ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾಮೀಜಿಗಳ ‘ಸ್ವಯಂಕೃತ’ ಸೆರೆಮನೆ!

Last Updated 16 ಜೂನ್ 2018, 9:21 IST
ಅಕ್ಷರ ಗಾತ್ರ

‘ಕನಕದಾಸರಿಗೆ ಅವರ ಗುರುಗಳಾದ ವ್ಯಾಸರಾಯರು ಯಾರೂ ನೋಡದ ಸ್ಥಳದಲ್ಲಿ ಬಾಳೆಹಣ್ಣು ತಿನ್ನಲು ಹೇಳಿದರು; ಆದರೆ ಕನಕದಾಸರು ಮಾತ್ರ ದೇವರಿಲ್ಲದ ಸ್ಥಳವೇ ಇಲ್ಲವೆಂದು ಬಾಳೆಹಣ್ಣು ತಿನ್ನದೇ ವಾಪಸ್ ಬಂದರು’ ಎಂಬ ಕತೆ ಹೇಳುವವರೂ ಇವರೇ. ‘ದೇವರು ಎಲ್ಲೆಲ್ಲೂ ಇದ್ದಾನೆ’ ಎಂದು ಮುಗ್ಧ ಜನರಿಗೆ ಮತ್ತೆ ಮತ್ತೆ ಹೇಳಿ ಅವರನ್ನು ಸದಾ ದೇವರ ಹೆದರಿಕೆಯಲ್ಲಿಡುವವರೂ ಇವರೇ. ಆದರೆ ರಾಘವೇಶ್ವರ ಭಾರತಿಯವರು ಕೊಲ್ಲೂರು ಮೂಕಾಂಬಿಕೆಗೆ ಕೊಲ್ಲೂರು ದೇವಾಲಯದಲ್ಲೇ ವಿಶೇಷ ಪೂಜೆ ಸಲ್ಲಿಸಲು ಅವಕಾಶ ನೀಡುವಂತೆ ಕೋರ್ಟಿಗೆ ಹೋಗಲು ಭಕ್ತರಿಗೆ ‘ಅಂತಃಪ್ರೇರಣೆ’ ನೀಡುವವರೂ ಇವರೇ!

ದೇವರು ಸರ್ವಾಂತರ್ಯಾಮಿ ಎನ್ನುವವರು ಕೊಲ್ಲೂರು ಮೂಕಾಂಬಿಕೆಗೆ ಎಲ್ಲಿ ಬೇಕಾದರೂ ಪೂಜೆ ಸಲ್ಲಿ ಸಬಹುದು ಎಂಬ ಸರಳ ಸತ್ಯ ಸ್ವಾಮೀಜಿಗಳಿಗೆ ಮರೆತು ಹೋಯಿತೆ? ಈ ಸರಳ ಪ್ರಶ್ನೆಯನ್ನು ಅವರ ಅನುಯಾಯಿ ಗಳು ಕೇಳದಿರುವುದರಿಂದ ಕೂಡ ಈ ಥರದ ವೈರುಧ್ಯಗಳು ನಮ್ಮ ಸಾರ್ವಜನಿಕ ಲೋಕದಲ್ಲಿ ಎದುರಾಗುತ್ತಿರುತ್ತವೆ.

ಈ ಹುಸಿ ಸಾರ್ವಜನಿಕ ಗೊಂದಲಗಳ ಬಗ್ಗೆ ನವ ಮಾಧ್ಯಮಗಳನ್ನು ಬಳಸುತ್ತಿರುವ ಹೊಸ ತಲೆಮಾರಿನ ತರುಣ ತರುಣಿಯರಾದರೂ ಪ್ರಶ್ನೆಗಳನ್ನು ಎತ್ತದಿದ್ದರೆ, ಅವು ಮರುಕಳಿಸುತ್ತಲೇ ಇರುತ್ತವೆ. ಹೊಸ ತಲೆಮಾರನ್ನೇ ಉದ್ದೇ ಶಿಸಿ ಈ ಮಾತನ್ನು ಹೇಳಲು ಕಾರಣವಿದೆ: ಈಗ ಸೃಷ್ಟಿಯಾ ಗುತ್ತಿರುವ ಒಂದು ಮುಕ್ತ ತಲೆಮಾರು ರಾಜಕಾರಣಿಗಳ, ಅಧಿಕಾರಿಗಳ ಭ್ರಷ್ಟಾಚಾರದ ಬಗ್ಗೆ ಕಟುವಾದ ಪ್ರಶ್ನೆಗಳನ್ನು ಎತ್ತುತ್ತಿದೆ; ನವಮಾಧ್ಯಮಗಳ ಮೂಲಕ ನೇರ ಪ್ರಶ್ನೆಗಳನ್ನು ಕೇಳುತ್ತಿದೆ.

ಆದರೆ ದೇವಮಾನವರೆಂದು ಬೀಗುವವರ ಬಗ್ಗೆ ಸರಿಯಾದ ಪ್ರಶ್ನೆಗಳನ್ನು ಕೇಳುವಲ್ಲಿ ಮಾತ್ರ ಈ ತಲೆಮಾರು ಹಿಂದೆ ಬಿದ್ದಂತಿದೆ. ಪ್ರತಿ ತಲೆಮಾರೂ ತಮ್ಮನ್ನು ಪ್ರತ್ಯಕ್ಷವಾಗಿ ಆಳುವವರ ವಿರುದ್ಧ ಎತ್ತುವ ಪ್ರಶ್ನೆಗಳನ್ನು ಪರೋಕ್ಷವಾಗಿ ಆಳುವ ಸ್ವಾಮಿಗಳ ಬಗೆಗೂ ಎತ್ತದಿದ್ದರೆ ಅದರ ವಿಮರ್ಶಾ ಪ್ರಜ್ಞೆ ಸೀಮಿತವಾಗುತ್ತದೆ.

ಪ್ರೊ.ಜಿ.ಕೆ. ಗೋವಿಂದರಾವ್ ಆಗಾಗ್ಗೆ ಹೇಳುವ ಮಾತು ಇದು: ‘ಸ್ವಾಮೀಜಿಗಳ ಅಸಂಬದ್ಧ ಮಾತು ಹಾಗೂ ನಿಲುವು ಗಳನ್ನು ನಾವು ಕಾಲಕಾಲಕ್ಕೆ ಸರಿಯಾಗಿ ವಿಮರ್ಶಿಸದಿದ್ದರೆ, ಇಲ್ಲಿ ರಾಜಕಾರಣಿಗಳಿಗಿಂತಲೂ ದೊಡ್ಡ ಸರ್ವಾಧಿಕಾರಿಗಳು ಹುಟ್ಟಿಕೊಳ್ಳುತ್ತಾರೆ’. ಪಾಕಿಸ್ತಾನದಲ್ಲಿ ಧಾರ್ಮಿಕ ನಾಯಕರು ಕೆಲವು ವರ್ಷಗಳ ಕೆಳಗೆ ಪಾರ್ಲಿಮೆಂಟ್ ಪ್ರವೇಶಿಸಿ ಪಾಕಿ ಸ್ತಾನದ ರಾಜಕಾರಣವನ್ನೇ ಮೂಲಭೂತವಾದಿಯಾಗಿಸಿ ದರು.

ಇದೀಗ ಇಂಡಿಯಾದ ಪಾರ್ಲಿಮೆಂಟಿನಲ್ಲಿರುವ ‘ಸಂತರು’ ಬಾಯಿಗೆ ಬಂದಂತೆ ಮಾತಾಡುತ್ತಾ ಪಾಕಿಸ್ತಾನದ ಮುಲ್ಲಾಗಳ ಜೊತೆ ಸ್ಪರ್ಧೆಗಿಳಿದಂತಿದೆ. ಮಾಧ್ಯಮಗಳು ಬ್ರೇಕ್ ಹಾಕುತ್ತಿರುವುದರಿಂದ ಇಂಡಿಯಾದ ಸ್ಥಿತಿ ಕೊಂಚ ಬೇರೆ, ಅಷ್ಟೆ. ರಾಜಕಾರಣಿಯಾಗಲೀ ಸ್ವಾಮೀಜಿಗಳಾಗಲೀ ಅಧಿಕಾರಿಗಳಾಗಲೀ ಜನರ ನಿತ್ಯದ ವಿಮರ್ಶೆಗೆ ಅತೀತರಾದ ತಕ್ಷಣ ಸರ್ವಾಧಿಕಾರಿಗಳೂ ಜನಕಂಟಕರೂ ಆಗುತ್ತಾರೆ ಎಂಬ ಚರಿತ್ರೆಯ ಪಾಠವನ್ನು ನಾವು ಮರೆಯಬಾರದು.

ಅದರ ಜೊತೆಗೇ ಸ್ವಾಮೀಜಿಗಳಾದವರು ಭಕ್ತರು ಅನುಭವಿಸುವ ಎಲ್ಲ ಲೋಕಸುಖಗಳನ್ನೂ ಬಿಟ್ಟುಕೊಡ ಬೇಕು ಎಂಬ ಹಳೆಯ ಕಟ್ಟಳೆಗಳನ್ನು ಸ್ವಾಮೀಜಿಗಳೂ ಅವರ ಭಕ್ತರೂ ತೀವ್ರ ವಿಮರ್ಶೆಗೆ ಒಳಪಡಿಸಬೇಕಾಗುತ್ತದೆ. ಕೆಲವು ತಿಂಗಳ ಕೆಳಗೆ ವೀರಭದ್ರ ಚೆನ್ನಮಲ್ಲ ಸ್ವಾಮಿಗಳು ‘ದೈಹಿಕ ಆರೋಗ್ಯ ಸರಿಯಿರುವ ಯಾವ ಸ್ವಾಮೀಜಿಯೂ ಜಿತೇಂದ್ರಿ ಯನಾಗಿರುವುದು ಕಷ್ಟ’ ಎಂಬರ್ಥದ ನೇರ ಮಾತನ್ನಾಡಿ ದರು. ಆಗ ಸ್ವಾಮಿಗಳ ಒಂದು ವರ್ಗ ಅವರ ವಿರುದ್ಧ ತಿರುಗಿಬಿತ್ತು.

ಆದರೆ ಚೆನ್ನಮಲ್ಲ ಸ್ವಾಮಿಗಳ ಮಾತನ್ನು ಜನಸಾಮಾನ್ಯರು ಒಪ್ಪಿದಂತಿದ್ದುದು ಕುತೂಹಲಕರ. ಸ್ವಾಮೀಜಿಯೊಬ್ಬ ತಮ್ಮಂತೆಯೇ ರಕ್ತಮಾಂಸಗಳಿರುವ, ಕೊಂಚ ವಿಶಿಷ್ಟ ಮನುಷ್ಯ; ತಮ್ಮಂತೆಯೇ ಅವನಿಗೂ ಅವ ನದೇ ಆದ ವಾಂಛಲ್ಯಗಳಿರುತ್ತವೆ ಎಂಬುದನ್ನು ಅವನ ಹುಂಬ ಅನುಯಾಯಿಗಳು ಒಪ್ಪದಿರುವುದರಿಂದಲೇ ಎಲ್ಲ ಕಾಯಿಲೆಗಳೂ ಶುರುವಾಗುತ್ತವೆ. ಎಷ್ಟೇ ಪುನರ್ಜನ್ಮದ ಮಾತಾಡಿದರೂ ಇರುವುದು ಇದೊಂದೇ ಜನ್ಮ ಎಂಬ ಸತ್ಯವನ್ನು ಅರಿತವರಂತೂ ಆ ವಾಂಛಲ್ಯಗಳನ್ನು ಗುಟ್ಟಾಗಿ ಯಾದರೂ ಈಡೇರಿಸಿಕೊಳ್ಳಲು ಶುರು ಮಾಡುತ್ತಾರೆ.

ಈ ಬಗ್ಗೆ ಲಂಕೇಶರು ಹೇಳಿದ ಒಂದು ಘಟನೆ ಅರ್ಥ ಪೂರ್ಣವಾಗಿದೆ. ಗಣ್ಯತೆಯ ಇಮೇಜಿನ ಒತ್ತಡಕ್ಕೆ ತಲೆಬಾಗದ ಲಂಕೇಶರು ಯಾವ ಖಾಸಗಿ ಸುಖವನ್ನೂ ಬಿಟ್ಟುಕೊಟ್ಟವರಲ್ಲ. ಅವರಿಗೆ ಪ್ರಿಯವಾದ ಹವ್ಯಾಸಗಳಲ್ಲಿ ರೇಸ್ ಕೂಡ ಒಂದಾಗಿತ್ತು. ಒಮ್ಮೆ ಅವರು ರೇಸಿಗೆ ಹೋದಾಗ ಗಡ್ಡದ ವ್ಯಕ್ತಿಯೊಬ್ಬ ಅವರನ್ನು ಗುರುತು ಹಿಡಿದು ನಕ್ಕಂತಾಯಿತು. ಸೂಟು ಬೂಟು ಹಾಕಿದ್ದ ಆಸಾಮಿ ಕಡುಗಪ್ಪು ಕೂಲಿಂಗ್ ಗ್ಲಾಸ್ ಹಾಕಿದ್ದ. ಅವನ ಬಗ್ಗೆ ಲಂಕೇಶರಿಗೆ ಕುತೂಹಲ ಉಂಟಾದರೂ ‘ಇದೆಲ್ಲಿಯ ಶನಿ!’

ಎಂದು ಅವನಿಂದ ತಪ್ಪಿಸಿಕೊಳ್ಳಲೆತ್ನಿಸಿದರು. ವ್ಯಕ್ತಿ ಇವರ ಪಕ್ಕಕ್ಕೇ ಬಂದು ಕೂತು ಇವರ ಕಿವಿಯತ್ತ ಬಾಗಿ ಪಿಸುದನಿಯಲ್ಲಿ ‘ಮೇಷ್ಟ್ರೇ ನಾನು! ಗೊತ್ತಾಗ್ಲಿಲ್ವ!’ ಎಂದನು. ಅವನ ದನಿ ಹಾಗೂ ಕೃತಕ ಗಡ್ಡದ ನಡುವೆ ಸುಳಿದ ನಗೆ ಯಿಂದಾಗಿ ಆತ ತಮಗೆ ಪರಿಚಯವಿದ್ದ ಸ್ವಾಮೀಜಿ ಎಂಬುದು ಲಂಕೇಶರಿಗೆ ಗೊತ್ತಾಯಿತು. ಇಬ್ಬರೂ  ರೇಸ್ ಕೊಡುವ ರೋಮಾಂಚನಕ್ಕಾಗಿ ಬಂದಿದ್ದರಿಂದ ಒಬ್ಬರ ನ್ನೊಬ್ಬರು ಆಕ್ಷೇಪಿಸುವಂತೆಯೂ ಇರಲಿಲ್ಲ!

‘ದೇಹಕ್ಕೆ ಕೊಡಬೇಕಾದದ್ದನ್ನು ದೇಹಕ್ಕೆ ಹಾಗೂ ಆತ್ಮಕ್ಕೆ ಕೊಡಬೇಕಾದ್ದನ್ನು ಆತ್ಮಕ್ಕೆ ಕೊಡದಿದ್ದರೆ ಬದುಕು ವಿಚಿತ್ರ ರೀತಿಯಲ್ಲಿ ಸೇಡು ತೀರಿಸಿಕೊಳ್ಳುತ್ತದೆ’ ಎಂದು ಲಂಕೇಶರು ಬರೆದ ಮಾತೊಂದನ್ನು ಲಂಕೇಶರ ಬರಹಗಳನ್ನು ಗಮನಿ ಸುತ್ತಿದ್ದ ಆ ಸ್ವಾಮಿ ಓದಿರಬಹುದು; ಅಥವಾ ತಾನು ಸದಾ ಅನುಯಾಯಿಗಳಿಗೆ ಹೇಳುವ ‘ಆತ್ಮಪರೀಕ್ಷೆ’ಯ ಮಾತನ್ನು  ತನಗೇ ಅನ್ವಯಿಸಿಕೊಂಡಾಗ ಈ ಸತ್ಯ ಸ್ವಾಮಿಗೇ ಹೊಳೆದಿರ ಬಹುದು.


ಸ್ವಾಮಿಗಳ ಮೇಲೆ ಸಮಾಜ ಅತಿಯಾದ ನೀತಿ ನಿಯಮಗಳ ಭಾರ ಹೇರಿರುವುದರಿಂದ ಅವರ ಒಳಲೋಕ ಅದನ್ನೆಲ್ಲ ಉಲ್ಲಂಘಿಸಿದರೆ ಅಚ್ಚರಿಯಲ್ಲ. ಕೆಲವು ಸೂಕ್ಷ್ಮ ಮನಸ್ಸಿನ ಸ್ವಾಮಿಗಳು ಓದುವ ವೈಚಾರಿಕ ಪುಸ್ತಕಗಳು ಕೂಡ ತಮ್ಮನ್ನು ತಾವು ಪರೀಕ್ಷಿಸಿಕೊಳ್ಳುವಂತೆ ಪ್ರೇರೇಪಿಸಿರ ಬಹುದು. ಆದರೂ ತಾವು ಕಟ್ಟಿಕೊಂಡಿರುವ ಸೆರೆಮನೆ ಯನ್ನೋ, ಕೋಟೆಯನ್ನೋ ಭೇದಿಸಬಲ್ಲ ಚಿಂತಕರನ್ನು ತಮ್ಮೊಳಗೆ ಬಿಟ್ಟುಕೊಳ್ಳದ ಸ್ವಾಮಿಗಳ ಸಂಖ್ಯೆಯೇ  ಹೆಚ್ಚು ಇರಬಹುದೆಂಬುದು ನನ್ನ ಊಹೆ.  

