ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಬ್ಬಮ್ಮ ಸೋಲುವುದಿಲ್ಲ...

Last Updated 16 ಜೂನ್ 2018, 9:11 IST
ಅಕ್ಷರ ಗಾತ್ರ

ಪ್ರತಿರೋಧದ ಮಾದರಿಗಳಲ್ಲೆಲ್ಲ ಅತ್ಯಂತ ಸಂಕೀರ್ಣವಾದ ಬಹುಮುಖಿಯಾದ ಮಾದರಿಯೆಂದರೆ ಹೆಣ್ಣಿನದೇ. ಇದರ ಸಂಕೀರ್ಣತೆಯ ಒಂದು ಪ್ರಧಾನ ನೆಲೆಯೆಂದರೆ ಅಮೂರ್ತತೆಯದ್ದು. ಕಂಡೂ ಕಾಣದ, ಕಾಣುತ್ತಲೂ ಇರುವ ಕಾಣದೆಯೂ ಇರುವ ವಿಲಕ್ಷಣ ವಿಪರ್ಯಾಸದ ಚಹರೆಗಳನ್ನು ಹೆಣ್ಣಿನ ಪ್ರತಿರೋಧದಲ್ಲಿ ಮಾತ್ರ ನೋಡಲು ಸಾಧ್ಯ.

ಹೆಣ್ಣಿನ ಪ್ರತಿಭಟನೆಗಳನ್ನು ದಟ್ಟ ತಿರಸ್ಕಾರದಲ್ಲಿ ಪಕ್ಕಕ್ಕೆ ಸರಿಸುವ ಮೂಲಕವೇ ಅವುಗಳ ತೀವ್ರತೆ, ಅನಿವಾರ್ಯತೆಗಳನ್ನು ಪ್ರಶ್ನಿಸುವ ಗಂಡು ಸಮಾಜವೊಂದು ಕಡೆಯಾದರೆ ಪ್ರತಿರೋಧದ  ದಿಕ್ಕುದೆಸೆಗಳನ್ನು ನಿರ್ಧರಿಸುವಲ್ಲಿ ಹೆಣ್ಣು ಎದುರಿಸುವ ಸವಾಲುಗಳ ಸಾಂದ್ರತೆ ಇನ್ನೊಂದು ಕಡೆ. ಈ ಎರಡಕ್ಕಿಂತ ಹೆಚ್ಚು ಮುಖ್ಯವಾದ ಇನ್ನೊಂದು ಸಂಗತಿ ಪಲ್ಲಟಗಳ ಛದ್ಮವೇಷಗಳದ್ದು. ಈ ಮೂರರ ಸಂಘರ್ಷದಲ್ಲಿ ಹೆಣ್ಣಿನ ಪ್ರತಿರೋಧದ ಚಹರೆ ಇತರ ವಲಯಗಳ ಪ್ರತಿರೋಧಗಳಿಗಿಂತ ಸಹಜವಾಗಿಯೇ ಹಲವು ಪದರಗಳ ವಿನ್ಯಾಸವನ್ನು ಪಡೆಯುತ್ತದೆ.

ಯಾವುದೇ ಪ್ರತಿರೋಧವೂ ಆಳದಲ್ಲಿ ಎರಡೂ ಪಕ್ಷದವರಿಗೆ ಅರಿವಿನ ಪ್ರಕ್ರಿಯೆಯೇ ಆಗಿರುತ್ತದೆ ಮತ್ತು ಆಗಿರಬೇಕು ಎನ್ನುವುದು ಆಶಯವೂ ಹೌದು ವಾಸ್ತವವೂ ಹೌದು. ಆದರೆ ಈ ಇಡೀ ಪ್ರಕ್ರಿಯೆಗೆ ಇನ್ನೊಂದು ಮುಖವೂ ಅನಿವಾರ್ಯವಾಗಿ ಇರುತ್ತದೆ. ಬದಲಾವಣೆಯು ಅಧಿಕಾರ ಸಂಬಂಧಗಳನ್ನು ಮೂಲಭೂತವಾಗಿ ಪಲ್ಲಟಿಸುತ್ತದೆ ಎನ್ನುವ ಹೊತ್ತಿನಲ್ಲಿ, ಅದನ್ನು ಉಳಿಸಿಕೊಳ್ಳಲು ನಡೆಸುವ ಪ್ರಯತ್ನಗಳನ್ನು ಹೊಸದಾಗಿ ಎಂಬಂತೆ ಹುಟ್ಟುವ ಅರಿವು ನಿಗ್ರಹಿಸುವುದಕ್ಕೆ ಬದಲು ತೀವ್ರಗೊಳಿಸುತ್ತದೆ. 

ಸ್ವಾತಂತ್ರ್ಯ ಮತ್ತು ಸಮಾನತೆಗಾಗಿ ನಡೆಸುವ ಎಲ್ಲ ಹೋರಾಟಗಳನ್ನೂ ನಾಗರಿಕತೆಯ ಅತ್ಯಂತ ರೋಚಕ, ಸ್ಪೂರ್ತಿದಾಯಕ ಹೋರಾಟಗಳೆಂದು ಹೇಳಲಾಗುತ್ತದೆ. ಈ ಎಲ್ಲ ಹೋರಾಟಗಳನ್ನೂ ದಮನಿಸುವ ಪ್ರಯತ್ನಗಳೂ ಅಷ್ಟೇ ತೀವ್ರವಾಗಿ ನಡೆಯುತ್ತವೆ. ಆದರೆ ಹೆಣ್ಣಿನ ಸ್ವಾಯತ್ತತೆ ಮತ್ತು ವ್ಯಕ್ತಿತ್ವದ ಅಧಿಕೃತತೆಗಾಗಿ ನಡೆಸುವ ಹೋರಾಟಗಳನ್ನು ದಮನಿಸಲು ಏನೆಲ್ಲಾ ಪ್ರಯತ್ನಗಳನ್ನು ನಡೆಸಲಾಗುತ್ತದೆ ಎನ್ನುವುದಕ್ಕೆ ಸಾರ್ವತ್ರಿಕವೆನ್ನಬಹುದಾದ ಆಯಾಮಗಳೇ ಇವೆ. ‘ಇನ್ನು ನಾರಿಯರು ಹುಟ್ಟದೇ ಇರಲಿ ಎನ್ನವೊಲು ಭಂಗಿತರು ಭುವನದೊಳಗೆ’ ಎನ್ನುವ ಉದ್ಗಾರ ದೇಶಕಾಲಾತೀತ ವಾದದ್ದು ಎನಿಸುವುದು ಯಾಕೆ?

ಕುಮಾರವ್ಯಾಸನ ದ್ರೌಪದಿಯ ಈ ಮಾತು ವ್ಯಗ್ರತೆಯದೇ? ವಿಷಾದದ್ದೆ? ಸ್ವಮರುಕದ್ದೆ? ಪ್ರತಿರೋಧದ್ದೆ? ಹೆಣ್ಣನ್ನು ಭಂಗಿಸುವ ಅದೆಷ್ಟು ಸನ್ನಿವೇಶಗಳನ್ನು ಕೊನೆಯಿಲ್ಲದಂತೆ ರಚಿಸಲಾಗುತ್ತದೆ? ತನ್ನ ಹಕ್ಕೆಂದೋ, ದುರ್ದಮ್ಯ ಸೆಳೆತದಲ್ಲೋ ಹೆಣ್ಣು ಬದುಕಿನೊಂದಿಗೆ ಬೆಳೆಸುವ ಸಹಜ ಸಖ್ಯವು ಅವಳನ್ನು ನುಂಗಿ ನೊಣೆಯುವ ಸಂದರ್ಭಗಳು ಅಸಂಖ್ಯಾತವೆನ್ನುವಂತೆ ನಮ್ಮೆದುರಿಗೆ ಘಟಿಸುತ್ತಲೇ ಇರುತ್ತವೆ. ಹೂವು ಮುಳ್ಳಿನ ಮೇಲೆ ಬಿದ್ದರೂ ಮುಳ್ಳು ಹೂವಿನ ಮೇಲೆ ಬಿದ್ದರೂ ಸಾಯುವುದು ಹೂವೇ ಎನ್ನುವುದು ಪಿತೃಸಂಸ್ಕೃತಿಯು ಹೆಣ್ಣನ್ನು ಗ್ರಹಿಸುವುದರ ರೂಪಕವೆ? ಅದು ವಿಧಿಸುತ್ತಿರುವ ಶಾಸನವೆ? ಅಥವಾ ಹೆಣ್ಣನ್ನು ಮ್ಯಾನಿಪ್ಯುಲೇಟ್ ಮಾಡುವ ಕ್ರಮವೆ? ಹೆಣ್ಣಿನ ಮನೋವಿನ್ಯಾಸವನ್ನು ರೂಪಿಸುತ್ತಿರುವ ಮೆಥಡಾಲಜಿಯೆ?

ಹೆಣ್ಣನ್ನು ದೇಹಸರ್ವಸ್ವದ ನೆಲೆಯಿಂದ ನೋಡುವುದೇ ಅವಳನ್ನು ಕುರಿತ ದೃಷ್ಟಿಕೋನದ ಶುರು ಮತ್ತು ಕೊನೆ ಎನ್ನುವುದರಿಂದಲೇ ಅಲ್ಲವೆ ಅತ್ಯಾಚಾರದಂತಹ ದೃಷ್ಟಿಕೋನಗಳು ಜನಿಸುವುದು? ಕೇಡುಗಳು ಸಂಭವಿಸುವುದು? ಒಂದೋ ಅವಳು ‘ಮಧು ಭಾಂಡ’ ಇಲ್ಲವೇ ‘ತನು ವಿಸ್ತಾರೆ’ ಎನ್ನುವ ಎರಡು ‘ಕ್ಷೇತ್ರ’ಗಳನ್ನು ಅವಳಿಗೆ ನಿಗದಿ ಮಾಡಿ ಅದರ ಜೈವಿಕ ನೆಲೆಯನ್ನೇ ಹೆಣ್ಣಿನ ಸಾಮಾಜಿಕ, ರಾಜಕೀಯ ಮತ್ತು ನೈತಿಕ ನೆಲೆಯಾಗಿಯೂ ಮೀರಬಾರದ ಎಲ್ಲೆಯಾಗಿಯೂ ಕಾಪಾಡಿಕೊಂಡು ಬರುವುದರಲ್ಲಿ ಪಿತೃಸಂಸ್ಕೃತಿ ತನ್ನ ಆಸ್ಥೆಯನ್ನು ಘಳಿಗೆಯ ಮಟ್ಟಿಗೂ ಕಳೆದುಕೊಳ್ಳುವುದಿಲ್ಲ. ಈ ಎಲ್ಲದರ ವಿರುದ್ಧ ಹೆಣ್ಣು ನಡೆಸುವ ಹೋರಾಟದಲ್ಲಿ ಅವಳು ಸೋತರೆ ಅದನ್ನು ಅವಳ ಸೋಲು ಎಂದು ಕರೆಯಬಾರದೆಂದೇ ತೋರುತ್ತದೆ. ನಿಜದಲ್ಲಿ ಅದು ವ್ಯವ್ಯಸ್ಥೆಯ ನೈತಿಕ ಸೋಲು.

ಕುವೆಂಪು ಅವರ ಸುಬ್ಬಮ್ಮ ಹೆಗ್ಗಡತಿಯನ್ನು ನೋಡಿದಾಗಲೆಲ್ಲ ವ್ಯಥೆ, ಪ್ರೀತಿ, ವಿಷಾದ, ಅಸಹಾಯಕತೆಯ ಸಮ್ಮಿಶ್ರ ಭಾವಗಳು ಆವರಿಸುವುದು ಇದೇ ಕಾರಣಕ್ಕೆ. ಕುವೆಂಪು ಅವರನ್ನು ಕನ್ನಡದ ಸ್ತ್ರೀವಾದಿ ಲೇಖಕ ಎಂದು ಕರೆಯಲು ಸಾಧ್ಯವಾಗುವ ಹಲವು ಅಂಶಗಳು ಅವರ ಬರವಣಿಗೆಯಲ್ಲಿವೆ ಎನ್ನುವುದು ನಿಜ. ಆದರೆ ಗಂಡು ಹೆಣ್ಣಿನ ಸಂಬಂಧವನ್ನು ಕುರಿತಂತೆ ಕುವೆಂಪು ತಳೆಯುವ ಕೆಲವು ನಿಲುವುಗಳು ಆದರ್ಶ ಮತ್ತು ರೊಮ್ಯಾಂಟಿಸಿಸಂನ ತುತ್ತತುದಿಯಲ್ಲಿರುವಂತೆಯೂ ಕಾಣಿಸುತ್ತದೆ. ಮಾತ್ರವಲ್ಲ, ಕೆಲವೊಮ್ಮೆ ಈ ಅಂಶಗಳೇ ಹೆಣ್ಣನ್ನು ಇನ್ನೂ ತೀವ್ರವಾದ ದಿಗ್ಬಂಧನಕ್ಕೆ ಒಳಗು ಮಾಡುತ್ತವೆಯೋ ಎನ್ನುವ ಆತಂಕವೂ ಹುಟ್ಟುತ್ತದೆ. ಉದಾಹರಣೆಗೆ, ‘ಕಾನೂರು ಸುಬ್ಬಮ್ಮ ಹೆಗ್ಗಡತಿ’ಯ ನಾಯಕಿಯೆಂದು ಕರೆಯಬಹುದಾದ ಸೀತೆಯನ್ನೇ ನೋಡಿ.

ಹದಿಹರೆಯದ ಹೆಣ್ಣಿನ ಮನೋದೈಹಿಕ ವಿವರಗಳನ್ನು ಕುವೆಂಪು ಸಜೀವ ವಿವರಗಳಲ್ಲಿ ಸಾಕ್ಷಾತ್ಕರಿಸಿ ಕೊಡುತ್ತಾರೆ. ಯೌವನದ ಬೆಡಗಿನ, ಅದರ ಸಂಭ್ರಮ ಮತ್ತು ತಲ್ಲಣಗಳ ಕಂಪನಗಳು ನಮ್ಮ ಅನುಭವದ ಒಂದು ಭಾಗವಾಗುವಷ್ಟು. ಆದರೆ, ಈ ಆದರೆ ಒಂದಂತೂ ನಿಜ, ಹೆಣ್ಣಿನ ವ್ಯಕ್ತಿತ್ವದ ಸೂಕ್ಷ್ಮಾತಿಸೂಕ್ಷ್ಮ ಧಾತುಗಳನ್ನು ಕುವೆಂಪು ಅವರಷ್ಟು ಜೀವಂತವಾಗಿ ಹಿಡಿದವರು ಕನ್ನಡದಲ್ಲಿ ತೀರಾ ಅಪರೂಪ. ಆದರೆ ಇಂಥ ತಾನುಂಟೋ ಮೂರುಲೋಕವುಂಟೋ ಎನ್ನುವಷ್ಟು ನಿರಾಳ ನಿರಾಗಸ ವ್ಯಕ್ತಿತ್ವದ ಸೀತೆ ಕಾದಂಬರಿಯ ಮುಂದುವರಿದ ಭಾಗದಲ್ಲಿ ಸಂಪೂರ್ಣವಾಗಿ ಅನುಯಾಯಿಯೇ ಆಗಿಬಿಡುತ್ತಾಳೆ.

ರಾಮಾಯಣದ ಸೀತೆಯನ್ನು ಕುರಿತಂತೆ ಇರುವ ಒಂದು ಸಾಂಪ್ರದಾಯಿಕ ವ್ಯಾಖ್ಯಾನವೆಂದರೆ ಅವಳದು ಛಾಯಾವ್ಯಕ್ತಿತ್ವ ಎನ್ನುವುದು. ರಾಮನ ಛಾಯೆಯೇ ಅವಳು ಎನ್ನುವ ವ್ಯಾಖ್ಯಾನಗಳನ್ನು ವಿವರಿಸಬೇಕಾದ ಅಗತ್ಯವಿಲ್ಲ. ಇಲ್ಲಿಯೂ ಸೀತೆ ಹೂವಯ್ಯನ ಛಾಯಾವ್ಯಕ್ತಿತ್ವವೇ ಆಗಿಬಿಡುತ್ತಾಳೆ. ಗಂಡನಾಗಿ ಅವಳನ್ನು ಪಡೆಯಲಾಗದ ಸೀತೆ ಅವನನ್ನು ಗುರುವಾಗಿ ಮಾರ್ಗದರ್ಶಕನಾಗಿ ಅನುಸರಿಸುತ್ತಾಳೆ. ಆದರ್ಶವೂ ರಮ್ಯವೂ ಆದ ಈ ಸಖ್ಯ ವಾಸ್ತವದಲ್ಲಿ ಹೆಣ್ಣನ್ನು ದುರ್ಬಲಗೊಳಿಸುತ್ತದೆಯೇ ಹೊರತು ವಾಸ್ತವದ ಸವಾಲುಗಳನ್ನು ಎದುರಿಸುವ ಸ್ಥೈರ್ಯವನ್ನು ಅವಳಲ್ಲಿ ತುಂಬುವುದಿಲ್ಲ.

ಹುಚ್ಚೂ ಸೇರಿದ ಹಾಗೆ ಅನೇಕ ಅವಸ್ಥೆಗಳನ್ನು ಹಾಯುವ ಸೀತೆ ಉದ್ದಕ್ಕೂ ಹೂವಯ್ಯನ ರಕ್ಷಣೆಗಾಗಿ ಕಾಯುವ ಅಭಾಗಿನಿಯ ಹಾಗೆ ಕಾಣಿಸುತ್ತಾಳೆಯೇ ಹೊರತು ಹೊಸ ಹೆಣ್ಣಾಗಿ ಅಲ್ಲ. ಅವಳ ಅಧೀನ ಸ್ಥಿತಿ ಅಬಾಧಿತವಾಗಿ ಮುಂದುವರಿಯುತ್ತದೆ. ಕೊನೆಗೂ ಗಂಡು ಅಪೇಕ್ಷಿಸುವ, ತನಗೆ ಬೇಕಾದ ವ್ಯಕ್ತಿತ್ವದ ಹೆಣ್ಣನ್ನು ರೂಪಿಸುವ ಅಧಿಕಾರ ಕೇಂದ್ರದ ಸೃಷ್ಟಿಯಾಗಿಯೇ ಸೀತೆ ಕಾಣಿಸುತ್ತಾಳೆ.
‘ಕಾನೂರು ಹೆಗ್ಗಡತಿ’ ಶೀರ್ಷಿಕೆಗೆ ಕಾರಣವಾದ ಸುಬ್ಬಮ್ಮ ಇಂಥ ಸುಧಾರಣೆಗೆ ಒಳಗಾಗದೆ, ಬದುಕಿನ ಅತ್ಯಂತ ಅನಿರೀಕ್ಷಿತವಾದ ಏರಿಳಿತಗಳಿಗೆ ತನ್ನನ್ನು ಕೊಟ್ಟುಕೊಳ್ಳುತ್ತಾ ಹೆಣ್ಣಿನ ಹಲವು ಅವಸ್ಥೆಗಳಿಗೆ ಪ್ರತಿನಿಧಿಯಾಗುತ್ತಲೇ ಕೈಸೋಲುವವರೆಗೂ ಹೋರಾಡುವ ಹೆಣ್ಣಿನ ಮೂಲ ಚೈತನ್ಯದ ಸಂಕೇತವಾಗುತ್ತಾಳೆ.

ಬಡ ಕುಟುಂಬದ ಸುಬ್ಬಮ್ಮ ಕಾನೂರಿನ ಚಂದ್ರಯ್ಯ ಹೆಗ್ಗಡೆಯವರ ಮೂರನೆಯ ಹೆಂಡತಿಯಾಗಿ ಬದುಕಿನ ಹೊಸ ಘಟ್ಟವನ್ನು ಪ್ರವೇಶಿಸುತ್ತಾಳೆ. ಮೊದಲಿಗೆ ಕಾನೂರು ಮನೆಯಿಂದ ಮದುವೆಯ ಪ್ರಸ್ತಾಪ ಬಂದಾಗ ವಯೋಸಹಜವಾದ ಆಸೆಯಲ್ಲಿ ಸುಬ್ಬಮ್ಮ ತನ್ನನ್ನು ಚಂದ್ರಯ್ಯಗೌಡರ ಅಣ್ಣನ ಮಗ ಹೂವಯ್ಯನಿಗೆ ಕೇಳುತ್ತಿದ್ದಾರೇನೋ ಅಂದುಕೊಂಡಿರುತ್ತಾಳೆ. ದಾರಿದ್ರ್ಯದಿಂದ ಬಂದವಳಿಗೆ ಕಾನೂರು ಮನೆಯ ಸಿರಿವಂತಿಕೆಯೇ ತನ್ನ ಬದುಕಿನ ಎಲ್ಲ ಕೊರತೆಗಳನ್ನೂ ನೀಗಿಸಿಬಿಡಬಹುದೇನೋ ಎನ್ನುವ ಭ್ರಮೆ ಹುಟ್ಟಿಸುತ್ತದೆ.

ಈ ಭ್ರಮೆಯಲ್ಲಿಯೇ ಮನೆಯ ಇತರರ ಜೊತೆ ತುಸು ಸೊಕ್ಕಿನಿಂದ, ಇತರರಿಗೆ ಅನಾಗರಿಕವಾಗಿ ಕಾಣಿಸುವ ಹಾಗೆ ನಡೆದುಕೊಳ್ಳುವಂತೆ ಪ್ರಚೋದಿಸುತ್ತದೆ. ಮುದುಕ ಗಂಡ, ಅವನ ಪ್ರೇಯಸಿ ಗಂಗೆ, ತನ್ನ ಅಧಿಕಾರಕ್ಕೆ ಸವಾಲೊಡ್ಡಬಲ್ಲ ಮಲಮಕ್ಕಳು, ಓರಗಿತ್ತಿ, ತಾನು ಮದುವೆಯಾಗಬೇಕೆಂದು ಬಯಸಿದ ಹೂವಯ್ಯನ ಉಪಸ್ಥಿತಿ ಇವೆಲ್ಲವೂ ಸೇರಿ ಅವಳ ವ್ಯಕ್ತಿತ್ವ ಅಗತ್ಯಕ್ಕಿಂತ ಹೆಚ್ಚು ಗಡುಸಾಗುತ್ತದೆ. ಗಂಡನಿಗೆ ಇವಳ ಮೇಲೆ ಸಂಶಯ ಹುಟ್ಟಿ, ಇವಳು ಗಂಡನ ಮನೆ ಬಿಟ್ಟು ತಾಯಿಯ ಮನೆಗೆ ವಾಪಸಾಗುವ ಮತ್ತು ಬದುಕಿನ ಇನ್ನೊಂದು ವಾಸ್ತವಕ್ಕೆ ಸುಬ್ಬಮ್ಮ ಎದುರಾಗುವ ಸಂದರ್ಭ ಕಾದಂಬರಿಯ ಅತ್ಯುತ್ತಮ ಭಾಗಗಳಲ್ಲೊಂದು.

ದಾಂಪತ್ಯ ಮತ್ತೆ ತನಗೆ ಸಿಗಲಾರದು ಎನ್ನುವ ಹೊತ್ತಿನಲ್ಲಿ ಹತಾಶಳಾಗಿ ಸುಬ್ಬಮ್ಮ ಒಡವೆಗಳಾದರೂ ತನಗೆ ಸಿಕ್ಕಲಿ ಎಂದುಕೊಳ್ಳುವುದು ಅವಳ ಆಸೆ ದುರಾಸೆ ಯಾವುದೂ ಆಗದೆ, ಬಡತನದ ಅಪರಿಹಾರ್ಯತೆಯನ್ನು ನೀಗಿಕೊಳ್ಳುವ ಸಲುವಾಗಿ ಎನ್ನುವುದು ಸ್ಪಷ್ಟವಾದರೂ, ಅವಳ ವ್ಯಕ್ತಿತ್ವದ ಮಟ್ಟವೇ ಅದರಾಚೆಗೆ ಏರಲಾರದ್ದು ಎಂದು ಕಾದಂಬರಿಕಾರರು ಅಭಿಪ್ರಾಯಪಡುವುದು, ಕೊನೆಗೂ ಹೆಣ್ಣನ್ನು ಅವಳ ನಿಜದಲ್ಲಿ ಅವಳ ಅವಸ್ಥೆಯಲ್ಲಿ ಅರ್ಥ ಮಾಡಿಕೊಳ್ಳುವುದು ಎಂಥ ಸವಾಲು ಎನ್ನುವುದನ್ನು ಹೇಳುತ್ತದೆ. ಸೀತೆಯ ವ್ಯಕ್ತಿತ್ವದ ಎದುರಿಗೆ  ಸುಬ್ಬಮ್ಮನನ್ನು ನಿಲ್ಲಿಸಿ, ಸೀತೆಯ ರೂಪಾಂತರದ ಔನ್ನತ್ಯದ ಎದುರು ಸುಬ್ಬಮ್ಮನ ಕುಬ್ಜತೆಯನ್ನು ಸ್ಥಾಪಿಸುವುದು ಕುವೆಂಪು ಅವರ ಉದ್ದೇಶವೋ ಎನ್ನುವ ಅನುಮಾನವೂ ನಮಗೆ ಬರುವುದು ಸಾಧ್ಯ.

ಆದರೆ ಬದುಕಿನ ಕೆಂಡವನ್ನು ಯಾರ ಸಹಾಯವೂ ಇಲ್ಲದೆ ಹಾಯುವ ಅನಿವಾರ್ಯತೆಯಲ್ಲಿ ಸುಬ್ಬಮ್ಮ ತನ್ನ ಏಕಾಂಗಿತನ, ಅಸಹಾಯಕತೆಯಲ್ಲಿಯೂ ಬಿಡದ ಕೆಚ್ಚಿನಿಂದ ನಮಗೆ ಆಪ್ತಳಾಗುತ್ತಾ ಹೋಗುತ್ತಾಳೆ. ಗಂಡನ ಅನಾರೋಗ್ಯದ ಹೊತ್ತಿನಲ್ಲಿ ಮತ್ತೆ ಗಂಡನ ಮನೆಗೆ ವಾಪಸಾಗುವ ಸುಬ್ಬಮ್ಮ ಗಂಗೆಯ ಕಿವಿಯಲ್ಲಿದ್ದ ತನ್ನ ವಜ್ರದ ಓಲೆಯನ್ನು ನೋಡಿ, ‘ನಿನ್ನ ಕಿವಿಗೆ ಪಸಂದಾಗಿ ಒಪ್ತದೆ ಓಲೆ’ ಎಂದು ಹೇಳುವ ಮೂಲಕ ವಾಸ್ತವವನ್ನು ಒಪ್ಪಿಕೊಳ್ಳುತ್ತಲೇ ಅದನ್ನು ಎದುರಿಸುವ ಎದೆಗಾರಿಕೆಯನ್ನು ಮೈಗೂಡಿಸಿಕೊಳ್ಳುವವಳ ಹಾಗೆ ಕಾಣಿಸುತ್ತಾಳೆ.

ಚಂದ್ರಯ್ಯಗೌಡರ ಸಾವಿನ ನಂತರ  ಸುಬ್ಬಮ್ಮನಲ್ಲಿ ಹೊಸ ವ್ಯಕ್ತಿತ್ವವೊಂದು ಅರಳುತ್ತದೆ. ತೋಟ, ಗದ್ದೆ, ಮನೆಗಳನ್ನು ಅಪಾರ ದಕ್ಷತೆಯಿಂದ ನಿಭಾಯಿಸುತ್ತಾ ಇನ್ನೇನು ಆದರ್ಶ ನಾರಿಮಣಿಯಾಗಿಬಿಡುತ್ತಾಳೆ ಎನ್ನುವ ಹೊತ್ತಿಗೆ ಸೇರೆಗಾರನ ಜೊತೆಗಿನ ಗೆಳೆತನ ಪ್ರಾರಂಭವಾಗುತ್ತದೆ. ಅವನ ಸ್ವಾರ್ಥ, ಧೂರ್ತತನ ಎಲ್ಲದರ ಅರಿವಿದ್ದೂ ಸುಬ್ಬಮ್ಮ ಅವನ ಸೆಳೆತಕ್ಕೆ ಸಿಕ್ಕುತ್ತಾಳೆ. ಲೈಂಗಿಕತೆಯ ಅದಮ್ಯತೆಯೇ ಮೂಲವಾಗಿ ಸುಬ್ಬಮ್ಮ ಇದಕ್ಕೆ ಒಳಗಾಗುತ್ತಾಳೆ. ಗರ್ಭಿಣಿಯಾಗಿ ಗರ್ಭಪಾತದ ಪ್ರಯತ್ನದಲ್ಲಿ ಸುಬ್ಬಮ್ಮ ಸಾಯುತ್ತಾಳೆ

ಸುಬ್ಬಮ್ಮನ ಪಾತ್ರದ ಮಹತ್ವವಿರುವುದು ಅವಳು ದುರಂತ ನಾಯಕಿಯಾಗುತ್ತಾಳೆ ಎನ್ನುವುದರಲ್ಲಿ ಮಾತ್ರವಲ್ಲ; ಅವಳ ಬದುಕು ಮತ್ತು ವ್ಯಕ್ತಿತ್ವ ಎರಡನ್ನೂ ಕೊನೆಯಿಲ್ಲದ ಅಧಿಕಾರ ಸೂತ್ರದಲ್ಲಿ ಬಂಧಿಸುವ ವ್ಯವಸ್ಥೆಯ ಕಡೆಗೆ ಓದುಗರ ಗಮನ ಅಯಾಚಿತವಾಗಿ ಹರಿಯುವಂತೆ ಮಾಡುವುದರಲ್ಲಿ. ಹೂವಯ್ಯ ಮತ್ತು ಸೀತೆ ಈ ಕಾದಂಬರಿಯ ಅನಭಿಷಿಕ್ತ ನಾಯಕ ನಾಯಕಿಯರು ನಿಜ. ಅವರು ಲೌಕಿಕದಿಂದ ಅಧ್ಯಾತ್ಮದ ಕಡೆಗೆ ಚಲಿಸುತ್ತಾ ದಿಕ್ಸೂಚಿಗಳಾಗುತ್ತಾರೆ ಎನ್ನುವುದೂ ನಿಜ. ಆದರೆ ಅವರು ಅಪವಾದಗಳೇ ಹೊರತು ಎಲ್ಲರೂ ನಡೆಯಬಹುದಾದ ದಾರಿಯ ಪಥಿಕರಲ್ಲ.

ಹುಲುಬಯಕೆ ಬಾ ಎನಲು ಓ ಎಂದು ಬಾರದಿರು ಎನ್ನುವ ಸಂಯಮ ಎಲ್ಲರಿಗೂ ದಕ್ಕಲಾರದು. ದಕ್ಕಬೇಕಾಗಿಯೂ ಇಲ್ಲ. ‘ಒಡಲುಗೊಂಡವ ಹಸಿವ ಒಡಲುಗೊಂಡವ ಹುಸಿವ’ ಎನ್ನುವುದು ಬದುಕಿನ ಪರಮ ಸತ್ಯ ಎಂದಾದರೆ, ಅದು ಗಂಡಿಗೆ ಸಹಜ, ಹೆಣ್ಣಿಗೆ ನರಕದ ದಾರಿ ಯಾಕೆ ಎನ್ನುವ ಪ್ರಶ್ನೆಯನ್ನು ಸುಬ್ಬಮ್ಮನ ಪಾತ್ರ ಎತ್ತುತ್ತದೆ. ‘ದುಃಖ ಸೇತು’ ಕವನದ ಕೊನೆಯಲ್ಲಿ ‘ಆಹಾ ಆರ್ಯ ಜನಗಳ ಮರುಕ ಉರಿಯುವವನೆ ಬಲ್ಲ’ ಎನ್ನುವ ಮಾತಿದೆ. ಆತ್ಮಹತ್ಯೆ ಮಾಡಿಕೊಂಡ ಹೆಣ್ಣನ್ನು ಕುರಿತಂತೆ ನಮ್ಮ ನಡವಳಿಕೆ ಹೇಗಿರುತ್ತದೆ ಎನ್ನುವುದು ಆ ಕವಿತೆಯ ವಸ್ತು. ‘ನಿರಿ ಹಿಡಿದು ನಡುವೇರಿ ಕೊರಗ ನೀಗಿಸಬಲ್ಲ ಮಗುವಿಲ್ಲವೇನೋ’ ಎನ್ನುವ ಮಾತಾಡುವ ನಾವೇ

ಅವಳ ಸಾವಿಗೆ ಮೂಲಕಾರಣವಾಗಿರುತ್ತೇವೆ ಎನ್ನುವುದನ್ನು ಆ ಕವಿತೆ ತಣ್ಣಗಿನ ದನಿಯಲ್ಲಿ ನಮ್ಮ ಎದುರಿಗೆ ಹಿಡಿಯುತ್ತದೆ. ಸುಬ್ಬಮ್ಮನ ಪಾತ್ರ ನಮ್ಮಲ್ಲಿ ಒಂದು ಘಳಿಗೆಯ ಮಟ್ಟಿಗೆ ಮರುಕವನ್ನು ಹುಟ್ಟಿಸುತ್ತದೆ ನಿಜ. ಆದರೆ ಮರುಘಳಿಗೆಯೇ ಇದಕ್ಕೆ ಅವಳು ಮಾತ್ರ ಕಾರಣವೆ ಎನ್ನುವ ಜಾಗೃತಿಯನ್ನೂ ನಮ್ಮಲ್ಲಿ ಮೂಡಿಸುತ್ತದೆ. ಮುದುಕ ಗಂಡನ ಮೂರನೆಯ ಹೆಂಡತಿಯಾಗಿ, ಅವನ ಸಂಶಯಕ್ಕೂ ಕ್ರೌರ್ಯಕ್ಕೂ ಪಕ್ಕಾದವಳ ಅವಸ್ಥೆಯ ಬಗ್ಗೆ ತಳೆಯುವ ದಿವ್ಯ ನಿರ್ಲಕ್ಷ್ಯಕ್ಕೆ ಯಾರು ಹೊಣೆ? ಸುಬ್ಬಮ್ಮನನ್ನು ದುರಂತ ನಾಯಕಿಯೆಂದು ಕರೆಯುವುದಕ್ಕಿಂತ ಬಲಿಪಶು ಎನ್ನುವುದೇ ಹೆಚ್ಚು ಸೂಕ್ತವೇನೋ.

ಹೆಣ್ಣನ್ನು ಬಾಳೆಲೆಯಂತೆ ಹಾಸುಂಡು ಬಿಸುಡುವ ಬಗ್ಗೆ ಸುಬ್ಬಮ್ಮ ನಮ್ಮ ಗಮನ ಸೆಳೆಯುತ್ತಾಳೆ. ಅವಳು ಪತಿತೆ, ಹುಲುಬಯಕೆಗೆ ಬಾಯ್ದೆರೆದವಳು, ಇದೊಂದು ದೌರ್ಬಲ್ಯದಿಂದ ಪಾತಾಳಕ್ಕೆ ಬಿದ್ದವಳು... ಇರಬಹುದು. ‘ಕೂಡಿರ್ದ ಪಂಚೇಂದ್ರಿಯಂಗಳೊಳ್ ನಾಲ್ಕಧಮ ಒಂದಧಿಕವೆ’ ಎನ್ನುವುದು ಹೆಣ್ಣಿನ ಮಟ್ಟಿಗೂ ನಿಜವೇ ಅಲ್ಲವೆ? ಯಾವ ತಾಯ್ತನ ಹೆಣ್ಣಿನ ಶಕ್ತಿವಿಶೇಷವೋ ಅದೇ ತಾಯ್ತನವೇ ಅಪರಾಧವಾಗಿ ಪ್ರಾಣಕ್ಕೆ ಎರವಾಗುವವರು ಇಲ್ಲ ಎನ್ನುವ ಸ್ಥಿತಿ ಎಂದಾದರೂ ನಮ್ಮಲ್ಲಿ ಬರುವುದು ಸಾಧ್ಯವೆ? ತಾನು ದುರಂತ ನಾಯಕಿಯಾಗುವುದರ ಜೊತೆಗೇ ಅಥವಾ ಅದಕ್ಕಿಂತ ಹೆಚ್ಚಾಗಿ ಸುಬ್ಬಮ್ಮ ವ್ಯವಸ್ಥೆಯ ದುರಂತದ ಅರಿವು ಮೂಡಿಸುತ್ತಾಳೆ. ಸೋತಿರುವುದು ಅವಳಲ್ಲ, ವ್ಯವಸ್ಥೆ ಎನ್ನುವ ತಿಳಿವಳಿಕೆ ಮೂಡಿಸುವ ಪಾತ್ರ ಸುಬ್ಬಮ್ಮನದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT