ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿನವ ದುರ್ಗೆ!

Last Updated 16 ಜೂನ್ 2018, 9:11 IST
ಅಕ್ಷರ ಗಾತ್ರ

ಈಕೆ ಬರ್ಬರವಾಗಿ ಕೊಲೆಯಾದಾಗ ಕಲಾವಿದ ಎಂ.ಎಫ್. ಹುಸೇನ್‌ರು ಚಿತ್ರವೊಂದನ್ನು ರಚಿಸಿದರು. ಮೈಮೇಲೆಲ್ಲ ಗುಂಡಿನ ರಕ್ತದ ಕಲೆಗಳಿದ್ದ ಈ ಸುಂದರ, ಕೋಮಲ ತನುವಿನ ಮಹಿಳೆಯನ್ನು ‘ಅಭಿನವ ದುರ್ಗೆ’ ಎಂದು ಕರೆದರು. ಲೇಖಕ ಶಂಕರ ಮೊಕಾಶಿ ಪುಣೇಕರರು ಈಕೆಯ ಪರಮ ಅಭಿಮಾನಿ. ಭಾರತದ ಬುದ್ಧಿಜೀವಿ ವರ್ಗವಿಡೀ ಈಕೆಯನ್ನು ‘ಸರ್ವಾಧಿಕಾರಿ’ ಎಂದು ಕರೆದು, ಆಕೆಯ ವಿರುದ್ಧ ಹೋರಾಟಗಳನ್ನು ಸಂಘಟಿಸುತ್ತಿದ್ದಾಗ ಪುಣೇಕರರು ‘ಇಂದಿರಾ ಪ್ರಿಯದರ್ಶಿನಿ’ ಎಂದು ಈಕೆಯ ಹೆಸರಿನಲ್ಲೊಂದು ರಾಗವನ್ನು ಸಂಯೋಜಿಸಿದರು.

ಈಕೆಯ ಸಹೋದ್ಯೋಗಿಗಳೇ ‘ಈಕೆ ಸಂಪುಟದ ಏಕೈಕ ಪುರುಷ’ ಎನ್ನುವ ಪಿತೃಸಂಸ್ಕೃತಿಯ ಮತ್ತು ಲಿಂಗಾಧಾರಿತ ವ್ಯವಸ್ಥೆಯು ಹೆಣ್ಣಿಗೆ ಕೊಡಬಹುದಾದ ಅಂತಿಮ ಬಿರುದನ್ನು ಮೆಚ್ಚುಗೆಯಿಂದಲೋ ಅಸಹಾಯಕತೆಯಿಂದಲೋ ಕೊಟ್ಟರು. ಈಕೆ ಭಾರತದ ಪ್ರಧಾನಮಂತ್ರಿಯಾದದ್ದು ತನ್ನ ಯೋಗ್ಯತೆಯಿಂದಲ್ಲ, ಕುಟುಂಬ ಮತ್ತು ತಂದೆಯ ಪ್ರಭಾವಳಿಯಿಂದ ಎಂದು ಹೇಳಲಾಯಿತು.

ತನ್ನ ದಾರಿಗೆ ಅಡ್ಡ ಬಂದನೆಂದು ಮಗನನ್ನೇ ಕೊಲ್ಲಿಸಿದ ಕ್ರೂರಿ ಎನ್ನುವ ಆರೋಪವೂ ಈಕೆಯ ಮೇಲಿದೆ. ಕುಟುಂಬಕ್ಕಿಂತ ರಾಜಕಾರಣವನ್ನೇ ಮುಖ್ಯವಾಗಿ ಪರಿಗಣಿಸಿದ ಈ ಮಹತ್ವಾಕಾಂಕ್ಷಿ ರಾಜಕಾರಣಿ ಪಡೆದದ್ದಕ್ಕಿಂತ ಕಳೆದುಕೊಂಡದ್ದೇ ಹೆಚ್ಚೆನ್ನುವವರ ಸಂಖ್ಯೆ ಹೆಚ್ಚಾಗಿಯೇ ಇದೆ. ತುರ್ತುಪರಿಸ್ಥಿತಿಯ ಕಳಂಕ ಈಕೆಯ ಸಾಧನೆಗಳನ್ನೆಲ್ಲ ತೊಳೆದುಬಿಟ್ಟಿತು ಎನ್ನುವುದು ಜನಜನಿತವಾದ ಅಭಿಪ್ರಾಯ. ಇಂದಿರಾ ಗಾಂಧಿಯ ಬಗ್ಗೆ ಬಂದಿರುವಷ್ಟು ಸಂಕೀರ್ಣವಾದ ಮತ್ತು ಪರಸ್ಪರ ಹೊಂದಲಾರದ ಸ್ವರೂಪದ ಅಭಿಪ್ರಾಯಗಳು ಬಹುಶಃ ಭಾರತದ ಇನ್ನಾವ ರಾಜಕಾರಣಿಯ ಮೇಲೂ ಬಂದಿಲ್ಲವೇನೋ.

ಇಷ್ಟಕ್ಕೂ ರಾಜಕಾರಣವೂ ಸೇರಿದಂತೆ ಸಾರ್ವಜನಿಕ ಬದುಕಿನ ಯಾವ ಹಾದಿ ಹೆಣ್ಣಿಗೆ ಸುಗಮ? ಸಹಜ? ಅಧಿಕೃತ? ಅವಳ ಎಲ್ಲ ಹೊರ ಪ್ರಯಾಣಗಳನ್ನೂ ಮೊದಲು ನೋಡುವುದೇ ಏರುಹುಬ್ಬಿನಿಂದ. ಆಮೇಲೆ ಒಪ್ಪಿಕೊಳ್ಳುವುದೇ ಅನಿವಾರ್ಯ ಅಪವಾದಗಳ ನೆಲೆಯಲ್ಲಿ. ಈ ಎಲ್ಲ ಸಂದರ್ಭಗಳಲ್ಲೂ ಅವಳು ಲಿಂಗ ರಾಜಕರಣದ ಎಲ್ಲ ಹುನ್ನಾರಗಳನ್ನೂ ಪ್ರತಿಕ್ಷಣವೂ ಎದುರಿಸಲೇ ಬೇಕು. ರಾಜಕಾರಣವಿರಲಿ, ಅಧಿಕಾರಶಾಹಿಯಿರಲಿ, ‘ಮೇಡಂ’ ಎಂದು ಕರೆಯುತ್ತಿರುವಾಗಲೂ ಅನೇಕ ಬಾರಿ ಅದರೊಳಗೊಂದು ಅಸಹಜತೆ, ದ್ವಂದ್ವ ಮತ್ತು ಪ್ರಶ್ನೆಗಳು ಇದ್ದೇ ಇರುತ್ತವೆ. ಈ ಅಸಹಜ ಸ್ಥಿತಿಯನ್ನು ಒಡೆಯಬಹುದಾದ ಅವಕಾಶಗಳಿಗೆ ನಿರಂತರವಾಗಿ ಕಾಯಲಾಗುತ್ತದೆ. ನಾಯಕಿಯನ್ನು ಕುರಿತ ಅತಿರೇಕದ ಪ್ರದರ್ಶನಗಳಲ್ಲೂ ಆಳವಾಗಿ ಈ ನಿರೀಕ್ಷೆಗಳು ಹುದುಗಿರುತ್ತವೆ.

ರಾಜಕಾರಣಕ್ಕೇ ನಿರ್ದಿಷ್ಟವಾಗಿ ಈ ವಿಷಯವನ್ನು ನೋಡುವುದಾದರೆ, ಸಮಕಾಲೀನ ರಾಜಕಾರಣದ ಯಾವ ಪ್ರಮುಖ ಮಹಿಳಾ ರಾಜಕಾರಣಿಯನ್ನು ನೋಡಿದಾಗಲೂ ಈ ಅಭಿಮಾನದ, ಹಿಂಬಾಲಕತ್ವದ ಚರಮಸೀಮೆಯನ್ನು ಮುಟ್ಟಿದಂತೆ ಕಾಣಿಸುವ ಸನ್ನಿವೇಶಗಳ ವಿಲಕ್ಷಣತೆಯ ಹಿಂದೆ ಕೆಲಸ ಮಾಡುತ್ತಿರುವುದು ಏನು? ಇತ್ತೀಚೆಗೆ ತಮಿಳುನಾಡಿನ ಮುಖ್ಯಮಂತ್ರಿಗಳ ಪ್ರಮಾಣವಚನ ಸಂದರ್ಭದಲ್ಲಿ ಆಕೆಯ ಸಹೋದ್ಯೋಗಿಗಳ ಭಂಗಿಗಳನ್ನು ನೋಡಿದ ಯಾರಿಗಾದರೂ ನಾವಿರುವುದು ಪ್ರಜಾಪ್ರಭುತ್ವದಲ್ಲೋ ಸರ್ವಾಧಿಕಾರಿ ಪ್ರಭುತ್ವದಲ್ಲೋ ಎನ್ನುವ ಪ್ರಶ್ನೆ ಏಳುತ್ತದೆ. ಇಂಥ ಇನ್ನೆಷ್ಟೋ ಪ್ರಸಂಗಗಳನ್ನು ನಾವು ಪಟ್ಟಿ ಮಾಡಬಹುದು.

ತನ್ನ ಸಹೋದ್ಯೋಗಿಗಳಿಂದ ಇಂಥ ಹನುಮನಿಷ್ಠೆಯನ್ನು ಮಹಿಳೆಯರು ಮಾತ್ರ ಬಯಸುತ್ತಾರೆ ಎಂದಲ್ಲ, ಆದರೆ ಮಹಿಳೆಯ ವಿಷಯದಲ್ಲಿ

ಕಂಡಷ್ಟು ಅಸಂಗತವಾಗಿ ಪುರುಷರ ವಿಷಯದಲ್ಲಿ ಕಾಣಿಸುವುದಿಲ್ಲ. ಇದನ್ನೇ ಇನ್ನೊಂದು ಕಡೆಯಿಂದ ನೋಡಿದರೆ, ಈ ಬಗೆಯ ನಡವಳಿಕೆ ಅಥವಾ ಹಿಂಬಾಲಕತೆಯನ್ನು ಹೆಣ್ಣು ಅನುಮೋದಿಸಲೇ ಬೇಕಾದ ಪರಿಸ್ಥಿತಿಯೂ ಇದ್ದೇ ಇದೆ. ಹೆಣ್ಣು ಎನ್ನುವುದೇ ಒಂದು ಮಿತಿಯೂ ಸವಾಲೂ ಆಗಿರುವ ಹೊತ್ತಿನಲ್ಲಿ ಸನ್ನಿವೇಶಗಳನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳಬೇಕಾದ ಅನಿವಾರ್ಯತೆ ಇತರರಿಗಿಂತ ತುಸು ಹೆಚ್ಚೇ ಹೆಣ್ಣಿಗೆ ಇರುತ್ತದೆಯೇನೋ. ಇದು ಆ ದೃಷ್ಟಿಕೋನವನ್ನು ಕುರಿತ ಸಮರ್ಥನೆ ಖಂಡಿತಾ ಅಲ್ಲ. ರಾಜಕಾರಣಿ ಹೆಣ್ಣಿನ ಸಂದರ್ಭಗಳನ್ನು ಅರ್ಥ ಮಾಡಿಕೊಳ್ಳುವ ಒಂದು ಪ್ರಯತ್ನ ಮಾತ್ರ.

ಇಂದಿರಾಗಾಂಧಿ ಒಬ್ಬ ಯಶಸ್ವಿ ರಾಜಕಾರಣಿಯೇ ಎನ್ನುವ ಪ್ರಶ್ನೆಗಿಂತ ಒಬ್ಬ ಯಶಸ್ವಿ ಮಹಿಳೆಯೇ ಎನ್ನುವ ಪ್ರಶ್ನೆಯೇ ಹೆಚ್ಚು ಮುಖ್ಯ ಎನ್ನುವವರೂ ಇದ್ದಾರೆ. ಅದೇನೇ ಇರಲಿ, ಸಾರ್ವಜನಿಕ ಬದುಕನ್ನು ಆರಿಸಿಕೊಳ್ಳುವ ಹೆಣ್ಣೊಬ್ಬಳು ಎದುರಿಸಬಹುದಾದ ಎಲ್ಲ ಸವಾಲುಗಳನ್ನೂ ಇಂದಿರಾ ಅವುಗಳ ಪರಾಕಾಷ್ಠೆಯ ನೆಲೆಯಲ್ಲಿ ಎದುರಿಸಿದರು. ಒಂದು ಆಯಾಮದಿಂದ ನೋಡಿದಾಗ ದುರಂತ ನಾಯಕಿಯ ಹಾಗೆ ಕಾಣುವ ಇಂದಿರಾ ಮತ್ತೊಂದು ನೆಲೆಯಿಂದ ಕಷ್ಟದ ಆಯ್ಕೆಗಳ ನಡುವೆ ಹೊಯ್ದಾಡಿದ ಅಪ್ರತಿಮ ಸ್ತ್ರೀಮಾದರಿಯಂತೆ ಕಾಣಿಸುತ್ತಾರೆ.

ಮೇಲ್ನೋಟಕ್ಕೆ ‘ಸವಲತ್ತಿನ ವರ್ಗ’ದ ಹೆಣ್ಣಾಗಿ ರಾಜಕಾರಣ, ಅಧಿಕಾರ ಎಲ್ಲವನ್ನೂ ಹಕ್ಕಿನಿಂದ ಪಡೆದಂತೆ ಕಾಣಿಸುವ ಈ ಇಂದಿರಾ ನಿಜದಲ್ಲಿ ಎಲ್ಲ ಸಾರ್ವಜನಿಕ ವ್ಯಕ್ತಿಗಳಷ್ಟೇ ಕಷ್ಟಪಟ್ಟವರು. ರಾಜಕಾರಣಕ್ಕೆ ಬೇಕಾದ ವಿಶ್ವಾಸಾರ್ಹತೆಯನ್ನು ತನ್ನ ವ್ಯಕ್ತಿತ್ವದ ಮೂಲದಿಂದಲೇ ಪಡೆದುಕೊಂಡವರು. ಅದಕ್ಕೆ ಬೇಕಾದ ಎಲ್ಲ ಹೋಮ್ ವರ್ಕ್ ಅನ್ನೂ ಸರಿಯಾಗಿಯೇ ಮಾಡಿಕೊಂಡಿದ್ದರಿಂದಲೇ ಆ ಮಟ್ಟದ ಯಶಸ್ಸನ್ನು ಪಡೆಯಲು ಇಂದಿರಾ ಅವರಿಗೆ ಸಾಧ್ಯವಾಯಿತು. ಆದರೆ ರಾಜಕಾರಣ ಇಂದಿರಾ ಅವರ ಸಹಜ ಆಯ್ಕೆಯಾಗಿತ್ತೇ ಎನ್ನುವುದೂ ಒಂದು ಮುಖ್ಯ ಪ್ರಶ್ನೆಯೇ. ತಂದೆಯ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ತನ್ನ ವೃತ್ತಿಜೀವನವನ್ನು ಆರಂಭಿಸುವಾಗ ಆಕೆಗೆ ಈ ಬಗೆಯ ಮಹತ್ವಾಕಾಂಕ್ಷೆಯಿತ್ತೇ? ಉತ್ತರ ಕಠಿಣ. ಇತ್ತು ಮತ್ತು ಇಲ್ಲ ಎನ್ನುವುದು ಅನಿವಾರ್ಯ. ಅಥವಾ ಇದನ್ನು ಆಯ್ಕೆಯ ದ್ವಂದ್ವ ಎಂದೂ ನೋಡಬಹುದು. ಫಿರೋಜ್ ಅವರ ಜೊತೆಗೆ ದಾಂಪತ್ಯವನ್ನು ಆರಂಭಿಸುವಾಗಲೂ ಈ ದ್ವಂದ್ವ ಆಕೆಯಲ್ಲಿತ್ತು. ಗೃಹಸ್ಥ ಧರ್ಮದ ಗಂಧವನ್ನು ಮಾತ್ರ ತೇಯುವುದೋ ರಾಜಕಾರಣದ ಧರ್ಮವನ್ನೂ ಪಾಲಿಸುವುದೋ ಎನ್ನುವ ಸವಾಲುಗಳು ಆಕೆಯಲ್ಲಿದ್ದವು ಎನ್ನುವುದಕ್ಕೆ ಆ ಸಂದರ್ಭದ ಅನೇಕ ಆಧಾರಗಳು ನಮ್ಮೆದುರಿಗಿವೆ.