ಜರ್ಮನಿಯ ಮಾರ್ಟಿನ್ ಲೂಥರ್ ಚರ್ಚ್‌ಗೆ ಅಪ್ರಿಯ ವಾದ ಪ್ರಶ್ನೆಗಳನ್ನು ಕೇಳುತ್ತಾ, ಕ್ರಿಶ್ಚಿಯನ್ ಧರ್ಮವನ್ನೂ ಅದರ ಅನುಯಾಯಿಗಳನ್ನೂ ಸುಧಾರಿಸಲೆತ್ನಿಸಿದ. ಸೂಫಿ ಗಳು ಇಸ್ಲಾಮಿನಲ್ಲಿದ್ದುಕೊಂಡೇ ಇಸ್ಲಾಮನ್ನು ಪರಿವರ್ತಿಸಿ ದಂತೆ ಶರಣರೂ ದಾಸರೂ ತಂತಮ್ಮ ಧರ್ಮಗಳನ್ನು ಸುಧಾರಿಸಲೆತ್ನಿಸಿದ್ದಾರೆ.

ಈ ಬಗೆಯ ಧರ್ಮದ ಪರ್ಯಾಯ ಚರಿತ್ರೆಯನ್ನು ನಮ್ಮ ಅನೇಕ ಸ್ವಾಮೀಜಿಗಳು ಗ್ರಹಿಸದಿರುವು ದರಿಂದಲೇ ಅವರಲ್ಲಿ ಹೊಸ ಆಧ್ಯಾತ್ಮಿಕ ಆಲೋಚನೆಗಳು ಹುಟ್ಟುವಂತೆ ಕಾಣುತ್ತಿಲ್ಲ. ಹಾಗೆಯೇ ಈ ಸ್ವಾಮಿಗಳನ್ನು ಅನುಸರಿಸುವ ಅನುಯಾಯಿಗಳು ಕೂಡ ಧರ್ಮಗಳ ಈ ಪರ್ಯಾಯ ಧಾರೆಗಳನ್ನು ಅರಿಯಲು ಸಿದ್ಧರಿಲ್ಲ. ತಾವು ಪಾಲಿಸಲಾಗದ ಬ್ರಹ್ಮಚರ್ಯ, ಆಹಾರದ ಬಗೆಗಿನ ನಿಷ್ಠುರ ವ್ರತಗಳನ್ನು ತಮ್ಮ ಸ್ವಾಮಿಗಳು ಪಾಲಿಸಬೇಕೆನ್ನುವ ಅನುಯಾಯಿಗಳ ಸರ್ವಾಧಿಕಾರ ಭೀಕರವಾದುದು.

ಅನೇಕ ಸಂದರ್ಭಗಳಲ್ಲಿ ಸ್ವಾಮಿಯಾಗುವುದು ಕೂಡ ವ್ಯಕ್ತಿಯೊಬ್ಬನ ಸ್ವತಂತ್ರ ಆಯ್ಕೆಯಾಗಿರುವುದಿಲ್ಲ; ಅವು ತಂದೆತಾಯಿಗಳು ತಮ್ಮ ಬಡತನ ಅಥವಾ ಬೇರಾವುದೋ ಮುಗ್ಧ ಹರಕೆ ಇತ್ಯಾದಿಗಳ ಕಾರಣಕ್ಕಾಗಿ ಎಳೆಯ ಬಾಲಕರ ಮೇಲೆ ಹೇರಿರುವ ಹೊರೆಗಳೋ ಹೊಣೆಗಳೋ ಆಗಿರ ಬಲ್ಲವು.

ಮಾನವನ ಬೌದ್ಧಿಕ ಪ್ರಜ್ಞೆ ಇನ್ನೂ ಸರಿಯಾಗಿ ವಿಕಾಸಗೊಳ್ಳದ ಯಾವುದೋ ಕಾಲದಲ್ಲಿ ಜನರನ್ನು ಹಿಡಿತದಲ್ಲಿಟ್ಟುಕೊಳ್ಳಲು ಪುರೋಹಿತರು ಹಾಗೂ ರಾಜರು ಸೇರಿ ಸೃಷ್ಟಿಸಿದ ಕಗ್ಗಗಳನ್ನೇ ಉರು ಹೊಡೆದು ಯಾಂತ್ರಿಕ ವಾಗಿ ಪುನರುಚ್ಚರಿಸುವ ‘ನಿತ್ಯಕರ್ಮ’ದಿಂದ ಬಿಡಿಸಿ ಕೊಳ್ಳ ದಿದ್ದರೆ ಸ್ವಾಮೀಜಿಗಳು ತಾವೇ ಸೃಷ್ಟಿಸಿಕೊಂಡ ಸೆರೆಮನೆ ಯಿಂದ ಹೊರಬರುವುದು ಕಷ್ಟ; ಪ್ರಾಚೀನ ಜ್ಞಾನದಿಂದ ಒಳ್ಳೆಯದನ್ನು ಮಾತ್ರ ಹೆಕ್ಕಿಕೊಳ್ಳುತ್ತಾ, ಅವುಗಳಿಗೆ ತಕ್ಕ ಹೊಸ ನುಡಿಗಟ್ಟುಗಳನ್ನು ಹುಡುಕಿಕೊಳ್ಳದಿದ್ದರೆ ಅವರೆಲ್ಲ ಹಳೆಯ ಮಂತ್ರಗಳ ಹಾಗೂ ಗೊಡ್ಡು ನಿಯಮಗಳ ಕಾಯಂ ಸೆರೆವಾಸಿಗಳಾಗಿಯೇ ಇರಬೇಕಾಗುತ್ತದೆ.

ಕೊನೆಯ ಪಕ್ಷ 21ನೇ ಶತಮಾನದಲ್ಲಾದರೂ ಅಸಹಜ ಬದುಕನ್ನೇ ಬದುಕಬೇಕೆಂಬ ಒತ್ತಾಯವನ್ನು ಸ್ವಾಮಿಗಳ ಮೇಲೆ ಹೇರುವುದನ್ನು ಸಾಂಪ್ರದಾಯಿಕ ಸಮಾಜ ಕೈಬಿಡ ಬೇಕು; ಸ್ವಾಮೀಜಿಯೊಬ್ಬ ವ್ಯಾಯಾಮಕ್ಕಾಗಿ ಬ್ಯಾಡ್ಮಿಂಟನ್ ಆಡಿದರೆ ಅದನ್ನು ಒಪ್ಪುವವರಿಗಿಂತ ವಿರೋಧಿಸುವ ಭಕ್ತರೇ ಹೆಚ್ಚು ಇರಬಲ್ಲರು. ಮೊನ್ನೆ ಮೊನ್ನೆಯವರೆಗೂ ಹೊಲದಲ್ಲಿ ಉಳುತ್ತಿದ್ದ ಶೂದ್ರ ಸ್ವಾಮಿಗಳು ಇಲ್ಲಿ ಇದ್ದುದನ್ನೇ ಜನ ಮರೆತಂತಿದೆ!

ಮಾಗಡಿ ತಾಲ್ಲೂಕಿನ ಕಂಚುಗಲ್ಲು ಬಂಡೆಮಠದ ಸ್ವಾಮಿಗಳು ಈಗಲೂ ತಾವೇ ರಾಗಿ ಬೆಳೆಯುತ್ತಾರೆ. ಇಂಥ ಆರೋಗ್ಯಕರ ಮಾದರಿಗಳಿ ದ್ದರೂ ದೇಹದ ಎಲ್ಲ ಸಹಜ ಲಯಗಳೂ ಮುರುಟಿ ಹೋಗುವಂತೆ ಮಾಡಿ ಕೇವಲ ನಾಲಗೆಯೊಂದೇ ಎಲ್ಲ ಕೆಲಸವನ್ನೂ ಮಾಡಬೇಕಾದ ಹೊಣೆಯನ್ನು ಸ್ವಾಮೀಜಿ ಗಳಿಗೆ ಹೊರಿಸುವ ಸಮಾಜ ತಪ್ಪು ಮಾಡುತ್ತಿರುತ್ತದೆ.

ಸ್ವಾಮೀಜಿ ಕೂಡ ರಕ್ತಮಾಂಸಗಳ ಒಬ್ಬ ‘ಮನುಷ್ಯ’ ಎಂಬುದನ್ನು ಒಪ್ಪಲು ಸಿದ್ಧವಿರದ ಬೂಟಾಟಿಕೆಯ ಸಮಾಜ ಸ್ವಾಮೀಜಿಯೊಬ್ಬ ಸಹಜವಾಗಿ ನಡೆದುಕೊಂಡರೆ ದಿಗ್ಭ್ರಮೆ ಗೊಳ್ಳುತ್ತದೆ ಅಥವಾ ದಿಗ್ಭ್ರಮೆಗೊಂಡಂತೆ ನಟಿಸುತ್ತದೆ. ಸ್ವಾಮೀಜಿ ಕೂಡ ಎಲ್ಲರಂತೆ ಬದುಕುತ್ತಲೇ ಸಮಾಜದ ಕೆಲಸವನ್ನಾಗಲೀ ಸ್ವಂತ ಕೆಲಸವನ್ನಾಗಲೀ   ಮಾಡಬಲ್ಲ ಎಂಬುದನ್ನು ಅತ್ಯಾಧುನಿಕ ಸಮಾಜವೂ ಒಪ್ಪದಿರುವುದು ನಾಚಿಕೆಗೇಡು.

ಕೆಲವು ವರ್ಷಗಳ ಕೆಳಗೆ, ಉತ್ಸಾಹಿ ನಾಯಕರೊಬ್ಬರನ್ನು ‘ನಿಮ್ಮ ಜಾತಿಗಾಗಿ ಇಷ್ಟೆಲ್ಲ ಕೆಲಸ ಮಾಡುವ ನೀವೇ ನಿಮ್ಮ ಜಾತಿಯ ಸ್ವಾಮಿಯಾಗಬಹುದಿತ್ತಲ್ಲ?’ ಎಂದು ಕೇಳಿದೆ. ಅದಕ್ಕೆ ಅವರ ಉತ್ತರ: ‘ಅಯ್ಯೋ! ಖಂಡಿತ ಆಗುತ್ತಿದ್ದೆ. ಆದರೆ ಆ ಐಡಿಯಾ ಬರುವ ಹೊತ್ತಿಗೆ ನನಗಾಗಲೇ ಮದುವೆಯಾಗಿಬಿಟ್ಟಿತ್ತು’. ‘ಆಗಿದ್ದರೇನಂತೆ?’ ಎಂದೆ. ಅದಕ್ಕೆ ಅವರ ಸಿದ್ಧ ಪ್ರತಿಕ್ರಿಯೆ: ‘ಸ್ವಾಮೀಜಿಗೆ ಸಂಸಾರವಿದ್ದರೆ ಮಠಕ್ಕೆ ಬರುವ ಹಣವನ್ನೆಲ್ಲಾ ತನ್ನ ಹೆಂಡತಿ ಮಕ್ಕಳಿಗೆ ಕೊಡುತ್ತಾನೆ’. ‘ಎಲ್ಲರಂತೆ ಸ್ವಾಮಿಯೂ ಸಂಸಾರಕ್ಕೆ ಅಷ್ಟಿಷ್ಟು ಕೊಟ್ಟರೇನಂತೆ?’ ಎಂಬ ಪ್ರಶ್ನೆಯೆತ್ತಿದ್ದರೆ ಅವರು ಏನೆನ್ನುತ್ತಿದ್ದರೋ!

ಇದೆಲ್ಲದರ ನಡುವೆ, ಈಚಿನ ವರ್ಷಗಳಲ್ಲಿ ರಾಜಕೀಯ ಪ್ರವೇಶಿಸಿರುವ ಸ್ವಾಮಿಗಳನ್ನೂ ಗಮನಿಸಬೇಕು. ತೆರೆಮರೆ ಯಲ್ಲೇ ರಾಜಕೀಯ ಮಾಡುತ್ತಿದ್ದ ಸ್ವಾಮಿಗಳನ್ನು 21ನೇ ಶತಮಾನದಲ್ಲಿ ಪೂರ್ಣ ರಾಜಕೀಯಕ್ಕೆ ಎಳೆದು ತಂದ ಕೀರ್ತಿ ಯಡಿಯೂರಪ್ಪನವರಿಗೆ ಸಲ್ಲಬೇಕು!

ರಾಜಕೀಯದ ಜೊತೆಗೇ ಕೋರ್ಟು, ಲಾಯರು, ಪೊಲೀಸು ಮುಂತಾದ ವಲಯಗಳನ್ನೂ ಪ್ರವೇಶಿಸುತ್ತಿರುವ ಸ್ವಾಮಿಗಳು ಈಗ ನಿಜಕ್ಕೂ ಪ್ರಜಾಪ್ರಭುತ್ವದ ನಿಯಮಗಳ ತೆಕ್ಕೆಗೆ ಬರುತ್ತಿ ದ್ದಾರೆ!

ಈ ಘಟ್ಟದಲ್ಲಿ ಅವರ ನಡೆನುಡಿಗಳನ್ನು ಕೂಡ ರಾಜಕಾರಣಿಗಳ ನಡೆನುಡಿಗಳನ್ನು ಟೀಕಿಸುವಂತೆಯೇ ಮಾಧ್ಯಮಗಳು ತೀವ್ರವಾಗಿ ವಿಮರ್ಶಿಸುತ್ತಿವೆ; ಪತ್ರಿಕೆಗಳಲ್ಲಿ ಅವರ ಪರ-ವಿರೋಧದ ಜನಾಭಿಪ್ರಾಯಗಳು ವ್ಯಕ್ತವಾಗು ತ್ತಿವೆ. ಸ್ವಾಮಿಗಳನ್ನು ಸಾರ್ವಜನಿಕ ವಿಮರ್ಶೆಗೆ ಒಳಪಡಿಸುವ ಪ್ರಜಾಪ್ರಭುತ್ವದ ಈ ಹೊಸ ಪ್ರಕ್ರಿಯೆಯಲ್ಲಿ ಹೊಸ ತಲೆಮಾರಿನ ಜೊತೆಗೆ ಸೂಕ್ಷ್ಮ ಮನಸ್ಸಿನ ಸ್ವಾಮಿಗಳೂ ಪಾಲ್ಗೊಳ್ಳುವುದು ಆರೋಗ್ಯಕರವಾಗಿರಬಲ್ಲದು.

ಕೊನೆ ಟಿಪ್ಪಣಿ: ದೇವಮಾನವರ ದೈನಂದಿನ ಕಷ್ಟಗಳು!
ಎಷ್ಟೋ ಸಲ ತಮ್ಮ ಕಷ್ಟ ತೋಡಿಕೊಳ್ಳಲು ಗೆಳೆಯರೂ ಇಲ್ಲದ ಸ್ವಾಮಿಗಳ ಸಂಕಟಗಳು ತರಹೇವಾರಿಯಾಗಿರ ಬಲ್ಲವು. ಶ್ರೀಮಂತ ಸ್ವಾಮಿಗಳ ಸವಲತ್ತುಗಳನ್ನು ಕಂಡವರಿಗೆ ಬಡ ಸ್ವಾಮಿಗಳ ಕಷ್ಟ ಇಂಡಿಯಾದ ಬಡವರ ಸ್ಥಿತಿಯನ್ನೇ ಹೋಲುತ್ತದೆಂಬುದು ಗೊತ್ತಿರಲಿಕ್ಕಿಲ್ಲ. ಹಿಂದೊಮ್ಮೆ ಸ್ವಾಮಿ ಯೊಬ್ಬರನ್ನು ಪತ್ರಕರ್ತರು ಭೇಟಿ ಮಾಡಿದಾಗ ‘ನೋಡಿ!

ಈ ಕೊಂಪೆಯಲ್ಲಿ ನನಗೆ ಪ್ಲೇಟ್ ಮೀಲ್ ಹಾಕಿ ಸಾಯಿಸುತ್ತಿದ್ದಾರೆ’ ಎಂದು ಕೊರಗಿದ್ದರು. ಮಾಂಸಾಹಾರ ದಿಂದ ಸಸ್ಯಾಹಾರಕ್ಕೆ ಒಗ್ಗಿಕೊಳ್ಳಬೇಕಾದ ಕಷ್ಟಕ್ಕೂ ಸಿಲುಕಿದ್ದ ಆ ಹುಲಿ ನಿಜಕ್ಕೂ ಸೊರಗಿತ್ತಂತೆ!

ಇದಕ್ಕಿಂತ ಭಿನ್ನವಾದ ಮತ್ತೊಂದು ಘಟನೆಯನ್ನು ಮಿತ್ರರೊಬ್ಬರು ಹೇಳಿದರು: ಒಂದು ದಿನ ಇಬ್ಬರು ಅಣ್ಣಂದಿರು ಇದ್ದಕ್ಕಿದ್ದಂತೆ ತಮ್ಮ ತಮ್ಮನನ್ನು ಮಠವೊಂದರ ಸ್ವಾಮಿಯಾಗಲೇಬೇಕೆಂದು ಒತ್ತಾಯಿಸತೊಡಗಿದರು. ಈ ಒತ್ತಾಯದ ಹಿಂದೆ ಧಾರ್ಮಿಕ ಕಾರಣಕ್ಕಿಂತ ‘ಆರ್ಥಿಕ’ ಕಾರಣವೇ ಪ್ರಧಾನವಾಗಿತ್ತು. ಅಂದರೆ, ಕಿರಿಯ ತಮ್ಮ ಸ್ವಾಮಿಯಾದ ತಕ್ಷಣ ಪಿತ್ರಾರ್ಜಿತ ಆಸ್ತಿಯನ್ನು ತಾವಿಬ್ಬರೇ ಹಂಚಿಕೊಳ್ಳಬಹುದೆಂಬುದು ಅಣ್ಣಂದಿರ ಗುಪ್ತ ಅಜೆಂಡಾ ಆಗಿತ್ತು!
editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT