ಕನಸುಗಳನ್ನು ಕಾಣದೇ ಬದುಕುವುದು ಕಷ್ಟ. ಆದರೆ, ಕನಸು ಕೇಳುವ ಬೆಲೆ ದೊಡ್ಡದು. ಆ ದಂಪತಿಗೆ ದೊಡ್ಡ ಕನಸೇನೂ ಇರಲಿಲ್ಲ. ಅವರೂ ನಮ್ಮ ನಿಮ್ಮೆಲ್ಲರ ಹಾಗೆ ಹುಲು ಮಾನವರು. ಒಂದು ಪುಟ್ಟ ಮನೆ ಕಟ್ಟಬೇಕು ಎಂದುಕೊಂಡರು. ಅದು ದೊಡ್ಡದಾಗಿರಬೇಕು ಎಂದೂ ಬಯಸಿದರು! ಅದರ ಸುತ್ತ ಒಂದು ತೋಟ ಇರಲಿ ಎಂದರು. ತೋಟದ ತುಂಬೆಲ್ಲ ಕನಸುಗಳ ಹೂಗಳು ಹಾಸಿರಲಿ ಎಂದು ಹಾರೈಸಿದರು.

ಇದು ದೊಡ್ಡ ಕನಸೇ? ಬೆಲೆ ಕೇಳುವ ಕನಸೇ? ಆದರೆ ಆ ಅಮಾಯಕ ದಂಪತಿ ಬಹುದೊಡ್ಡ ಬೆಲೆ ಕೊಟ್ಟರು. ನಾವೆಲ್ಲ ಕೊಡುತ್ತಿರುವ ಹಾಗೆ. ರಾಜಿ ಇಲ್ಲದೆ ಕನಸುಗಳು ನನಸು ಆಗುವುದು ಸಾಧ್ಯವಿಲ್ಲವೇ? ಭ್ರಷ್ಟರಾಗದೆ ಬದುಕುವುದು ಸಾಧ್ಯವೇ ಇಲ್ಲವೇ?... ನಮ್ಮ ಎಲ್ಲರ ಒಳಗೂ ಒಬ್ಬ ನಾಜೂಕಯ್ಯ ಇದ್ದೇ ಇರುತ್ತಾನೆಯೇ? ಪ್ರಾಮಾಣಿಕರು ಎಂದು ಹೇಳಿಕೊಳ್ಳುತ್ತಲೇ ನಾವು ಅಪ್ರಾಮಾಣಿಕರಾಗಲು ಹೊರಟಿರುತ್ತೇವೆಯೇ? ಅಥವಾ ಪರಿಸ್ಥಿತಿ ನಮ್ಮನ್ನು ಅಳ್ಳಕ ಮಾಡುತ್ತ, ಸಡಿಲ ಮಾಡುತ್ತ ಹೋಗುತ್ತದೆಯೇ? ಟಿ.ಎನ್.ಸೀತಾರಾಮ್ ‘ನಮ್ಮೊಳಗೊಬ್ಬ ನಾಜೂಕಯ್ಯ’ ನಾಟಕ ಬರೆದು ಕಾಲು ಶತಮಾನವೇ ಆಯಿತು. 14 ವರ್ಷಗಳ ಹಿಂದೆ ಈ ನಾಟಕ ಕೊನೆಯದಾಗಿ ರಂಗದ ಮೇಲೆ ಅಭಿನಯಗೊಂಡಿತ್ತು. ಕಳೆದ ವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಮತ್ತೆ ನಟರಂಗ ತಂಡದವರು ಈ ನಾಟಕ ಆಡಿದರು. ಸೀತಾರಾಮ್ ಮುಖ್ಯ ಭೂಮಿಕೆಯಲ್ಲಿ ಇದ್ದರು.

ಈ ನಾಟಕ ಬರೆದಾಗ ಸೀತಾರಾಮ್ ಏನೂ ಆಗಿರಲಿಲ್ಲ. ಒಂದು ಸಣ್ಣ ಕೈಗಾರಿಕೆ ಸ್ಥಾಪಿಸಿ ಎಂಥದೋ ಒಂದು ಬ್ಯಾಟರಿ ತಯಾರಿಸಿ ಅದನ್ನು ಸರ್ಕಾರಕ್ಕೆ ಮಾರಬೇಕು ಎಂದುಕೊಂಡಿದ್ದರು. ಆಗ ಸರ್ಕಾರದಲ್ಲಿ ಎಡಪಂಥೀಯ ವಾದವನ್ನು ನೆಚ್ಚಿಕೊಂಡಿದ್ದವರೇ ಕೈಗಾರಿಕೆ ಸಚಿವರು ಆಗಿದ್ದರು. ತಾನು ತಯಾರಿಸಿದ ಬ್ಯಾಟರಿ ಮಾರಲು ಸೀತಾರಾಮ್ ಪಟ್ಟ ಪಡಿಪಾಟಲು ಅಷ್ಟಿಷ್ಟು ಅಲ್ಲ. ತಮ್ಮ ಗೆಳೆಯರೇ ಆಗಿದ್ದ, ಒಂದು ಕಾಲದಲ್ಲಿ ರಾಯ್ ವಾದಿಯೋ, ಮಾರ್ಕ್ಸ್ ವಾದಿಯೋ ಆಗಿದ್ದ ಕೈಗಾರಿಕೆ ಸಚಿವರು ಅದೇ ಬ್ಯಾಟರಿ ಮಾರಲು ಬಂದ ಉದ್ಯಮಿಯನ್ನು ಓಲೈಸಿದರು, ಒಂದು ಕಾಲದ ಗೆಳೆಯನನ್ನು ತಿರಸ್ಕರಿಸಿದರು; ಸಣ್ಣ ಕೈಗಾರಿಕೆಗಳಿಗೆ ಮಣೆ ಹಾಕಬೇಕು ಎಂಬ ಸರ್ಕಾರದ ನೀತಿಯನ್ನೂ ಕಸದ ಬುಟ್ಟಿಗೆ ಹಾಕಿದರು.

ಇದು ಕಥೆ ಎಂದರೆ ಕಥೆ. ನಿಜ ಎಂದರೆ ನಿಜ. ಕಥೆ ಮತ್ತೆ ಮತ್ತೆ ಪುನರಾವರ್ತನೆ ಆಗುತ್ತದೆ. ಆ ಮೂಲಕ ನಿಜವೂ ಪುನರಾವರ್ತನೆ ಆಗುತ್ತದೆ. ‘ನಾಜೂಕಯ್ಯ’ ನಾಟಕದಲ್ಲಿ ಶಿವಪ್ರಸಾದ್ ಎಂಬ ಪ್ರಾಮಾಣಿಕ ಎಂಜಿನಿಯರ್ ರಹಸ್ಯಗಳನ್ನು ಭೇದಿಸುವ ಉಪಕರಣವೊಂದನ್ನು ತಯಾರಿಸಿ ರಕ್ಷಣಾ ಇಲಾಖೆಗೆ ಮಾರಲು ಬಯಸುತ್ತಾನೆ. ಅದು ಇದುವರೆಗೆ ವಿದೇಶದಿಂದ ಆಮದು ಆಗುತ್ತಿದ್ದ ಉಪಕರಣ. ಆಮದು ಮಾಡಿ ಮಾರುವ ಉದ್ಯಮಿಗಳಿಗೆ ಅದು ಸಾವಿರಾರು ಕೋಟಿ ರೂಪಾಯಿಗಳ ವಹಿವಾಟು. ಈತ ಕೇವಲ ಅರವತ್ತು ಎಪ್ಪತ್ತು ಲಕ್ಷ ರೂಪಾಯಿಗೆ ಅದೇ ಉಪಕರಣವನ್ನು ಮಾರಲು ಮುಂದಾಗುತ್ತಾನೆ. ಹಿತಾಸಕ್ತಿಗಳ ಸಂಘರ್ಷ ಶುರುವಾಗುತ್ತದೆ. ಆತ ಒಬ್ಬ ಫ್ರೀಲಾನ್ಸ್ ಪತ್ರಕರ್ತನೂ ಆಗಿರುತ್ತಾನೆ. ನಿರ್ಭಿಡೆಯಿಂದ ಪತ್ರಿಕೆಗಳಿಗೆ ಬರೆಯುತ್ತ ಇರುತ್ತಾನೆ. ಸಾವಿರಾರು ಕೋಟಿ ರೂಪಾಯಿ ವಹಿವಾಟು ಮಾಡುವ ಉದ್ಯಮಿಯ ವಿರುದ್ಧವೂ ಬರೆದಿರುತ್ತಾನೆ.

ಅಷ್ಟೇ ಸಾಕಾಗುತ್ತದೆ. ಇಡೀ ವ್ಯವಸ್ಥೆ ಆತನ ಬೇಟೆಯಾಡಲು ಶುರು ಮಾಡುತ್ತದೆ. ಎಲ್ಲರೂ ಅವನ ವಿರುದ್ಧ ನಿಲ್ಲುತ್ತಾರೆ. ಪ್ರಾಮಾಣಿಕತೆಯನ್ನು ಉಸಿರು ಎನ್ನುವಂತೆ ಬಾಳಿದ್ದ, ನಿಷ್ಠುರತೆಯನ್ನು, ರಾಜಿಯಾಗದ ಸ್ವಭಾವವನ್ನು ಸಹಜ ಎನ್ನುವಂತೆ ಅನುಸರಿಸಿಕೊಂಡು ಬಂದಿದ್ದ ಶಿವಪ್ರಸಾದ್ ಬಾಗಲು ತೊಡಗುತ್ತಾನೆ. ಪುಟ್ಟ ಕೈಗಾರಿಕೆಯ ಆರಂಭಕ್ಕಾಗಿ ಅಡವು ಇಟ್ಟಿದ್ದ ಹೊಲ, ಅದರ ಮೇಲೆ ಬೆಳೆಯುತ್ತಿದ್ದ ಬಡ್ಡಿ, ಚಕ್ರಬಡ್ಡಿ, ಸುಸ್ತಿ ಬಡ್ಡಿ, ಊರಿನಲ್ಲಿ ಮದುವೆಗಾಗಿ ಕಾಯುತ್ತಿದ್ದ ತಂಗಿ, ತಂಗಿಯ ಮದುವೆ ಯಾವಾಗ ಮಾಡುತ್ತಿ ಎಂದು ಮತ್ತೆ ಮತ್ತೆ ತಲೆ ತಿನ್ನುತ್ತಿದ್ದ ತಾಯಿಯ ಒತ್ತಡ ಒಂದು ಕಡೆ. ಕಷ್ಟಪಟ್ಟು ತಯಾರು ಮಾಡಿದ ಅತ್ಯುತ್ತಮ ಉಪಕರಣ ಖರೀದಿಸಬೇಕಾದರೆ ತಾನು ಐದು ವರ್ಷದ ಹಿಂದೆ ರಾಜೀನಾಮೆ ಕೊಟ್ಟಿದ್ದ ಇಲಾಖೆಯಿಂದ ‘ಕ್ಲಿಯರೆನ್ಸ್’ ತರಬೇಕಾಗುತ್ತದೆ ಎಂಬ ಆಗ್ರಹ ಇನ್ನೊಂದು ಕಡೆ. ಶಿವಪ್ರಸಾದ್ ನಂಬಿದ ಯಾವ ಮೌಲ್ಯಗಳೂ ಅವನ ನೆರವಿಗೆ ಬರುವುದಿಲ್ಲ. ಇನ್ನೇನು ಅವನನ್ನು ಜೈಲಿಗೆ ತಳ್ಳಬಹುದು ಎನ್ನುವಂಥ ಸಂದರ್ಭವನ್ನು ವ್ಯವಸ್ಥೆ ನಿರ್ಮಿಸಿಬಿಡುತ್ತದೆ. ಕಾನೂನು ಮತ್ತು ನ್ಯಾಯದ ನಡುವೆ ತುಯ್ದಾಡುವ ತಕ್ಕಡಿ ಕಾನೂನಿನ ಕಡೆಗೇ ವಾಲುವಂತೆ ಕಾಣುತ್ತದೆ! ಭ್ರಷ್ಟರು, ಕೊಳಕರು ಎನಿಸಿದಂಥ ವ್ಯಕ್ತಿಗಳ ಕೈ ಕುಲುಕಲೂ ಹೇಸುತ್ತಿದ್ದ ಶಿವಪ್ರಸಾದ್ ಅದೇ ವ್ಯಕ್ತಿಯ ಕೈ ಕುಲುಕುವುದು ಮಾತ್ರವಲ್ಲ ಆತನ ಷೂಗಳನ್ನು ತನ್ನ ಕೈಯಿಂದಲೇ ಎತ್ತಿ ಕೊಡಬೇಕಾಗುತ್ತದೆ.

ಈ ವ್ಯಕ್ತಿ ಅಧ್ಯಕ್ಷನಾಗಿರುವ ಸಂಸ್ಥೆಯಲ್ಲಿ ಶಿವಪ್ರಸಾದನ ಹೆಂಡತಿ ಮಾಲತಿ ಶಿಕ್ಷಕಿಯಾಗಿ ಕೆಲಸ ಮಾಡುತ್ತ ಇರುತ್ತಾಳೆ. ಅಧ್ಯಕ್ಷನಾದ ವ್ಯಕ್ತಿ ಮಾಲತಿಗೆ ಐದು ಸಾವಿರ ರೂಪಾಯಿ ಸಂಬಳ ಹೆಚ್ಚು ಮಾಡುತ್ತಾನೆ. ತನ್ನ ಹೆಂಡತಿ ಸೂಳೆಗಿರಿ ಮಾಡಿ ಸಂಬಳ ಹೆಚ್ಚು ಮಾಡಿಕೊಂಡಳು ಎಂದು ಶಿವಪ್ರಸಾದ್ ಚುಚ್ಚುತ್ತಾನೆ. ಮುಂದೆ ತನ್ನ ಉಪಕರಣದ ಮಾರಾಟಕ್ಕೆ ಕ್ಲಿಯರೆನ್ಸ್ ಪಡೆಯಲು ತನ್ನ ಹೆಂಡತಿಯನ್ನು ಉಪಮುಖ್ಯಮಂತ್ರಿ ಜತೆಗೆ ಕಾಶ್ಮೀರಕ್ಕೆ ಕಳುಹಿಸಿಕೊಡಲು ಇದೇ ಶಿವಪ್ರಸಾದ್ ಒಪ್ಪುತ್ತಾನೆ. ನೀವು ತುಂಬಾ ‘ಮಡೀನಾ’ ಎಂದು ಕೇಳುವ ಉಪಮುಖ್ಯಮಂತ್ರಿಗೆ ಆತ ಉತ್ತರ ಕೊಡುವುದಿಲ್ಲ.

ಪತ್ರಿಕೆಯಲ್ಲಿ ತಾನು ನಿರಂತರವಾಗಿ ಟೀಕಿಸಿದ ಉದ್ಯಮಿಯ ಬಗ್ಗೆ ಹೊಗಳಿ ಬರೆಯಲು ಸಿದ್ಧನಾಗುತ್ತಾನೆ. ಅವನು ತನ್ನ ವೈಯಕ್ತಿಕ ಜೀವನದ ನೆಲೆಯಲ್ಲಿ ಮಾತ್ರವಲ್ಲ ವೈಚಾರಿಕ ನಿಲುವಿನ ನೆಲೆಯಲ್ಲಿಯೂ ಭ್ರಷ್ಟನಾಗಲು ಸಿದ್ಧನಾಗುತ್ತಾನೆ. ವ್ಯವಸ್ಥೆ ಎನ್ನುವುದು ಎಷ್ಟು ಕ್ರೂರ, ಅದನ್ನು ಎದುರಿಸುವುದು ಎಷ್ಟು ಕಷ್ಟ ಎಂದು ಅರ್ಥ ಆಗುವುದರೊಂದಿಗೆ ನಾಟಕ ಮುಗಿಯುತ್ತದೆ. ನಮ್ಮೊಳಗಿನ ಭಗ್ನ ಕನಸುಗಳು ಎದುರುಗೊಂಡು ಗಾಢ ವಿಷಾದ ಮನಸ್ಸನ್ನು ಆವರಿಸುತ್ತದೆ. ಮೊನ್ನೆ ಹನುಮಂತನಗರದ ರಂಗ ಮಂದಿರದಲ್ಲಿ ಈ ನಾಟಕ ನೋಡಿದ ಒಬ್ಬ ಯುವತಿ, ‘I hate you for this drama’ ಎಂದು ಸೀತಾರಾಮ್ಗೆ ಎಸ್ಎಂಎಸ್ ಕಳಿಸಿದರಂತೆ. ನಿಜ, ನಾಟಕ ನಮ್ಮನ್ನು ತುಂಬ ಅಸ್ವಸ್ಥಗೊಳಿಸುತ್ತದೆ. ಮನಸ್ಸು ‘ಡಿಸ್ಟರ್ಬ್’ ಆಗುತ್ತದೆ.

ರವೀಂದ್ರ ಕಲಾಕ್ಷೇತ್ರದಲ್ಲಿ ಡಿಸೆಂಬರ್ ಆರನೇ ತಾರೀಖು ಈ ನಾಟಕ ಪ್ರದರ್ಶನಗೊಂಡಾಗ ನಾನೂ ನೋಡಲು ಹೋಗಿದ್ದೆ. ಕಲಾಕ್ಷೇತ್ರದಲ್ಲಿ ಅಷ್ಟು ಜನರನ್ನು ನಾನು ಎಂದೂ ನೋಡಿರಲಿಲ್ಲ. ನಾಟಕ ಆಡಿದ ನಟರಂಗ ತಂಡದ ಸ್ಥಾಪಕ ಕಾರ್ಯದರ್ಶಿ ಕಪ್ಪಣ್ಣ ನನಗೆ ಒಂದಿಷ್ಟು ಜಾಗ ಕಾದಿರಿಸಿದ್ದರು ಎಂದು ನಾನು ಕುಳಿತುಕೊಳ್ಳಲು ಸಾಧ್ಯವಾಯಿತು. ಕೆಳಗಿನ ರಂಗ ಮಂದಿರ ಭರ್ತಿಯಾಗಿ ಬಾಲ್ಕನಿ ಕಡೆಗೆ ತಂಡ ತಂಡವಾಗಿ ಹೋಗುತ್ತಿದ್ದ ಪ್ರೇಕ್ಷಕರನ್ನು ಕಂಡು ಅವರಿಗೂ ದಿಗ್ಭ್ರಮೆ. ಯಾರಿಗೂ ಟಿಕೆಟ್ ಕೊಡಲೂ ಸಾಧ್ಯವಿರಲಿಲ್ಲ, ಅವರು ತೆಗೆದುಕೊಳ್ಳಲೂ ಸಾಧ್ಯವಿರಲಿಲ್ಲ. ನಾಟಕ ಶುರುವಾಗುವ ವೇಳೆಗೆ ಕಲಾಕ್ಷೇತ್ರದ ಮೆಟ್ಟಿಲುಗಳ ಮೇಲೆಯೂ ಕುಳಿತುಕೊಳ್ಳಲು ಜಾಗವಿರಲಿಲ್ಲ. ಜನ ಸಿಕ್ಕ ಸಿಕ್ಕ ಕಡೆಗಳಲ್ಲಿ ತಳವೂರಿ, ನಿಂತು ನಾಟಕ ನೋಡಿದರು.

14 ವರ್ಷಗಳ ಹಿಂದೆ ಈ ನಾಟಕ ಆಡಿದಾಗ ಸೀತಾರಾಮ್ ಈಗಿನ ಹಾಗೆ ತಾರೆಯಾಗಿರಲಿಲ್ಲ. ಅವರು ಬರೀ ನಾಟಕಕಾರ ಮಾತ್ರ ಆಗಿದ್ದರು. ಈಗ ಅವರು ಹೋದ ಬಂದಲ್ಲೆಲ್ಲ ಜನ ಸೇರುತ್ತಾರೆ. ನಾಟಕದಲ್ಲಿ ಅವರು ಮೊದಲ ಬಾರಿಗೆ ರಂಗ ಪ್ರವೇಶಿಸಿದಾಗ ಚಪ್ಪಾಳೆ ಬಿದ್ದುದು ಅದಕ್ಕೆ ನಿದರ್ಶನ. ಆದರೆ, ನಾಟಕದ ಪರಿಣಾಮಕ್ಕೂ ಅವರು ಟೀವಿಯ ತಾರೆಯಾಗಿದ್ದುದಕ್ಕೂ ಏನೇನೂ ಸಂಬಂಧವಿಲ್ಲ. ಮೊನ್ನೆಯಷ್ಟೇ ಕುಳಿತುಕೊಂಡು ಆ ನಾಟಕವನ್ನು ಮತ್ತೆ ಓದಿದೆ. ಶುರು ಮಾಡಿದ ಮೇಲೆ ಮುಗಿಯುವವರೆಗೂ ಬಿಡಲು ಆಗಲಿಲ್ಲ. ಅಚ್ಚರಿ ಎನಿಸಿತು: ಈಗಿನ ಕಾರ್ಪೊರೇಟ್ ಜಗತ್ತಿನಲ್ಲಿ, ಮಾಧ್ಯಮ ಕ್ಷೇತ್ರದಲ್ಲಿ ಏನೆಲ್ಲ ಆಗುತ್ತಿದೆಯೋ ಅದನ್ನೆಲ್ಲ ಅವರು ಆಗಲೇ ಬರೆದಿದ್ದಾರೆ!

ನಾಟಕದಲ್ಲಿ ಸೀತಾರಾಮ್ ಅವರಿಗೇ ಸಾಧ್ಯವಾಗುವ ಒಂದು ಕ್ಷಣ ಚಾಟಿ ಎನಿಸುವಂಥ, ಇನ್ನೊಂದು ಕ್ಷಣ ಅಸಂಗತ ಎನಿಸುವಂಥ, ಮತ್ತೊಂದು ಕ್ಷಣ ತದ್ವಿರುದ್ಧ ಎನಿಸುವಂಥ ಸಂಭಾಷಣೆಗಳು ಇವೆ. ಅವರು ವ್ಯವಸ್ಥೆಯ ವಿರುದ್ಧ ಸಿಟ್ಟು ತರಿಸುವುದಕ್ಕಿಂತ ವಿಷಾದ ಮೂಡಿಸುತ್ತಾರೆ. ಭ್ರಷ್ಟಾಚಾರದ ಬಗ್ಗೆ ಮಾಸ್ಟರ್ ಹಿರಣ್ಣಯ್ಯ ಅವರು ಆಡಿದ ‘ಲಂಚಾವತಾರ’ ನಾಟಕದ ಪ್ರದರ್ಶನಗಳ ಲೆಕ್ಕವಿಟ್ಟವರು ಇಲ್ಲ. ಆದರೆ, ಹಿರಣ್ಣಯ್ಯ ಹಾಸ್ಯ ನಾಟಕಕಾರ ಎನಿಸಿಬಿಟ್ಟರು. ಅವರು ಧೈರ್ಯವಂತ ನಾಟಕಕಾರ. ಯಾವ ಮುಖ್ಯಮಂತ್ರಿಯನ್ನೂ ಅವರು ಟೀಕಿಸದೇ ಬಿಟ್ಟವರು ಅಲ್ಲ.

ಆದರೆ, ಅವರ ಟೀಕೆ ವಾಚ್ಯವಾಗಿ ಬಿಡುತ್ತಿತ್ತು. ಅವರ ಸಂಭಾಷಣೆಗಳಿಗೆ ಅರ್ಥವಿಸ್ತಾರ ಸಿಗುತ್ತಿರಲಿಲ್ಲ. ಜನ ನಕ್ಕು ಸುಮ್ಮನಾಗುತ್ತಿದ್ದರು. ಅಥವಾ ರಂಜನೆಗಾಗಿ ಅವರ ನಾಟಕ ನೋಡಲು ಹೋಗುತ್ತಿದ್ದರು. ಸೀತಾರಾಮ್ ಕೂಡ ಅದೇ ವಸ್ತುವನ್ನು ಈ ನಾಟಕದಲ್ಲಿ ನಿರ್ವಹಿಸಿದ್ದಾರೆ. ಜನ ಇಲ್ಲಿಯೂ ನಗುತ್ತಾರೆ. ಚಪ್ಪಾಳೆ ತಟ್ಟುತ್ತಾರೆ. ಆದರೆ, ನಾಟಕ ಮುಗಿಯುವ ವೇಳೆಗೆ ಅವರು ಮೌನವಾಗುತ್ತಾರೆ. ನಾಟಕದ ಸನ್ನಿವೇಶಗಳು, ದೃಶ್ಯಗಳು, ಮಾತುಗಳು ಆಳಕ್ಕೆ ಹೊಕ್ಕು ಪ್ರಶ್ನೆಗಳಾಗಿ ಕಾಡತೊಡಗುತ್ತವೆ. ನಮ್ಮ ಮುಂದೆ ಧುತ್ತೆಂದು ನಿಂತು ಉತ್ತರಕ್ಕೆ ಒತ್ತಾಯಿಸುತ್ತವೆ.

ಕಾರಣ ಏನಾದರೂ ಇರಬಹುದು. ‘ನಾಜೂಕಯ್ಯ’ ನಾಟಕದ ಪ್ರದರ್ಶನದ ಅದ್ಭುತ ಯಶಸ್ಸು, ಹವ್ಯಾಸಿ ರಂಗಭೂಮಿಯ ಹುಟ್ಟು, ಉಚ್ಛ್ರಾಯ ಮತ್ತು ಅವನತಿಯನ್ನು ಕಂಡಿದ್ದ ರವೀಂದ್ರ ಕಲಾಕ್ಷೇತ್ರಕ್ಕೆ ಐವತ್ತು ವರ್ಷ ತುಂಬಿದ ಈ ಸಂದರ್ಭದಲ್ಲಿ ಮತ್ತೆ ಹೊಸ ಕನಸುಗಳನ್ನು ಹುಟ್ಟು ಹಾಕುವಂತೆ ಕಾಣುತ್ತಿದೆ.

ಬಣ್ಣದ ಟೀವಿಯ ಆಗಮನದೊಂದಿಗೆ ಕಲಾಕ್ಷೇತ್ರದ ರಂಗು ಕಡಿಮೆ ಆಗಿತ್ತು. ಜನರಿಗೆ ಈಗ ಬಣ್ಣದ ಟೀವಿಯ ರಂಗು ಸಾಕು ಅನಿಸುತ್ತಿದೆ. ಜನರು ಮತ್ತೆ ಭ್ರಮಾಲೋಕದಿಂದ ಕನಸುಗಳ ಲೋಕಕ್ಕೆ ಬರಲು ಹಾತೊರೆಯುವಂತೆ ಕಾಣುತ್ತಿದೆ. ‘ನಾಜೂಕಯ್ಯ’ ನಾಟಕದ ಕೊನೆಯಲ್ಲಿ ನಾಯಕ ಮತ್ತು ನಾಯಕಿ ಕೈ ಹಿಡಿದುಕೊಂಡು ‘ದರಿದ್ರ ನಾಯಿಗಳು’ ಇಲ್ಲದ ಸ್ವಸ್ಥ ಸಮಾಜದಲ್ಲಿ ಮತ್ತೆ ಒಂದು ಪುಟ್ಟದಾದ ದೊಡ್ಡ ಮನೆಯ, ಅದರ ಸುತ್ತ ತೋಟ ಇರುವ, ಅದರಲ್ಲೆಲ್ಲ ಹೂವಿನಂಥ ಕನಸುಗಳು ಹಾಸಿರುವ ಕನಸು ಕಾಣುತ್ತಾರೆ. ಬೆಳಕು ಇಲ್ಲದ ದಿನಗಳಲ್ಲಿ ಕನಸುಗಳಾದರೂ ಬೇಡವೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.