ಸ್ವಾತಂತ್ರ್ಯ ಹೋರಾಟದ ಹಿನ್ನೆಲೆ, ಅಧಿಕಾರದ ವ್ಯಾಪ್ತಿ, ಅನೂಹ್ಯವಾದ ಜನಪ್ರಿಯತೆ, ತನಗಾಗಿಯೇ ಎನ್ನುವಂತೆ ತನ್ನ ಪರವಾಗಿ ತಿರುಗಿದ ಸನ್ನಿವೇಶಗಳು ಇಂದಿರಾ ಅವರಿಗೆ ರಾಜಕಾರಣದ ಆಯ್ಕೆಯಲ್ಲಿ ನೆರವಾಗಿದ್ದಿರಬೇಕು. ಸಾಮಾನ್ಯವಾಗಿ ಪುರುಷ ರಾಜಕಾರಣಿಗಳಿಗೆ ಒಮ್ಮೆ ಈ ಆಯ್ಕೆ ಸ್ಪಷ್ಟವಾದ ಮೇಲೆ ಅದನ್ನು ಮರುಪರಿಶೀಲಿಸುವ ಅಗತ್ಯ ಬೀಳುವುದಿಲ್ಲ. ಆದರೆ ಇಂದಿರಾ ಅವರೂ ಸೇರಿದಂತೆ ಮಹಿಳೆಯರಿಗೆ ಇದು ಪ್ರತಿನಿತ್ಯದ ಅಗ್ನಿದಿವ್ಯ.

ಜಗತ್ತಿನ ಅಪೂರ್ವ ಮದುವೆಗಳಲ್ಲಿ ಒಂದು ಎನಿಸುವಂತೆ ಗಾಂಧಿಯ ಸಾರಥ್ಯದಲ್ಲಿ ನಡೆದ ಈ ಮದುವೆ ಭಾರತದ ನಿರ್ಣಾಯಕ ದಾಂಪತ್ಯಗಳಲ್ಲಿ ಒಂದಾಗಬಹುದು ಎನ್ನುವ ನಿರೀಕ್ಷೆಯನ್ನೂ ಹುಟ್ಟುಹಾಕಿತು. ಆದರೆ ಸೋತ ಈ ದಾಂಪತ್ಯಕ್ಕೆ ಹೊಣೆ ಯಾರು? ಇಂದಿರಾ ಅವರ ಮಹತ್ವಾಕಾಂಕ್ಷೆಯೇ ಇದಕ್ಕೆ ಕಾರಣ ಎನ್ನುವ ಏಕಪಕ್ಷೀಯವಾದ ತೀರ್ಮಾನವನ್ನು ಒಪ್ಪಲಾಗದು. ರಾಜಿಗೆ ಹೆಣ್ಣು ಹತ್ತು ಹೆಜ್ಜೆ ಮುಂದೆ ಬಂದಾಗಲೂ ಒಂದು ಹೆಜ್ಜೆ ಇಡುವುದೂ ಗಂಡಿಗೆ ಬಲುಕಷ್ಟ. ಅದರಲ್ಲೂ ಸಾರ್ವಜನಿಕ ಅಧಿಕಾರದ ವಿಷಯ ಬಂದಾಗಲಂತೂ ಇದು ಇನ್ನೂ ಕಷ್ಟ. ಈ ಕಷ್ಟವನ್ನು ಇಂದಿರಾ ಮಟ್ಟಿಗೆ ಹೆಚ್ಚಿಸಿದ್ದು ಅವರಿಬ್ಬರ ಕ್ಷೇತ್ರವೂ ಒಂದೇ ಆಗಿದ್ದು.

ತನ್ನೊಳಗಿನ ಈ ಬಿಕ್ಕಟ್ಟುಗಳನ್ನು ಹೊರಲೋಕದೊಂದಿಗೆ ಚರ್ಚಿಸುವ ಸಾಧ್ಯತೆಯೂ ರಾಜಕಾರಣದಲ್ಲಿರುವ ಮಹಿಳೆಯರಿಗೆ ಇರುವುದಿಲ್ಲ. ಇದನ್ನೇ ಕಾಯುತ್ತಿರುವವರು ಅವರ ವೃತ್ತಿಜೀವನವನ್ನೇ ಮುಳುಗಿಸುತ್ತಾರೆ. ಇಷ್ಟಕ್ಕೂ ರಾಜಕಾರಣವೆನ್ನುವುದು ಹುಲಿ ಸವಾರಿ ಇದ್ದಂತೆ. ಏರುವುದು ಕಷ್ಟ, ಇಳಿಯುವುದು ಸಾಧ್ಯವೇ ಇಲ್ಲ ಎನ್ನುವಂತೆ. ಈ ಅರಿವಿನಿಂದಲೇ ಇಂದಿರಾ ತನ್ನೊಳಗಿನ ತಲ್ಲಣಗಳನ್ನು ಆದಷ್ಟೂ ಮುಚ್ಚಿಡಲು ಯತ್ನಿಸಿದರು. ಕೋಮಲವಾದ ಆಕೆಯ ಮುಖಭಾವದಲ್ಲಿ ಕೊನೆಕೊನೆಗೆ ಕಾಣಿಸಿಕೊಂಡ ಸೆಡವು ಇದರ ಸೂಚನೆ.

ಯಾರು ಏನೇ ಹೇಳಲಿ– ಈ ದೇಶದಲ್ಲಿ ಪ್ರಜಾಪ್ರಭುತ್ವ ಅದರ ಮೂಲಶಕ್ತಿಯಲ್ಲಿ ಸ್ಥಾಪಿತವಾಗಲು ಬೇಕಾದ ಕೆಲವು ಘನವಾದ, ಧೀರವಾದ ತೀರ್ಮಾನಗಳನ್ನು ಇಂದಿರಾ ತೆಗೆದುಕೊಂಡರು. ತುರ್ತುಪರಿಸ್ಥಿತಿಯ ಹಿನ್ನೆಲೆಯಲ್ಲಿ ಆಕೆ ಪ್ರಜಾಪ್ರಭುತ್ವವಾದಿಯೇ ಅಲ್ಲ ಎನ್ನುವವರೂ ಒಪ್ಪಲೇಬೇಕಾದ ಕೆಲವು ಮಹತ್ವದ ನಿರ್ಣಯಗಳು ಈ ದೇಶದ ಸಾಮಾಜಿಕ ಮತ್ತು ಆರ್ಥಿಕ ಚಹರೆಯನ್ನೇ ಮರು ರೂಪಿಸುವಲ್ಲಿ ವಹಿಸಿದ ಪಾತ್ರ ಆಧುನಿಕ ಭಾರತದ ರೂಪುಗೊಳ್ಳುವಿಕೆಯಲ್ಲಿ ಆತ್ಯಂತಿಕವಾದುದು ಎನ್ನುವುದನ್ನು ಈಕೆಯ ಕಟು ಟೀಕಾಕಾರರೂ ಮರುಮಾತಿಲ್ಲದೆ ಒಪ್ಪುತ್ತಾರೆ.

ಬ್ಯಾಂಕುಗಳ ರಾಷ್ಟ್ರೀಕರಣ ಅಂಥ ಗಟ್ಟಿ ತೀರ್ಮಾನಗಳಲ್ಲಿ ಒಂದು. ಎಲ್ಲ ಬಗೆಯ ರಾಷ್ಟ್ರೀಯ, ಆರ್ಥಿಕ ಮತ್ತು ವಾಣಿಜ್ಯ ಯೋಜನೆಗಳು ಮತ್ತು ಸಂಗತಿಗಳಿಗೆ ಬ್ಯಾಂಕುಗಳು ಮೂಲವಾಹಕಗಳು. ಈ ಮೂಲವಾಹಕಗಳನ್ನು ಸೃಷ್ಟಿ ಮಾಡಿದ್ದೇ ಇಂದಿರಾ ಅವರ ರಾಷ್ಟ್ರೀಕರಣ. ಉಳ್ಳವರ ಏಜೆಂಟುಗಳಾಗಿದ್ದ ಬ್ಯಾಂಕುಗಳನ್ನು ಸಮುದಾಯದ ಸಂಸ್ಥೆಗಳಾಗಿ, ಅಭಿವೃದ್ಧಿಯ ಮತ್ತು ಬದಲಾವಣೆಯ ಕಾರ್ಯನಿರ್ವಾಹಕರ ಮಹತ್ವದ ಪಾತ್ರ ವಹಿಸುವಂತೆ ಮಾಡಿದ್ದು ಈ ತೀರ್ಮಾನ. ಆಥಿಕ ತಜ್ಞರು ಇದರ ಬಗ್ಗೆ ಸಂಪುಟಗಟ್ಟಲೆ ಬರೆದಿದ್ದಾರೆ. ಪ್ರಧಾನಮಂತ್ರಿಯಾಗಿ ಆಕೆ ತೆಗೆದುಕೊಂಡ ಒಂದು ತೀರ್ಮಾನ ಈ ದೇಶದ ಆಗುಹೋಗುಗಳ ಗತಿಯನ್ನೇ ಬದಲಾಯಿಸಿತು. ಈ ದೇಶದ ವರ್ಗ ಸಂಘರ್ಷಕ್ಕೆ ಒಂದು ಮದ್ದು ಎನ್ನುವಂತೆಯೂ ಇಂದಿರಾ ಇದನ್ನು ಜಾರಿಗೆ ತಂದರು.

ರಾಜಧನವನ್ನು ನಿಲ್ಲಿಸಿದ್ದು ಇನ್ನೊಂದು ಮಹತ್ವದ ನಿರ್ಧಾರ. ಕೋಟಿಗಟ್ಟಲೆ ಹಣವನ್ನು ಅರಸೊತ್ತಿಗೆಯ ಬಿಳಿಯಾನೆಗಳನ್ನು ಸಾಕಲು ಬಳಸಲಾಗುತ್ತಿತ್ತು. ಇದೊಂದು ಕಷ್ಟದ ನಿರ್ಧಾರವೇ ಆಗಿತ್ತು. ಅರಸೊತ್ತಿಗೆಗಳ ಜೊತೆ ಭಾರತೀಯ ಸಮುದಾಯಕ್ಕಿರುವ ಭಾವನಾತ್ಮಕ ಸಂಬಂಧ ಒಂದು ಕಡೆ, ಮತದಾರರ, ಜನಸಾಮಾನ್ಯರ ಹಣದ ಬಗೆಗಿನ ಉತ್ತರದಾಯಿತ್ವದ ಪ್ರಶ್ನೆ ಇನ್ನೊಂದು ಕಡೆ. ನಿಜವೆಂದರೆ ಈ ನಿರ್ಧಾರದ ಮೂಲಕ ಇಂದಿರಾ ಜನಸಾಮಾನ್ಯರ ನಿಲುವನ್ನೇ ಬದಲಿಸಿದರು.

ಸೈನ್ಯದಲ್ಲಿ ಮುಲ್ಲಾಗಳನ್ನು ಸೇರಿಸಿಕೊಳ್ಳುವ ನಿರ್ಧಾರವೂ ಇಷ್ಟೇ ಕ್ರಾಂತಿಕಾರಿಯಾದದ್ದು. ಭಾರತವನ್ನು ಸೆಕ್ಯುಲರ್ ಎಂದು ಘೋಷಿಸುವ ಮಾತ್ರವಲ್ಲ– ಅದನ್ನು ಜಾರಿಗೆ ತರುವ ಆಶಯದ ಈ ಪ್ರಯತ್ನದಲ್ಲಿ ಅನೇಕರ ವಿರೋಧವನ್ನು ಎದುರಿಸಿಯೂ ಈ ಬಗೆಯ ದೇಶ ಹಿತದ, ದೂರದರ್ಶಿತ್ವದ ತೀರ್ಮಾನಗಳನ್ನು ತೆಗೆದುಕೊಳ್ಳುವುದು ಆಕೆಗೆ ಸಾಧ್ಯವಾಯಿತು.

ನೆಹರೂ ಕಾಲದಲ್ಲಿಯೂ ಸಾಧ್ಯವಾಗದ ಪ್ರಮಾಣದ ಯಶಸ್ಸನ್ನು ಇಂದಿರಾ ಅವರ ವಿದೇಶಾಂಗ ನೀತಿ ಪಡೆಯಿತು. ವಿದೇಶಾಂಗ ನೀತಿಗಳ ಮಟ್ಟಿಗೆ ಈಕೆಯದು ಚಾಣಕ್ಯ ನೀತಿಯೇ ಎನ್ನುವುದನ್ನು ಆ ಕಾಲದಲ್ಲಿ ಸತ್ಯ ಮತ್ತು ವ್ಯಂಗ್ಯ ಎರಡೂ ನೆಲೆಯಲ್ಲಿ ಮತ್ತೆ ಮತ್ತೆ ಹೇಳಲಾಗುತ್ತಿತ್ತು. ಇತ್ತೀಚೆಗೆ ವಿಜ್ಞಾನಿಯೊಬ್ಬರು ಇಂದಿರಾ ಅವರೊಂದಿಗಿನ ಅವರ ಅನುಭವವನ್ನು ಸಭೆಯೊಂದರಲ್ಲಿ ಹಂಚಿಕೊಂಡರು.

ಉಪಗ್ರಹವನ್ನು ಬಳಸಿ ಸಾಧಿಸಬಹುದಾದ ಅಭಿವೃದ್ಧಿಯನ್ನು ಕುರಿತ ಸಭೆ ಅದು. ಇಂದಿರಾ ಅವರಿಗೆ ಅದಕ್ಕೆ ಬೇಕಾದ ಸೌಲಭ್ಯಗಳ ಬಗ್ಗೆ ವಿಜ್ಞಾನಿಗಳು ವಿವರಿಸುತ್ತಿದ್ದರು. ತಾಳ್ಮೆಯಿಂದ ಅದನ್ನೆಲ್ಲ ಕೇಳಿದ ಇಂದಿರಾ, ‘ಇದನ್ನೆಲ್ಲ ಈಗಲೇ ಒದಗಿಸೋಣವಂತೆ. ನೀವು ಮುಗಿಸುವುದು ಯಾವಾಗ ಅದನ್ನು ನಿಖರವಾಗಿ ಹೇಳಿ ಮತ್ತು ಅದಕ್ಕೆ ಬದ್ಧರಾಗಿರಿ’ ಎಂದರಂತೆ. ನಮ್ಮ ದೇಶದ ವಿಜ್ಞಾನಿಗಳು ರೈತರಿಗೆ ಉಪಯುಕ್ತವಾಗುವ ಸಂಶೋಧನೆಗಳನ್ನು ಕೈಗೊಳ್ಳುವುದಕ್ಕೆ ನನ್ನ ಮೊದಲ ಆದ್ಯತೆ ಎನ್ನುವ ಆಕೆಯ ಮಾತುಗಳನ್ನೂ ಅವರು ನೆನಪಿಸಿಕೊಂಡರು. ಸ್ವಾತಂತ್ರ್ಯೋತ್ತರ ಭಾರತದ ಪ್ರಧಾನ ಮಂತ್ರಿಗಳಲ್ಲೆಲ್ಲ ಈ ದೇಶದ ಸಾಂಸ್ಕೃತಿಕ ಪರಂಪರೆಯ ಬಗ್ಗೆ ದಟ್ಟ ತಿಳಿವಳಿಕೆ ಇದ್ದದ್ದು ಇಂದಿರಾಗೆ. ಸಾಂಸ್ಕೃತಿಕ ನೀತಿ ಎನ್ನುವುದನ್ನು ಜಾರಿಗೆ ತಂದ ಕೀರ್ತಿಯೂ ಇಂದಿರಾಗೆ ಸಲ್ಲಬೇಕು.

ತುರ್ತುಪರಿಸ್ಥಿಯ ಬಗ್ಗೆ, ಅದರ ಕರಾಳ ಸ್ವರೂಪದ ಬಗ್ಗೆ ಯಾರಿಗೂ ಸಹಮತವಿರುವುದು ಸಾಧ್ಯವಿಲ್ಲ. ಹುಲಿ ಸವಾರಿಯ ದುರಂತ ಸಾಧ್ಯತೆಯಂತೆಯೇ ಇದು ಕಾಣಿಸುತ್ತದೆ. ಧರ್ಮ ಅಫೀಮು ಎನ್ನಲಾಗುತ್ತದೆ, ಅಧಿಕಾರದ ಮದ, ದರ್ಪ ಅದನ್ನೂ ಮೀರಿದ್ದು. ಹುಲಿ ಸವಾರಿಯಲ್ಲಿ ಇಳಿಯುವ ಪ್ರಶ್ನೆಯೇ ಇಲ್ಲವಷ್ಟೇ. ಅದು ಮಾಡು ಇಲ್ಲವೇ ಮಡಿ ಎನ್ನುವುದರ ಸಾಕಾರ ರೂಪ. ರಕ್ತದ ರುಚಿ ಎನ್ನಲಾಗುತ್ತದೆಯಲ್ಲ, ಅದಕ್ಕಿಂತ ಅಧಿಕಾರದ ರುಚಿ ಎಲ್ಲ ರುಚಿಗಳಾಚೆಗಿನದು ಎನ್ನುವುದನ್ನು ಈ ಸಂದರ್ಭ ಸ್ಥಾಪಿಸಿತು. ಆದರೆ ಒಂದು ವಿಪರ್ಯಾಸದ ಬಗ್ಗೆ ಮಾತ್ರ ಇಲ್ಲಿ ಹೇಳಲೇಬೇಕು. ತುರ್ತು ಪರಿಸ್ಥಿತಿ ಎಂದು ಅಧಿಕೃತವಾಗಿ ಘೋಷಿಸದೆಯೂ ತುರ್ತು ಸಂದರ್ಭಗಳನ್ನು ಈ ದೇಶ ಕಂಡಿದೆ. ತನ್ನ ವಿವೇಕ, ಅಭಿರುಚಿ, ದಕ್ಷತೆ, ನಾಯಕತ್ವ, ದೂರದರ್ಶಿತ್ವ ಎಲ್ಲದರಲ್ಲೂ ತನ್ನತನದ ಛಾಪನ್ನು ಮೂಡಿಸಿದ ಈಕೆ ಇಂಥ ತೀರ್ಮಾನವನ್ನು ತೆಗೆದುಕೊಳ್ಳುವಷ್ಟು ವಿವೇಚನೆಯನ್ನು ಕಳೆದುಕೊಂಡದ್ದೇಕೆ? ನಾಗಚಂದ್ರ ರಾವಣನನ್ನು ಕುರಿತು ಹೇಳಿದ ಮಾತುಗಳು ನೆನಪಾಗುತ್ತವೆ.

‘‘ಅಬ್ದಿಯುಮೊರ್ಮೆ ಕಾಲವಶದಿಂ ಮೇರೆಯಂ ದಾಂಟದೇ’’. ಇಂದಿರಾ ವಿರೋಧಿಗಳಿಗೆ ಈ ಮಾತು ಚೋದ್ಯದ್ದಾಗಿ ಕಾಣುತ್ತದೆ ನಿಜ. ಆದರೆ ಆಕೆಯ ಸಾಧನೆಯ ಹಲವು ಮುಖಗಳನ್ನು ಕಂಡಾಗ ಈ ಮಾತು ಆಕೆಗೆ ನ್ಯಾಯಬದ್ಧವಾಗಿಯೇ ಒಪ್ಪುತ್ತದೆ.

ಸಂಜಯಗಾಂಧಿಯಿಂದ, ಆತನ ಅಂಧಾದರ್ಬಾರಿನಿಂದ, ಆತನ ಬಗೆಗಿನ ಪುತ್ರಮೋಹದಿಂದ ಇಂದಿರಾ ವ್ಯಕ್ತಿತ್ವದ ಘನತೆ ಮುಕ್ಕಾಯಿತು. ಆದರೆ ಈ ಕಾರಣಕ್ಕಾಗಿ ಆಕೆಯ ಕೊಡುಗೆ ಮತ್ತು ಸಾಧನೆಗಳನ್ನು ನಾವು ನಿರಾಕರಿಸಲಾಗುವುದಿಲ್ಲ. ಇದನ್ನೆಲ್ಲ ಹೇಳುತ್ತಿರುವಾಗಲೆ ಪಂಜಾಬ್‌ನ ಉಗ್ರಗಾಮಿಗಳನ್ನು ಆಕೆ ಎದುರಿಸಿದ್ದು ನೆನಪಾಗುತ್ತದೆ. ಆ ತೀರ್ಮಾನವನ್ನು ತೆಗೆದುಕೊಳ್ಳುವಾಗಲೇ ಆಕೆಗೆ ತನ್ನ ಸಾವಿನ ಬಗ್ಗೆಯೂ ತಿಳಿದಿತ್ತು. ಭಿಂದ್ರನ್ ವಾಲಾನನ್ನು ಬೆಳೆಸಿದ್ದು ಇಂದಿರಾ ಗಾಂಧಿಯೇ ಎನ್ನುವ ಆರೋಪಗಳ ಆಚೆಗೂ ಈ ಸಮಸ್ಯೆಯನ್ನು ಪರಿಹರಿಸಲು ಆಕೆ ತೆಗೆದುಕೊಂಡ ಈ ತೀರ್ಮಾನ ದೇಶದ ಹಿತ ಮತ್ತು ಭಾರತದ ಒಕ್ಕೂಟವನ್ನು ಕುರಿತ ಆಕೆಯ ಬದ್ಧತೆಯನ್ನು ಖಂಡಿತವಾಗಿಯೂ ಹೇಳುತ್ತದೆ. ಯುದ್ಧದ ಸನ್ನಿವೇಶಗಳನ್ನು ಇಂದಿರಾ ಎದುರಿಸಿದ್ದನ್ನು ನೋಡಿದರೂ ಈ ಮಾತು ಸತ್ಯವೇ.

ಎರಡು ಸನ್ನಿವೇಶಗಳಿಂದ ಇದನ್ನು ಕೊನೆಗೊಳಿಸಬಹುದು. ಆಕೆಯ ಪ್ರಸಿದ್ಧವಾದ ಕೊನೆಯ ಭಾಷಣ ‘‘ನನ್ನ ಒಂದೊಂದು ಹನಿ ರಕ್ತವನ್ನೂ ಈ ದೇಶಕ್ಕಾಗಿ ಮುಡಿಪು’’. ಅಪ್ಪಟ ಜನಪ್ರಿಯ ರಾಜಕಾರಣಿಯ ಮಾತಿನಂತೆ ಕಾಣುವ ಈ ಹೇಳಿಕೆಯ ದೃಶ್ಯವನ್ನು ನೋಡುತ್ತಿದ್ದಾಗ ಆಕೆಯ ನಾಟಕೀಯತೆಯ ಆಚೆಗೂ ಆ ಮಾತಿನ ಪ್ರಾಮಾಣಿಕತೆ ನಮ್ಮ ಅನುಭವಕ್ಕೆ ಬರುತ್ತದೆ.

ಇಂದಿರಾ ತೀರಿಕೊಂಡಾಗ, ಆಕೆಯ ಡೈರಿಯೊಂದರಲ್ಲಿ ಯಾವುದೋ ಹಲ್ವಾದ ರೆಸಿಪಿಯನ್ನು ಆಕೆ ಬರೆದುಕೊಂಡ ವಿವರಗಳು ಸಿಕ್ಕವು. ಪುಪುಲ್ ಜಯಕರ್ ಬಳಿ ಮಾತನಾಡುವಾಗಲೆಲ್ಲ ತನ್ನ ಮಕ್ಕಳ ಊಟದ ಆಯ್ಕೆಗಳ ಬಗ್ಗೆ, ಅವರ ವಿದ್ಯಾಭ್ಯಾಸದ ಬಗ್ಗೆ, ಉಡುಗೆ ತೊಡುಗೆಗಳ ಬಗ್ಗೆ ಸದಾ ಮಾತನಾದುತ್ತಿದ್ದುದನ್ನು ತಮ್ಮ ಪುಸ್ತಕದಲ್ಲಿ ನೆನಪಿಸಿಕೊಂಡಿದ್ದಾರೆ.

‘ಆಂಧಿ’ ಸಿನೆಮಾ ಬಂದಾಗ ಅದು ಇಂದಿರಾ ಬದುಕನ್ನು ಆಧರಿಸಿದ್ದು ಎನ್ನುವ ಸಕಾರಣವಾದ ಚರ್ಚೆಗಳು ನಡೆದವು. ಅದು ಆಕೆಯ ಬದುಕನ್ನು ಆಧರಿಸಿದ್ದು ಎನ್ನುವುದರಲ್ಲಿ ಅನುಮಾನಗಳೇನೂ ಇಲ್ಲ. ರಾಜಕಾರಣ ಮತ್ತು ವ್ಯಕ್ತಿಗತ ಬದುಕಿನ ಇಂದಿರಾ ಪ್ರಯಾಣ ನಿರೀಕ್ಷಿತ ಸಂಯೋಜನೆಯ ಸ್ಥಿತಿಯೊಂದನ್ನು ಪಡೆಯಲಿಲ್ಲ ನಿಜ. ಆದರೆ ಈ ಕಷ್ಟದ ಆಯ್ಕೆ ಮತ್ತು ಸಾಂಗತ್ಯದ ಪ್ರಯತ್ನದಲ್ಲಿ ಇಂದಿರಾ ಒಳಗೇ, ತನ್ನಲ್ಲಿ ತಾನೇ ಎದುರಿಸಿದ ತಲ್ಲಣಗಳು, ನೋವುಗಳು, ನಿರಾಸೆಗಳು ಎಲ್ಲೂ ದಾಖಲಾಗಲೇ ಇಲ್ಲ. ರಾಜಕಾರಣಿಯಾಗಿ ಆಕೆ ಮಾಡಿರಬಹುದಾದ ತಪ್ಪುಗಳು ಯಾವ ರಾಜಕಾರಣಿಯೂ ಮಾಡಬಹುದಾದ ತಪ್ಪುಗಳು. ಆಕೆಯ ಸಾಧನೆಗಳು ಮಾತ್ರ ಇಂದಿರಾರಂಥ ಅಪಾರ ದಿಟ್ಟತೆಯ, ಮುನ್ನೋಟದ ಮತ್ತು ಬದ್ಧ ರಾಜಕಾರಣಿಯಿಂದ ಮಾತ್ರ ಸಾಧ್ಯ. ಭಾರತದ ಶಕ್ತಿಯಷ್ಟೇ ಅದರ ಸೌಂದರ್ಯವನ್ನೂ ಜಗತ್ತಿಗೆ ಪರಿಚಯಿಸಿದ ಮಹಿಳೆ ಇಂದಿರಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT