ಅದೊಂದು ಸನ್ಯಾಸಿಗಳ ತರಬೇತಿ ಕೇಂದ್ರ. ಹಿಮಾಲಯದ ಪ್ರಶಾಂತ ಮಡಿಲಲ್ಲಿ ಅತ್ಯಂತ ಸುಂದರವಾಗಿ ನಿರ್ಮಾಣವಾದ ಕೇಂದ್ರ ಅದು. ಪ್ರತಿವರ್ಷ ದೇಶ ವಿದೇಶಗಳಿಂದ ಸನ್ಯಾಸಿಗಳು ತರಬೇತಿಗೆ ಅಲ್ಲಿಗೆ ಬರುತ್ತಾರೆ. ಒಂದೆರಡು ತಿಂಗಳುಗಳ ಕಾಲ ಅಲ್ಲಿದ್ದು ಅಧ್ಯಾತ್ಮ ಚಿಂತನೆಯನ್ನು ನಡೆಸಿ ಮತ್ತೆ ತಮ್ಮ ತಮ್ಮ ಪ್ರದೇಶಗಳಿಗೆ ತೆರಳುತ್ತಾರೆ.

ಅಂಥದ್ದೊಂದು ತರಬೇತಿ ನಡೆದಿತ್ತು. ಒಂದೊಂದು ಕೊಠಡಿಯಲ್ಲಿ ಮೂವರು ಸನ್ಯಾಸಿಗಳು ಇರುವುದೆಂದು ಗೊತ್ತಾಗಿತ್ತು. ಅದರಂತೆ ತರಬೇತಿಗೆ ಬಂದ ಸನ್ಯಾಸಿಗಳು ತಮತಮಗೆ ನಿಯಮಿತವಾದ ಕೊಠಡಿಗಳನ್ನು ಸೇರಿಕೊಂಡರು. ಇಡೀ ದಿನ ಕೇಂದ್ರದಲ್ಲೇ ತರಬೇತಿ ನಡೆಯುತ್ತಿತ್ತು. ಸಂಜೆಗೆ ಸನ್ಯಾಸಿಗಳು ತಮ್ಮ ಕೊಠಡಿಗೆ ಬಂದು ಸ್ನಾನ ಮಾಡಿ, ಹೊರಗೆ ತಿರುಗಾಡಿ ಬಂದು ನಂತರ ಊಟ ಮಾಡುವರು.

ಊಟದ ನಂತರವೂ ಹರಟೆ, ಚರ್ಚೆ, ಚಿಂತನೆ ನಡೆಯುವವು. ಹೀಗೆ ಅನೇಕ ದಿನಗಳ ಕಾಲ ಜೊತೆಗೇ ಇರುವುದರಿಂದ ಅವರ ನಡುವೆ ಒಂದು ಪ್ರೀತಿಯ ಬಾಂಧವ್ಯ ಮೊಳೆಯುತ್ತಿತ್ತು.

ಒಂದೇ ಕೊಠಡಿಯಲ್ಲಿ ಏಕಕಾಲ ಮಠ, ದ್ವಿಕಾಲ ಮಠ ಮತ್ತು ತ್ರಿಕಾಲ ಮಠದ ಸ್ವಾಮಿಗಳು ವಾಸವಾಗಿದ್ದರು. ಒಂದು ತಿಂಗಳು ಕಳೆಯುವಷ್ಟರಲ್ಲಿ ಅವರ ಸ್ನೇಹ ಬಹಳ ಗಟ್ಟಿಯಾಯಿತು. ಸ್ನೇಹ ಸಲುಗೆಗೆ ತಿರುಗಿತು. ಒಬ್ಬರಿಂದ ಒಬ್ಬರು ಏನನ್ನೂ ಮುಚ್ಚಿಡದೇ ಹೇಳುವಷ್ಟು ಸಮೀಪಕ್ಕೆ ಬಂದರು. ಅದು ಭಾನುವಾರವಾದ್ದರಿಂದ ಸಾಯಂಕಾಲದ ತರಗತಿಗಳು ಇರಲಿಲ್ಲ. ಹೊರಗೋ ವಿಪರೀತ ಚಳಿ. ಮೂವರೂ ಕೋಣೆಯೊಳಗೆ ಬಂದು ಅಗ್ಗಿಷ್ಟಿಕೆಯ ಮುಂದೆ ಕುಳಿತು ಹರಟೆಗೆ ಇಳಿದರು. ಏಕಕಾಲ ಮಠದ ಸ್ವಾಮಿಗಳು ಪ್ರಾರಂಭಿಸಿದರು. `ಈ ಒಂದು ತಿಂಗಳಲ್ಲಿ ನಾವು ಅಣ್ಣ ತಮ್ಮಂದಿರೇನೋ ಎನ್ನುವಷ್ಟು ಹತ್ತಿರವಾಗಿ ಬಿಟ್ಟಿದ್ದೇವೆ. ಆದರೂ ನಮ್ಮ ನಿಜ ಅಂತರ್ಯವನ್ನು ಬಿಚ್ಚಿ ಇಟ್ಟಿಲ್ಲ. ನನಗೆ ನಿಮ್ಮಿಬ್ಬರ ಮೇಲೆ ತುಂಬ ನಂಬಿಕೆ ಇದೆ.

ಅದ್ದರಿಂದ ನಾನು ಸನ್ಯಾಸಿಯಾಗಿದ್ದರೂ ಏನೇನು ತಪ್ಪುಗಳನ್ನು ಮಾಡಿದ್ದೆನೋ ಅವನ್ನೆಲ್ಲ ನಿಮಗೆ ಹೇಳಿ ಬಿಡುತ್ತೇನೆ. ಹೊರಜಗತ್ತಿಗೆ ಇವು ಯಾವುವೂ ಗೊತ್ತಿಲ್ಲ.~ ಹೀಗೆ ಹೇಳಿ ತಾವು ಸನ್ಯಾಸಕ್ಕಿಂತ ಮೊದಲು ಹಾಗೂ ಅನಂತರ ಮಾಡಿದ ತಪ್ಪುಗಳ ಪಟ್ಟಿ ಒಪ್ಪಿಸುತ್ತ ಹೋದರು. ತಮ್ಮ ಪ್ರೇಮಕಥೆ, ಅಲ್ಲಲ್ಲಿ ಮಾಡಿದ ಕಳವುಗಳು. ಇವನ್ನೆಲ್ಲ ಕೇಳುತ್ತಾ ಉಳಿದಿಬ್ಬರು ಆಶ್ಚರ್ಯದಿಂದ ಬಾಯಿ ತೆರೆದುಕೊಂಡು ಕೇಳುತ್ತಿದ್ದರು.

ಅವರ ಮಾತು ಮುಗಿದ ಮೇಲೆ ದ್ವಿಕಾಲ ಮಠದ ಸ್ವಾಮಿಗಳಿಗೆ ಧೈರ್ಯ ಬಂತು. `ನಾನೂ ಮನುಷ್ಯನೇ ಅಲ್ಲವೇ? ನಾನೂ ಇಂಥ ಅಪರಾಧಗಳನ್ನು ಮಾಡಿದ್ದೇನೆ. ಒಂದೆರಡು ಹೆಚ್ಚೇ ಮಾಡಿದ್ದೇನೆ. ನಾನು ನಿಜವಾಗಿಯೂ ಸನ್ಯಾಸಿಯಾದದ್ದು ಜೈಲಿನಿಂದ ತಪ್ಪಿಸಿಕೊಳ್ಳಲು. ನನ್ನ ಮೇಲೆ ವಾರೆಂಟ್ ಇತ್ತು. ಈಗ ಅದು ಯಾರಿಗೂ ನೆನಪಿಲ್ಲ. ನಾನು ಎಂದೂ, ಯಾರ ಮುಂದೂ ಬಾಯಿ ಬಿಟ್ಟವನಲ್ಲ. ಏಕಕಾಲ ಮಠದ ಸ್ವಾಮಿಗಳ ಪ್ರಾಮಾಣಿಕ ಹೇಳಿಕೆಯನ್ನು ಕೇಳಿದ ಮೇಲೆ ನನ್ನದೂ ಹೇಳಬೇಕೆನ್ನಿಸಿತು.~ ಎಂದು ಹೇಳಿ ಉಳಿದಿಬ್ಬರ ಮುಖ ನೋಡಿದರು.

ತ್ರಿಕಾಲ ಮಠದ ಸ್ವಾಮಿಗಳು ಗಂಟಲು ಸರಿ ಮಾಡಿಕೊಂಡು ನುಡಿದರು, `ಸಹೋದರರೇ ನಿಮ್ಮಿಬ್ಬರ ಮಾತು ಕೇಳಿ ನಾನು ದಂಗಾಗಿ ಹೋಗಿದ್ದೇನೆ. ಏನು ಮಾತನಾಡಲೂ ತೋಚುತ್ತಿಲ್ಲ. ಆದರೆ ನಿಮ್ಮಬ್ಬರ ಹಾಗೆ ನಾನು ಯಾವ ತಪ್ಪನ್ನೂ ಮಾಡಲಿಲ್ಲ. ಹಾಗೆಂದರೆ ನನ್ನಲ್ಲಿ ದೋಷಗಳೇ ಇಲ್ಲವೆಂದಿಲ್ಲ. ನನಗಿರುವುದು ಎರಡೇ ದೋಷಗಳು. ಮೊದಲನೆಯದು ಸುಳ್ಳು ಹೇಳುವುದು. ನಾನು ಯಾಕೆ ಸುಳ್ಳು ಹೇಳುತ್ತೇನೆಂದು ನನಗೇ ತಿಳಿದಿಲ್ಲ. ಸತ್ಯದ ತಲೆಯ ಮೇಲೆ ಹೊಡೆದಂತೆ ಸುಳ್ಳು ಹೇಳುತ್ತೇನೆ. ಜನ ಅದನ್ನು ನಂಬುವ ರೀತಿ ಹೇಳುತ್ತೇನೆ. ಎರಡನೆಯದಾಗಿ ನನ್ನಲ್ಲಿ ಯಾವ ವಿಷಯವೂ ಗುಟ್ಟಾಗಿ ಉಳಿಯುವುದಿಲ್ಲ. ಹೊಸ ವಿಷಯ ಕಿವಿಯ ಮೇಲೆ ಬಿತ್ತೋ ಅದನ್ನು ಯಾವಾಗ ಯಾರ ಮುಂದೆ ಹೇಳೇನೋ ಎಂದು ತಹತಹಿಸುತ್ತೇನೆ.

ಈಗಲೂ ಅಷ್ಟೇ, ನಾನು ಯಾವಾಗ ಈ ಆಶ್ರಮದಿಂದ ಹೊರಗೆ ಹೋಗಿ ಜನರಿಗೆಲ್ಲ ನನಗೆ ತಿಳಿದಿದ್ದನ್ನು ಹೇಳಿಯೇನೋ ಎಂದು ಸಂಕಟ ಪಡುತ್ತಿದ್ದೇನೆ.~ ಉಳಿದಿಬ್ಬರು ಸ್ವಾಮಿಗಳು ಬಿಳಿಚಿಕೊಂಡರು.

ದೋಷಗಳಿಲ್ಲದ ಜನರಿಲ್ಲ. ಅತ್ಯಂತ ಹಿರಿದಾದ ದೋಷವೆಂದರೆ ಮತ್ತೊಬ್ಬರ ದೋಷ ಬಣ್ಣಿಸಿ, ಅವುಗಳನ್ನು ಜನರಲ್ಲಿ ಹರಡಿ ಸುಳ್ಳು ಅಲಂಕಾರ ಸೇರಿಸಿ ಸಂತಸಪಡುವುದು. ಇದೊಂದು ಕ್ಷುದ್ರ ಸಂತೋಷ. ಇದು ಬಹಳ ಅಪಾಯಕಾರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.