ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣ್ಣಾಗದೇ ಉದುರಿದ ಕಿರುಗಾಯಿಗಳು

Last Updated 19 ಜನವರಿ 2012, 19:30 IST
ಅಕ್ಷರ ಗಾತ್ರ

ಪ್ರೆಸಿಲ್ಲಾಗೆ ಅಂದು ತುಂಬ ಕೆಲಸ, ಬಿಡುವೇ ಇಲ್ಲ. ಆಕೆ ನಗರದ ಅತ್ಯಂತ ಪ್ರತಿಷ್ಠಿತವಾದ ಶಾಲೆಯ ಪ್ರಿನ್ಸಿಪಾಲ್. ಪಕ್ಕದಲ್ಲಿದ್ದ ಫೋನ್ ಬರ್ ಎಂದು ಸದ್ದು ಮಾಡಿತು. ಇದೊಂದು ಶನಿ ಎಂದುಕೊಂಡು ಮುಖ ಗಂಟಿಕ್ಕಿ ಫೋನ್ ತೆಗೆದುಕೊಂಡರು. ಆ ಕಡೆಯಿಂದ ಪ್ರೆಸಿಲ್ಲಾರ ಸೆಕ್ರೆಟರಿ ಮಾತನಾಡುತ್ತಿದ್ದಳು,  `ಮ್ಯೋಡಂ, ದಯವಿಟ್ಟು ಕ್ಷಮಿಸಿ, ನೀವು ಯಾವ ಪೋನ್‌ನ್ನೂ ಕೊಡಬೇಡ ಎಂದು ಹೇಳಿದ್ದಿರಿ.

ಆದರೆ ಮ್ಯೋಡಂ ಮೇರಿ ನಿಮ್ಮ ಹತ್ತಿರ ಮಾತನಾಡಬೇಕಂತೆ, ಕನೆಕ್ಷನ್ ಕೊಡಲೇ?~ ಅದನ್ನು ಕೇಳಿದೊಡನೆ ಪ್ರೆಸಿಲ್ಲಾರ ಮುಖದ ನೆರಿಗೆಗಳು ಕರಗಿದವು. ಮಂದಹಾಸ ತೇಲಿತು.  `ಆಯ್ತು ಕನೆಕ್ಷನ್ ಕೊಡು~ ಎಂದರು. 

ಆ ಕಡೆಯಿಂದ ಜೋರಾದ ನಗೆಯ ಅಲೆಗಳು ತೇಲಿಬಂದವು, `ಯಾಕೆ ಪ್ರೆಸಿಲ್ಲಾ, ಕೆಲಸದ ಸುನಾಮಿಯಲ್ಲಿ ಕೊಚ್ಚಿಕೊಂಡು ಹೋಗಿ ಬಿಟ್ಟೆಯಾ?~ ಎಂದರು ಮೇರಿ.  `ಹೌದು ಮ್ಯೋಡಂ ನಿಮಗೇ ಗೊತ್ತಲ್ಲ, ಎಷ್ಟು ಮಾಡಿದರೂ ಈ ಕೆಲಸ ಮುಗಿಯುವುದೇ ಇಲ್ಲ~ ಎಂದು ಮುಗುಳ್ನಕ್ಕರು ಪ್ರೆಸಿಲ್ಲಾ. `ಹಾಗಲ್ಲ ಪ್ರೆಸಿಲ್ಲಾ, ಕೆಲಸ ನಿನ್ನನ್ನು ನಿಗ್ರಹಿಸಬಾರದು, ನೀನು ಕೆಲಸವನ್ನು ನಿಗ್ರಹಿಸಬೇಕು.

ಆಗ ನಿನಗೆ ಕೆಲಸ ಭಾರವಾಗುವುದಿಲ್ಲ~ ಎಂದು ಮತ್ತೆ ನಕ್ಕರು ಮೇರಿ.  `ನಿಮ್ಮಿಂದ ಕಲಿಯುವುದು ತುಂಬಾ ಇದೆ ಮ್ಯೋಡಂ~ ಎಂದರು ಪ್ರೆಸಿಲ್ಲಾ.  `ಪ್ರೆಸಿಲ್ಲಾ, ನಾನು ಫೋನ್ ಮಾಡಿದ್ದು ಯಾಕೆ ಗೊತ್ತೇ? ಇಂದು ಸಂಜೆ ನೀನು ನಮ್ಮ ಮನೆಗೆ ಬಾ. ಬೆಳಿಗ್ಗೆ ನಾನು ವೈದ್ಯರ ಕಡೆಗೆ ಹೋಗಿದ್ದೆ.
 
ಆತ ಕಣ್ಣು ಪರೀಕ್ಷೆ ಮಾಡಿ ಎಡಗಣ್ಣಿನ ಶಕ್ತಿ ಪ್ರತಿಶತ ಹದಿನೈದು ಮತ್ತು ಬಲಗಣ್ಣಿನ ಶಕ್ತಿ ಪ್ರತಿಶತ ಇಪ್ಪತ್ತೈದರಷ್ಟು ಕಡಿಮೆಯಾಗಿದೆಯಂತೆ. ಇನ್ನು ಕೆಲವೇ ವರ್ಷಗಳಲ್ಲಿ ಕಣ್ಣು ಪೂರ್ತಿ ಕಾಣದೇ ಹೋಗಬಹುದಂತೆ.

ಅದಕ್ಕೇ ಕಣ್ಣು ಪೂರ್ತಿ ಕುರುಡಾಗುವುದಕ್ಕಿಂತ ಮೊದಲೇ ಮನಃಪೂರ್ತಿ, ತೃಪ್ತಿಯಾಗುವಷ್ಟು ಓದಿಬಿಡಬೇಕು. ಸಂಜೆಗೆ ಬಾ ಪುಸ್ತಕದ ಅಂಗಡಿಗೆ ಹೋಗಿ ಒಂದಷ್ಟು ಪುಸ್ತಕ ಖರೀದಿಸೋಣ~ ಎಂದರು ಮೇರಿ.  `ಆಯ್ತು ಮ್ಯೋಡಂ. ಐದೂವರೆಗೆ ಬರುತ್ತೇನೆ~ ಎಂದು ಫೋನಿಟ್ಟರು ಪ್ರೆಸಿಲ್ಲಾ.

ಪ್ರೆಸಿಲ್ಲಾ ಕ್ಷಣಕಾಲ ಯೋಚಿಸಿದರು. ಮೇರಿ ಮೆನೆಜಸ್‌ಗೆ ಈಗ ಎಂಬತ್ತೆಂಟು ವರ್ಷ! ಆರೋಗ್ಯ ಅಷ್ಟು ಚೆನ್ನಾಗಿಲ್ಲ. ಅವರು ಮೊದಲು ಅನೇಕ ವರ್ಷಗಳ ಕಾಲ ಈ ಶಾಲೆಯ ಪ್ರಿನ್ಸಿಪಾಲರಾಗಿ ಬಹುದೊಡ್ಡ ಹೆಸರು ಮಾಡಿದ್ದವರು.
 
ಇಂದಿಗೂ ಅವರ ಬಗ್ಗೆ ಎಲ್ಲರಿಗೂ ಗೌರವ. ಪ್ರೆಸಿಲ್ಲಾ ಆಕೆಯ ವಿದ್ಯಾರ್ಥಿಯಾಗಿದ್ದವರು. ಆಕೆಯ ಜೀವನದ ಪ್ರತಿಯೊಂದು ಹೆಜ್ಜೆಯಲ್ಲಿ ಮೇರಿಯವರ ಮಾರ್ಗದರ್ಶನವಿರುತ್ತಿತ್ತು.

ಸಂಜೆ ಮೇರಿ ಮ್ಯೋಡಂ, ಮನೆಯ ಮುಂದೆ ಸಿದ್ಧರಾಗಿಯೇ ನಿಂತಿದ್ದರು. ಚೆಂದವಾದ ಬಟ್ಟೆ ತೊಟ್ಟು, ಮೇಕಪ್ ಮಾಡಿಕೊಂಡು ನಗುನಗುತ್ತಾ ನಿಂತಿದ್ದಾರೆ! ಈ ವಯಸ್ಸಿಗೆ ಅದೆಷ್ಟು ಸಂಭ್ರಮ! ಆಕೆಯನ್ನು ಗಮನಿಸಿದರೆ ತಾನೇ ಪೀಚು ಎನ್ನಿಸಿತು ಪ್ರೆಸಿಲ್ಲಾರಿಗೆ. ಇಬ್ಬರೂ ಕಾರಿನಲ್ಲಿ ಕುಳಿತು ಪುಸ್ತಕದ ಅಂಗಡಿಗೆ ಹೋದರು.
 
ಅಂಗಡಿಯ ಮಾಲೀಕ ಕೂಡ ಇವರನ್ನು ಗೌರವದಿಂದ ಕರೆದು ಕುಳ್ಳಿರಿಸಿ ಸತ್ಕರಿಸಿದ. ಮೇರಿ ಒಂದು ಹೊರೆ ಪುಸ್ತಕಗಳನ್ನು ಕೊಂಡರು, `ಇವನ್ನೆಲ್ಲ ಬೇಗ ಓದಿ ಬಿಡಬೇಕು~ ಎಂದರು. ಆಗ ಪ್ರೆಸಿಲ್ಲಾ ಆಶ್ಚರ್ಯದಿಂದ ಕೇಳಿದರು. `ಮ್ಯೋಡಂ, ತಪ್ಪು ತಿಳಿಯಬೇಡಿ.

ನಾನು ತಮಗಿಂತ ಮೂವತ್ತೈದು ವರ್ಷ ಚಿಕ್ಕವಳು. ನನಗೆ ಸುಸ್ತಾಗುತ್ತಿದೆ, ಸಾಕು ಎನ್ನಿಸುತ್ತದೆ, ಓದಲಾಗುವುದಿಲ್ಲ, ನಿಮ್ಮ ಹಾಗೆ ಮನಬಿಚ್ಚಿ ನಗಲಾರೆ, ಆತಂಕವಾಗುತ್ತದೆ. ಈ ಇಳಿವಯಸ್ಸಿನಲ್ಲೂ ಹೀಗಿರಲು ನಿಮಗೆ ಹೇಗೆ ಸಾಧ್ಯವಾಯಿತು?~

ಮೇರಿ ಗಂಭೀರರಾಗಿ,  `ಪ್ರೆಸಿಲ್ಲಾ, ಮುಪ್ಪು ಮತ್ತು ಸಾವು ನಾವು ಅಪೇಕ್ಷಿಸಿದ್ದಲ್ಲ. ಅವು ಬೇಡವೆಂದರೂ ಬರುತ್ತವೆ. ಬಂದೇ ಬರುವುದನ್ನು ತಡೆಯಲು ಸಾಧ್ಯವೇ? ತಪ್ಪದೇ ಬರುವ ಸಾವಿಗೆ ಕಾಯುತ್ತ ಖಾಲಿ ಕೂಡ್ರುವುದು ಏಕೆ? ಅದು ಯಾವಾಗ ಬರುತ್ತದೋ ಗೊತ್ತಿಲ್ಲದ್ದರಿಂದ ನಾನು ಆದಷ್ಟು ಬೇಗ ಬೇಗ ಕಲಿಯಬೇಕು, ಪಕ್ವವಾಗಬೇಕು.

ಕಾಯಿ ಹಣ್ಣಾಗದೇ ಉದುರಿದರೆ ವಿಫಲವಾದಂತೆ. ಉದುರುವುದಂತೂ ಖಚಿತವೆಂದಾಗ ಹಣ್ಣಾಗಿಯೇ ಉದುರಿದರೆ ಮತ್ತೊಬ್ಬರಿಗೆ ಪ್ರಯೋಜನವಾದೀತು.
 
ವಯಸ್ಸಾದಂತೆ ನಮಗೆ ಉಳಿದ ಸಮಯ ಕಡಿಮೆಯಾಗುತ್ತದೆ. ಅದಕ್ಕೇ ಹೆಚ್ಚು ಕೆಲಸ ಮಾಡಬೇಕು, ಸುಸ್ತಾಗುವುದಕ್ಕೆ ಬೇಜಾರಾಗುವುದಕ್ಕೆ ಸಮಯವೆಲ್ಲಿದೆ? ಬೇಗ ನಡೆ, ಮನೆಗೆ ಹೋಗಿ ಯಾವಾಗ ಪುಸ್ತಕ ಓದಲು ಶುರು ಮಾಡಿಯೇನು ಎಂಬ ಉತ್ಸಾಹ ಹೆಚ್ಚಾಗುತ್ತದೆ~  ಎಂದರು.

ಮೇರಿ ಮೆನೆಜಿಸ್‌ರ ಜೀವನ ನಮಗೊಂದು ಪಾಠ. ವಯಸ್ಸಾದಂತೆ  `ಉಶ್~ ಎಂದು ಕುಳಿತುಕೊಳ್ಳುವುದಕ್ಕಿಂತ ಬೇಗ ಬೇಗ ಹೆಚ್ಚು ಹೆಚ್ಚು ಕೆಲಸ ಮಾಡಿ, ಸದಾ ಚಟುವಟಿಕೆಯಿಂದಿದ್ದು ಜೀವನವನ್ನು ಪಕ್ವಮಾಡಿಕೊಳ್ಳಬೇಕು. ಹಣ್ಣಾಗದೇ ಉದುರಿದ ಕಿರುಗಾಯಿಯಿಂದ ಪ್ರಪಂಚಕ್ಕೆ ಏನು ಪ್ರಯೋಜನ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT