ಅಗತ್ಯವಿಲ್ಲ.

ಪ್ರಜಾಪ್ರಭುತ್ವದ ಬಗ್ಗೆ ಜನರ ನಂಬಿಕೆ ಕುಸಿಯುತ್ತಿರುವಾಗ ಇಂಥ ಪ್ರಯೋಗಗಳು ಕೆಲ ಕಾಲವಾದರೂ ಜನರಲ್ಲಿ ಹೊಸ ಕುತೂಹಲವನ್ನು, ಹೊಸ ವ್ಯವಸ್ಥೆಯೊಂದು ಮೂಡುವ ಬಗೆಗೆ ನಂಬಿಕೆಯನ್ನು ಮೂಡಿಸಬಲ್ಲವು. ಇನ್ನೂ ಭ್ರಷ್ಟರಾಗದ ಜನ ರಾಜಕೀಯ ಪ್ರವೇಶಿಸುವುದು ಎಲ್ಲ ಕಾಲದ ಅಗತ್ಯ. ಅಕಸ್ಮಾತ್ ಅವರು ಭ್ರಷ್ಟರಾಗುವವರೆಗಾದರೂ ಜನರು ಸಿನಿಕರಾಗದೆ ಅಷ್ಟಿಷ್ಟು ನಿರೀಕ್ಷೆಯ ಹಾದಿಯಲ್ಲಾದರೂ ಇದ್ದಾರು!
ನಿಮ್ಮ ಅನಿಸಿಕೆ ತಿಳಿಸಿ:
editpagefeedback@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.